ತೋಟಗಾರಿಕೆ ಬೆಳೆ ಸಂಗ್ರಹಿಸಲು ದೃಢ ಸಂಕಲ್ಪ ಅಗತ್ಯ: ಸಚಿವ ಶಿವಾನಂದ ಪಾಟೀಲ

| Published : Aug 16 2024, 01:00 AM IST

ತೋಟಗಾರಿಕೆ ಬೆಳೆ ಸಂಗ್ರಹಿಸಲು ದೃಢ ಸಂಕಲ್ಪ ಅಗತ್ಯ: ಸಚಿವ ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಾಸೂರ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ 10 ಕೋಟಿ ವೆಚ್ಚದ ಶೀತಲಗೃಹ ನಿರ್ಮಾಣ ಕಾಮಗಾರಿಗೆ ಸಚಿವ ಶಿವಾನಂದ ಪಾಟೀಲ ಭೂಮಿಪೂಜೆ ನೆರವೇರಿಸಿದರು.

ಬ್ಯಾಡಗಿ: ರೈತರಿಗೆ ವೈಜ್ಞಾನಿಕ ಬೆಲೆ ಹಾಗೂ ಬೆಳೆಗಳಿಗೆ ಮಾರ್ಗಸೂಚಿ ಕಂಡುಹಿಡಿಯುವಂತಹ ಪ್ರಯತ್ನ ದೇಶದ ಯಾವುದೇ ಪ್ರಧಾನಿಗಳಿಂದ ಈ ವರೆಗೂ ನಡೆದಿಲ್ಲ. ಬೆಳೆಗೆ ಯೋಗ್ಯ ಬೆಲೆ ಸಿಗದಿದ್ದರೆ ರೈತರ ಬದುಕು ದುಸ್ತರ, ವೈಜ್ಞಾನಿಕ ಸಂಸ್ಕರಣೆ ಹಾಗೂ ಸಂಗ್ರಹಣೆಗೆ ಅವಕಾಶವಿಲ್ಲದೇ ರೈತರು ಬೆಳೆದ ಶೇ. 40 ತೋಟಗಾರಿಕೆ ಬೆಳೆ ಪ್ರತಿ ವರ್ಷ ಕೊಳೆತು ಮಣ್ಣು ಪಾಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಮಾರಾಟ ಇಲಾಖೆ ಸಚಿವ ಶಿವಾನಂದ ಪಾಟೀಲ ಖೇದ ವ್ಯಕ್ತಪಡಿಸಿದರು.

ಚಿಕ್ಕಬಾಸೂರ ಕೃಷಿ (ಉಪ) ಮಾರುಕಟ್ಟೆ ಪ್ರಾಂಗಣದಲ್ಲಿ ₹10 ಕೋಟಿ ವೆಚ್ಚದ ಶೀತಲಗೃಹ (ಕೋಲ್ಡ್ ಸ್ಟೋರೇಜ್) ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಬ್ಬು ಬೆಳೆಯೊಂದನ್ನು ಹೊರತುಪಡಿಸಿ ಶೇ. 90ರಷ್ಟು ಉಪಯೋಗ ಇನ್ಯಾವುದೇ ಬೆಳೆಗಳು ಆಗುತ್ತಿಲ್ಲ. ಕೇವಲ 3 ರಾಜ್ಯಗಳಲ್ಲಿ ಕಬ್ಬು ಬೆಳೆಗಾರರಿದ್ದು, ಇಡೀ ದೇಶಕ್ಕೆ ಸಕ್ಕರೆ ನೀಡಿ ವಿದೇಶಕ್ಕೆ ರಫ್ತಾಗುತ್ತಿದೆ. ಹೀಗಾಗಿ, ತೋಟಗಾರಿಕೆ ಬೆಳೆಗಳನ್ನು ಸಂಗ್ರಹಿಸಿಡುವ ನಿಟ್ಟಿನಲ್ಲಿ ದೃಢ ಸಂಕಲ್ಪ ಮಾಡಲಾಗಿದೆ ಎಂದರು.

ರಾಜ್ಯದೆಲ್ಲೆಡೆ 15 ಕೋಲ್ಡ್ ಸ್ಟೋರೇಜ್

ತೋಟಗಾರಿಕೆ ಕೃಷಿ ಪ್ರತಿ ವರ್ಷವೂ ಲಾಭದಾಯವಾಗಲಿದೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಹವಾಮಾನ ವೈಪರೀತ್ಯ ಸೇರಿದಂತೆ ಮಾರುಕಟ್ಟೆ ದರ ಏರುಪೇರಾಗಿ ನಷ್ಟ ಅನುಭವಿಸುವ ಸಂದರ್ಭಗಳಲ್ಲಿ ಬೆಳೆಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಬಹು ದಿನಗಳ ಕಾಲ ಸಂಗ್ರಹಿಸಿಡುವುದು ಪ್ರಮುಖ ಅಂಶವಾಗಿದೆ, ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 15 ಕೋಲ್ಡ್ ಸ್ಟೋರೇಜ್ ಘಟಕಗಳ ನಿರ್ಮಾಣಕ್ಕೆ ಮುಂದಾಗಿದೆ ಎಂದರು.

ವೈಜ್ಞಾನಿಕ ಕೃಷಿ ನಡೆಸಿದರಷ್ಟೇ ರೈತ ಉಳಿಯಬಲ್ಲ

ತೋಟಗಾರಿಕೆ ಬೆಳೆ ಸಂಗ್ರಹಿಸುವ ಕಾಲವಿದಾಗಿದೆ. ಆಧುನಿಕ ಮತ್ತು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಲ್ಲಿ ಮಾತ್ರ ತೋಟಗಾರಿಕೆ ಕೃಷಿ ಮತ್ತು ರೈತರನ್ನು ಉಳಿಸಿಕೊಳ್ಳಲು ಸಾಧ್ಯ. ಚಿಕ್ಕಬಾಸೂರ ಸುತ್ತಲಿನ ಭಾಗದ ರೈತರು ಈಗಾಗಲೇ ಶುಂಠಿ ಬೆಳೆಯುವುದನ್ನು ರೂಢಿಸಿಕೊಂಡಿದ್ದು, ಅದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಇದೀಗ ನಿರ್ಮಾಣಗೊಳ್ಳುತ್ತಿರುವ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಿಸಿಡಲು ಅನುಕೂಲವಾಗಲಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಹನುಮನಮಟ್ಟಿಯಲ್ಲೂ ಕೋಲ್ಡ್ ಸ್ಟೋರೇಜ್

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ತಾಲೂಕಿನ ರೈತರ ಹಿತದೃಷ್ಟಿಯಿಂದ ಚಿಕ್ಕಬಾಸೂರಿನಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗುತ್ತಿದೆ. ಈ ಭಾಗದಲ್ಲಿ ಬಿತ್ತನೆ ಬೀಜಗಳನ್ನು ಬೆಳೆಯುವ ರೈತರಿದ್ದು, ಅವರಿಗೂ ಬೀಜ ಸಂಗ್ರಹಣೆ ಸೇರಿದಂತೆ ಶುಂಠಿ ಬೆಳೆಗಳಿಗೆ ಅನುಕೂಲವಾಗಲಿದೆ. ಬ್ಯಾಡಗಿ ಮತಕ್ಷೇತ್ರದ ಹನುಮನಮಟ್ಟಿಯಲ್ಲೂ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಲೋಕಸಭೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ, ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಮುಖಂಡರಾದ ಬೀರಣ್ಣ ಬಣಕಾರ, ವೀರನಗೌಡ ಪೊಲೀಸ್‌ ಪಾಟೀಲ, ರಮೇಶ ಸುತ್ತಕೋಟಿ, ರುದ್ರಪ್ಪ ಹೊಂಕಣ, ಜಗದೀಶ ಫೂಜಾರ, ಲಿಂಗರಾಜ ಕುಮ್ಮೂರ, ಖಾದರಸಾಬ್ ದೊಡ್ಮನಿ, ಮುನಾಫ್ ಎರೇಶಿಮಿ ಇನ್ನಿತರರಿದ್ದರು.