ಸುರಪುರ: ನಿಯಂತ್ರಣಕ್ಕೆ ಬಾರದ ಟ್ರಾಫಿಕ್ ಕಿರಿಕಿರಿ

| Published : Apr 14 2024, 01:50 AM IST

ಸಾರಾಂಶ

ಇಲ್ಲದ ನೋ-ಪಾರ್ಕಿಂಗ್ ಸ್ಥಳ, ರಸ್ತೆಯ ಮಧ್ಯೆದಲ್ಲೇ ನಿಲುವ ಬೃಹತ್ ಗಾತ್ರದ ಲಾರಿಗಳು, ರಸ್ತೆ ಎಡ ಮತ್ತು ಬಲಕ್ಕೆ ನಿಲ್ಲುವ ಬೈಕ್‌ಗಳಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪಾದಚಾರಿಗಳು ಮತ್ತು ಸವಾರರ ಸಂಕಷ್ಟಕ್ಕೆ ಮೋಕ್ಷ ಸಿಗದಂತಾಗಿದೆ.

ನಾಗರಾಜ್ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ಇಲ್ಲದ ನೋ-ಪಾರ್ಕಿಂಗ್ ಸ್ಥಳ, ರಸ್ತೆಯ ಮಧ್ಯೆದಲ್ಲೇ ನಿಲುವ ಬೃಹತ್ ಗಾತ್ರದ ಲಾರಿಗಳು, ರಸ್ತೆ ಎಡ ಮತ್ತು ಬಲಕ್ಕೆ ನಿಲ್ಲುವ ಬೈಕ್‌ಗಳಿಂದ ನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪಾದಚಾರಿಗಳು ಮತ್ತು ಸವಾರರ ಸಂಕಷ್ಟಕ್ಕೆ ಮೋಕ್ಷ ಸಿಗದಂತಾಗಿದೆ.

ನಗರದಲ್ಲಿ 70 ಸಾವಿರ ಜನಸಂಖ್ಯೆಯಿದ್ದು, ದಿನದಿಂದ ದಿನಕ್ಕೆ ನಗರ ಅಭಿವೃದ್ಧಿಯತ್ತ ಸಾಗುತ್ತಿದ್ದು, ವ್ಯಾಪಾರ ವಹಿವಾಟು ಬೆಳವಣಿಗೆ ಕಂಡಿದೆ. ಗ್ರಾಮಗಳಿಂದ ಶಿಕ್ಷಣಕ್ಕಾಗಿ ನಗರಕ್ಕೆ ಬರಲೇಬೇಕಿದೆ. ಅಲ್ಲದೇ ಹಗಲು ಹೊತ್ತಿನಲ್ಲಿ ಬರುವ ಭಾರೀ ಗಾತ್ರದ ವಾಹನಗಳ ಸಂಖ್ಯೆಯೂ ಸಹಜವಾಗಿಯೇ ಹೆಚ್ಚಾಗಿದೆ. ಇದರಿಂದ ನಿತ್ಯ ಸಂಚಾರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ನುಂಗುಲಾರದ ತುತ್ತಾಗಿದೆ.

ಕಾಣದ ಪೊಲೀಸರು: ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಇಲ್ಲವೇ ಇಲ್ಲ. ಸಂಚಾರ ಜಾಗೃತಿ ಎನ್ನುವುದು ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಮಹಾತ್ಮಾ ಗಾಂಧಿ ವೃತ್ತ, ವಲ್ಲಭಬಾಯಿ ಪಟೇಲ್ ವೃತ್ತ, ವೆಂಕಟಪ್ಪನಾಯಕ ವೃತ್ತ, ಕುಂಬಾರ ಪೇಟೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸದಾ ವಾಹನಗಳಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ, ಇಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ಮಾತ್ರ ಕಾಣೆಯಾಗಿರುತ್ತಾರೆ. ನಗರದಲ್ಲಿ ಸಂಚಾರಿ ನಿಯಮಗಳು ಪುಸ್ತಕ ಮತ್ತು ಭಾಷಣಕ್ಕೆ ನಿರ್ದಿಷ್ಟವಾಗಿವೆ. ಇದರಿಂದ ಸಂಚಾರದ ಗೋಳು ದೇವರಿಗೆ ಪ್ರೀತಿಯಾಗಿದೆ ಅಂತಾರೆ ಜನರು.

ರಸ್ತೆ ಮಧ್ಯೆಯೇ ಲಾರಿ: ಭಾರೀ ಗಾತ್ರದ ಲಾರಿಗಳು ರಸ್ತೆಯ ಮಧ್ಯದಲ್ಲೇ ನಿಂತು ಕಿರಣಿ ಅಂಗಡಿಗಳಿಗೆ ಸಾಮಗ್ರಿಗಳನ್ನು ಇಳಿಸುತ್ತಾರೆ. ರಸ್ತೆಗಳು ಚಿಕ್ಕದಾಗಿರುವುದರಿಂದ ಲಾರಿ ನಿಲ್ಲುವದರಿಂದ ಎದುರು ಬದರು ವಾಹನಗಳಿಂದ ಹೋಗಲು ದಾರಿಯಲ್ಲಿದೆ ಎರಡು ಕಡೆ ವಾಹನಗಳು ನಿಂತು ಶಬ್ಬ ಮಾಲಿನ್ಯ ಮಾಡುತ್ತವೆ. ಸಂಚಾರ ದಟ್ಟಣೆಯಿಂದ ಹಲವಾರು ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ.

ಯಾರು ಹೊಣೆ: ನಗರದ ತಹಸೀಲ್ದಾರ್ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತವೆ. ಇದೇ ರಸ್ತೆಯಲ್ಲಿ ಮೂರ‍್ನಾಲ್ಕು ತಿರುವುಗಳು ಹಾಗೂ ಉಬ್ಬು ಮತ್ತು ದಿಬ್ಬಗಳು ಇರುವುದರಿಂದ ಅಪಘಾತಕ್ಕೆಆಮಂತ್ರಣ ನೀಡುತ್ತವೆ. ವಾಹನಗಳ ವೇಗದ ಮಿತಿ ತಗ್ಗಿಸಲು ಹಾಗೂ ಅಡ್ಡಲಾಗಿ ನುಗ್ಗುವ ವಾಹನಗಳನ್ನು ನಿಯಂತ್ರಿಸಲು ಸಿಗ್ನಲ್‌ಗಳನ್ನು ನಗರಸಭೆ ಮತ್ತು ಪೊಲೀಸ್ ಇಲಾಖೆ ಅಳವಡಿಸಿಲ್ಲ. ಇದರಿಂದ ಅಪಘಾತ ಸಂಭವಿಸಿ ಪ್ರಾಣ ಹೋದರೆ ಯಾರು ಹೊಣೆ ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.

ಸಂಚಾರ ಅಸ್ತವ್ಯಸ್ತ: ನಗರದಲ್ಲಿರುವ ಯಾವ ರಸ್ತೆಗಳಲ್ಲೂ ಸಂಚಾರ ನಿಯಮ ಫಲಕಗಳು ಇಲ್ಲ. ಇದರಿಂದಾಗಿ ಆಟೋ, ಟಂಟಂ ಹಾಗೂ ಬೈಕ್ ಸವಾರರು ಮನಸ್ಸು ಬಂದ ಹಾಗೆ ಚಾಲನೆ ಮಾಡುವುದರಿಂದ ಸಂಚಾರದಲ್ಲಿ ವ್ಯತ್ಯವಾಗಿ ದಟ್ಟಣೆ ಹೆಚ್ಚಾಗುತ್ತಿದೆಇದರಿಂದ ನಗರಕ್ಕೆ ಆಗಮಿಸುವ ಗ್ರಾಮೀಣ ಭಾಗದ ಜನರು ಮಾಹಿತಿ ಕೊರತೆಯಿಂದ ನುಗ್ಗಿದಾಗ ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತಿದೆ.

ಟ್ರಾಫಿಕ್ ಕಿರಿಕಿರಿ: ನಗರದಲ್ಲಿ ಜನದಟ್ಟಣೆಯ ಪ್ರದೇಶಗಳಾದ ಮಹಾತ್ಮ ಗಾಂಧಿ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ವೆಂಕಟಪ್ಪ ನಾಯಕ ವೃತ್ತದಲ್ಲಿ ಭಾರೀ ಗಾತ್ರದ ವಾಹನಗಳಿಂದ ಸಂಚಾರಕ್ಕೆ ಸಾಕಷ್ಟು ಪ್ರಮಾಣದ ತೊಂದರೆಯಾಗುತ್ತಿದೆ. ನಗರದ ಪ್ರಮುಖ ಹೋಟೆಲ್‌ಗಳು, ದೊಡ್ಡ ಅಂಗಡಿಗಳ ಮುಂದೆ ವಾಹನ ನಿಲುಗಡೆ ಇಲ್ಲದ ಕಾರಣ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದು ಮಾಮೂಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೂ ಇನ್ನಿಲ್ಲದ ಸಮಸ್ಯೆ ನಿರ್ಮಾಣವಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲೇ ತಗ್ಗು-ಗುಂಡಿಗಳನ್ನು ಕಾಣಬಹುದು. ದರಬಾರ್ ರಸ್ತೆ, ಎಸ್‌ಬಿಐ ರಸ್ತೆ, ವಲ್ಲಭಬಾಯಿ ರಸ್ತೆ, ಹನುಮಾನ ಟಾಕೀಸ್ ರಸ್ತೆ ಇಕ್ಕಟ್ಟಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತದೆ ಇದನ್ನು ನಿವಾರಿಸಲು ಪೊಲೀಸರು ಮಾತ್ರ ಬರುವುದಿಲ್ಲ. ಸಾರ್ವಜನಿಕರು ಪೋನ್ ಮಾಡಿ ಹೇಳಿದರು ಬರುವುದು ಮಾತ್ರ ಅಪರೂಪ ಎನ್ನುವಂತಾಗಿದೆ. ಸುರಪುರದಲ್ಲಿ ಮಾತ್ರ ಟ್ರಾಫಿಕ್ ಕಿರಿಕಿರಿಯಿಂದ ಯಾವಾಗ ಮುಕ್ತಿ ದೊರೆಯುವುದೇ ಯಕ್ಷ ಪ್ರಶ್ನೆಯಾಗಿದೆ.ಸುರಪುರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಆದ್ದರಿಂದ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾದರೆ ಪೊಲೀಸರಿಗೆ ತಿಳಿಸಬೇಕು. ವಾಹನ ಸವಾರರು, ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು.

- ಆನಂದ ವಾಗ್ಮೋಡೆ, ಸಿಪಿಐ, ಸುರಪುರ ಪೊಲೀಸ್ ಠಾಣೆ.

ನಗರದಲ್ಲಿ ಹಗಲು ಹೊತ್ತಿನಲ್ಲಿ ಭಾರೀ ಗಾತ್ರದ ವಾಹನಗಳನ್ನು ಬರುವುದನ್ನು ನಿಷೇಧಿಸಬೇಕು. ಬಂದರೆ ದೊಡ್ಡ ಮೊತ್ತದ ದಂಡ ವಿಧಿಸಬೇಕು. ರಾತ್ರಿ 9 ರಿಂದ ಬೆ.7ರೊಳಗೆ ದೊಡ್ಡ ವಾಹನಗಳು ನಗರದಲ್ಲಿ ಪ್ರವೇಶಿಸಲು ಅನುಮತಿಸಬೇಕು. ನಗರದಲ್ಲಿರುವ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.

- ಮಲ್ಲಿಕಾರ್ಜುನ ಕ್ರಾಂತಿ, ಹೋರಾಟಗಾರ, ಸುರಪುರ ನಿವಾಸಿ.