ನ್ಯಾಯದಾನ ಪ್ರಕ್ರಿಯೆ ಜೊತೆ ಸಾಮಾಜಿಕ ಬದ್ಧತೆ ಸಣ್ಣ ವಿಚಾರವಲ್ಲ: ನ್ಯಾ.ಕೃಷ್ಣ ದೀಕ್ಷಿತ್

| Published : Jun 10 2024, 12:32 AM IST

ನ್ಯಾಯದಾನ ಪ್ರಕ್ರಿಯೆ ಜೊತೆ ಸಾಮಾಜಿಕ ಬದ್ಧತೆ ಸಣ್ಣ ವಿಚಾರವಲ್ಲ: ನ್ಯಾ.ಕೃಷ್ಣ ದೀಕ್ಷಿತ್
Share this Article
  • FB
  • TW
  • Linkdin
  • Email

ಸಾರಾಂಶ

ನೂರು ವರ್ಷ ಮನುಷ್ಯನ ಬದುಕಿನಲ್ಲಿ ದೀರ್ಘ ಕಾಲವಾಗಿದ್ದರೂ ಸಂಸ್ಥೆ, ದೇಶದ ವಿಷಯದಲ್ಲಿ ದೊಡ್ಡದು ಎನ್ನಿಸುವುದಿಲ್ಲ.ಸಾಗರದಂತಹ ಊರಿನಲ್ಲಿ ಸ್ವಾತಂತ್ರ್ಯ ಬರುವುದಕ್ಕೂ ೨೫ ವರ್ಷ ಮೊದಲೇ ವಕೀಲಿಕೆ ವೃತ್ತಿ ಪ್ರಾರಂಭಿಸಿ, ಸಾಮಾಜಿಕ ಬದ್ಧತೆಯೊಂದಿಗೆ ನ್ಯಾಯದಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಣ್ಣ ವಿಚಾರವಲ್ಲ. ಅಲ್ಲದೆ ಇಲ್ಲಿಯೇ ಕಾನೂನು ಕಚೇರಿ ತೆರೆದು, ನೂರು ವರ್ಷ ಕಾಲ ಕಕ್ಷಿದಾರರು, ವಕೀಲರ ಭರವಸೆ ಉಳಿಸಿಕೊಂಡು ಬರುವುದು ನಮಗೆಲ್ಲ ಖುಷಿಯ ಸಂಗತಿ. ಊರಿನ ಇತಿಹಾಸ ಬರೆಯುವಾಗ ಈ ಕಾರ್ಯಾಲಯದ ಉಲ್ಲೇಖವೂ ಬರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ ಎಂದರು.

ಕನ್ನಡಪ್ರಭ ವಾರ್ತೆ ಸಾಗರ

ಶ್ರದ್ಧೆಯಿಂದ ವೃತ್ತಿಯನ್ನು ಮಾಡುತ್ತ ಬಂದರೆ ವೃತ್ತಿ ಗೌರವ ವೃದ್ಧಿಸುತ್ತದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟರು.

ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಭಾನುವಾರ ನಡೆದ ಟಿ.ಎಸ್.ನ್ಯಾಯವಾದಿ ಕಾರ್ಯಾಲಯದ ಶತಮಾನೋತ್ಸವ (೧೯೨೪-೨೦೨೪) ಸಮಾರಂಭ ಉದ್ಘಾಟಿಸಿ ಮಾತನಾಡಿ, ನೂರು ವರ್ಷ ಮನುಷ್ಯನ ಬದುಕಿನಲ್ಲಿ ದೀರ್ಘ ಕಾಲವಾಗಿದ್ದರೂ ಸಂಸ್ಥೆ, ದೇಶದ ವಿಷಯದಲ್ಲಿ ದೊಡ್ಡದು ಎನ್ನಿಸುವುದಿಲ್ಲ.

ಸಾಗರದಂತಹ ಊರಿನಲ್ಲಿ ಸ್ವಾತಂತ್ರ್ಯ ಬರುವುದಕ್ಕೂ ೨೫ ವರ್ಷ ಮೊದಲೇ ವಕೀಲಿಕೆ ವೃತ್ತಿ ಪ್ರಾರಂಭಿಸಿ, ಸಾಮಾಜಿಕ ಬದ್ಧತೆಯೊಂದಿಗೆ ನ್ಯಾಯದಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಣ್ಣ ವಿಚಾರವಲ್ಲ. ಅಲ್ಲದೆ ಇಲ್ಲಿಯೇ ಕಾನೂನು ಕಚೇರಿ ತೆರೆದು, ನೂರು ವರ್ಷ ಕಾಲ ಕಕ್ಷಿದಾರರು, ವಕೀಲರ ಭರವಸೆ ಉಳಿಸಿಕೊಂಡು ಬರುವುದು ನಮಗೆಲ್ಲ ಖುಷಿಯ ಸಂಗತಿ. ಊರಿನ ಇತಿಹಾಸ ಬರೆಯುವಾಗ ಈ ಕಾರ್ಯಾಲಯದ ಉಲ್ಲೇಖವೂ ಬರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ ಎಂದರು.

ಶತಪ್ರಾಪ್ತಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಮಾತನಾಡಿ, ಹಿಂದೆಲ್ಲ ವಕೀಲ ವೃತ್ತಿಯಲ್ಲಿದ್ದವರು ಸಾಮಾಜಿಕ ಜವಾಬ್ದಾರಿ ಹೊಂದಿರುತ್ತಿದ್ದರು. ಬರೀ ಹಣ ಸಂಪಾದಿಸುವುದು ನಮ್ಮ ಉದ್ದೇಶವಾಗದೆ ಸ್ವಾರ್ಥ ರಹಿತ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ವಕೀಲರು ಪ್ರಶ್ನಿಸುವ ಮನಸ್ಥಿತಿ ಹೊಂದಿರುತ್ತಾರೆ. ಹೀಗಾಗಿ ನ್ಯಾಯದಾನ ವ್ಯವಸ್ಥೆಯಲ್ಲಿರುವವರು ಶಾಸಕಾಂಗದಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ರಾಜಕೀಯದಲ್ಲಿ ವಕೀಲಿ ವೃತ್ತಿಯಲ್ಲಿ ಇರುವವರು ಕಡಿಮೆಯಾಗಿದ್ದು, ರಿಯಲ್ ಎಸ್ಟೇಟ್, ಕ್ರಿಮಿನಲ್ ಹಿನ್ನೆಲೆ ಹೊಂದಿದವರ ಸಂಖ್ಯೆ ಹೆಚ್ಚುತ್ತಿರುವುದು ಖೇದದ ಸಂಗತಿ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಮಾತನಾಡಿ, ಇತ್ತೀಚಿನ ವರ್ಷದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ವಕೀಲರ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ ನಿಧಾನವಾಗಿ ವಕೀಲರನ್ನು ಆ ಕ್ಷೇತ್ರದಿಂದ ಹೊರಗಿಡಲಾಗುತ್ತಿದೆ. ಕಾನೂನು ರೂಪಿಸುವಲ್ಲಿ ವಕೀಲರ ಕೊರತೆ ಕಾಡುತ್ತಿದೆ. ಇದು ಹೋಗಲಾಡಿಸಲು ವಕೀಲರು ತಮ್ಮ ಸಾಮರ್ಥ್ಯವನ್ನು ವಕೀಲಿಕೆಯ ಹೊರತಾಗಿ ರಾಜಕೀಯ ಕ್ಷೇತ್ರದಲ್ಲಿ ತೋರಿಸಿಕೊಡಬೇಕು ಎಂದು ಹೇಳಿದರು.

ಚೆನ್ನೈನ ಕಾಗ್ನಿಜೆಂಟ್ ಸಂಸ್ಥೆಯ ಮಾಜಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪ್ರದೀಪ್ ಶಿಳಿಗೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗರಾಜ್, ಹರನಾಥರಾವ್, ಹೊಸಬಾಳೆ ಪ್ರಭಾಕರ ರಾವ್, ಬಿ.ಆರ್. ಜಯಂತ, ಹಿರಿಯ ವಕೀಲ ಎಂ.ಎಸ್. ಗೌಡ, ಮೊದಲಾದವರಿದ್ದರು. ವಕೀಲ ರಮಣ ಸ್ವಾಗತಿಸಿದರು. ಉಷಾ ರಮಣ ವಂದಿಸಿದರು. ಡಾ.ನಿರಂಜನ, ಮಹಾಲಕ್ಷ್ಮಿ ನಿರೂಪಿಸಿದರು.ಸಂವಿಧಾನದ ಮೂಲ ಸ್ವರೂಪಕ್ಕೆ ತಿದ್ದುಪಡಿ ಅಸಾಧ್ಯ

ವಕೀಲಿ ವೃತ್ತಿ ನಮಗೆ ದೊಡ್ಡ ಜವಾಬ್ದಾರಿ. ಇದನ್ನು ಅರಿತು ನಾವು ವ್ಯವಹರಿಸಬೇಕು. ಇದೊಂದು ವಿಭಿನ್ನ ವೃತ್ತಿಯಾಗಿದ್ದು, ಬದುಕು ಗೆಲ್ಲುವುದು ಕಲಿಸುತ್ತದೆ. ಸುಖಾಸುಮ್ಮನೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಗುಲ್ಲೆಬ್ಬಿಸಲಾಗುತ್ತಿದೆ. ಆದರೆ ಈಗಾಗಲೇ ನೂರಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಿರುವುದು ಮರೆಯಬಾರದು. ಅಲ್ಲದೆ ಸಂವಿಧಾನದ ಮೂಲ ಸ್ವರೂಪಕ್ಕೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲವೆನ್ನುವುದು ಸಾರ್ವಜನಿಕರಿಗೆ ತಿಳಿಸುವುದೂ ನಮ್ಮ ಕರ್ತವ್ಯವಾಗಬೇಕು.

ಅಶೋಕ್ ಹಾರನಹಳ್ಳಿ, ಮಾಜಿ ಅಡ್ವೋಕೇಟ್ ಜನರಲ್