ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವ ಸಂಪನ್ನ

| Published : Mar 28 2024, 12:45 AM IST

ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರೆಯಲ್ಲಿ ಕೋಣನ ಬಲಿ ಕೊಡುವ ಸಂಪ್ರದಾಯ ಕೈಬಿಟ್ಟ ಕಾರಣ ಜಾತ್ರಾ ಚಪ್ಪರದ ಎದುರು ಹೊಂಡ ತೋಡಿ ಸಾಂಕೇತಿಕವಾಗಿ ಕುಂಬಳಕಾಯಿ ಬಲಿ ಸಮರ್ಪಣೆ ನಡೆಸಿ ಮುಚ್ಚಲಾಯಿತು.

ಶಿರಸಿ: ಕಳೆದ ೯ ದಿನಗಳಿಂದ ಅದ್ಧೂರಿಯಿಂದ ಜರುಗಿದ ರಾಜ್ಯದ ಸುಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಬುಧವಾರ ಸಂಪನ್ನಗೊಂಡಿತು.

ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಶಿರಸಿಯ ಮಾರಿಕಾಂಬೆ ಜಾತ್ರೆಯ ಅಂತಿಮ ದಿನವಾದ ಬುಧವಾರ ಬೆಳಗ್ಗೆ ೫ರಿಂದ ೧೦ ಗಂಟೆಯವರೆಗೆ ಹರಕೆ ಸೇವೆಗಳು ನಡೆದವು. ನಂತರ ಮಹಾಮಂಗಳಾರತಿ ನಡೆಸುವ ಮೂಲಕ ಸೇವಾ ಕಾರ್ಯವನ್ನು ಮುಕ್ತಾಯಗೊಳಿಸಲಾಯಿತು. ಬೆಳಗ್ಗೆ ೧೧.೩೦ ಗಂಟೆ ಸುಮಾರಿಗೆ ದೇವಿ ಜಾತ್ರಾ ಗದ್ದುಗೆಯಿಂದ ಮೇಲೇಳುವ ಶಾಸ್ತ್ರ ನಡೆಸಲಾಯಿತು.

ನಂತರ ದೇವಸ್ಥಾನದ ಆಡಳಿತ ಮಂಡಳಿಯವರು, ಬಾಬುದಾರರು, ಸಹಾಯಕರೆಲ್ಲ ಸೇರಿ ದೇವಸ್ಥಾನದ ಕಲ್ಯಾಣಮಂಟಪಕ್ಕೆ ತೆರಳಿದರು. ಅಲ್ಲಿ ಕಳೆದ ಒಂಬತ್ತು ದಿನಗಳಿಂದ ಸಂಪ್ರದಾಯದಂತೆ ಕಲಶವಿಟ್ಟು ಪೂಜೆ ಸಲ್ಲಿಸುತ್ತಿರುವ ಗಾಳಿಮಾಸ್ತಿ ಜೋಗತಿಯರು ಇವರಿಗೆಲ್ಲ ಕಂಕಣ ಕಟ್ಟಿದರು.

ನಂತರ ವಾದ್ಯತಂಡದೊಂದಿಗೆ ಪೂಜೆ ನಡೆಸಿದ ಕುಂಭವನ್ನು ಮೆರವಣಿಗೆಯಲ್ಲಿ ಗದ್ದುಗೆಗೆ ತರಲಾಯಿತು. ಅದನ್ನು ಗದ್ದುಗೆಗೆ ಕಟ್ಟಿದ ನಂತರ ದೇವಿಯನ್ನು ಗದ್ದುಗೆಯಿಂದ ಜಾತ್ರಾ ಮಂಟಪದ ಮಧ್ಯದಲ್ಲಿರುವ ರಂಗಮಂಟಪದಲ್ಲಿ ತಂದು ಕುಳ್ಳಿರಿಸಲಾಯಿತು.

ಜಾತ್ರೆಯಲ್ಲಿ ಕೋಣನ ಬಲಿ ಕೊಡುವ ಸಂಪ್ರದಾಯ ಕೈಬಿಟ್ಟ ಕಾರಣ ಜಾತ್ರಾ ಚಪ್ಪರದ ಎದುರು ಹೊಂಡ ತೋಡಿ ಸಾಂಕೇತಿಕವಾಗಿ ಕುಂಬಳಕಾಯಿ ಬಲಿ ಸಮರ್ಪಣೆ ನಡೆಸಿ ಮುಚ್ಚಲಾಯಿತು. ಈ ಸಂದರ್ಭದಲ್ಲಿ ಜಾತ್ರೆಗೆ ವಾರ ಮೊದಲು ನಡೆದಿದ್ದ ಅಂಕೆ ಹಾಕುವ, ಕಂಕಣ ಕಟ್ಟುವ ಕಾರ್ಯ ದಿನದಂದು ದೇವಿಗೆ ಆರತಿ ಮಾಡಿದ ಮೇಟಿ ದೀಪವನ್ನು ಆರದಂತೆ ನೋಡಿಕೊಂಡ ಅಸಾದಿ ಬಸವಣ್ಣಿ ಈ ದೀಪದಿಂದ ಮಾರಿಕಾಂಬೆಗೆ ಮಂಗಳಾರತಿ ನಡೆಸಿದರು. ಹೀಗೆ ಜಾತ್ರೆಯ ಮುಕ್ತಾಯ ವಿಧಿವಿಧಾನಗಳ ನಂತರ ಮಧ್ಯಾಹ್ನ ೧೨.೫೫ಕ್ಕೆ ದೇವಿಯನ್ನು ಹೊತ್ತುಕೊಂಡು ತೆರಳಲಾಯಿತು.

ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಮಾತಂಗಿ ಚಪ್ಪರಕ್ಕೆ ಬೆಂಕಿ ಹಚ್ಚಲಾಯಿತು. ಸಹಸ್ರ ಸಂಖ್ಯೆಯ ಜನರ ನಡುವೆ ಹೊರಟ ಮಾರಿಕಾಂಬೆ ಜಾತ್ರಾ ಮಂಟಪದಿಂದ ಹೊರಬಿದ್ದು ರಥದ ಬಳಿ ಹೋದ ನಂತರ ರಥವನ್ನು ನೋಡುವ ಭಾಗವಾಗಿ ಮುಖ ತಿರುಗಿ ನಂತರ ಪುನಃ ಮೆರವಣಿಗೆಯಲ್ಲಿ ಹೊತ್ತುಕೊಂಡು ದೇವಿಯನ್ನು ಬನವಾಸಿ ರಸ್ತೆಯ ವಿಸರ್ಜನಾ ಪೀಠಕ್ಕೆ ಕೊಂಡೊಯ್ಯಲಾಯಿತು. ದೇವಿಯು ಗದ್ದುಗೆಯಿಂದ ಹೊರಟ ವೇಳೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಯುಗಾದಿ ದಿನದಂದು ಪ್ರತಿಷ್ಠೆ

ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳಿಂದಲೂ ಅಸಂಖ್ಯ ಭಕ್ತರು ನಡೆದುಕೊಳ್ಳುವ ಮಾರಿಕಾಂಬಾ ದೇವಿಯು ಯುಗಾದಿ ದಿನದಂದು ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನೆಗೊಳ್ಳಲಿದೆ. ಅಲ್ಲಿಯವರೆಗೆ ಮೇಟಿ ದೀಪದ ಸಂರಕ್ಷಣೆಯೂ ನಡೆಯಲಿದೆ. ಯುಗಾದಿಯಂದು ಬೆಳಗ್ಗ ೭.೫೧ರಿಂದ ೮.೩ಂರ ಒಳಗಡೆ ಪುನಃ ಪ್ರತಿಷ್ಠಾಪನೆ ಮಹೋತ್ಸವ ಜರುಗಲಿದೆ.೨೫ ಲಕ್ಷ ಅಧಿಕ ಸಾರ್ವಜನಿಕರು ಭಾಗಿ

ದಕ್ಷಿಣ ಭಾರತದ ಸುಪ್ರಸಿದ್ಧ ಶಿರಸಿಯ ಮಾರಿ ಜಾತ್ರೆಯು ೯ ದಿನಗಳ ಕಾಲ ವೈಭವದಿಂದ ನಡೆಯುತ್ತದೆ. ಈ ವರ್ಷದ ಜಾತ್ರೆಯ ಒಂಬತ್ತು ದಿನಗಳಲ್ಲಿ ಸುಮಾರು ೨೫ ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಡಿಎಸ್‌ಪಿ ಎಂ.ಎಸ್. ಪಾಟೀಲ, ಸಿಪಿಐ ಶಶಿಕುಮಾರ ವರ್ಮಾ, ಗ್ರಾಮೀಣ ಠಾಣೆ ಪಿಐ ಮಹೇಶಪ್ರಸಾದ, ನಗರ ಠಾಣೆ ಪಿಎಸ್ಐ ನಾಗಪ್ಪ, ಮಾರುಕಟ್ಟೆ ಠಾಣೆ ಪಿಎಸ್‌ಐಗಳಾದ ರತ್ನಾ ಕೆ., ರಾಜಕುಮಾರ ಉಕ್ಕಲಿ ನೇತೃತ್ವದಲ್ಲಿ ಸಿಬ್ಬಂದಿ ಜಾತ್ರೆಯ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿ, ಜಾತ್ರೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವೃದ್ಧರಿಗೆ, ಮಹಿಳೆಯರಿಗೆ ಸರಿಯಾದ ವ್ಯವಸ್ಥೆ ಮಾಡಿ, ಅಹಿತಕರ ಘಟನೆ ಜರುಗದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನೇಮಿಸಿ, ೯ ದಿನಗಳ ಕಾಲ ಉತ್ತಮ ಪೊಲೀಸ್ ವ್ಯವಸ್ಥೆ ಕಲ್ಪಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.