ಕುದರಿಮೋತಿಯಲ್ಲಿ ಸೌರಚಾಲಿತ ಈರುಳ್ಳಿ ಸಂಗ್ರಹಣಾ ಘಟಕ

| Published : Sep 10 2024, 01:41 AM IST

ಸಾರಾಂಶ

ಸೌರಚಾಲಿತ ಈರುಳ್ಳಿ ಸಂಗ್ರಹಣಾ ಘಟಕ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನ ಘಟಕ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ತಲೆ ಎತ್ತಲಿದೆ.

- ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಪ್ಪಳದಲ್ಲಿ ರಾಯಚೂರು ಕೃಷಿ ವಿವಿ ಅನುದಾನದಲ್ಲಿ ನಿರ್ಮಾಣ

- ಸಿರಿಧಾನ್ಯ ಮೌಲ್ಯವರ್ಧನ ಘಟಕವೂ ಪ್ರಾರಂಭ, ಇಂದು ಲೋಕಾರ್ಪಣೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸೌರಚಾಲಿತ ಈರುಳ್ಳಿ ಸಂಗ್ರಹಣಾ ಘಟಕ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನ ಘಟಕ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ತಲೆ ಎತ್ತಲಿದೆ.

ಇದು, ರಾಜ್ಯದಲ್ಲಿಯೇ ಮೊದಲ ಸೌರಚಾಲಿತ ಸಂಗ್ರಹಣಾ ಘಟಕವಾಗಿದೆ ಎನ್ನುವುದು ಗಮನಾರ್ಹ ಸಂಗತಿ.

ಈರುಳ್ಳಿಯನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಒಣಗಿಸುವುದನ್ನು ಇದು ಒಳಗೊಂಡಿದ್ದು, ಸಿರಿಧಾನ್ಯಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆ ಮಾಡಲಾಗುತ್ತದೆ.

ರಾಯಚೂರು ಕೃಷಿ ವಿವಿ ಅನುದಾನದಲ್ಲಿ ವಿವಿಧ ಕಂಪನಿಗಳ ನೆರವಿನಿಂದ ಧರಣಿ ರೈತ ಉತ್ಪಾದಕ ಕಂಪನಿಯ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. 10 ಟನ್ ಸಂಗ್ರಹಣಾ ಸಾಮರ್ಥ್ಯವಿದ್ದು, ಇದರಿಂದ ರೈತರಿಗೆ ಸದುಪಯೋಗವಾಗಲಿದೆ.

ಕುದರಿಮೋತಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣ ಮಾಡಲಾಗಿದ್ದು, ರೈತ ಉತ್ಪಾದಕ ಕಂಪನಿಯಲ್ಲಿ ಸದಸ್ಯತ್ವ ಇರುವ ರೈತರು ರಿಯಾಯಿತಿ ದರದಲ್ಲಿ ಇಲ್ಲಿ ಸಂಗ್ರಹಣೆ ಮಾಡಿಕೊಳ್ಳಬಹುದು. ಹಾಗೆಯೇ ಇತರೆ ರೈತರು ನಿಗದಿ ಮಾಡಿರುವ ದರದಲ್ಲಿ ಸಂಗ್ರಹಣೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈರುಳ್ಳಿ ಘಟಕ:

ಈರುಳ್ಳಿ ಘಟಕದಲ್ಲಿ ೧೨ ಟ್ರೇಗಳಿದ್ದು, ಒಂದು ಟ್ರೇ ೪೦೦ರಿಂದ ೫೦೦ ಕೆಜಿ ಒಣಗಿಸುವ ಸಾಮರ್ಥ್ಯವಿದ್ದು, ಒಟ್ಟು ೧೨ ಟನ್ ಈರುಳ್ಳಿಯನ್ನು ೫ರಿಂದ ೬ ತಾಸುಗಳಲ್ಲಿ ಒಣಗಿಸಬಹುದಾಗಿದೆ. ೧೦ ಟನ್ ಈರುಳ್ಳಿಗೆ ಕೇವಲ ₹೨,೦೦೦ ಮಾತ್ರ ಖರ್ಚಾಗುತ್ತದೆ.

ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯುತ್ತಾರೆ. ಆದರೆ, ತೇವಾಂಶದಿಂದ ಈರುಳ್ಳಿ ಕೊಳೆಯುತ್ತದೆ. ಇದನ್ನು ಈ ಘಟಕದಲ್ಲಿ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ. ಹಾಗೆ ಮಾರುಕಟ್ಟೆಯಲ್ಲಿ ದರ ಇಲ್ಲದಿರುವಾಗಲೂ ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಂಡು, ದರ ಬಂದ ವೇಳೆಯಲ್ಲಿ ಮಾರಾಟ ಮಾಡುವುದಕ್ಕೂ ಅವಕಾಶ ಇದೆ. ರೈತರಿಗೆ ಅತಿ ಕಡಿಮೆ ವೆಚ್ಚವಾಗಲಿದೆ. ಸೌರಚಾಲಿತ ಆಗಿರುವುದರಿಂದ ವಿದ್ಯುತ್ ಕೊರತೆ ಅಥವಾ ಬಿಲ್ ಹೊರೆ ಇಲ್ಲ.

ಕುದರಿಮೋತಿ ಗ್ರಾಮದಧರಣಿ ಸಿರಿಧಾನ್ಯ ಉತ್ಪಾದಕರ ಕಂಪನಿಯಲ್ಲಿ ೭೪೨ ರೈತರು ಈಗಾಗಲೇ ನೋಂದಣಿ ಮಾಡಿಸಿದ್ದಾರೆ.

ಮೌಲ್ಯವರ್ಧನ ಘಟಕ:

ಜಿಲ್ಲೆಯಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದಾರೆ. ಇದನ್ನು ಸಂಸ್ಕರಣೆ ಮಾಡುವುದಕ್ಕೆ ಸಮಸ್ಯೆಯಾಗಿತ್ತು. ಆದರೆ, ಈಗ ಮೌಲ್ಯವರ್ಧನ ಸಂಸ್ಕರಣಾ ಘಟಕ ಸ್ಥಾಪಿಸಿರುವುದರಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಅನುಕೂಲವಾಗುತ್ತದೆ.

ರೈತರು ಸಂಸ್ಕರಣೆ ಮಾಡುವುದು ಮತ್ತು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಈ ಕೇಂದ್ರದಲ್ಲಿ ಅವಕಾಶವಿದೆ. ಅಷ್ಟೇ ಮೌಲ್ಯವರ್ಧನೆ ಮಾಡಿದ ಮೇಲೆ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಿಕೊಳ್ಳಬಹುದಾಗಿದೆ. ಉಳಿದವುಗಳನ್ನು ಘಟಕದಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಿರ್ವಹಣೆ:

ಹೈದರಾಬಾದ್ ತಂತ್ರಜ್ಞಾನ ಸಂಸ್ಥೆಯ ಮೂಲಕ ನಿರ್ವಹಣೆ ನಡೆಯುತ್ತದೆ. ರಾಯಚೂರು ಕೃಷಿ ವಿವಿ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತದೆ. ಇದಕ್ಕೆ ಐಸಿಐಸಿ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ನೆರವು ನೀಡಿರುವುದು ವಿಶೇಷ.