ಸಾರಾಂಶ
-ಯಾದಗಿರಿಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ದರ್ಶನಾಪುರ ಗೌರವ ವಂದನೆ
----ಕನ್ನಡಪ್ರಭ ವಾರ್ತೆ ಯಾದಗಿರಿ
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹೇಳಿದಂತೆ ಹಳ್ಳಿಗಳ ಅಭಿವೃದ್ಧಿಯಾಗದ ಹೊರತು ಭಾರತದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ವಾಸ್ತವದ ಸ್ಥಿತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಹೇಳಿದರು.78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತ ಹಳ್ಳಿಗಳಿಂದ ಕೂಡಿದ ದೇಶವಾಗಿದೆ. ಹಳ್ಳಿಗಳಲ್ಲಿನ ಮಹಿಳೆಯರ, ಮಕ್ಕಳ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಆರೋಗ್ಯ ಪ್ರಗತಿಯಾಗಬೇಕು. ಹಳ್ಳಿಗಳ ಅಭಿವೃದ್ಧಿಯಾಗದ ಹೊರತು ದೇಶ ಅಭಿವೃದ್ಧಿ ಆಗದು ಎಂದ ಅವರು, ಆ ನಿಟ್ಟಿನಲ್ಲಿ ಇಂದಿನ ಗ್ಯಾರಂಟಿ ಯೋಜನೆಗಳು ಅದಕ್ಕೆ ಪೂರಕವಾಗಿವೆ ಎಂದರೆ ತಪ್ಪಾಗಲಾರದು ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಥಿಸಿಕೊಂಡರು.ಸ್ವಾತಂತ್ರ್ಯ ಸಿಗಲು ಕಾರಣರಾದ ಮಹಾನ್ ವ್ಯಕ್ತಿಗಳನ್ನು ಮತ್ತು ಅವರ ಬಲಿದಾನ ತ್ಯಾಗಗಳನ್ನು, ನೆನಪಿಸಿಕೊಳ್ಳುವುದು ಸ್ವತಂತ್ರ ಭಾರತದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದರು.
ಭೌಗೋಳಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ವೈವಿಧ್ಯತೆಯಿಂದ ಕೂಡಿದ ಈ ದೇಶಕ್ಕೆ ಸ್ವಾತಂತ್ರ್ಯ ಪಡೆದ ನಂತರ ಅದಕ್ಕನುಗುಣವಾದ ಐಕ್ಯತೆಗೆ ಪೂರಕವಾದ ಸಂವಿಧಾನ ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಸಚಿವ ದರ್ಶನಾಪುರ ಹೇಳಿದರು.ಸಗರ ನಾಡಿನ ಅಚ್ಚಪ್ಪಗೌಡ ಸುಬೇದಾರ, ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪನಾಯಕ, ಜಗನ್ನಾಥರಾವ ಚಂಡ್ರಕಿ, ವಿದ್ಯಾಧರ ಗುರೂಜಿ, ಕೋಲೂರು ಮಲ್ಲಪ್ಪ, ಸ್ವಾಮಿ ರಮಾನಂದ ತೀರ್ಥ, ವಿಶ್ವನಾಥರೆಡ್ಡಿ ಮುದ್ನಾಳ ಅವರು ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಶ್ರಮಿಸಿರುವುದು ಸ್ಮರಣೀಯವಾಗಿದೆ. ಈ ಶುಭ ಸಂದರ್ಭದಲ್ಲಿ ಸ್ಮರಿಸಿ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಪಾಟೀಲ, ಜಿಲ್ಲಾಧಿಕಾರಿ ಡಾ. ಸುಶೀಲಾ, ಜಿಪಂ ಸಿಇಒ ಗರೀಮಾ ಪನ್ವಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಜಿ.ಪಂ. ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.--------ಫೋಟೊ: 15ವೈಡಿಆರ್1: ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಧ್ವಜಾರೋಹಣ ನೆರೆವೇರಿಸಿದರು.
-------15ವೈಡಿಆರ್2: ಯಾದಗಿರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ದರ್ಶನಾಪುರ ಗೌರವ ವಂದನೆ ಸ್ವೀಕರಿಸಿದರು.