ಸಾರಾಂಶ
ನಾಗಾಸಾಧುಗೆ ದೇವರ ದರ್ಶನವಾಯಿತು ಎಂದು ಹೇಳುವ ಶಿವಲಿಂಗ ಇರುವ ದೇವಾಲಯ.
ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ನಾಗಾಸಾಧು ಹೇಳಿಕೆ । ಟಿವಿ ಮಾದ್ಯಮ ಸೇರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಎನ್.ವಿಶ್ವನಾಥ್ ಶ್ರೀರಾಂಪುರ
ಕನ್ನಡಪ್ರಭ ವಾರ್ತೆ ಹೊಸದುರ್ಗಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನಾಗಾಸಾಧುವೊಬ್ಬರು ಉಜ್ಜಯಿನಿಯ ಮಹಾಕಾಳೇಶ್ವರ ಲಿಂಗದಂತೆಯೇ ಮಹಾ ಶಕ್ತಿಯಿರುವ ಲಿಂಗವೊಂದು ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿಯ ಹೆಗ್ಗೆರೆ ಗ್ರಾಮದಲ್ಲಿದೆ. ಇಲ್ಲಿಯೇ ನನಗೆ ಆ ಪರಮೇಶ್ವರನ ದರ್ಶನವಾಗಿ ನಾನು ನಾಗಾಸಾಧುವಾಗಲು ಪ್ರೇರಣೆಯಾಯಿತು ಎಂದು ಹೇಳಿರುವ ವಿಡಿಯೋ ಟಿವಿ ಮಾದ್ಯಮ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ದೇವಾಲಯಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವ ಭಾವನೆ ಎಲ್ಲರಲ್ಲಿತ್ತೂ ಆದರೆ ಅಂತಹ ಯಾವುದೇ ಲಕ್ಷಣಗಳು ಇಲ್ಲಿ ಕಂಡು ಬರುತ್ತಿಲ್ಲ. ಎಂದಿನಂತೆ ತಮಗಿಷ್ಠ ಬಂದವರು ಬೆಳ್ಳಂ ಬೆಳಗ್ಗೆ ದೇವಾಲಯಕ್ಕೆ ತೆರಳಿ ದೀಪ ಹಚ್ಚಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.
ನಾಗಾಸಾಧು ಹೇಳಿಕೆಯ ಹಿನ್ನೆಲೆ ಪತ್ರಕರ್ತರ ತಂಡ ಹೆಗ್ಗೆರೆ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿಗೂ ಆತನ ಹೇಳಿಕೆಗೂ ಸಾಮ್ಯತೆ ಕಂಡು ಬಂದರು ಅಭಿವೃದ್ಧಿ ದೃಷ್ಠಿಯಿಂದ ಪ್ರದೇಶ ಬಹಳ ದೂರವಿದೆ.ಈ ಪ್ರದೇಶ ಹೆಗ್ಗೆರೆ ಗ್ರಾಮದ ರುದ್ರಭೂಮಿಗೆ ಹೊಂದಿಕೊಂಡಿದ್ದು ಹೆಗ್ಗೆರೆ ಗ್ರಾಮದಿಂದ ಓಬಳಾಪುರ ಗ್ರಾಮಕ್ಕೆ ಹೋಗುವ ದಾರಿಯಲ್ಲಿದೆ. ಒಂದೇ ಸ್ಥಳದಲ್ಲಿ 3 ಶಿವನ ದೇವಾಲಯವಿದ್ದು ಈ ಮೂರು ದೇವಾಲಯಗಳ ಆಕೃತಿ ಒಂದೇ ತೆರೆನಾಗಿದ್ದು ಒಂದೆ ಸಮಯದಲ್ಲಿ ಕಟ್ಟಲಾಗಿರಬಹುದೆಂದು ನಂಬಿಕೆಯಿದೆ.
ಮೂರು ದೇವಾಲಯಗಳ ಪೈಕಿ ಒಂದರಲ್ಲಿನ ಶಿವಲಿಂಗವನ್ನು ಸುಮಾರು 100 ವರ್ಷಗಳ ಹಿಂದೆಯೇ ಯಾರೋ ಕದ್ದೋಯ್ದಿದ್ದಾರೆ ಎನ್ನಲಾಗುತ್ತಿದ್ದು ಉಳಿದ 2 ದೇವಾಲಯಗಳಲ್ಲಿ ಶಿವಲಿಂಗದ ಮೂರ್ತಿಗಳಿವೆ. ಎರಡು ದೇವಾಲಯಗಳ ಪೈಕಿ ಒಂದನ್ನು ಹೆಗ್ಗೆರೆ ಗ್ರಾಮದ ವೀರಶೈವ ಸಮುದಾಯದ ಜನ ಕಮಿಟಿ ಮಾಡಿಕೊಂಡು ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ದೇವಾಲಯ ಪ್ರವೇಶಕ್ಕೆ ಎಲ್ಲರಿಗೂ ಅವಕಾಶವಿದ್ದರೂ ಲಿಂಗವನ್ನು ಮುಟ್ಟಲು ಅರ್ಚಕರಿಗೆ ಬಿಟ್ಟರೆ ಬೇರೆಯವರಿಗೆ ಅವಕಾಶವಿಲ್ಲ ಎನ್ನಲಾಗುತ್ತಿದೆ.ಈ ದೇವಾಲಯದ ಪಕ್ಕದಲ್ಲಿಯೇ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಶಿವನ ದೇವಾಲಯವಿದ್ದು ಇಲ್ಲಿ ನಾಗಾಸಾಧು ಹೇಳುವಂತೆ ಯಾರು ಬೇಕಾದರೂ ಶಿವಲಿಂಗವನ್ನು ಮುಟ್ಟಿ ಪೂಜೆ ಸಲ್ಲಿಸಬಹುದಾಗಿದೆ.
*ಜೈನ ಬಸದಿಯಂತೆ ಇದನ್ನೂ ಅಭಿವೃದ್ಧಿ ಪಡಿಸಲಿ: ಈ ದೇವಾಲಯ ನಿರ್ಮಾಣದ ಕಾಲಘಟ್ಟದಲ್ಲಿಯೇ ಈ ಗ್ರಾಮದ ಮದ್ಯಭಾಗದಲ್ಲಿರುವ ಜೈನ ಬಸದಿಯನ್ನು ನಿರ್ಮಿಸಲಾಗಿರಬಹುದು ಎನ್ನಲಾಗುತ್ತಿದ್ದು, ಇದು ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇದನ್ನು ಪ್ರಾಚ್ಯವಸ್ತು ಇಲಾಕೆ ವತಿಯಿಂದ ಸಂರಕ್ಷಿಸಲಾಗಿದ್ದು ಇದೆ ಮಾದರಿಯಲ್ಲಿ ಈ ಶಿವದೇವಾಲಯಗಳನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ. ಇಂತಹ ಪ್ರಾಚ್ಯ ಸ್ಮಾರಕಗಳ ರಕ್ಷಣೆ ಮಾಡಿಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ತೋರಿಸುಚ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.ಅಭಿವೃದ್ಧಿ ಮರೀಚಿಕೆ: ದೇವಾಲಯಗಳ ರಚನೆಯನ್ನು ನೋಡಿದರೆ ಚಾಲುಕ್ಯರ ಕಾಲದ ದೇವಾಲಯಗಳಿರಬಹುದು ಎನ್ನಲಾಗುತ್ತಿದ್ದು ಅವುಗಳಿಗೆ ಸೂಕ್ತ ರಕ್ಷಣೆಯಿಲ್ಲದೆ ಅವನತಿಯ ಹಂತಕ್ಕೆ ಬಂದಿವೆ. ಶಿವಲಿಂಗ ಕದ್ದೋಯ್ದಿರುವ ದೇವಾಲಯದ ಸುತ್ತಲೂ ಮುಳ್ಳಿನ ಗಿಡಗಂಟಿ ಬೆಳೆದು ನಿಂತಿವೆ. ಉಳಿದ ಎರಡು ದೇವಾಲಯಗಳ ಸುತ್ತಲೂ ಗಿಡ ಕೀಳಲಾಗಿದೆಯಾದರೂ ದೇವಾಲಯಕ್ಕೆ ಸೂಕ್ತ ರಕ್ಷಣೆಯಿಲ್ಲವಾಗಿದೆ.