ಸಾರಾಂಶ
ಹೂವಿನಹಡಗಲಿ: ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡು ಪರಿಹಾರಕ್ಕೆ ಅಲೆದು ಚಪ್ಪಲಿ ಹರಿದು ಹೋಗ್ಯಾವು, ನಮ್ ರೊಕ್ಕ ಕೊಡಾಕ್ ನಿಮಗ ಕಮಿಷನ್ ಬೇಕಾದ್ರ ಕೊಡುತ್ತೇವಿ, ಪರಿಹಾರ ಇಲ್ಲ ಅಂದ್ರ, ನಮ್ ಕಾಗದಪತ್ರ ಕೊಡ್ರಿ ನಿಮ್ಮ ಕಚೇರಿ ಮುಂದ ಸುಟ್ಟು ಹೋಗ್ತೀವಿ... ಇದು ಮುಂಡವಾಡ ಗ್ರಾಮದ ಸಂತ್ರಸ್ತ ರೈತರ ಆಕ್ರೋಶದ ಮಾತು.
ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ಪರಿಹಾರಕ್ಕಾಗಿ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದ 50ಕ್ಕೂ ಹೆಚ್ಚು ರೈತರು ಮುತ್ತಿಗೆ ಹಾಕಿ ನೋವು ತೋಡಿಕೊಂಡಿದ್ದಾರೆ.ಸಂಗನಗೌಡ ಎಸ್. ಪಾಟೀಲ್ ಮಾತನಾಡಿ, ಮುಂಡವಾಡದಿಂದ 13 ವರ್ಷಗಳ ಹಿಂದೆ ನಮ್ಮ ಗ್ರಾಮದ ಭೂಮಿಯನ್ನು ಸ್ವಾಧೀನ ಮಾಡಿಕೊಂಡು, ಕಾಲುವೆ ನಿರ್ಮಾಣ ಮಾಡಲಾಗಿದೆ. ಆದರೆ ಈ ವರೆಗೂ ಪರಿಹಾರ ನೀಡುತ್ತಿಲ್ಲ. ಈ ಅಧಿಕಾರಿಗಳಿಗೆ ತಿಂಗಳಿಗೆ ಸಂಬಳ ಬರುತ್ತದೆ, ಅವರು ಆರಾಮ್ ಇದಾರೆ. ಆದರೆ ಇತ್ತ ಭೂಮಿ ಕಳೆದುಕೊಂಡು ಪರಿಹಾರವೂ ಇಲ್ಲ, ಕಾಲುವೆಗಳಿಗೆ ನೀರೂ ಬರುತ್ತಿಲ್ಲ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರೈತರಿದ್ದೇವೆ. ತಿಂಗಳಲ್ಲಿ ಹತ್ತಾರು ಬಾರಿ ಅಲೆದಾಡಿದರೂ ಇಲ್ಲಸಲ್ಲದ ನೆಪ ಹೇಳಿ ರೈತರನ್ನು ಕಳುಹಿಸುತ್ತಿದ್ದಾರೆ. ಪರಿಹಾರ ನೀಡುವವರೆಗೂ ಕಚೇರಿ ಬಿಟ್ಟು ಕದಲುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ರೈತ ಪರ ಎಂದು ಹೇಳಿಕೊಳ್ಳುವ ಈ ಸರ್ಕಾರವು ಇಲ್ಲಿಗೆ ಒಬ್ಬ ವಿಶೇಷ ಭೂಸ್ವಾಧೀನಾಧಿಕಾರಿ ನೇಮಿಸಿ, ರೈತರ ಸಮಸ್ಯೆ ಆಲಿಸಬೇಕಿದೆ. ಕಳೆದ 10 ವರ್ಷಗಳಿಂದ ಒಬ್ಬ ಅಧಿಕಾರಿಯೂ ಈ ಕಚೇರಿಯಲ್ಲಿ ಉಳಿದಿಲ್ಲ. ಕಚೇರಿಯಲ್ಲಿರುವ ಸಿಬ್ಬಂದಿಗೆ ಪರಿಪೂರ್ಣ ಮಾಹಿತಿಯೇ ನೀಡುತ್ತಿಲ್ಲ. ಮೇಲಧಿಕಾರಿಗಳು ಇಲ್ಲ ಎಂಬ ನೆಪ ಹೇಳುತ್ತಾರೆ ಎಂದು ಆರೋಪಿಸಿದರು.ಮಲ್ಲಿಕಾರ್ಜುನಗೌಡ ಪಾಟೀಲ್ ಮಾತನಾಡಿ, ಪರಿಹಾರ ಕೊಡಿ ಎಂದು ಈ ಕಚೇರಿಗೆ ತಿರುಗಾಡಿ ರೋಸಿ ಹೋಗಿದ್ದೇವೆ. ಪರಿಹಾರ ಕೊಡಿ ಎಂದು ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿಗೆ ಪತ್ರ ಬರೆದರೂ ಸರ್ಕಾರದಿಂದ ಈವರೆಗೂ ಸರಿಯಾದ ಉತ್ತರ ಬಂದಿಲ್ಲ. ರೈತರೇನು ಬಿಟ್ಟಿ ಬಿದ್ದಿಲ್ಲ. ಮೇಲಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುತ್ತೇವೆಂದು ಭರವಸೆ ನೀಡುವವರೆಗೂ ಕಚೇರಿಗೆ ಬೀಗ ಜಡಿಯುತ್ತೇವೆಂದು ಹೇಳಿದರು.
ಬಸವರಾಜ ಗುರನಳ್ಳಿ ಮಾತನಾಡಿ, ಮುಂಡವಾಡ ಗ್ರಾಮದ 52 ಎಕರೆ, 14 ಎಕರೆ, 18 ಎಕರೆ ಸೇರಿದಂತೆ 84 ಎಕರೆ ಪ್ರದೇಶ ಭೂಮಿ, ಕಾಲುವೆಗೆ ಹೋಗಿದೆ. ವರ್ಷಟ್ಟಲೇ ತಿರುಗಿದರೂ ಪರಿಹಾರ ನೀಡುತ್ತಿಲ್ಲ. ಅದಕ್ಕಾಗಿ 50ಕ್ಕೂ ಹೆಚ್ಚು ರೈತರು ಮತ್ತು ಮಹಿಳೆಯರು ಬಂದು ಕಚೇರಿಗೆ ಮುತ್ತಿಗೆ ಹಾಕಿದ್ದೇವೆ ಎಂದರು.ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ಬಾಷಾ ಮಾತನಾಡಿ, ಮುಂಡವಾಡ ಗ್ರಾಮದ 84 ಎಕರೆ ಜಮೀನಿನ ಪರಿಹಾರ ವಿತರಣೆಗೆ ಎಲ್ಲ ದಾಖಲೆಗಳು ಅಂತಿಮ ಹಂತಕ್ಕೆ ಬಂದಿವೆ. ನೀರಾವರಿ ನಿಗಮದಿಂದ ಮಂಜೂರಾಗಿ ಬರಬೇಕಿದೆ. ಬಂದ ಕೂಡಲೇ ಪರಿಹಾರ ನೀಡುತ್ತೇವೆ ಎಂದು ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಎಚ್. ಅಶೋಕ, ಎಂ.ಎ. ಪಾಟೀಲ್, ಮಹೇಶ ಕೊಂಚಿಗೇರಿ, ಲಿಂಗನಗೌಡ ಪಾಟೀಲ್, ಪ್ರಭಣ್ಣ ಹರ್ಲಾಪುರ, ರಾಚಪ್ಪ ಕಮ್ಮಾರ, ಫಕ್ಕೀರಪ್ಪ, ಬಸವರಾಜ ವಡ್ಡಟ್ಟಿ, ರಾಮಪ್ಪ ಇದ್ದರು.