ಸಾರಾಂಶ
ಪ್ರಸ್ತುತ ದಿನಮಾನಗಳಲ್ಲಿ ಆಯೋಜಿಸುತ್ತಿರುವ ವಿಚಾರ ಸಂಕಿರಣಗಳ ಉದ್ದೇಶ ಸಾಕಾರವಾಗಬೇಕಾದರೆ ಮಾನವಿಕ ಶಾಸ್ತ್ರಗಳ ಪ್ರಾಮುಖ್ಯತೆಯನ್ನು ಪರಿಣಾಮಕಾರಿಯಾದ ಭಾಷಾ ಸಂಹವನ ಕಲೆಯನ್ನು ರೂಢಿಸಿಕೊಂಡು ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯಂತೆ ವಿದ್ಯಾರ್ಥಿಗಳನ್ನು ಪರಿಸರ ಪ್ರೇಮಿ ಮತ್ತು ವಿಶ್ವಮಾನವರನ್ನಾಗಿಸುವ ಜವಾಬ್ದಾರಿ ಅಧ್ಯಾಪಕರದ್ದಾಗಿದೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯು ಯಾಂತ್ರಿಕವಾಗಿದ್ದು, ಜ್ಞಾನ, ಅರಿವು, ನಡತೆ ಮತ್ತು ಕೌಶಲಗಳೊಂದಿಗಿನ ಅಧ್ಯಯನವು ಅವಶ್ಯಕವಾಗಿದೆ ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್ ಹೇಳಿದರು.ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕಲಾ ನಿಕಾಯದ ವತಿಯಿಂದ ಆಯೋಜಿಸಿದ್ದ ದ ರೋಲ್ ಆಫ್ ಹ್ಯೂಮ್ಯಾನಿಟಿ ಇನ್ ಮೋಲ್ಡಿಂಗ್ ಲರ್ನಿಂಗ್ ಕಾನ್ಸಿಯಸ್‌ನೆಸ್ ಎಂಬ ವಿಷಯ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾಷೆ ಮತ್ತು ಭಾವನೆಗಳ ಸಂಗಮದ ಜ್ಞಾನಾರ್ಜನೆಗೆ ಮಾನವಿಕ ಶಾಸ್ತ್ರಗಳ ಅಧ್ಯಯನ ಸಾರ್ವಕಲಿಕ ಅಗತ್ಯವೆನಿಸಿದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪ್ರೊ.ಎಂ.ನೀಲಗಿರಿ ಎಂ.ತಳವಾರ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಆಯೋಜಿಸುತ್ತಿರುವ ವಿಚಾರ ಸಂಕಿರಣಗಳ ಉದ್ದೇಶ ಸಾಕಾರವಾಗಬೇಕಾದರೆ ಮಾನವಿಕ ಶಾಸ್ತ್ರಗಳ ಪ್ರಾಮುಖ್ಯತೆಯನ್ನು ಪರಿಣಾಮಕಾರಿಯಾದ ಭಾಷಾ ಸಂಹವನ ಕಲೆಯನ್ನು ರೂಢಿಸಿಕೊಂಡು ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯಂತೆ ವಿದ್ಯಾರ್ಥಿಗಳನ್ನು ಪರಿಸರ ಪ್ರೇಮಿ ಮತ್ತು ವಿಶ್ವಮಾನವರನ್ನಾಗಿಸುವ ಜವಾಬ್ದಾರಿ ಅಧ್ಯಾಪಕರದ್ದಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ಕಾಲ ಕಾಲಕ್ಕೆ ಜರುಗುವ ವಿಚಾರ ಸಂಕಿರಣ ಹಾಗೂ ಸಮಾವೇಶಗಳು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ಸೃಜನಶೀಲ ಹಾಗೂ ನೈತಿಕತೆ ಆಧಾರಿತ ಉಪನ್ಯಾಸಗಳು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಕಲಿಕಾ ಮತ್ತು ಅರಿವಿನ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಸಹಕಾರಿ ಆಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್. ಮೂಗೇಶಪ್ಪ ಮಾತನಾಡಿ, ಕಲಿಕೆ ನಿತ್ಯ ಮತ್ತು ನಿರಂತರವಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಮಾನವಿಕ ಶಾಸ್ತ್ರಗಳ ಕಲಿಕೆ ತುಂಬಾ ಅಗತ್ಯ. ಇಂತಹ ವಿಚಾರ ಸಂಕಿರಣಗಳು ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಲ್ಲಿ ವೈಚಾರಿಕ ನೆಲಗಟ್ಟಿನಲ್ಲಿ ವಿಷಯ ಗ್ರಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ನೆರವಾಗುತ್ತದೆ ಎಂದರು.ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಡಾ.ಸಿ. ನಾಗಣ್ಣ, ಇಂಗ್ಲಿಷ್ ಪ್ರಾಧ್ಯಾಪಕ ಡಾ.ಬಿ.ಎಂ. ಶ್ರೀಕೀರ್ತಿ ಮೊದಲಾದವರು ಇದ್ದರು. ಸಂಜೆ ಸಮಾರೋಪ ಸಮಾರಂಭ ಜರುಗಿತು.