ಸಾರಾಂಶ
ಕಾರವಾರ: ಬರೋಬ್ಬರಿ 16 ದಿನಗಳ ತರುವಾಯ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿನ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ. ಷರತ್ತುಬದ್ಧ ಸಂಚಾರ ಆರಂಭಿಸಲು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಗುಡ್ಡ ಕುಸಿತ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ, ಕಾಯಂ ಆಗಿ ಭದ್ರತಾ ಸಿಬ್ಬಂದಿ ಇರಬೇಕು. ಕಲ್ಲು ಮಣ್ಣು ಅಥವಾ ಮರ ಬೀಳುತ್ತಿದ್ದಲ್ಲಿ ತಕ್ಷಣ ಸಂಬಂಧಪಟ್ಟವರಿಗೆ ವರದಿ ಮಾಡಿ ಸಂಚಾರ ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು. ವಾಹನಗಳು 20 ಕಿಮೀ ವೇಗದಲ್ಲಿ ಸಾಗಬೇಕು. ಹೆದ್ದಾರಿ ಪಕ್ಕ ಡ್ರೈನೇಜನಲ್ಲಿ ನೀರು ಸರಾಗವಾಗಿ ಹರಿದುಹೋಗುವಂತಿರಬೇಕು ಎಂಬ ಷರತ್ತುಗಳನ್ನು ಹಾಕಲಾಗಿದೆ.ಇದಲ್ಲದೆ ಗೋವಾದಿಂದ ಕುಂದಾಪುರ ತನಕ ಸಂಭವನೀಯ ಗುಡ್ಡ ಕುಸಿತ ಪ್ರದೇಶವನ್ನು ಗುರುತಿಸಲಾಗಿದ್ದು, ಅಲ್ಲಿಯೂ ಇಂತಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗುಡ್ಡ ಕುಸಿತ ಪ್ರದೇಶದಲ್ಲಿ ಜು. 16ರಿಂದ ನೂರಾರು ವಾಹನಗಳು ಸರದಿಯಲ್ಲಿ ನಿಂತಿರುವುದು ಕಾಣಸಿಗುತ್ತಿತ್ತು. ಪರ್ಯಾಯ ಮಾರ್ಗ ಭಾರಿ ವಾಹನಗಳ ಸಂಚಾರಕ್ಕೆ ಸಾಧ್ಯವಾಗದೆ ಇರುವುದರಿಂದ ನೂರಾರು ಲಾರಿಗಳು ಇಕ್ಕೆಲಗಳಲ್ಲಿ ಬೀಡುಬಿಟ್ಟಿದ್ದವು. ಬೇರೆ ಬೇರೆ ರಾಜ್ಯಗಳಿದ ಆಗಮಿಸಿದ ವಾಹನ ಚಾಲಕರು ತೀವ್ರ ಸಮಸ್ಯೆಗೊಳಗಾಗಿದ್ದರು. ಊಟ, ತಿಂಡಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾದಾಗ ಸ್ಥಳೀಯ ಆಟೋ, ಲಾರಿ ಚಾಲಕರು ಊಟ, ತಿಂಡಿ ನೀಡಿದ್ದರು. ಈಗ ಚತುಷ್ಪಥ ಹೆದ್ದಾರಿಯಲ್ಲಿ ಒಂದು ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.ಜು. 16ರಿಂದ ಸಂಚಾರ ಸ್ಥಗಿತವಾಗಿತ್ತು...
ಶಿರೂರಿನಲ್ಲಿ ಜು. 16ರಂದು ಗುಡ್ಡ ಕುಸಿದ ತರುವಾಯ ಸಂಚಾರ ಸ್ಥಗಿತವಾಗಿತ್ತು. ನಂತರ ಕಣ್ಮರೆಯಾದವರ ಶೋಧ ಹಾಗೂ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಕಣ್ಮರೆಯಾದ 11 ಜನರಲ್ಲಿ 8 ಶವಗಳು ದೊರೆತಿದ್ದು, ಇನ್ನೂ ಮೂವರು ಪತ್ತೆಯಾಗಬೇಕಿದೆ. ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣು, ಕಲ್ಲುಗಳ ಅಡಿಯಲ್ಲಿ ಅವರ ದೇಹ ಇರಬಹುದೆಂದು ಅಂದಾಜು ಮಾಡಲಾಗಿದೆ. ಹುಡುಕಾಟ ನಡೆಸಲು ನದಿಯ ನೀರಿನ ಹರಿವಿನ ವೇಗ ಅಡ್ಡಿಯಾಗಿರುವುದರಿಂದ ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ಶಿರೂರು ದುರಂತ: ವಿಶೇಷ ಪರಿಹಾರಕ್ಕೆ ಕಾಗೇರಿ ಆಗ್ರಹಕಾರವಾರ: ಶಿರೂರು ಗುಡ್ಡ ಕುಸಿತ ಸಂತ್ರಸ್ತರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ವಿಶೇಷ ಪರಿಹಾರ ನೀಡಬೇಕು ಹಾಗೂ ಕಾರ್ಯಾಚರಣೆಗೆ ಇನ್ನೊಂದು ಎನ್‌ಡಿಆರ್‌ಎಫ್ ತಂಡ ಕಳುಹಿಸಬೇಕೆಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ಲೋಕಸಭೆ ಅಧಿವೇಶನದಲ್ಲಿ ಕೇರಳ ವಯನಾಡು ಕುರಿತು ಪ್ರಸ್ತಾಪ ಬಂದಾಗ ಮಧ್ಯ ಪ್ರವೇಶಿಸಿದ ಕಾಗೇರಿ, ವಯನಾಡಿನಂತೆ ಅಂಕೋಲಾದ ಶಿರೂರಿನಲ್ಲೂ ಗುಡ್ಡ ಕುಸಿತ ಆಗಿದ್ದು, 8 ಶವಗಳು ಸಿಕ್ಕಿವೆ. ಇನ್ನೂ ಮೂರು ಶವಗಳು ಸಿಗಬೇಕಾಗಿದೆ ಎಂದರು.ಜು. 16ರಂದು ದುರಂತ ಆಗುತ್ತಿದ್ದಂತೆ ಪ್ರಧಾನಮಂತ್ರಿ, ಗೃಹ ಸಚಿವರು ಹಾಗೂ ರಕ್ಷಣಾ ಸಚಿವರು ತಕ್ಷಣ ಎನ್‌ಡಿಆರ್‌ಎಫ್ ತಂಡ, ಸೇನಾಪಡೆಯನ್ನು ಕಳುಹಿಸಿ ಕಣ್ಮರೆಯಾದವರ ಹುಡುಕುವ ಕಾರ್ಯಾಚರಣೆ ಆರಂಭಿಸಿದರು.ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಆಗಬೇಕು. ಆದರೆ ಅದು ಸೂಕ್ಷ್ಮವಾಗಿರುವುದರಿಂದ ವೈಜ್ಞಾನಿಕ ವರದಿಯ ಆಧಾರದಲ್ಲಿ ಆಗಬೇಕು. ಜತೆಗೆ ಪಶ್ಚಿಮ ಘಟ್ಟ ಪ್ರದೇಶದ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಯಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿ ಹಾಗೂ ಭಾರಿ ಮಳೆಯಿಂದ ಗುಡ್ಡ ಕುಸಿತ ದುರಂತ ಆಗಿದೆ ಎಂಬ ಅಭಿಪ್ರಾಯ ಇದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಸಭೆಯಲ್ಲಿ ಗಮನ ಸೆಳೆದರು.;Resize=(128,128))
;Resize=(128,128))
;Resize=(128,128))