ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿ: ಪ್ರಶಾಂತ ಮುಚ್ಚಂಡಿ

| Published : Jul 04 2024, 01:05 AM IST

ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿ: ಪ್ರಶಾಂತ ಮುಚ್ಚಂಡಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಇರುವ ಸಮಸ್ಯೆ ಬಗೆಹರಿಯುವ ವರೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ ಹಾನಗಲ್ಲ ತಾಲೂಕು ಘಟಕದಲ್ಲಿ ನಡೆಸುವುದು ಬೇಡ ಮಹಾಸಭಾ ಸದಸ್ಯ ಪ್ರಶಾಂತ ಮುಚ್ಚಂಡಿ ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.

ಹಾನಗಲ್ಲ: ಅಖಿಲ ಭಾರತ ವೀರಶೈವ ಮಹಾಸಭೆಯ ಹಾನಗಲ್ಲ ತಾಲೂಕು ಘಟಕದ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಮಹಾಸಭಾ ಸದಸ್ಯ ಪ್ರಶಾಂತ ಮುಚ್ಚಂಡಿ ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.

ಬುಧವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಮಹಾಸಭೆ ಸಂಸ್ಥಾಪಕ ಹಾನಗಲ್ಲ ಲಿಂ. ಕುಮಾರಶಿವಯೋಗಿಗಳವರ ಶ್ರೀ ಕುಮಾರೇಶ್ವರ ವಿರಕ್ತಮಠವೇ ಈಗ ಸಮಸ್ಯೆಯ ಆಗರವಾಗಿದೆ. ಇಲ್ಲಿನ ಮಠದ ಆಸ್ತಿ ಸೇರಿದಂತೆ ಹಲವು ವಿಷಯಗಳ ಚರ್ಚೆ ನಡೆಯುತ್ತಿದೆ. ಈ ವಿಷಯವನ್ನು ವೀರಶೈವ ಮಹಾಸಭೆಗೆ ತಿಳಿಸಿ ಸಮಸ್ಯೆ ಪರಿಹಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಮಹಾಸಭೆ ಇತ್ತ ಗಮನ ಹರಿಸಿಲ್ಲ ಎಂದು ಹೇಳಿದರು. ಜು. ೧ರಂದು ಹಾನಗಲ್ಲ ವಿರಕ್ತಮಠದಲ್ಲಿ ಮಹಾಸಭಾ ಹಾನಗಲ್ಲ ತಾಲೂಕು ಘಟಕದ ಅಧ್ಯಕ್ಷರು, ಜಿಲ್ಲಾ ಘಟಕದ ಕೆಲವು ಪದಾಧಿಕಾರಿಗಳು, ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದು, ಈ ಬಾರಿ ಹಾನಗಲ್ಲ ತಾಲೂಕಿನ ಮಟ್ಟಿಗೆ ವೀರಶೈವ ಮಹಾಸಭೆ ಚುನಾವಣೆ ಬೇಡ. ಹಾನಗಲ್ಲ ಕುಮಾರೇಶ್ವರ ವಿರಕ್ತಮಠದಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಇರುವ ಲೋಪಗಳನ್ನು ಸರಿಪಡಿಸಿದ ನಂತರವೇ ಚುನಾವಣೆ ನಡೆಯಲಿ ಎಂದು ಎಲ್ಲರೂ ಒಮ್ಮತ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಕೆಲವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದು, ಅಂದು ನಡೆದ ಸಭೆಯ ವಿಚಾರವನ್ನು ತಿರಸ್ಕರಿಸಿದಂತಾಗುತ್ತದೆ. ಕೂಡಲೇ ಚುನಾವಣೆ ಪ್ರಕ್ರಿಯೆ ನಿಲ್ಲಿಸಿ ಹಾನಗಲ್ಲ ಶ್ರೀಮಠದ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ. ಸೌಹಾರ್ದಯುತವಾಗಿ ಎಲ್ಲರೂ ಕೂಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು, ಆನಂತರ ಚುನಾವಣೆ ನಡೆಸುವುದು ಒಳ್ಳೆಯದು. ಇಡೀ ತಾಲೂಕಿನ ವೀರಶೈವ ಲಿಂಗಾಯತ ಸಮುದಾಯ ಇದನ್ನು ಬೆಂಬಲಿಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭೆ ಸದಸ್ಯ ಈರಣ್ಣ ಸಿಂಧೂರ, ವಕೀಲ ಬಸವರಾಜ ದಳವಾಯಿ, ಬಸವರಾಜ ಎಸ್. ಹಾದಿಮನಿ, ರವೀಂದ್ರ ಚಿಕ್ಕೇರಿ, ಈರಣ್ಣ ಹುಗ್ಗಿ ಇದ್ದರು.