ಸಾರಾಂಶ
ಹೂವಿನಹಡಗಲಿ: ವಿಜಯನಗರ-ಗದಗ ಜಿಲ್ಲೆಗಳ ಗ್ರಾಮಗಳಾದ ಕಲ್ಲಾಗನೂರು-ಮಾಗಳ ಗ್ರಾಮಗಳ ನಡುವೆ ಉದ್ದೇಶಿತ ಸೇತುವೆ ಸ್ಥಳ ನಿಗದಿಪಡಿಸುವ ವಿಚಾರವಾಗಿ ತಜ್ಞರ ತಂಡವು ಕಲ್ಲಾಗನೂರು, ಹೊಳೆ ಇಟಗಿ ಗ್ರಾಮಕ್ಕೆ ಭೇಟಿ ನೀಡಿತು.ಕಲ್ಲಾಗನೂರು-ಮಾಗಳ ಹಾಗೂ ಹೊಳೆ ಇಟಗಿ, ಸಾಸಲವಾಡ ಗ್ರಾಮಗಳ ಮಧ್ಯೆ ಸೇತುವೆ ನಿರ್ಮಾಣ ಗೊಂದಲ ಇರುವ ಹಿನ್ನೆಲೆಯಲ್ಲಿ ಸರ್ಕಾರವು ನೀರಾವರಿ ನಿಗಮದ ಮಲಪ್ರಭಾ ಯೋಜನೆ ವಲಯದ ಮುಖ್ಯ ಎಂಜಿನಿಯರ್ ಅಶೋಕ ಎಲ್.ವಾಸನದ್, ಮುನಿರಾಬಾದ್ ನೀರಾವರಿ ಕೇಂದ್ರ ವಲಯದ ಮುಖ್ಯ ಇಂಜಿನಿಯರ್ ಎಲ್.ಬಸವರಾಜ, ಬೆಂಗಳೂರು ನೀರಾವರಿ ನಿಗಮದ ವಿನ್ಯಾಸ ಸಮಾಲೋಚಕ ಎಂ.ಕೆ. ಸಜ್ಜನ್, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಜಿ.ಆರ್. ಶಿವಮೂರ್ತಿ ನೇತೃತ್ವದ ಒಳಗೊಂಡ 4 ಜನರ ತಜ್ಞರ ತಂಡ ರಚಿಸಿತ್ತು. ಈ ತಂಡವು ಮಂಗಳವಾರ ಕಲ್ಲಾಗನೂರು ಮತ್ತು ಹೊಳೆ ಇಟಗಿ ನದಿ ತೀರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಮೊದಲು ಹೊಳೆ ಇಟಗಿ ಗ್ರಾಮಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣದ ಸಾಧಕ-ಬಾಧಕಗಳ ಕುರಿತು ಮಾಹಿತಿ ಸಂಗ್ರಹಿಸಿದ ಬಳಿಕ, ಕಲ್ಲಾಗನೂರು ಗ್ರಾಮಕ್ಕೆ ಭೇಟಿದ್ದರು. ಆ ವೇಳೆ ಕಲ್ಲಾಗನೂರು ಮತ್ತು ಮಾಗಳ ಗ್ರಾಮಸ್ಥರು ತಮ್ಮ ಅಹವಾಲು ನೀಡುವ ಜತೆಗೆ ಕಲ್ಲಾಗನೂರು-ಮಾಗಳ ಮಧ್ಯೆಯೇ ಸೇತುವೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದಾರೆ.ತುಂಗಭದ್ರ ನದಿಗೆ ಅಡ್ಡಲಾಗಿ ಅಲ್ಲಿಪುರ ಬಳಿ ನಿರ್ಮಾಣಗೊಂಡ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಗದಗ ಹಾಗೂ ವಿಜಯನಗರ ಜಿಲ್ಲೆಗಳ ಹತ್ತಾರು ಹಳ್ಳಿಯ ಸಾವಿರಾರು ರೈತರು ತಮ್ಮ ಜೀವನೋಪಾಯಕ್ಕಾಗಿ ಇದ್ದ ಆಸ್ತಿ ಪಾಸ್ತಿ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಅವರಿಗೆ ಅನುಕೂಲವಾಗಬೇಕೆಂಬ ಕರ್ನಾಟಕ ನೀರಾವರಿ ನಿಗಮದಿಂದ ಕಲ್ಲಾಗನೂರು-ಮಾಗಳ ನಡುವೆ ಸೇತುವೆ ನಿರ್ಮಾಣಕ್ಕಾಗಿ, ಈ ಹಿಂದೆ ಸರ್ವೆ ಮಾಡಲು ₹40 ಲಕ್ಷ ಬಿಡುಗಡೆ ಮಾಡಲಾಗಿತ್ತು. ಸಿಂಗಟಾಲೂರು ಯೋಜನೆಯ ಬಾಧಿತ ಪ್ರದೇಶದ ವ್ಯಾಪ್ತಿಯ ಜನರಿಗೆ ಅನುಕೂಲವಾಗುವಂತೆ ಮಂಜೂರಾದ ಸೇತುವೆ ನಿರ್ಮಾಣಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವರು, ಸಹಕಾರ ನೀಡಿ ಹತ್ತಾರು ಹಳ್ಳಿಯ ಜನರಿಗೆ ಅನುಕೂಲ ಮಾಡಬೇಕಿತ್ತು. ಯೋಜನೆಯ ಬಾಧಿತ ಪ್ರದೇಶ ಅಲ್ಲದ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ, ಯೋಜನೆಗಾಗಿ ಅತಿ ಕಡಿಮೆ ಪರಿಹಾರ ಪಡೆದುಕೊಂಡು ಆಸ್ತಿ ಬಿಟ್ಟು ಕೊಟ್ಟಿದ್ದೇವೆ. ಸಚಿವರಿಗೆ ಸಂತ್ರಸ್ತರ ಮೇಲೆ ಕರುಣೆ ತೋರಿ ಸೇತುವೆ ನಿರ್ಮಾಣಕ್ಕೆ ಸಹಕರಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಹೊಳೆ ಇಟಿಗಿ ಮತ್ತು ಕಲ್ಲಾಗನೂರು ಗ್ರಾಮಗಳ ನದಿ ತೀರ ಪ್ರದೇಶಕ್ಕೆ ಭೇಟಿ ನೀಡಿ ಎಲ್ಲ ರೀತಿಯ ಮಾಹಿತಿ ಸಂಗ್ರಹಿಸಲಾಗಿದೆ. ವಾರದೊಳವೆ ವರದಿ ಸಲ್ಲಿಸಲಾಗುವುದು ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಜಿ.ಆರ್.ಶಿವಮೂರ್ತಿ.