ಸಾರಾಂಶ
ಅನಿಲ್ ಬಿರಾದಾರ
ಕನ್ನಡಪ್ರಭ ವಾರ್ತೆ ಕೊಡೇಕಲ್ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿಯಾದ ಬಸವಸಾಗರ ಜಲಾಶಯವು ಭರ್ತಿಯಾಗಿದ್ದು, ರೈತಾಪಿ ವಲಯದಲ್ಲಿ ಸಂತಸವನ್ನುಂಟು ಮಾಡಿದೆ. ಅದರಲ್ಲೂ ಕಳೆದ ಮೂರು ದಿನದಲ್ಲೇ ಜಲಾಶಯಕ್ಕೆ 10 ಟಿಎಂಸಿಗೂ ಅಧಿಕ ನೀರು ಹರಿದುಬಂದಿದ್ದು, ರೈತರಲ್ಲಿ ಖುಷಿ ಹಿಮ್ಮಡಿಗೊಳಿಸಿದೆ.
ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ನೀರಿಲ್ಲದೇ ಬಣಗೆಟ್ಟಿದ್ದ ಕೃಷ್ಣೆಯ ಒಡಲಿಗೆ ವರುಣರಾಯನ ಕೃಪೆಯಿಂದಾಗಿ ಮತ್ತೇ ಜಲಾಶಯ ಭರ್ತಿಯಾಗಿದ್ದು, ಬಸವಸಾಗರಕ್ಕೀಗ ಜೀವಕಳೆ ಬಂದಂತಾಗಿದೆ.ಮಹಾರಾಷ್ಟ್ರ ಸೇರಿ ಉತ್ತರ ಕರ್ನಾಟಕದ ಮಲಪ್ರಭಾ-ಘಟಪ್ರಭಾ ಹಾಗೂ ಸ್ಥಳೀಯವಾಗಿ ಕೃಷ್ಣೆ ಕಣಿವೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು ಗುರುವಾರ ಮಧ್ಯಾಹ್ನ 3 ಗಂಟೆಯ ಮಾಹಿತಿ ಪ್ರಕಾರ ಜಲಾಶಯಕ್ಕೆ 70 ಸಾವಿರ ಕ್ಯುಸೆಕ್ ಒಳಹರಿವು ಹರಿದು ಬರುತ್ತಿದ್ದು, 22 ಕ್ರಸ್ಟ್ ಗೇಟ್ ಗಳ ಮುಖಾಂತರ 68 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣೆಗೆ ಹರಿಸಲಾಗುತ್ತಿದೆ.
-ಜಲಾಶಯಕ್ಕೆ ಹರಿದುಬಂತು ಮಹಾ ನೀರು:ಕಳೆದ ಶುಕ್ರವಾರದವರೆಗೆ ಜಲಾಶಯದಲ್ಲಿ ಕೇವಲ 22 ಟಿಎಂಸಿ ನೀರಿನ ಸಂಗ್ರಹವಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಆಲಮಟ್ಟಿಯ ಲಾಲಬಹದ್ದೂರ್ ಶಾಸ್ತ್ರಿ ಆಣೆಕಟ್ಟು ಭರ್ತಿಯಾಗಿದ್ದು, ಜಲಾಶಯದಿಂದ ಬಿಡುತ್ತಿರುವ ಹೆಚ್ಚುವರಿ ನೀರಿನ ಪ್ರಮಾಣದಿಂದಾಗಿ ಕೇವಲ 3ದಿನದಲ್ಲೇ ಬಸವಸಾಗರ ಜಲಾಶಯಕ್ಕೆ 10 ಟಿಎಂಸಿಗೂ ಅಧಿಕ ನೀರು ಹರಿದುಬಂದಿದ್ದು, 33 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯವಿರುವ ಜಲಾಶಯ ಸದ್ಯ ಭರ್ತಿಯಾಗಿದೆ.
*ರೈತಾಪಿವರ್ಗದಲ್ಲಿ ಸಂತಸ:ಜಲಾಶಯ ಭರ್ತಿಯಾಗಿರುವುದರಿಂದ ರೈತರಲ್ಲಿ ಸಂತಸವನ್ನುಂಟುಮಾಡಿದೆ. ಪ್ರಸ್ತಕ ಸಾಲಿನ ಜುಲೈ ಮಧ್ಯದವರೆಗೂ ಸಹಿತ ಜಲಾಶಯಕ್ಕೆ ಒಳಹರಿವು ಬಾರದೇ ಇರುವುದರಿಂದ ನೀರಾವರಿಯನ್ನೇ ನಂಬಿಕೊಂಡಿದ್ದ ರೈತಾಪಿವರ್ಗದಲ್ಲಿ ಆತಂಕವನ್ನುಂಟುಮಾಡಿತ್ತು. ಆದರೆ, ಮತ್ತೇ ಇದೀಗ ಜಲಾಶಯದಲ್ಲಿ ನೀರು ಸಂಗ್ರಹಗೊಂಡಿದೆ. ಎಡದಂಡೆ ಕಾಲುವೆಗೀಗ ಇದಾಗಲೇ ನೀರು ಹರಿಸುತ್ತಿದ್ದು, ಅವರ ಆತಂಕವೀಗ ಕಡಿಮೆಯಾಗಿದೆ. ಜಲಾಶದಲ್ಲಿ ನೀರಿನ ಸಂಗ್ರಹವಿದ್ದು ಮುಂಗಾರು ಬೆಳೆಗೀಗ ಅವಲಭ್ಯವಾಗಿದೆ.
ನಿಗಮದಿಂದ ಎಚ್ಚರಿಕೆ: ಕಳೆದೆರೆಡು ದಿನಗಳಿಂದ ಕೃಷ್ಣಾನದಿಗೆ ನೀರು ಹರಿಸಲಾಗುತ್ತಿದ್ದು ಸದ್ಯ ಕೃಷ್ಣೆಯ ಜಲಾಶಯಕ್ಕೆ ಒಳಹರಿವು ಹೆಚ್ಚಾದಲ್ಲಿ ನದಿಗೆ ಬಿಡುವ ನೀರಿನ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಕೃಷ್ಣಾ ತೀರದ ಗ್ರಾಮಗಳ ಜನ-ಜಾನುವಾರು ಹಾಗೂ ಮೀನುಗಾರರು ನದಿಗೆ ಇಳಿಯದಂತೆ ಸೂಚಿಸಲಾಗಿದೆ.
492.252 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 491.75 ಮೀ. ತಲುಪಿದ್ದು 31.10 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಹೆಚ್ಚುವರಿ ನೀರನ್ನು ಗೇಟ್‌ಗಳಿಂದ ನದಿಗೆ ಹರಿಸಲಾಗುತ್ತಿದೆ.