ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಬರುವುದು ಖಚಿತ. ಆದರೆ, ಕಾಂಗ್ರೆಸ್ ಕೂಡ 7 ರಿಂದ 8 ಸ್ಥಾನ ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳಿರುವುದು ಆಶ್ಚರ್ಯ ತಂದಿದೆ. ಅದೇನೇ ಆಗಿರಲಿ ರಾಜ್ಯದ ಬಿಜೆಪಿ ಮಟ್ಟಿಗೆ ಶುದ್ಧೀಕರಣವಂತು ಆಗೇ ಆಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಸಮೀಕ್ಷೆಗಳು ಬೇಡ, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ಖಚಿತ. ಚುನಾವಣೆ ಎಂಬುದು ನಿಮಿತ್ತ ಮಾತ್ರ. ಮೋದಿಯವರು ಜನರ ಹೃದಯ ಗೆದ್ದಿದ್ದಾರೆ. ಸಮೀಕ್ಷೆ ಇದಕ್ಕೆ ಇಂಬುಕೊಟ್ಟಿದೆ ಅಷ್ಟೇ ಎಂದರು. ಕಾಂಗ್ರೆಸ್‍ನವರ ಟೀಕೆಗೆ ಉತ್ತರ ಕೊಡಬೇಕಾಗಿಲ್ಲ. ಜೂ.4ರವರೆಗೂ ಅವರು ಕಾಂಗ್ರೆಸೇ ಅಧಿಕಾರಕ್ಕೆ ಬರುತ್ತೇ ಎಂದು ಹೇಳುತ್ತಲೇ ಇರುತ್ತಾರೆ. ಒಂದು ವೇಳೆ ಸೋತರೆ ಇವಿಎಂ ಮಿಷನ್ ಮೇಲೆ ಆರೋಪ ಹೊರಿಸುತ್ತಾರೆ ಎಂದು ಟೀಕಿಸಿದರು.
ನ್ಯಾಯಾಲಯದ ಮೆಟ್ಟಿಲೇರುವೆ:ಮತದಾನಕ್ಕೂ ಮೊದಲು ಶಿವಮೊಗ್ಗದಲ್ಲಿ ಬಿಜೆಪಿಯವರು ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ ಎಂಬ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಿಂದ ನನಗೆ ಅಪಾರ ಪ್ರಮಾಣದ ಮತಗಳು ಸಿಗದಂತಾಗಿದೆ. ಇದರ ವಿರುದ್ಧ ಆಯೋಗಕ್ಕೆ ದೂರು ಕೊಟ್ಟರೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಚುನಾವಣಾ ಆಯೋಗ ಮಾತ್ರ ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಿ ಸುಮ್ಮನಿದೆ. ಬಿಜೆಪಿಯವರ ಈ ಷಡ್ಯಂತ್ರಕ್ಕೆ ಉತ್ತರ ಕೊಡಬೇಕಿತ್ತು. ನನಗೆ ಉತ್ತರ ಸಿಗದಿದ್ದರೆ, ನಾನು ಮುಂದೆ ನ್ಯಾಯಾಲಯದ ಮೆಟ್ಟಿಲೇರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರ ನಂಬುವಂತಿಲ್ಲಶಿವಮೊಗ್ಗ ಸೇರಿ ಇಡೀ ರಾಜ್ಯದಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಪರ ಇರುವುದು ಸ್ಪಷ್ಟವಾಗಿದೆ. ಚನ್ನಗಿರಿ ಮತ್ತು ಮಂಗಳೂರಿನಂತಹ ಘಟನೆಗಳು ಇದಕ್ಕೆ ಉದಾಹರಣೆಯಾಗಿದೆ. ಶಿವಮೊಗ್ಗದಲ್ಲಿಯೂ ಮತ್ತೆ ಮತ್ತೆ ಇಂತಹ ಘಟನೆ ಮರುಕಳಿಸುತ್ತಿದೆ. ಲವ್ ಜಿಹಾದ್‍ನಂತಹ ಘಟನೆಗಳು ನಡೆಯುತ್ತಲೇ ಇವೆ. ಕಾಂಗ್ರೆಸ್ ಸರ್ಕಾರವನ್ನು ನಾವು ನಂಬುವಂತಿಲ್ಲ. ನಮ್ಮ ಹೆಣ್ಣು ಮಕ್ಕಳಿಗೆ ನಾವೇ ರಕ್ಷಣೆಯಿಂದ ನೋಡಿಕೊಳ್ಳಬೇಕು.
ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ---------------ನಾಡಿದ್ದು ಶ್ರೀ ಶನೈಶ್ಚರ ಜಯಂತಿ, ಮಹಾರಥೋತ್ಸವಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿನೋಬನಗರದ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಜೂ.6ರಂದು ಶ್ರೀ ಶನೈಶ್ವರ ಜಯಂತಿ ಹಾಗೂ ಮಹಾರಥೋತ್ಸವ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ , ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶನೈಶ್ವರ ದೇವಾಲಯ ಪ್ರಾರಂಭವಾಗಿ 16 ವರ್ಷಗಳು ಕಳೆದಿದ್ದು, ಪ್ರತಿನಿತ್ಯವೂ ಪೂಜೆ ನೆರವೇರುತ್ತ ಬಂದು ಅಪಾರ ಭಕ್ತರ ಪಡೆದಿದೆ. ಅನೇಕ ಭಾಗಗಳಿಂದ ದೇವರ ಸನ್ನಿಧಿಗೆ ಬಂದು ಭಕ್ತರು ಧನ್ಯರಾಗುತ್ತಿದ್ದಾರೆ. ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿ ಇದು ರೂಪುಗೊಳ್ಳುತ್ತಿದೆ ಎಂದರು.
ಈಗ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಮಹಾರಥೋತ್ಸವ, ದಿವ್ಯ ಸತ್ಸಂಗ, ಕುಂಭಾಭಿಷೇಕ, ಭೂತಬಲಿ ಶಯನೋತ್ಸವ ,ಶನಿಶಾಂತಿ ಮುಂತಾದ ಕಾರ್ಯಕ್ರಮಗಳ ಆಯೋಜಿಸಲಾಗಿದೆ. ಜೂ.6ರಂದು ಬೆಳಿಗ್ಗೆ 10.30ಕ್ಕೆ ವೈಶಾಖ ಬಹುಳ ಅಮಾವಾಸ್ಯೆಯಂದು ಶನೈಶ್ಚರ ಜಯಂತಿ ಅಂಗವಾಗಿ ಗಣೇಶ ಪೂಜೆ, ಗ್ರಹಯಾಗ ಮತ್ತು ಮಹಾರಥೋತ್ಸವ ನಡೆಯಲಿದೆ. ನಂತರ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಥೋತ್ಸವದ ಅಂಗವಾಗಿ ವಿಶೇಷ ಹೋಮ ಹವನಗಳ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಜು.5ರಂದು ಸಂಜೆ 6.30ಕ್ಕೆ ದೇವಾಲಯದ ಮುಂಭಾಗದ ಆವರಣದಲ್ಲಿ ಹಾರ್ಟ್‍ಆಫ್‍ಲೀವಿಂಗ್‍ನ ಶ್ರೀರವಿಶಂಕರ್ ಗುರೂಜಿಯವರ ಶಿಷ್ಯರಾದ ಹಾಗೂ ಖ್ಯಾತ ಗಾಯಕರಾದ ಶ್ರೀನಿವಾಸ್ ಮತ್ತು ಶಾಲಿನಿ ಶ್ರೀನಿವಾಸ್ ತಂಡದಿಂದ ಸತ್ಸಂಗ ನಡೆಯಲಿದೆ. ಜು.7ರಂದು ಪ್ರಭೋದೋತ್ಸವ, 108 ಕಲಶ ಸ್ಥಾಪನೆ, ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳು ಜನರ ಕ್ಷೇಮಾರ್ಥವಾಗಿ ನಡೆಯುತ್ತವೆ. ಆದ್ದರಿಂದ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಮತ್ತು ತನುಮನಧನ ಸಹಾಯ ನೀಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಕಾರ್ಯದರ್ಶಿ ಸ.ನ.ಮೂರ್ತಿ ಪ್ರಮುಖರಾದ ವಿ.ರಾಜು, ಕೆ.ಕಾಂತೇಶ್, ವಿನಾಯಕ ಬಾಯಿರಿ, ಶಬರಿಕಣ್ಣನ್, ಪವನ್‍ಭಟ್ಟರು ಇದ್ದರು.--------------------------