ಇಂದು ಶಿರೋಳ ತೋಂಟದಾರ್ಯ ಮಠದ ಶಿಲಾಮಂಟಪ, ಗೋಪುರ ಲೋಕಾರ್ಪಣೆ

| Published : May 01 2025, 12:50 AM IST

ಇಂದು ಶಿರೋಳ ತೋಂಟದಾರ್ಯ ಮಠದ ಶಿಲಾಮಂಟಪ, ಗೋಪುರ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ತೋಂಟದಾರ್ಯ ಮಠದ ಗುರುಬಸವ ಶ್ರೀಗಳು ಲಿಂಗೈಕ್ಯರಾದ ಬಳಿಕ ಶ್ರೀಮಠದ ಸದ್ಬಕ್ತರ ಆಸೆಯಂತೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಈ ಮಠಕ್ಕೆ ನೇಮಕಗೊಂಡಿದ್ದು, ಅವರು ತೋಂಟದ ಸಿದ್ದಲಿಂಗ ಶ್ರೀಗಳ ಆಸೆಯಂತೆ ಶಿಥಿಲಗೊಂಡಿದ್ದ ಗದ್ದುಗೆ ಶಿಲಾಮಂಟಪ ತೆರವುಗೊಳಿಸಿ, ₹50 ಲಕ್ಷ ವೆಚ್ಚದಲ್ಲಿ ನೂತನ ಗದ್ದುಗೆ ಶಿಲಾಮಂಟಪ, ಗೋಪುರ ನಿರ್ಮಿಸಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ:

ಮಲಪ್ರಭೆ ನದಿ ದಡಕ್ಕೆ ಹೊಂದಿಕೊಂಡಿರುವ ಶಿರೋಳ ಗ್ರಾಮದಲ್ಲಿರುವ ಶ್ರೀ ತೋಂಟದಾರ್ಯ ಮಠದ ನೂತನ ಗದ್ದುಗೆ ಶಿಲಾಮಂಟಪ, ಗೋಪುರ ಮೇ 1ರಂದು ಬೆಳಗ್ಗೆ 8 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

ತೋಂಟದಾರ್ಯ ಮಠದ ಗುರುಬಸವ ಶ್ರೀಗಳು ಲಿಂಗೈಕ್ಯರಾದ ಬಳಿಕ ಶ್ರೀಮಠದ ಸದ್ಬಕ್ತರ ಆಸೆಯಂತೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಈ ಮಠಕ್ಕೆ ನೇಮಕಗೊಂಡಿದ್ದು, ಅವರು ತೋಂಟದ ಸಿದ್ದಲಿಂಗ ಶ್ರೀಗಳ ಆಸೆಯಂತೆ ಶಿಥಿಲಗೊಂಡಿದ್ದ ಗದ್ದುಗೆ ಶಿಲಾಮಂಟಪ ತೆರವುಗೊಳಿಸಿ, ₹50 ಲಕ್ಷ ವೆಚ್ಚದಲ್ಲಿ ನೂತನ ಗದ್ದುಗೆ ಶಿಲಾಮಂಟಪ, ಗೋಪುರ ನಿರ್ಮಿಸಿದ್ದಾರೆ.

ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಮಣಕವಾಡ ಶ್ರೀ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಶ್ರೀಗಳು, ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭು ಶ್ರೀಗಳು, ಸಂಡೂರಿನ ವಿರಕ್ತಮಠದ ಪ್ರಣವಸ್ವರೂಪಿ ಪ್ರಭು ಶ್ರೀಗಳು, ಅರಸಿಕೇರೆ ಶ್ರೀ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಸಿಂಧನೂರ ಕಲ್ಮಠದ ಸಿದ್ದಲಿಂಗ ದೇಶಿಕೇಂದ್ರ ಶ್ರೀಗಳು, ಭೈರನಹಟ್ಟಿ-ಶಿರೋಳ ಮಠದ ಶಾಂತಲಿಂಗ ಶ್ರೀಗಳು ಪಾಲ್ಗೊಳ್ಳಲಿದ್ದಾರೆ.

ಮಠದ ಕೊಡುಗೆ:

ಶಿರೋಳ ಗ್ರಾಮದಲ್ಲಿ ಶ್ರೀ ತೋಂಟದಾರ್ಯ ಮಠ ಸ್ಥಾಪನೆಯಾದ ಬಳಿಕ ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಕಲೆ, ಸಾಂಸ್ಕೃತಿವಾಗಿ ತನ್ನದೆ ಆದ ಕೊಡುಗೆ ನೀಡಿದೆ.

15ನೇ ಶತಮಾನದಲ್ಲಿ ಗುರು ಶಿವಸಿದ್ದೇಶ್ವರ ಪ್ರಭುವೇ ಎಂಬ ಅಂಕಿತದಿಂದ ವಚನಗಳನ್ನು ಬರೆದವರು ಎಡೆಯೂರಿನ ಯತಿ ತೋಂಟದ ಸಿದ್ದಲಿಂಗೇಶ್ವರರು. ಅವರು ತಮ್ಮ ಸಾವಿರಾರು ಶಿಷ್ಯರೊಂದಿಗೆ ಹಂಪಿಯಿಂದ ಧರ್ಮಯಾತ್ರೆ ಪ್ರಾರಂಭಿಸಿ ವಿಜಯ ಕಲ್ಯಾಣಕ್ಕೆ ಸಾಕ್ಷಿಯಾಗಿದೆ. ತೋಂಟದಾರ್ಯ ಪೀಠ ಪರಂಪರೆಯ ಮೊದಲನೇ ಜಗದ್ಗುರುಗಳು ತೋಂಟದ ಸಿದ್ದಲಿಂಗೇಶ್ವರರು ಎಡೆಯೂರಿನಲ್ಲಿ ನೆಲನಿಂತರು. 9ನೇ ಜಗದ್ಗುರುಗಳು ತೋಂಟದ ಶ್ರೀ ಮದರ್ಧನಾರೀಶ್ವರರು ಡಂಬಳ-ಗದಗದಲ್ಲಿ ನೆಲೆನಿಂತರು. ಜಗದ್ಗುರುಗಳು ಹೀಗೆ ಒಂದೆಡೆ ಪೀಠದಲ್ಲಿದ್ದರೆ ಚರಮೂರ್ತಿಗಳು ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ನಾಡಿನಾದ್ಯಂತ ಸಂಚಾರ ಮಾಡಿದರು. ಆ ಸಂದರ್ಭದಲ್ಲಿ ಶಿರೋಳಕ್ಕೆ ಆಗಮಿಸಿ, ಗ್ರಾಮದ ಶಾನುಭೋಗರು ದಾನ ನೀಡಿದ ಜಮೀನಿನಲ್ಲಿ, ಸುಮಾರು 287 ವರ್ಷಗಳ ಹಿಂದೆ 1739ರಲ್ಲಿ ಕಲ್ಲಿನ ಮಠ ಕಟ್ಟಿಸಿದರು. ಹೀಗಾಗಿ ಇದಕ್ಕೆ ಹಿಂದೆ ಕಲ್ಮಠ ಎಂದು ಕರೆಯುತ್ತಿದ್ದರು.

ಗುರುಬಸವ ಶ್ರೀಗಳು ನೇಮಕ:

ಗದುಗಿನ ಶ್ರೀ ತೋಂಟದಾರ್ಯ ಮಠಕ್ಕೆ 19ನೇ ಪೀಠಾಧಿಪತಿಗಳಾದ ಆನಂತರ ಈ ಮಠಕ್ಕೆ ಜಗದ್ಗುರುಗಳ ಆಪ್ತಶಿಷ್ಯರಾದ ಗುರುಬಸವ ಶ್ರೀಗಳನ್ನು ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಿದರು. ಆನಂತರ ಗುರುಬಸವ ಶ್ರೀಗಳು ಈ ಮಠದಿಂದ ರೊಟ್ಟಿ ಜಾತ್ರೆ, ಹಂಪಸಾಗರ ಪರ್ವತ ಮರಿದೇವರ ಯೋಗ ವ್ಯಾಯಾಮ ಪಾಠ ಶಾಲೆ, ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆ, ಗುರುಬಸವ ಪ್ರೌಢಶಾಲೆ, ಗುರುಬಸವ ಜನ ಕಲ್ಯಾಣ ಸಂಸ್ಥೆ, ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿ, ಈ ಭಾಗದಲ್ಲಿ ಬಡ ಮಕ್ಕಳಿಗೆ ಶಿಕ್ಷಣ, ಅನ್ನ ದಾಸೋಹ ನೀಡಿದರು. ಇನ್ನು ಮಲಪ್ರಭಾ ನದಿಗೆ ಪ್ರವಾಹ ಬಂದಾಗ ಶ್ರೀ ಮಠದವರು ಪ್ರವಾಹ ಸಂತ್ರಸ್ತರಿಗೆ ಆಸರೆ ನೀಡಿ, ಆರ್ಥಿಕ ಸಹಾಯ ಮಾಡಿದರು. ಇದರ ಜತೆಗೆ ನಿರಂತರ ದಾಸೋಹ, ಬಸವ ಪುರಾಣ, ಸಾಮೂಹಿಕ ವಿವಾಹ, ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಜಾತಿ ಭೇದ ಎನ್ನದೆ ಎಲ್ಲ ಸಮುದಾಯವರಿಗೆ ಜನಪರ ಕಾರ್ಯಗಳನ್ನು ಮಾಡಿದರು.ನಾಡಿನಲ್ಲಿ ಶಿರೋಳ ತೋಂಟದಾರ್ಯ ಮಠವು ಸಾಮಾಜಿಕ, ಧಾರ್ಮಿಕ, ಸೇವೆಗೆ ಹೆಸರಾಗಿದೆ. ಭಕ್ತರೆ ಈ ಮಠದ ಬೆಳಕು ಎಂದು ತಿಳಿದು, ಎಲ್ಲ ಸಮುದಾಯದವರನ್ನು ಭಕ್ತರನ್ನಾಗಿ ಮಾಡಿಕೊಂಡು, ಸಮಾಜದಲ್ಲಿ ಇದೊಂದು ಜಾತ್ಯತೀತ ಮಠವಾಗಿ ಮುನ್ನಡೆದಿದೆ.

ಶಾಂತಲಿಂಗ ಶ್ರೀಗಳು