ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮಂಡಳಿ ತಿರುಗಾಟ ಆರಂಭ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಯಕ್ಷಗಾನ ಮಂಡಳಿಯ ಈ ಸಾಲಿನ ಸೇವಾ ಹರಿಕೆ ಬಯಲಾಟ ಪ್ರದರ್ಶದ ತಿರುಗಾಟ ಶನಿವಾರ ಪ್ರಾರಂಭಗೊಂಡಿದೆ.ಧರ್ಮಸ್ಥಳದಲ್ಲಿ ಶನಿವಾರ ಬೆಳಗ್ಗೆ ೮.೩೦ಕ್ಕೆ ಛತ್ರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ಯಕ್ಷಗಾನ ಮೇಳದ ಶ್ರೀ ಗಣಪತಿ ದೇವರ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಮಂಜುಕೃಪಾ ನಿವಾಸಕ್ಕೆ ಕೊಂಡು ಹೋಗಿ ಅಲ್ಲಿ ಗಣಹೋಮ ಮತ್ತು ಮಹಾಪೂಜೆ ನೆರವೇರಿಸಲಾಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಯಕ್ಷಗಾನ ಕಲಾವಿದರು, ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ ಮತ್ತು ಪುಷ್ಪರಾಜ ಶೆಟ್ಟಿ ಹಾಗೂ ಭಕ್ತಾದಿಗಳು ಇದ್ದರು.೨೦೨೪ರ ಮೇ ೨೩ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಕ್ತರಿಂದ ಹರಕೆ ಸೇವಾ ಬಯಲಾಟ ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ೭ ಗಂಟೆಯಿಂದ ೧೨ ಗಂಟೆ ವರೆಗೆ ಕಾಲಮಿತಿ ಯಕ್ಷಗಾನ ಪ್ರದರ್ಶನದಲ್ಲಿ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಸಾದರಪಡಿಸಲಾಗುತ್ತದೆ ಎಂದು ಮೇಳದ ಪ್ರಕಟಣೆ ತಿಳಿಸಿದೆ.
ಚಿತ್ರ: ಭವ್ಯ ಮೆರವಣಿಗೆ