ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಬಿಸಿಲಿನ ತಾಪಮಾನ, ಹವಾಮಾನ ವೈಪರೀತ್ಯ ಮತ್ತು ಕೀಟ ಬಾಧೆಯಿಂದ ಮಾವಿನ ಫಸಲನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಜೂನ್ ತಿಂಗಳ ಎರಡನೇ ವಾರದಲ್ಲಿ ಕೋಲಾರದ ಮಾವು ಮಾರುಕಟ್ಟೆ ಪ್ರವೇಶಿಸುತ್ತದೆ. ಅಲ್ಲಿವರೆಗೂ ಬಿಸಿಲು ತಾಪಮಾನ ಮತ್ತು ಕೀಟಬಾಧೆಯಿಂದ ಮಾವನ್ನು ರಕ್ಷಿಸಿಕೊಳ್ಳಲು ರೈತರು ವಿವಿಧ ಕಸರತ್ತು ಮಾಡುತ್ತಿದ್ದಾರೆ.ನೀರಾವರಿ ಸೌಲಭ್ಯ ಇರುವವರು ಮಾವಿನ ಮರಗಳಿಗೆ ನೀರನ್ನು ಕೊಡುತ್ತಿದ್ದಾರೆ. ನೀರಾವರಿ ಇಲ್ಲದೆ ಇರುವವರು ಟ್ಯಾಂಕರ್ ಮೂಲಕ ಗಿಡಗಳಿಗೆ ಹಾಗೂ ಚಿಕ್ಕಮರಗಳಿಗೆ ನೀರನ್ನು ಕೊಟ್ಟು ಬಿಸಿಲಿನ ತಾಪಮಾನದಿಂದ ಮಾವನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಬಿಸಿಲು ಮತ್ತು ಕೀಟಬಾಧೆಯಿಂದಾಗಿ ಮಾವಿನ ಕಾಯಿಗಳು ಉದುರುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.ಈ ಬಾರಿ ಬಿಸಿಲಿನ ತಾಪ ಹೆಚ್ಚು
ಬಿಸಿಲಿನ ತಾಪಮಾನ ಕಳೆದ ಹತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಹೆಚ್ಚಾಗಿದೆ. ಮಾವು ಬಿಡಲು ಪ್ರಾರಂಭವಾದಾಗದಿಂದಲೂ ಇಲ್ಲಿಯವರೆಗೂ ಮಳೆ ಬಂದಿಲ್ಲ. ಆದ ಕಾರಣ ಭೂಮಿಯಲ್ಲಿ ತೇವಾಂಶವು ಇಲ್ಲದೆ ಇರುವುದರಿಂದ ನೀರಾವರಿ ಸೌಲಭ್ಯ ಇಲ್ಲದೆ ಇರುವ ಸಾವಿರಾರು ಎಕ್ಟೇರ್ ಪ್ರದೇಶದಲ್ಲಿ ಇರುವ ಮಾವುಗೆ ಬಿಸಿಲಿನ ತಾಪಮಾನದಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕೇವಲ ಶೇ.೧೦ ರಷ್ಟು ಮಾತ್ರ ನೀರಾವರಿ ಸೌಲಭ್ಯ ಇರುವುದು. ಉಳಿದಂತೆ ಶೇ.೯೦ರಷ್ಟು ಮಳೆಯಾಧಾರಿತ ಪ್ರದೇಶದಲ್ಲಿ ಮಾವು ಇರುವುದರಿಂದ ಉಳ್ಳವರು ಮಾತ್ರ ಟ್ಯಾಂಕರ್‌ನಿಂದ ನೀರು ಕೊಡಲು ಸಾಧ್ಯವಾಗಿದೆ. ಉಳಿದವರು ಮಳೆಯನ್ನೇ ನಂಬಿದ್ದಾರೆ. ಇದುವರೆಗೂ ಮಳೆ ಬಾರದೆ ಇರುವುದರಿಂದ ಮಾವು ಪಿಂದೆಯಿಂದಲೂ ಬಿಸಿಲಿನ ತಾಪದಿಂದ ಒಣಗುತ್ತಲೇ ಬಂದಿರುವುದರಿಂದ ಕಾಯಿ ಬೆಂಡಾಗಿದ್ದು ಋತುವಿಗೆ ಬರುತದಿಯೋ ಇಲ್ಲವೋ ಎಂಬ ಅನುಮಾನ ರೈತರನ್ನು ಕಾಡುತ್ತಿದೆ.ಮಳೆಯ ನಿರೀಕ್ಷೆಯಲ್ಲಿ ರೈತಒಂದು ವಾರದ ಒಳಗಾಗಿ ಮಳೆ ಏನಾದರೂ ಬಂದರೆ ಇರುವ ಫಸಲನಾದರೂ ರಕ್ಷಿಸಿಕೊಳ್ಳಬಹುದೆಂಬುದು ರೈತರದ್ದಾಗಿದ್ದು. ಮಳೆಗಾಗಿ ಬೇಡಿಕೊಳ್ಳುವಂತ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ. ಮಾವಿನ ಮರಗಳಿಗೆ ನೀರು ಕೊಟ್ಟ ಮರಗಳಲ್ಲಿಯೂ ಬಿಸಿಲಿನ ತಾಪಮಾನಕ್ಕೆ ಕಾಯಿ ಉದುರುತ್ತಿದೆ. ಇದನ್ನು ರಕ್ಷಿಸಿಕೂಳ್ಳಲು ಸಾಧ್ಯವಾಗುತ್ತಿಲ್ಲ.ಮಾವಿಗೆ ಕೀಟಬಾಧೆ
ಮೊದಲಿನಿಂದಲೂ ಮಾವಿನ ಮರಗಳ ಮಧ್ಯೆ ಟೊಮೆಟೋ ಮುಂತಾದ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಭೂಮಿಯಲ್ಲಿ ಫಲವತ್ತತೆ ಇತ್ತು ಹಾಗೂ ಆಗಾಗ ತರಕಾರಿ ಬೆಳೆಯಗಾಗಿ ನೀರು ಹರಿಸಲಾಗುತ್ತಿತ್ತು. ಇದರಿಂದ ಮಾವು ಫಸಲು ಕಚ್ಚಿಕೊಂಡಿದೆ. ಆದರೆ ಕೀಟಬಾಧೆಯಿಂದ ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಮಾವು ಬೆಳೆಗಾರ ಯಲವಳ್ಳಿಯ ವೈ.ಎಂ. ಅಂಜಪ್ಪ.