ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಯತ್ನ ವಿಫಲ

| Published : Jan 07 2025, 12:15 AM IST

ಸಾರಾಂಶ

ರಾಮನಗರ: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆಗಳಿಗೆ ಹೇರಿರುವ ನಿಷೇಧಾಜ್ಞೆ ಹಿಂಪಡೆಯಲು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ರೈತ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿವೆ.

ರಾಮನಗರ: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆಗಳಿಗೆ ಹೇರಿರುವ ನಿಷೇಧಾಜ್ಞೆ ಹಿಂಪಡೆಯಲು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ರೈತ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿವೆ.

ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆಗಳಿಗೆ ಹೇರಿರುವ ನಿಷೇಧಾಜ್ಞೆ ಹಿಂಪಡೆಯುವಂತೆ ಆಗ್ರಹಿಸಿ ರೈತ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮೊದಲೇ ಘೋಷಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.

ನಗರದ ಹಳೆಯ ಕಂದಾಯ ಭವನದ ಆವರಣದಲ್ಲಿ ಜಮಾಯಿಸಿದ ರೈತ ಮತ್ತು ಕನ್ನಡ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಬಳಿಗೆ ಧಾವಿಸಿದರು. ಅಲ್ಲಿ ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ಹಸಿರು ಟವಲ್ ತಿರುಗಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮೆರವಣಿಗೆ ಮುಂದುವರೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧಾವಿಸಿದಾಗ ಕಚೇರಿಯ ಮುಖ್ಯದ್ವಾರದ ಗೇಟ್ ಬಳಿ ಹತ್ತಾರು ಬ್ಯಾರಿಕೇಟ್ ಗಳನ್ನು ಅಡ್ಡಲಾಗಿಟ್ಟು ನೂರಾರು ಪೊಲೀಸರು ಬಂದೋಬಸ್ತಿನಲ್ಲಿ ತೊಡಗಿದ್ದರು. ಜಿಲ್ಲಾಧಿಕಾರಿಗಳ ಕಚೇರಿಯೊಳಗೆ ಪ್ರವೇಶಿಸಲು ಅಡ್ಡಿ ಪಡಿಸಿದ ಪೊಲೀಸರೊಂದಿಗೆ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು. ಕೊನೆಗೆ ಗೇಟಿನ ಬಳಿಯೇ ಘೋಷಣೆ ಕೂಗುತ್ತಾ ಪ್ರತಿಭಟನೆ ಕುಳಿತರು. ಅದರ ಪಕ್ಕದಲ್ಲಿಯೇ ಕೆಲ ರೈತರು, ಚಳವಳಿಕಾರರಿಗೆ ಮಧ್ಯಾಹ್ನದ ಊಟಕ್ಕಾಗಿ ಭೋಜನ ವ್ಯವಸ್ಥೆ ಮಾಡುವಲ್ಲಿ ನಿರತರಾದರು.

ಡಿಸಿ ಎತ್ತಂಗಡಿ ಆಗುವರೆಗೂ ಹೋರಾಟ ನಿಲ್ಲದು:

ಈ ವೇಳೆ ಮಾತನಾಡಿದ ರೈತಸಂಘ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ , ಜಿಲ್ಲಾಧಿಕಾರಿಗಳು ಅಂದರೆ ಜಿಲ್ಲೆಯ ಆಡಳಿತವನ್ನು ನಿರ್ವಹಣೆ ಮಾಡುವವರು. ಯಾವುದೇ ಸಮಸ್ಯೆ ಉಂಟಾದರು ತಕ್ಷಣ ಸ್ಪಂದಿಸಬೇಕು. ಆದರೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣದೊಳಗೆಯೇ ಚಳವಳಿಕಾರರನ್ನು ಬಿಟ್ಟುಕೊಳ್ಳುವುದಿಲ್ಲ ಅಂದರೆ ಸಂವಿಧಾನ ಬಾಹಿರ ಕ್ರಮ ಎಂದು ಟೀಕಿಸಿದರು.

ರಾಜ್ಯದ 28 ಜಿಲ್ಲೆಗಳಲ್ಲಿ ರೈತಸಂಘ ತನ್ನ ಸಂಘಟನೆ ಹೊಂದಿದೆ. ಈ ಜಿಲ್ಲಾಧಿಕಾರಿ ಎಲ್ಲಿಯೇ ಹೋದರು ಬಿಡುವುದಿಲ್ಲ. ಜಿಲ್ಲಾಧಿಕಾರಿಗಳೇ ಸಂವಿಧಾನ ಬಾಹಿರವಾಗಿ ನಡೆದುಕೊಂಡರೆ ಹೇಗೆ. ಕಚೇರಿ ಆವರಣದೊಳಗೆ ಯಾವ ಕಾರಣಕ್ಕೆ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ ಎಂಬುದನ್ನು ಜಿಲ್ಲಾಧಿಕಾರಿಗಳು ಇಲ್ಲಿವರೆಗೂ ಸ್ಪಷ್ಟನೆ ನೀಡಿಲ್ಲ. ರೈತ, ಕನ್ನಡ ಹಾಗೂ ದಲಿತಪರ ಸಂಘಟನೆಗಳು, ಹೋರಾಟಗಾರರು, ಸಾಹಿತಿಗಳ ಸಭೆ ಕರೆದು ಸಮಾಜಾಯಿಷಿ ನೀಡಿ ಮನವೊಲಿಸುವ ಕೆಲಸ ಮಾಡಲಿಲ್ಲ. ಆದರೆ, ಏಕಾಏಕಿ ಕಾನೂನು ಇದೆಯೆಂದು ನಿಷೇಧಾಜ್ಞೆ ಹೇರಿರುವುದು ನಿಮ್ಮ ಘನಂದಾರಿ ಕೆಲಸ ಅಲ್ಲ, ಹೇಡಿತನ ತೋರಿಸುತ್ತದೆ.

ಜನಪರ, ರೈತರು, ದಲಿತರ ಸಮಸ್ಯೆ ಬಗೆಹರಿಸಲು ನಮ್ಮಲ್ಲಿ ಆಗಲ್ಲವೆಂದು ಅಸಮರ್ಥತೆಯನ್ನು ಜಿಲ್ಲಾಧಿಕಾರಿಗಳೇ ತೋರಿಸಿಕೊಂಡಂತೆ ಇದೆ. ನಿಷೇಧಾಜ್ಞೆ ಹಿಂಪಡೆಯಲಿ, ಸಮಸ್ಯೆ ಬಗೆಹರಿಸಲು ಮತ್ತೊಂದು ದಿನ ನಿಗದಿ ಪಡಿಸಲಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಖಂಡರ ಜೊತೆ ಚರ್ಚೆ ಮಾಡಲಿ. ಜಿಲ್ಲಾಧಿಕಾರಿಗಳು ಸೌಜನ್ಯ ದಿಂದ ಬಂದು ಮನವಿ ಸ್ವೀಕಾರ ಮಾಡಬೇಕು. ಹಾಗೊಂದು ವೇಳೆ ನೀವು ಹಠ ಹಿಡಿದರೆ ನಾವು 28 ಜಿಲ್ಲೆಗಳಿಂದ ರೈತರನ್ನು ಕರೆದು ನೀವು ಸರಿದಾರಿಗೆ ಬರುವವರೆಗೂ ಹೋರಾಟ ನಡೆಸಬೇಕಾಗುತ್ತದೆ ಎಂದು ಚಾಮರಸ ಪಾಟೀಲ್ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರೈತಸಂಘ ರಾಜ್ಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಕೆ.ಎಲ್ .ಕೆಂಪುಗೌಡ, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಲಕ್ಷ್ಮಿ ನಾರಾಯಣರೆಡ್ಡಿ, ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ರಾಜ್ಯಸಂಚಾಲಕ ಚೀಲೂರು ಮುನಿರಾಜು, ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಹೊಸದುರ್ಗ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್‌................

ಸಿಎಂ - ಡಿಸಿಎಂ ನಿವಾಸಕ್ಕೆ ಮುತ್ತಿಗೆ :ರೈತಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಪ್ರತಿಭಟನೆ ಮೂಲಭೂತ ಹಕ್ಕು. ನಾವು ಬರುವುದರಿಂದ ಸಮಸ್ಯೆ ಆಗುತ್ತದೆ ಎಂದರೆ ನೀವೇ ಹಳ್ಳಿಗೆ ಬನ್ನಿ. ಜಿಲ್ಲಾಧಿಕಾರಿಗಳ ಕಚೇರಿ ಯಾರಪ್ಪನ ಸ್ವತ್ತಲ್ಲ, ಅದು ಜನರ ಸ್ವತ್ತು. ಅಧಿಕಾರ ಇದೆಯಂತ ಮನಬಂದಂತೆ ನಡೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು. ಮಂಡ್ಯ ಮತ್ತು ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಮಾಜ ಮುಖಿಯಾಗಿ ಕೆಲಸ ಮಾಡಿದ್ದಾರೆ. ನಾಗರಿಕವಾದ ಸರ್ಕಾರ, ನಾಗರಿಕವಾದ ಅಧಿಕಾರಿ ಇದ್ದಿದ್ದರೆ ಚಳವಳಿಗಳಿಗೆ ಅವಕಾಶ ನೀಡುತ್ತಿದ್ದರು. ಆದರೆ, ಇಲ್ಲಿರುವ ಜಿಲ್ಲಾಧಿಕಾರಿ ಮೂರು ಕಾಸು ಪಗಾರು ಪಡೆಯುವ ಬ್ರಿಟಿಷರ ಪಳಯುಳಿಕೆ ಎಂದು ಟೀಕಿಸಿದರು.ಸಂವಿಧಾನದ ನಿಜವಾದ ಮಾಲೀಕರು ಜನರು. ಇದನ್ನು ಮರೆತಿರುವ ಜಿಲ್ಲಾಧಿಕಾರಿ ಸಂವಿಧಾನ ವಿರೋಧಿಯಾಗಿದ್ದಾರೆ. ನಿಷೇಧಾಜ್ಞೆ ಹಿಂಪಡೆದು ಕಚೇರಿ ಆವರಣದೊಳಗೆ ಪ್ರತಿಭಟನೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ನಿಮ್ಮನು ಎತ್ತಂಗಡಿ ಮಾಡಿಸುತ್ತೇವೆ. ಅಲ್ಲದೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಾಕ್ಸ್‌............

ಮುಖಂಡರ ಜತೆ ಮುಕ್ತ ಚರ್ಚೆ:ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುರೇಶ್ ಮತ್ತು ರಾಮಚಂದ್ರಯ್ಯರವರು ನಿಷೇಧಾಜ್ಞೆ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಮುಕ್ತವಾಗಿ ಚರ್ಚಿಸುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಇದಕ್ಕೆ ಸಮ್ಮತಿ ಸೂಚಿಸಿದ ರೈತ ಮತ್ತು ಕನ್ನಡಪರ ಸಂಘನಟನೆಗಳ ಪ್ರಮುಖ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು.ನಿಷೇಧಾಜ್ಞೆ ಹಿಂಪಡೆಯುವಂತೆ ಮುಖಂಡರು ಮಾಡಿದ ಮನವಿಯನ್ನು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ನಿರಾಕರಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಮುಖಂಡರು, ಸ್ಥಳದಲ್ಲಿಯೇ ಘೋಷಣೆ ಕೂಗಿ ಪ್ರತಿರೋಧ ವ್ಯಕ್ತಪಡಿಸಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಆನಂತರ ಮುಖಂಡರು ಪ್ರತಿಭಟನಾನಿರತರೊಂದಿಗೆ ಮಧ್ಯಾಹ್ನದ ಊಟ ಸೇವಿಸಿದರು.

6ಕೆಆರ್ ಎಂಎನ್ 1,2,3.ಜೆಪಿಜಿ

1.ರಾಮನಗರ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಬಳಿ ರೈತ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಹಸಿರು ಟವಲ್ ತಿರುಗಿಸಿದರು.

2.ಜಿಲ್ಲಾಧಿಕಾರಿಗಳ ಕಚೇರಿ ಬಳಿ ರೈತ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

3.ಪ್ರತಿಭಟನೆ ಸ್ಥಳದಲ್ಲಿಯೇ ರೈತರು ಅಡುಗೆಯ ಸಿದ್ಧತೆಯಲ್ಲಿ ತೊಡಗಿರುವುದು.