ಸಾರಾಂಶ
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀವೂ ನಿಮ್ಮ ಕುಟುಂಬ ಕರೆದುಕೊಂಡು ಬನ್ನಿ. ನೀವು ಹೇಳಿದ ಕಡೆಗೆ ನಾನೂ ನನ್ನ ಕುಟುಂಬ ಕರೆದುಕೊಂಡು ಬರುತ್ತೇನೆ. ಅತ್ಯಾಚಾರ ಕುರಿತು ಇಬ್ಬರೂ ಆಣೆ-ಪ್ರಮಾಣ ಮಾಡೋಣ ಎಂದು ಬಿಜೆಪಿ ಶಾಸಕ ಮುನಿರತ್ನ ಸವಾಲು ಹಾಕಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸೌಧದಲ್ಲಿ ರೇಪ್ ಮಾಡಿರೋದು ಸಾಬೀತಾಗಿದೆ ಎಂದು ಶಿವಕುಮಾರ್ ಮಾತನಾಡುತ್ತಾರೆ. ಶಿವಕುಮಾರ್ ಅವರು ದೈವಭಕ್ತರು. ನೀವು ನಿಮ್ಮ ಕುಟುಂಬ ಕರೆದುಕೊಂಡು ಬನ್ನಿ. ನಾನೂ ನನ್ನ ಕುಟುಂಬ ಕರೆದುಕೊಂಡು ಬರುವೆ. ಆಣೆ-ಪ್ರಮಾಣ ಮಾಡೋಣ ಎಂದರು.
ನನ್ನ ವಿರುದ್ಧ ಎಚ್‌ಐವಿ ಇಂಜೆಕ್ಷನ್ ಕಥೆ ಕಟ್ಟಿಸಿದ್ರಿ. ಸುಳ್ಳು ರೇಪ್ ಕೇಸ್ ಹಾಕಿಸಿದ್ರಿ. ಇದೆಲ್ಲಾ ಬಿಟ್ಟು ಬಿಡಿ. ಈಗಾಗಲೇ ನಿಮಗೆ 60 ವರ್ಷ ಆಗಿದೆ. ಶೇ.60ರಷ್ಟು ಕಿಡ್ನಿ ಹೋಗಿದೆ. ನನಗೂ ಹೋಗಿದೆ. ಮಾತ್ರೆ ಬಿಟ್ಟು ನೀವು ಇರಲ್ಲ. ನಾನೂ ಇರಲ್ಲ. ದ್ವೇಷ ಸಾಧನೆ, ಸಣ್ಣ ಆಲೋಚನೆ ಬಿಡಿ. ಇದೆಲ್ಲ ಬೇಕಾ? ಎಂದರು.
ಡಿಕೆಶಿ ಚೆಂಗ್ಲು: ಚೆಂಗ್ಲು ಪದದ ಅರ್ಥ ವಿವರಿಸಿದ ಶಾಸಕ ಮುನಿರತ್ನ, ನನಗೆ ಚೆಂಗ್ಲು ಅನ್ವಯಿಸುವುದಿಲ್ಲ. ನಿಜವಾದ ಚೆಂಗ್ಲು ಯಾರು ಎಂದರೆ ಅದು ಡಿ.ಕೆ.ಶಿವಕುಮಾರ್. ಮೋದಿಯನ್ನು ಭೇಟಿಯಾಗುವುದು, ಅಮಿತ್ ಶಾ ಜೊತೆಗೆ ಧ್ಯಾನಕ್ಕೆ ಕೂರುವುದು, ಗಂಗೆಯಲ್ಲಿ ಮುಳುಗೋದು ಹೀಗೆ ಥಟ್ ಥಟ್ ಅಂತ ಬದಲಾಗುವುದನ್ನೇ ಚೆಂಗ್ಲು ಅನ್ನೋದು ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಬೆಂಗಳೂರಿಗೆ ಏನು ಮಾಡಿದ್ದಾರೆ? ಕೇವಲ ಕಾಲಹರಣ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಇಂಥದೊಂದು ಕಾಮಗಾರಿಗೆ ಪ್ರಾರಂಭ ಮಾಡಿದ್ದೇನೆ ಎಂದು ಹೇಳಲಿ. ಯಾವುದೋ ಒಂದು ಕಾಮಗಾರಿಗೆ ಮೊನ್ನೆ ಗುದ್ದಲಿ ಪೂಜೆ ಮಾಡಿದ್ದಾರೆ ಎಂದರು.
21ನೇ ವಯಸ್ಸಿನಿಂದಲೂ ಸ್ನೇಹಿತರು:
ನನ್ನ ಮತ್ತು ಡಿ.ಕೆ.ಶಿವಕುಮಾರ್ ಸ್ನೇಹ ಇಂದಿನದಲ್ಲ. ನಾನು ಅವರು ಸ್ನೇಹಿತರಾಗಿದ್ದು 21ನೇ ವಯಸ್ಸಿನಲ್ಲಿ. ಅದು ಜಾವಾ, ಅಂಬಾಸಿಡರ್ ಕಾಲ. ಬಿಲ್ ಗೇಟ್ಸ್ ಬಿಲ್ ಕ್ಲಿಂಟನ್, ಅದಾನಿ, ಅಂಬಾನಿಗೂ ಇಲ್ಲದ ಅದೃಷ್ಟ ಡಿ.ಕೆ.ಶಿವಕುಮಾರ್‌ಗೆ ಆ ದೇವರು ಬರೆದಿದ್ದಾನೆ. ಆದರೆ, ರೇಪ್ ಕೇಸ್ ಹಾಕುವ ಮಟ್ಟಕ್ಕೆ ಅವರು ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
40 ಶಾಸಕರೂ ಇಲ್ಲ:
ನನಗೆ ಮಾಡಿದ ಪಾಪಕೃತ್ಯ ಇನ್ನಾರಿಗೂ ಅವರು ಮಾಡುವುದು ಬೇಡ. ನನ್ನ ತೇಜೋವಧೆ ಮಾಡಿ ಡಿ.ಕೆ.ಶಿವಕುಮಾರ್ ಏನು ಸಾಧನೆ ಮಾಡುತ್ತಾರೆ? ನನ್ನ ಮನೆಯಲ್ಲಿ ರಾಜಕಾರಣದಲ್ಲಿ ನಾನೇ ಮೊದಲು ನಾನೇ ಕೊನೆ. ನನ್ನ ವಿರುದ್ಧ ದ್ವೇಷ ಸಾಧಿಸಿ ಅವರು ಏನು ಮಾಡುತ್ತಾರೆ? 40 ವರ್ಷದ ರಾಜಕಾರಣಿ ಅವರು. ಆದರೆ, 40 ಶಾಸಕರು ಅವರ ಜತೆಗಿಲ್ಲ. ಇದು ನಿಮ್ಮ ರಾಜಕೀಯ ಪರಂಪರೆ ಎಂದು ವ್ಯಂಗ್ಯವಾಡಿದರು.
ರಾಜಕಾರಣದಲ್ಲಿ ಮಿತ್ರರು ಯಾರೂ ಇಲ್ಲ. ಮಿತ್ರರು ಇದ್ದಾರೆ ಎಂದು ಯಾರಾದರೂ ಹೇಳಿದರೆ, ಅವರಂತಹ ಶತಮೂರ್ಖ ಬೇರೆ ಇಲ್ಲ ಎಂದು ಶಾಸಕ ಮುನಿರತ್ನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.