ಇಂದಿನಿಂದ ಶರನ್ನವರಾತ್ರಿ ಉತ್ಸವ ಪ್ರಾರಂಭ

| Published : Oct 03 2024, 01:25 AM IST / Updated: Oct 03 2024, 01:26 AM IST

ಸಾರಾಂಶ

ಲೋಕ ಕಲ್ಯಾಣಾರ್ಥವಾಗಿ ಕಳೆದ 22 ವರ್ಷಗಳಿಂದ ಪಟ್ಟಣದಲ್ಲಿ ದುರ್ಗಾ ದೇವಿ ಸಮಿತಿಯಿಂದ ನಡೆಸಿಕೊಂಡು ಬರುತ್ತಿರುವ ಶರನ್ನವರಾತ್ರಿ ಉತ್ಸವ ಅ. 3 ರಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಟಿ. ಮಂಜುನಾಥ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಲೋಕ ಕಲ್ಯಾಣಾರ್ಥವಾಗಿ ಕಳೆದ 22 ವರ್ಷಗಳಿಂದ ಪಟ್ಟಣದಲ್ಲಿ ದುರ್ಗಾ ದೇವಿ ಸಮಿತಿಯಿಂದ ನಡೆಸಿಕೊಂಡು ಬರುತ್ತಿರುವ ಶರನ್ನವರಾತ್ರಿ ಉತ್ಸವ ಅ. 3 ರಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಟಿ. ಮಂಜುನಾಥ್‌ ಹೇಳಿದರು.ಪಟ್ಟಣದ ವಿನಾಯಕ ರಂಗಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶರನ್ನವರಾತ್ರಿ ದಸರಾ ಮಹೋತ್ಸವದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮೂರ್ತಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ವೇದಿಕೆ ನಿರ್ಮಾಣದ ಕಾರ್ಯಗಳು ಭರದಿಂದ ಸಾಗಿವೆ ಎಂದು ತಿಳಿಸಿದರು. ಶ್ರೀ ದುರ್ಗಾ ಸೇವಾ ಸಮಿತಿಯ ನೇತೃತ್ವದಲ್ಲಿ ನಡೆಯುವ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದಸರಾ ಮಹೋತ್ಸವ ದೇವಿಯ ಮೂರ್ತಿ ಹಾಗೂ ಅರಾಧನಾ ಪದ್ಧತಿಯ ಕಾರಣದಿಂದಲೇ ಪ್ರಸಿದ್ದಿ ಪಡೆದಿದೆ. ನಯನ ಮನೋಹರವಾಗಿ ನಿರ್ಮಾಣಗೊಳ್ಳುವ ವಿಗ್ರಹ ನೋಡಿದ ತಕ್ಷಣ ಜನರಲ್ಲಿ ಭಕ್ತಿ ಮೂಡುತ್ತದೆ. ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ತಯಾರಿಸುವ ವಿಗ್ರಹ ದೇವಿಯು ಜೀವಂತವಾಗಿಯೆ ಮಂಟಪದಲ್ಲಿ ಕುಳಿತಿದ್ದಾಳೆ ಎನ್ನಿಸುತ್ತದೆ. ಮೂರ್ತಿಯ ದರ್ಶನಕ್ಕಾಗಿಯೇ ಸಾವಿರಾರು ಜನರು ಮಂಟಪಕ್ಕೆ ಭೇಟಿ ನೀಡುತ್ತಾರೆ ಎಂದರು.ಕಾರ್ಯಕ್ರಮ: ಪ್ರತಿ ನಿತ್ಯವೂ ನಾನಾ ವಿಧದ ಅರ್ಚನೆ, ಆರಾಧನೆಗಳು, ಅಭಿಷೇಕ, ಅಷ್ಟೋತ್ತರ, ಕುಂಕುಮಾರ್ಚನೆ, ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನೆ, ಮಹಾಮಂಗಳಾರತಿ, ತೀರ್ಥಪ್ರಸಾದ ನಡೆಯಲಿದೆ. ಅ.8 ರಂದು ದೀಪೋತ್ಸವ, ಅಕ್ಟೋಬರ್‌ 10 ರ ಗುರುವಾರ ಕುಮಾರಿ ಪೂಜೆ, ನವಚಂಡಿಕಾಹೋಮ ನಡೆಯಲಿದೆ. ಅಂದು ಮಧ್ಯಾನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ . ಅ.12ರ ಶನಿವಾರ ವಿಜಯದಶಮಿಯಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ರಾಜಬೀದಿ ಉತ್ಸವ ನಡೆಸಿ ಮಠದ ಹೊಂಡದಲ್ಲಿ ಉದ್ವಾಸನಾ ನೇರವೇರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ನಿದೇಶಕರಾದ ಪ್ರವೀಣ್‌, ಡಿಎಚ್‌. ನಾಗರಾಜ್‌, ಜಿತೇಂದ್ರ, ರಾಘವೇಂದ್ರ, ರಾಮಚಂದ್ರ, ಪ್ರದೀಪ್‌ ಇತರರು ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿದಿನ ಸಂಜೆ 7ಕ್ಕೆ, ಅ.3 ರಂದು ಮಹಿಷಾ ಮರ್ದಿನಿ ಹರಿಕಥೆ, ಅ. 4 ಭಜನೆ, ದಿವ್ಯ ಸತ್ಸಂಗ, ಅ. 5 ನವದುರ್ಗ ನಾಟ್ಯ ಸಂಭ್ರಮ ಭರತನಾಟ್ಯ, ಅ. 6 ನೃತ್ಯ ಸಂಜೆ, ಅ.7 ಜಾನಪದ ವೈಭವ, ಅ.8 ದಿಪೋತ್ಸವ, ಅ.9 ಸುಗಮ ಸಂಗೀತ, ಅ.10 ಕುಮಾರಿ ಪೂಜೆ ಹಾಗೂ ನವಚಂಡಿಕಾ ಹೋಮ, ಅ.11 ದಾಂಡಿಯಾ ಉತ್ಸವ, ಅ.12 ರಾಜಬೀದಿ ಉತ್ಸವ ನಡೆಯಲಿದೆ.

ಶಿಲ್ಪಿ ಜಿ.ಡಿ. ಭಟ್‌ ಅವರಿಂದ ಮೂರ್ತಿ ನಿರ್ಮಾಣ

ಕುಂದಾಪುರ ತಾಲೂಕಿನ ಕಕ್ಕೇರಾ ಗ್ರಾಮದ ಮೂರ್ತಿ ಶಿಲ್ಪಿ ಜಿ.ಡಿ. ಭಟ್‌ ಇಲ್ಲಿನ ಮೂರ್ತಿಯನ್ನು ಪ್ರತಿವರ್ಷ ನಿರ್ಮಾಣ ಮಾಡುತ್ತಾರೆ. ಸುಮಾರು ಆರೂವರೆ ಆಡಿ ಎತ್ತರದ ಸಿಂಹಾರೂಢ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಮೂರ್ತಿಯನ್ನು ಜೇಡಿ ಮಣ್ಣು, ಭತ್ತದ ಹುಲ್ಲು, ಚಳ್ಳೆ ನಾರು ಬಳಸಿ ತಯಾರಿಸಲಾಗಿದೆ. ಹತ್ತು ಕೈಗಳು, ಅವುಗಳಲ್ಲಿ ಶಂಕ, ಚಕ್ರ, ಗಧೆ, ತ್ರಿಶೂಲ ಮತ್ತಿತರ ಆಯುಧಗಳನ್ನು ಹಿಡಿದಿರುವ ದೇವಿಯ ಮೂರ್ತಿಯು ಜೀವಂತಿಕೆಯ ಸ್ಪರ್ಶ ಹೊಂದಿದೆ. ಮಣ್ಣಿನಿಂದ ನಿರ್ಮಾಣಗೊಂಡಿರುವ ದೇವಿಗೆ ರೇಷ್ಮೆ ಸೀರೆ ಹಾಗೂ ಸ್ವರ್ಣಾಭರಣಗಳನ್ನು ಉಪಯೋಗಿಸಿ ಅಂತಿಮ ಸ್ಪರ್ಶ ನೀಡಲಾಗುತ್ತದೆ.