ಆಧ್ಯಾತ್ಮಿಕತೆಯ ಮಹತ್ವ ಎತ್ತಿ ತೋರಿಸುವ ಸಂತ ಕಬೀರ, ಶರೀಫರ ಬೋಧನೆ: ಸುಮನಾ ಕುಲಕರ್ಣಿ

| Published : Jun 18 2024, 12:48 AM IST

ಆಧ್ಯಾತ್ಮಿಕತೆಯ ಮಹತ್ವ ಎತ್ತಿ ತೋರಿಸುವ ಸಂತ ಕಬೀರ, ಶರೀಫರ ಬೋಧನೆ: ಸುಮನಾ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂತ ಕಬೀರ ಹಾಗೂ ಸಂತ ಶಿಶುನಾಳ ಶರೀಫ ಈ ಇಬ್ಬರ ಬೋಧನೆಗಳು ನಿರಾಕಾರ ದೇವರ ಪರಿಕಲ್ಪನೆಯ ಸುತ್ತ ಸುತ್ತುತ್ತವೆ. ಸಾಂಪ್ರದಾಯಿಕ ಆಚರಣೆಗಳನ್ನು ಅವರು ತಿರಸ್ಕರಿಸಿದರು. ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಕಬೀರ ಮತ್ತು ಶರೀಫರು ಭಕ್ತಿ, ಪ್ರೀತಿ ಮತ್ತು ಧ್ಯಾನದ ಮಹತ್ವವನ್ನು ಒತ್ತಿ ಹೇಳಿದರು ಎಂದು ಉಪನ್ಯಾಸಕಿ ಸುಮನಾ ಕುಲಕರ್ಣಿ ಹೇಳಿದರು.

ಗದಗ: ಸಂತ ಕಬೀರ ಹಾಗೂ ಶರೀಫರ ಬೋಧನೆಗಳು ಆಧ್ಯಾತ್ಮಿಕತೆಯ ಮಹತ್ವವನ್ನುಎತ್ತಿ ತೋರಿಸುತ್ತವೆ ಎಂದು ಉಪನ್ಯಾಸಕಿ ಸುಮನಾ ಕುಲಕರ್ಣಿ ಹೇಳಿದರು.

ಅವರು ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜರುಗಿದ ಸಂತ ಶಿಶುನಾಳ ಶರೀಫರು ಮತ್ತು ಸಂತ ಕಬೀರರ ಕಾವ್ಯ ಸಾಮ್ಯತೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಬದುಕಿನ ಕಾಲದಲ್ಲಿ ಶತಮಾನಗಳ ವ್ಯತ್ಯಾಸವಿದ್ದರೂ ವಿಚಾರಗಳಲ್ಲಿ ಸಾಮ್ಯತೆ ಗುರುತಿಸಬಹುದಾಗಿದೆ. ಗುರುವಿನ ಮಾರ್ಗದರ್ಶನದಲ್ಲಿ ಅಂತರಂಗ ಶೋಧನೆಯ ಮೂಲಕ ಔನ್ನತ್ಯವನ್ನು ಸಾಧಿಸುವ ಮಾರ್ಗವನ್ನು ತೋರಿದ್ದಾರೆ ಎಂದು ಹೇಳಿದರು.

ಇಬ್ಬರ ಬೋಧನೆಗಳು ನಿರಾಕಾರ ದೇವರ ಪರಿಕಲ್ಪನೆಯ ಸುತ್ತ ಸುತ್ತುತ್ತವೆ. ಸಾಂಪ್ರದಾಯಿಕ ಆಚರಣೆಗಳನ್ನು ತಿರಸ್ಕರಿಸಿದರು. ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಕಬೀರ ಮತ್ತು ಶರೀಫರು ಭಕ್ತಿ, ಪ್ರೀತಿ ಮತ್ತು ಧ್ಯಾನದ ಮಹತ್ವವನ್ನು ಒತ್ತಿ ಹೇಳಿದರು. ಪ್ರತಿಯೊಬ್ಬ ಮನುಷ್ಯನು ದೈಹಿಕತೆಯ ಕಿಡಿಯನ್ನು ಹೊಂದಿದ್ದಾನೆ. ಅದರೊಂದಿಗೆ ಸಂಪರ್ಕ ಸಾಧಿಸಲು ಶ್ರಮಿಸಬೇಕು ಎಂದು ಅವರು ನಂಬಿದ್ದರು. ಅವರು ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆಯನ್ನು ಟೀಕಿಸಿದರು. ಎಲ್ಲ ಮಾನವರ ಸಮಾನತೆಗೆ ಒತ್ತು ನೀಡಿದರು. ಅವರ ಬೋಧನೆಗಳು ಪ್ರೀತಿ, ಭಕ್ತಿ ಮತ್ತು ಸಾರ್ವತ್ರಿಕ ಸಹೋದರತ್ವದ ಮನೋಭಾವವನ್ನು ಒಳಗೊಂಡಿವೆ ಎಂದರು.

ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭಾವ ಕಾವ್ಯದ ಹೊಂಗಿರಣವೊಂದನ್ನು ಹರಿಸಿದ ಪ್ರಸಿದ್ಧ ಅನುಭಾವ ಕವಿ ಸಂತ ಶರೀಫರಾಗಿದ್ದಾರೆ. ಗುರುಗೋವಿಂದ ಭಟ್ಟರನ್ನು ಆಧ್ಯಾತ್ಮದ ಗುರುಗಳನ್ನಾಗಿ ಮಾಡಿಕೊಂಡು ಕನ್ನಡ ಸಂಸ್ಕೃತಿಯ ಸರ್ವಧರ್ಮ ಸಹಿಷ್ಣುತಾ ಭಾವ ಮತ್ತು ಆಧ್ಯಾತ್ಮಿಕ ಪರಂಪರೆಯ ಸಮನ್ವಯ ಅನುಭಾವ ಸಂಪತ್ತನ್ನು ಅರಗಿಸಿಕೊಂಡು ರಚಿಸಿದ ಅನುಭವ ಪದಗಳು ಆಪ್ತವಾದ ಕಳಕಳಿಗೆ ನೆಲೆಯಾಗಿವೆ. ಹಳ್ಳಿಯ ಬಾಳಿನ ದಿನ ದಿನದ ಬದುಕಿನ ತಮ್ಮ ಕಣ್ಮನ ಸೆಳೆದ ಒಂದೊಂದು ಸನ್ನಿವೇಶ ಸಂಗತಿಗಳನ್ನು ರೂಪಕವಾಗಿ ದೃಷ್ಟಾಂತವಾಗಿ, ಪ್ರತಿಮೆಯಾಗಿ ಮಾಡಿಕೊಂಡು ತಮ್ಮ ಅನುಭವದ ಬೆಳಕು ಮತ್ತು ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿ ಹಿಂದು-ಮುಸ್ಲಿಂ ಸಾಮರಸ್ಯದ ತಾತ್ವಿಕ ಭೂಮಿಕೆಯನ್ನು ಪಸರಿಸಿದ ಮಹಾಸಂತ ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ವವನ್ನು ಸಾರುತ್ತ ಬೋಧವೊಂದೇ ಬ್ರಹ್ಮನಾದ ಒಂದೇ ಎಂಬ ತತ್ವ ಸಾರಿದ್ದಾರೆ ಎಂದರು.

ರತ್ನಾ ಪುರಂತರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿ ವಾರದ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನಡೆದುಕೊಂಡು ಬರುತ್ತಿವೆ. ಹೀಗೆಯೇ ನಿರಂತರತೆಯನ್ನು ಕಾಯ್ದುಕೊಂಡು ಸಾಹಿತ್ಯ ಪ್ರೇಮಿಗಳಿಗೆ ರಸಾನಂದವನ್ನು ಉಣ ಬಡಿಸುತ್ತಿರುವ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಮ್ಮಆಧ್ಯಾತ್ಮಿಕ ಪರಂಪರೆಯ ಮೂಲ ಉದ್ದೇಶ ಒಂದೇ ಪ್ರಶ್ನೆ ನಾನು ಯಾರು ಎನ್ನುವುದಾಗಿದೆ. ಅದಕ್ಕೆ ಉತ್ತರ ಕಂಡುಕೊಳ್ಳಲು ವೇದಗಳು, ಉಪನಿಷತ್ತುಗಳು, ದ್ವೈವಿತ-ಅದ್ವೈತ-ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತಗಳು ಹುಟ್ಟಿಕೊಂಡವು. ಅವರೆಲ್ಲರ ಸಿದ್ಧಾಂತ ಎಲ್ಲಿಂದ ಬಂದಿರುವೆವೋ ಅಲ್ಲಿಗೆ ಸೇರುವುದಾಗಿದೆ ಎಂದು ಹೇಳಿದರು.

ಶ್ರೀಕಾಂತ ಬಡ್ಡೂರ, ಡಿ.ಎಸ್. ಬಾಪೂರಿ, ಕೆ.ಎಚ್. ಬೇಲೂರ, ವಿ.ಎಸ್‌. ದಲಾಲಿ, ಶೇ.ಶಿ. ಕಳಸಾಪುರ, ಜಿ.ಎ. ಪಾಟೀಲ, ಡಾ. ಆರ್.ಎನ್‌. ಗೋಡಬೋಲೆ, ಸುರೇಶ ಕುಂಬಾರ, ಎಚ್.ಕೆ. ದಾಸರ, ಎಂ.ಎಫ್‌. ಡೋಣಿ, ಆರ್.ಡಿ. ಕಪ್ಪಲಿ, ಪಿ.ವಿ. ಇನಾಮದಾರ, ಪ್ರಶಾಂತ ಪಾಟೀಲ, ಐ.ಬಿ. ಒಂಟೇಲಿ, ಶರಣಪ್ಪ ತಳವಾರ ಇದ್ದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.