ಸಹಕಾರ ಕ್ಷೇತ್ರದಿಂದ ತಂತ್ರಜ್ಞಾನ ಆಧಾರಿತ ಸೇವೆ

| Published : Jan 23 2025, 12:46 AM IST

ಸಹಕಾರ ಕ್ಷೇತ್ರದಿಂದ ತಂತ್ರಜ್ಞಾನ ಆಧಾರಿತ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಕ್ರೇತ್ರ ಪ್ರಾರಂಭದಿಂದ ರೈತರು, ಕಾರ್ಮಿಕರಿಗೆ, ಆರ್ಥಿಕವಾಗಿ ಅಬಲರಾದ ಜನರಿಗೆ ನೆರವಾಗಲು ತಾನೇ ರಚಿಸಿಕೊಂಡು ತಾನೇ ಮುನ್ನೆಡೆಸುವ ಉದ್ದೇಶದಿಂದ ಪ್ರಾರಂಭಗೊಂಡಿದೆ

ಗದಗ: ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ಖಾಸಗೀಕರಣ, ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣಗಳ ನಡುವೆ ಬಲವಾಗಿ ಬೇರು ಬಿಟ್ಟಿರುವ ಸಹಕಾರ ಕ್ಷೇತ್ರವೂ ಸದಸ್ಯರ ಆರ್ಥಿಕ ಬಲವರ್ಧನೆಗಾಗಿ ಸುಧಾರಿತ ತಂತ್ರಜ್ಞಾನ ಆಧಾರಿತ ಸೇವೆ ನೀಡುತ್ತಾ ಬಂದಿದೆ ಎಂದು ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಬುಧವಾರ ರಾಜ್ಯ ಸಹಕಾರ ಮಹಾಮಂಡಳ ನಿ.ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ ಹಾಗೂ ಸಹಕಾರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲೆಯ ಇತರೆ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಾಹಕರುಗಳಿಗೆ ನಡೆದ ಒಂದು ದಿನದ ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ರೇತ್ರ ಪ್ರಾರಂಭದಿಂದ ರೈತರು, ಕಾರ್ಮಿಕರಿಗೆ, ಆರ್ಥಿಕವಾಗಿ ಅಬಲರಾದ ಜನರಿಗೆ ನೆರವಾಗಲು ತಾನೇ ರಚಿಸಿಕೊಂಡು ತಾನೇ ಮುನ್ನೆಡೆಸುವ ಉದ್ದೇಶದಿಂದ ಪ್ರಾರಂಭಗೊಂಡಿದೆ. ಇಂದು ಸಹಕಾರ ಕ್ಷೇತ್ರ ಪ್ರವೇಶಿಸದ ಯಾವುದೇ ವಲಯವಿಲ್ಲ ಅಷ್ಟರಮಟ್ಟಿಗೆ ಸಹಕಾರ ಕ್ಷೇತ್ರ ವಿಸ್ತಾರವಾಗಿ ಬೆಳೆದು ನಿಂತಿದೆ. ಸಹಕಾರ ಕ್ಷೇತ್ರವು ಎಲ್ಲ ಜನರ ಆಶೋತ್ತರ ಪೂರೈಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಒಂದು ಆರ್ಥಿಕ ಶಕ್ತಿಯಾಗಿ ರೂಪಿತವಾಗಿದೆ ಎಂದರು.

ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ ಮಾತನಾಡಿ, ಜನರಲ್ಲಿ ಉಳಿತಾಯ ಮನೋಭಾವನೆ ಬೆಳೆಸಲು ಹಾಗೂ ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸಲು ಮಹಿಳೆಯರು, ಬಡವರು ಸೇರಿದಂತೆ ಸಮಾಜದ ಕಡೆಯ ವ್ಯಕ್ತಿಗೂ ತಲುಪಲು ಸಹಕಾರ ಕ್ಷೇತ್ರವು ಸೂಕ್ತ ಮಾರ್ಗವಾಗಿದೆ. ಗ್ರಾಮೀಣ ಸಹಕಾರ ಸಂಘಗಳ ಅಥವಾ ಸ್ವ ಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ₹500 ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ.20 ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ₹100 ಪಾವತಿಸತಕ್ಕದ್ದು ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯ ಕುಟುಂಬ ಒಂದಕ್ಕೆ ವಾರ್ಷಿಕ ₹1000ಗಳ ವಂತಿಗೆ ಮತ್ತು ನಾಲಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿ ಸದಸ್ಯರಿಗೆ ಶೇ. 20 ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ₹200 ಪಾವತಿಸತಕ್ಕದು ಎಂದರು.

ಪಜಾ, ಪಪಂ ಸದಸ್ಯರುಗಳಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆ ಸರ್ಕಾರವೇ ಭರಿಸುತ್ತದೆ ಎಂದು ವಿವರಿಸಿದರು. ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿದರು.

ಈ ವೇಳೆ ಸಹಕಾರ ಸಂಘಗಳಲ್ಲಿ ಲೆಕ್ಕ ಪತ್ರಗಳ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ ಕುರಿತು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ಅರವಿಂದ ಎನ್. ನಾಗಜ್ಜನವರ, ಸಹಕಾರ ಸಂಘಗಳಲ್ಲಿ ಆಡಳಿತಾತ್ಮಕ ನಿರ್ವಹಣೆ ಕುರಿತು ರೋಣ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಹಾಗೂ ಯಶಸ್ವಿನಿ ಯೋಜನೆ ಕುರಿತು ಯಶಸ್ವಿನಿ ಕೋ-ಆರ್ಡಿನೇಟರ್ ಪ್ರಮೋದ ಕುಶಬಿ ಉಪನ್ಯಾಸ ನೀಡಿದರು

ಸಾವಿತ್ರಿ ಮೊರಬದ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಚಂದ್ರಶೇಖರ ಎಸ್.ಕರಿಯಪ್ಪನವರ ನಿರೂಪಿಸಿದರು. ರಶೀದಾಬಾನು ಸಿ.ಯಲಿಗಾರ ವಂದಿಸಿದರು.