ಮಂಡ್ಯ ಜಿಲ್ಲೆಯಲ್ಲಿ ಬರದ ಛಾಯೆ: ಅನ್ನದಾತಗೆ ಬರೆ..!

| Published : Sep 23 2024, 01:25 AM IST

ಸಾರಾಂಶ

ಕೊನೆಯ ಭಾಗದಲ್ಲಿ ನೀರಿಗಾಗಿ ರೈತರ ನಡುವೆ ಕಾದಾಟ ಶುರುವಾಗಿದೆ. ನೀರು ಸಿಗುವ ನಿರೀಕ್ಷೆಯಲ್ಲಿ ಭತ್ತದ ಸಸಿ ಮಾಡಿಟ್ಟುಕೊಂಡವರಿಗೆ ಸಮಯಕ್ಕೆ ಸರಿಯಾಗಿ ನೀರು ಸಿಗದಿದ್ದರಿಂದ ನಾಟಿಯಿಂದ ದೂರ ಉಳಿದಿದ್ದಾರೆ. ನೀರು ದೊರೆತು ನಾಟಿ ಮಾಡಿರುವವರಿಗೂ ಕೊನೆಯವರೆಗೆ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ಬರದ ಛಾಯೆ ಈ ವರ್ಷವೂ ಮುಂದುವರೆದಿದೆ. ಇದು ಆ ಭಾಗದ ರೈತರ ಜೀವನದ ಮೇಲೆ ಬರೆ ಎಳೆದಿದೆ. ನೀರಾವರಿ ಪ್ರದೇಶವನ್ನು ಹೊಂದಿರುವ ಜಿಲ್ಲೆಯ ಮೂರು ತಾಲೂಕುಗಳನ್ನು ಹೊರತುಪಡಿಸಿ ನಾಲಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗ ಹಾಗೂ ಸಂಪೂರ್ಣ ಮಳೆಯಾಶ್ರಿತ ಪ್ರದೇಶದ ರೈತರು ಮಳೆ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಕೊನೆಯ ಭಾಗದಲ್ಲಿ ನೀರಿಗಾಗಿ ರೈತರ ನಡುವೆ ಕಾದಾಟ ಶುರುವಾಗಿದೆ. ನೀರು ಸಿಗುವ ನಿರೀಕ್ಷೆಯಲ್ಲಿ ಭತ್ತದ ಸಸಿ ಮಾಡಿಟ್ಟುಕೊಂಡವರಿಗೆ ಸಮಯಕ್ಕೆ ಸರಿಯಾಗಿ ನೀರು ಸಿಗದಿದ್ದರಿಂದ ನಾಟಿಯಿಂದ ದೂರ ಉಳಿದಿದ್ದಾರೆ. ನೀರು ದೊರೆತು ನಾಟಿ ಮಾಡಿರುವವರಿಗೂ ಕೊನೆಯವರೆಗೆ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪಿಸುವುದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಇದುವರೆಗೂ ಸಾಧ್ಯವಾಗಿಲ್ಲ. ರೈತರ ನೀರಿನ ಕೂಗು ಯಾರಿಗೂ ಕೇಳಿಸುತ್ತಲೂ ಇಲ್ಲ. ಬೆಳೆಗಳಿಗೆ ಸಮರ್ಪಕವಾಗಿ ನೀರನ್ನು ಒದಗಿಸುವುದಕ್ಕೆ ಜನಪ್ರತಿನಿಧಿಗಳೂ ಒಗ್ಗಟ್ಟು ಪ್ರದರ್ಶಿಸದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.

ನೀರಾವರಿಯನ್ನು ಹೊಂದಿರುವ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ ತಾಲೂಕಿನಲ್ಲಷ್ಟೇ ಹಸಿರಿನ ಛಾಯೆಯನ್ನು ಕಾಣಬಹುದಾಗಿದೆ. ಇದನ್ನು ಹೊರತುಪಡಿಸಿ ಮದ್ದೂರು, ಮಳವಳ್ಳಿ, ಕೆ.ಆರ್‌.ಪೇಟೆ ಮತ್ತು ನಾಗಮಂಗಲ ತಾಲೂಕಿನ ರೈತರು ಮಳೆಯಿಲ್ಲದೆ ಬೆಳೆ ರಕ್ಷಣೆಗೆ ಪರದಾಡುತ್ತಿದ್ದಾರೆ. ಮಳೆ ಕೊರತೆಯಿಂದ ಬಹುತೇಕ ಕೆರೆಗಳು ಬರಿದಾಗಿವೆ. ರಾಗಿ ಬಿತ್ತನೆ ಮಾಡಿರುವ ಕಡೆಗಳಲ್ಲಿ ಮಳೆಯಿಲ್ಲದೆ ಬೆಳೆ ಬಾಡಲಾರಂಭಿಸಿದೆ. ನಿತ್ಯ ಮೋಡ ಕವಿದ ವಾತಾವರಣ ಮಳೆ ಬರುವ ನಿರೀಕ್ಷೆ ಮೂಡಿಸಿದರೂ ಕೆಲ ಸಮಯದಲ್ಲೇ ಕರಗಿಹೋಗುತ್ತಾ ರೈತರ ನಂಬಿಕೆ ಹುಸಿಗೊಳಿಸುತ್ತಿದೆ.

ನಿರಂತರವಾಗಿ ನೀರು ಹರಿಸುವ ಭರವಸೆ ನೀಡಿದ್ದ ನೀರಾವರಿ ಇಲಾಖೆ ಅಧಿಕಾರಿಗಳು ಇದೀಗ ಕಟ್ಟು ನೀರು ಪದ್ಧತಿಯಡಿ ಬೆಳೆಗಳಿಗೆ ನೀರು ಪೂರೈಸುವುದಕ್ಕೆ ಆರಂಭಿಸಿದ್ದಾರೆ. ಮಳೆ ಕೊರತೆಯಿಂದ ಕೆಆರ್‌ಎಸ್‌ ಒಳಹರಿವು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ರೈತರಿಂದ ಸಾಕಷ್ಟು ನೀರಿನ ಬೇಡಿಕೆ ಇರುವುದರಿಂದ ಅಗತ್ಯವಿರುವಷ್ಟು ನೀರನ್ನು ಪೂರೈಸಲಾಗುತ್ತಿಲ್ಲ. ವಿತರಣಾನಾಲೆ, ಕಿರುನಾಲೆಗಳನ್ನು ಸ್ವಚ್ಛಗೊಳಿಸದಿರುವುದರಿಂದ ಎಷ್ಟೇ ಪ್ರಯತ್ನಿಸಿದರೂ ಕೊನೆಯ ಭಾಗಕ್ಕೆ ನೀರು ತಲುಪಿಸಲಾಗದೆ ರೈತರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ.

ಮದ್ದೂರು ತಾಲೂಕಿನ ಕಸಬಾ, ಸಿ.ಎ.ಕೆರೆ, ಆತಗೂರು ಹೋಬಳಿ, ಮಳವಳ್ಳಿ ತಾಲೂಕಿನ ಬಿ.ಜಿ.ಪುರ, ಬೆಳಕವಾಡಿ, ಕಸಬಾ ಹೋಬಳಿಯ ಪ್ರದೇಶದ ಕೆಲವು ಭಾಗಗಳಲ್ಲಷ್ಟೇ ಬಿತ್ತನೆ ಕಾರ್ಯವಾಗಿದೆ. ಈ ವ್ಯಾಪ್ತಿಯೊಳಗೆ ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ. ಇದಕ್ಕೆ ಸಮರ್ಪಕವಾಗಿ ನೀರು ತಲುಪದಿರುವುದೇ ಬಿತ್ತನೆ ಹಿನ್ನಡೆಯಾಗುವುದಕ್ಕೆ ಪ್ರಮುಖ ಕಾರಣವಾಗಿದೆ. ಈ ಪ್ರದೇಶಗಳಿಗೆ ನೀರು ತಲುಪಿ ಬಿತ್ತನೆ ಮಾಡಿರುವ ರೈತರಿಗೆ ಕೊನೆಯವರೆಗೂ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ನಿರೀಕ್ಷೆಯಂತೆ ಮಳೆಯಾಗದಿರುವುದರಿಂದ ನಾಲಾ ಸಂಪರ್ಕ ಹೊಂದಿರುವ ಕೆಲವು ಕೆರೆಗಳು ಭರ್ತಿಯಾಗಿವೆ. ನಾಲೆಯ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ಹರಿದು ನಂತರ ತುಂಬಬೇಕಾದ ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಕೊನೆಯ ಭಾಗದ ಕೆರೆಗಳು ನೀರನ್ನೇ ಕಾಣದೆ ಬರಿದಾಗಿವೆ. ಕೆರೆ ಅಚ್ಚುಕಟ್ಟು ಪ್ರದೇಶದ ರೈತರಂತೂ ವ್ಯವಸಾಯದಿಂದ ದೂರ ಉಳಿಯುವಂತೆ ಮಾಡಿ ಭೂಮಿ ತೆಕ್ಕಲು ಬಿದ್ದಿದೆ.

ಕಳೆದ ವರ್ಷದ ಬರಗಾಲದಿಂದ ರೈತರು ತತ್ತರಿಸಿಹೋಗಿದ್ದಾರೆ. ಈ ವರ್ಷವೂ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಬೆಳೆಯಲು ನೀರನ್ನೂ ಪೂರೈಸದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಆದ ಕಾರಣ ಆತಗೂರು ಹೋಬಳಿಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಎಲ್ಲಾ ರೀತಿಯ ಕಂದಾಯ ವಸೂಲಿಯನ್ನು ನಿಲ್ಲಿಸಬೇಕು ಎಂದು ಈ ಭಾಗದ ರೈತರು ಆಗ್ರಹಪಡಿಸಿದ್ದಾರೆ.

ಮಳೆಯಾಶ್ರಿತ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ತೆಂಗಿನ ಮರಗಳಲ್ಲಿ ಗರಿಗಳು ಬೀಳು ಬೀಳುತ್ತಿವೆ. ಎಳನೀರಿನ ಇಳುವರಿ ಕುಸಿತಗೊಂಡಿದೆ. ಮಳೆಗಾಲದಲ್ಲೇ ಎಳನೀರು ಬೆಲೆ 50 ರು. ಗಡಿ ಮುಟ್ಟಿದೆ. ಅಡಿಕೆ ಮರಗಳು ಸೊರಗಿ ನಿಂತಿವೆ. ರೈತರು ಮಳೆಗಾಗಿ ಆಕಾಶವನ್ನೇ ದಿಟ್ಟಿಸಿ ನೋಡುವ ಸ್ಥಿತಿ ಬಂದಿದೆ.

ವಾಸ್ತವ ಮಳೆಯ ಮೇಲೆ ಭಾರೀ ಅನುಮಾನ..!

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಾಗಿರುವ ವಾಸ್ತವ ಮಳೆಯ ಅಂಕಿ-ಅಂಶಗಳನ್ನು ನೋಡಿದರೆ ಅದರ ಮೇಲೆ ರೈತ ಸಮುದಾಯದ ಮೇಲೆ ಭಾರೀ ಅನುಮಾನ ಮೂಡಿಸುವಂತಿದೆ.

ಕೃಷಿ ಇಲಾಖೆ ನೀಡಿರುವ ಅಂಕಿ-ಅಂಶಗಳಂತೆ ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 417.6 ಮಿ.ಮೀ. ವಾಡಿಕೆ ಮಳೆಗೆ 511.2 ಮಿ.ಮೀ. ಮಳೆಯಾಗಿದ್ದು, ಶೇ.22.4ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ದಾಖಲಿಸಲಾಗಿದೆ. ಜೂನ್‌ ತಿಂಗಳಲ್ಲಿ 56.5 ಮಿ.ಮೀ. ವಾಡಿಕೆ ಮಳೆಗೆ 91.6 ಮಿ.ಮೀ. ಮಳೆಯಾಗಿದ್ದು, ಶೇ. 62.1, ಜುಲೈ ತಿಂಗಳಲ್ಲಿ 51.2 ಮಿ.ಮೀ. ವಾಡಿಕೆ ಮಳೆಗೆ 96.6 ಮಿ.ಮೀ. ಮಳೆಯಾಗಿದ್ದು, ಶೇ.68.9, ಆಗಸ್ಟ್‌ ತಿಂಗಳಲ್ಲಿ 72.9 ಮಿ.ಮೀ. ವಾಡಿಕೆ ಮಳೆಗೆ 102.7 ಮಿ.ಮೀ. ಮಳೆಯಾಗಿದ್ದು, ಶೇ.40.9 ರಷ್ಟು ಹೆಚ್ಚುವರಿ ಮಳೆಯಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ 67.4 ಮಿ.ಮೀ. ವಾಡಿಕೆ ಮಳೆಗೆ 10.6 ಮಿ.ಮೀ. ವಾಸ್ತವ ಮಳೆಯಾಗಿದ್ದು, ಶೇ.84ರಷ್ಟು ಕೊರತೆ ಮಳೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಏಪ್ರಿಲ್‌ 1 ರಿಂದ ಇಲ್ಲಿಯವರೆಗೆ 399.6 ಮಿ.ಮೀ. ವಾಡಿಕೆ ಮಳೆಗೆ 500.8 ಮಿ.ಮೀ. ಮಳೆಯಾಗಿದ್ದು, ಶೇ.25.3ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ದಾಖಲಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಮಳೆಯ ಪ್ರಮಾಣ ವಾಸ್ತವದಲ್ಲಿರುವುದಕ್ಕೂ, ಅಂಕಿ-ಅಂಶಗಳಲ್ಲಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂಕಿ-ಅಂಶಗಳಲ್ಲಿ ದಾಖಲಾಗಿರುವಂತೆ ಯಾವ ಸಮಯದಲ್ಲಿ, ಎಲ್ಲಿ ಎಷ್ಟು ಪ್ರಮಾಣದಲ್ಲಿ ಆಗಿದೆ ಎನ್ನುವುದು ಸ್ವತಃ ಅಧಿಕಾರಿಗಳಿಗೇ ತಿಳಿಯದ ವಿಷಯವಾಗಿದೆ ಎಂದು ತಿಳಿದುಬಂದಿದೆ.ನಿರಂತರ ನೀರು ಹರಿಸುವುದಾಗಿ ಭರವಸೆ ನೀಡಿದ್ದ ನೀರಾವರಿ ಅಧಿಕಾರಿಗಳು ಈಗ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವುದಕ್ಕೆ ಆರಂಭಿಸಿದ್ದಾರೆ. ಮಳೆಯಿಲ್ಲದೆ ಬೆಳೆಗಳಿಗೆ ನೀರು ಸಾಲದಂತಾಗಿದೆ. ಬಿಸಿಲಿನ ತಾಪವೂ ಹೆಚ್ಚಿರುವುದರಿಂದ ಭೂಮಿ ಬೇಗ ನೀರನ್ನು ಹೀರಿಕೊಳ್ಳುತ್ತಿದೆ. ಮಳೆ ಸಮೃದ್ಧವಾಗಿ ಆಗುವ ಲಕ್ಷಣಗಳು ಕಾಣುತ್ತಿಲ್ಲ- ನಾಗರಾಜು, ರೈತ, ಹನಿಯಂಬಾಡಿ

ಮಳೆಯ ಮೇಲೆ ಭರವಸೆ ಇಟ್ಟು ರಾಗಿ ಬಿತ್ತನೆ ಮಾಡಿದ್ದೆವು. ಮಳೆ ಕೈಕೊಟ್ಟಿದೆ. ರಾಗಿ ಪೈರು ಗದ್ದೆಯಲ್ಲೇ ಒಣಗಲಾರಂಭಿಸಿದೆ. ಇಷ್ಟೊತ್ತಿಗೆ ಉತ್ತಮ ಮಳೆಯಾಗಿದ್ದರೆ ಬೆಳೆ ಉತ್ತಮವಾಗಿ ಬರುತ್ತಿತ್ತು. ಕಳೆದ ವರ್ಷವೂ ಮಳೆ ಕೊರತೆಯಿಂದ ಬೆಳೆ ಕೈಸೇರಲಿಲ್ಲ. ಈ ವರ್ಷವೂ ಬೆಳೆ ಕೈಸೇರುತ್ತದೆಂಬ ಬಗ್ಗೆ ನಂಬಿಕೆಯೇ ದೂರವಾಗುತ್ತಿದೆ. ರೈತನಷ್ಟು ದುರದೃಷ್ಟವಂತ ಬೇರಾರೂ ಇಲ್ಲ.

- ನಂಜೇಶ್‌, ಹುಳ್ಳೇನಹಳ್ಳಿ, ನಾಗಮಂಗಲ ತಾ.

ನಾಲೆ ನೀರು ತೊರೆಶೆಟ್ಟಹಳ್ಳಿವರೆಗೆ ಬಂದು ನಿಂತುಹೋಗಿದೆ. ತಗ್ಗಹಳ್ಳಿ ಅಣೆ ಐದು ದಿನಕ್ಕೊಮ್ಮೆ ನೀರು ಕೊಡುತ್ತಿದ್ದಾರೆ. ನೀರು ಸಿಕ್ಕವರು ನಾಟಿ ಮಾಡಿದ್ದಾರೆ. ಮಳೆ ಬಿದ್ದು ಕಾಲುವೆಯಲ್ಲಿ ನೀರು ಬಂದರೆ ಸರಿಹೋಗುತ್ತದೆ. ಮಳೆಯಾಗಿ ನಾಲೆಯಲ್ಲಿ ನೀರು ಬಂದರೆ ಬಚಾವಾಗಬಹುದು. ನಾಲೆ ನೀರನ್ನೇ ನಂಬಿಕೊಂಡರೆ ಬಹಳ ಕಷ್ಟವಾಗುತ್ತದೆ. ನಾಟಿ ಅವಧಿಯೂ ಮೀರುತ್ತಿದೆ.-ಸಿ.ನಾಗೇಗೌಡ ತೊರೆಶೆಟ್ಟಹಳ್ಳಿ, ಮದ್ದೂರು ತಾ.

ನೀರೇ ಸಿಗದಂತಹ ಪರಿಸ್ಥಿತಿ ಇದೆ. ಕೆಮ್ಮಣ್ಣು ನಾಲೆ ನೀರು ಮಾಲಗಾರನಹಳ್ಳಿಗೆ ಕೊನೆಯಾಗಿದೆ. ಸೂಳೆಕೆರೆ ತುಂಬದಿರುವುದರಿಂದ ನಮಗೆ ನೀರು ಸಿಗದಂತಾಗಿದೆ. ನಾಟಿ ಮಾಡಿದ ಪೈರುಗಳು ಒಣಗುತ್ತಿವೆ. ಹಲವರು ಅವಧಿ ಮೀರಿ ನಾಟಿ ಮಾಡುತ್ತಿದ್ದಾರೆ. ಬೆಳೆ ಬೆಳೆಯಲಾಗದಂತಹ ಪರಿಸ್ಥಿತಿ ಇದೆ. ಸಿ.ಎ.ಕೆರೆ ಹೋಬಳಿಗೆ ನೀರು ಹರಿಯದಿರುವುದರಿಂದ ಬೆಳೆಗೆ ನೀರೇ ಸಿಗದಂತಾಗಿದೆ.

- ರಮೇಶ, ಅಜ್ಜಹಳ್ಳಿ, ಮದ್ದೂರು ತಾ.