ಮಳೆ ಇಲ್ಲದೇ, ಬೆಳೆಗಳು ಕೈ ಹಿಡಿಯದೇ ಕಂಗಾಲಾದ ಹೋಬಳಿಯ ಬಹುತೇಕ ಕೂಲಿಕಾರರಿಗೆ ಕೇಂದ್ರ ಸರ್ಕಾರದ ಮಹತ್ವದ "ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ " ಬದುಕಿನ ಬುತ್ತಿ ಒದಗಿಸಿದೆ.

- ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಿದ ಕೇಂದ್ರ ಯೋಜನೆ । ೧೦೩೧ ಮಾನವ ದಿನಗಳ ಬಳಕೆ - - -

ಎಚ್.ಎಂ. ಸದಾನಂದ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಮಳೆ ಇಲ್ಲದೇ, ಬೆಳೆಗಳು ಕೈ ಹಿಡಿಯದೇ ಕಂಗಾಲಾದ ಹೋಬಳಿಯ ಬಹುತೇಕ ಕೂಲಿಕಾರರಿಗೆ ಕೇಂದ್ರ ಸರ್ಕಾರದ ಮಹತ್ವದ "ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ " ಬದುಕಿನ ಬುತ್ತಿ ಒದಗಿಸಿದೆ.

ಉದ್ಯೋಗ ಖಾತ್ರಿ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರಿಸುವ ಮಹತ್ವದ ಉದ್ದೇಶ ಹೊಂದಿದೆ. ಗ್ರಾಮೀಣರ ಜೀವನೋಪಾಯದ ಮಾರ್ಗಗಳನ್ನು ಬಲಪಡಿಸುವುದು ಮುಖ್ಯ ಧ್ಯೇಯವೂ ಆಗಿದೆ. ಈ ಯೋಜನೆಯಡಿ ಹೆಸರು ನೋಂದಾಯಿಸಿದ ಕೂಲಿಗಳಿಗೆ ೨೦೨೪-೨೫ನೇ ಸಾಲಿನಲ್ಲಿ ₹೩೪೯ ಕೂಲಿ ನಿಗದಿಪಡಿಸಿರುವುದು ಯೋಜನೆ ಯಶಸ್ಸಿಗೆ ಇಂಬು ನೀಡಿದಂತಾಗಿದೆ.

ಈ ಯೋಜನೆಯಿಂದ ರೈತರಿಗೆ ಅನುಕೂಲವಾದ ನೀರಿನ ಮೂಲಗಳಾದ ಪುನಶ್ಚೇತನ, ಭೂ ಅಭಿವೃದ್ಧಿ, ಸರ್ವಋತು ಗ್ರಾಮೀಣ ರಸ್ತೆ, ಅರಣ್ಯೀಕರಣ, ಕೆರೆ ಅಭಿವೃದ್ಧಿ, ಇಂಗುಗುಂಡಿ, ಗೋಕಟ್ಟೆ, ನೀರಾವರಿ ಕಾಲುವೆಗಳ ಅಭಿವೃದ್ಧಿ, ವೈಯಕ್ತಿಕ ವಸತಿ, ದನದ ಕೊಟ್ಟಿಗೆ, ಕುರಿ ಮತ್ತು ಮೇಕೆ ಸಾಕಣೆ ಶೆಡ್, ಕೋಳಿ ಶೆಡ್, ಆಟದ ಮೈದಾನ ಅಭಿವೃದ್ಧಿ, "ನಮ್ಮ ಹೊಲ ನಮ್ಮ ರಸ್ತೆ " ಕಾರ್ಯಕ್ರಮದಲ್ಲಿ ಜಮೀನು ದಾರಿಗಳ ಕಾಮಗಾರಿ, ತೋಟಗಾರಿಕಾ ಬೆಳೆಗಳ ಕೃಷಿ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಕುಂಬಳೂರಿನ ನಾಲೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ನೂರಾರು ಗ್ರಾಮೀಣರಿಗೆ ಉದ್ಯೋಗ ಒದಗಿದೆ.

೧೦೩೧ ಮಾನವ ದಿನ ಬಳಕೆ:

ಮೊದಲ ಹಂತದಲ್ಲಿ ಕುಂಬಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಳೂರು ಗ್ರಾಮದ ೧೦ನೇ ನಾಲೆಯಲ್ಲಿನ ಸಿದ್ದಪ್ಪನ ತೋಟದಿಂದ ವಿನಾಯಕ ನಗರದವರೆಗೆ ಜಂಗಲ್ ತೆಗೆಯುವ, ನಾಲೆಯಲ್ಲಿನ ಹೂಳು ಮೇಲೆತ್ತುವ ಕಾಮಗಾರಿ ಸುಮಾರು ₹೨.೭೦ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ೧೪೩೦ ಮೀಟರ್ ಉದ್ದದ ಈ ಕಾಮಗಾರಿಯನ್ನು ೭೨ಕ್ಕೂ ಹೆಚ್ಚು ನರೇಗಾ ಕೂಲಿಕಾರರು ೧೦೩೧ ಮಾನವ ದಿನಗಳಲ್ಲಿ ದುಡಿದಿದ್ದಾರೆ. ಪ್ರಸ್ತುತ ಕಾಮಗಾರಿಗೆ ನಿಗದಿಯಾಗಿದ್ದ ಮಾನವ ದಿನಗಳು ಪೂರ್ಣಗೊಂಡಿವೆ. ಆದಕಾರಣ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಿ, ಎರಡನೇ ಹಂತದಲ್ಲಿ ಮುಂದುವರಿದ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಪಂಚಾಯತ್‌ರಾಜ್ ಎಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ. ಎರಡು ವಾರ ಕೂಲಿ ಕೆಲಸ ಮಾಡಿದ್ದು, ವಾರದ ಹಣ ನಮ್ಮ ಬ್ಯಾಂಕ್ ಖಾತೆಗೆ ಬಂದಿದೆ. ಮಕ್ಕಳ ಶಾಲಾ ಕಾಲೇಜುಗಳ ಫೀಜ್ ಕಟ್ಟಲು ಯೋಜನೆಯಡಿ ಕಲ್ಪಿಸಿದ ಉದ್ಯೋಗ ಅನುಕೂಲವಾಗಿದೆ. ನಾವು ಕೆಲಸ ಮಾಡಿ, ಹಣ ಕಂಡ ವಿಚಾರ ಈಗ ಗ್ರಾಮದ ಹಲವರಲ್ಲಿ ಮೈ ಮುರಿದು ದುಡಿಯುವ ಹಂಬಲ, ಉತ್ಸಾಹ ಹೆಚ್ಚಿಸಿದೆ. ಉದ್ಯೋಗವಿಲ್ಲ ಎಂದು ಸುಮ್ಮನಿದ್ದ ಹಲವು ಕೂಲಿಕಾರರು ಈಗ ದಿನವೂ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕಾಗಿ ನಮೂನೆ-೬ ಅರ್ಜಿ ಹಿಡಿದು ಗ್ರಾಮ ಪಂಚಾಯಿತಿಗೆ ಅಲೆದಾಡುತ್ತಿದ್ದಾರೆ ಎನ್ನುತ್ತಾರೆ ಕುಂಬಳೂರಿನ ಕೂಲಿಕಾರರಾದ ಆಂಜನೇಯ, ರತ್ನಮ್ಮ, ಪರಮೇಶ್ವರಪ್ಪ ಇತರರು.

- - - ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸುನಿಲ್‌ಕುಮಾರ್‌ ಈ ಕುರಿತು ಪ್ರತಿಕ್ರಿಯಿಸಿದ್ದು, ಯೋಜನೆಯಿಂದ ಗ್ರಾಮೀಣ ನಿರುದ್ಯೋಗ ನಿವಾರಣೆ ಸಾಧ್ಯವಾಗುತ್ತದೆ. ಕಾಲಕಾಲಕ್ಕೆ ನರೇಗಾ ಕಾಮಗಾರಿಗಳನ್ನು ಸಾಮಾಜಿಕ ಪರಿಶೋಧನೆಗೆ ಒಳಪಡಿಸಲಾಗುತ್ತದೆ. ಇದರದೇ ಆದ ಪ್ರತ್ಯೇಕ ಗ್ರಾಮಸಭೆ ಸಹ ಆಯೋಜಿಸಲಾಗುತ್ತದೆ. ಕುರಿ ಮತ್ತು ಮೇಕೆ ಶೆಡ್, ಕೋಳಿ ಶೆಡ್, ದನದ ಕೊಟ್ಟಿಗೆಗಳನ್ನು ಕೆಲವರು ನಿರ್ಮಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ. ಶೆಡ್‌ಗಳನ್ನು ವಾಹನಗಳು ನಿಲ್ಲಿಸಕ್ಕೂ ಉಪಯೋಗ ಮಾಡುತ್ತಿದ್ದಾರೆ. ವುದು ಕಂಡು ಬಂದ ಕಾರಣ ದಾವಣಗೆರೆ ಜಿಪಂ ಸಿಇಒ ಅವರು ಸೌಲಭ್ಯ ಸದುಪಯೋಗ ಮಾಡದವರಿಗೆ ಶೆಡ್‌ಗಳಿಗೆ ಮಂಜೂರಾತಿ ನೀಡಬೇಡಿ ಎಂದು ಸೂಚಿಸಿದ್ದಾರೆ ಎನ್ನುತ್ತಾರೆ.

- - - -ಚಿತ್ರ೪: ಭದ್ರಾ ನಾಲೆಯಲ್ಲಿ ಹೂಳು, ಕಳೆ ಗಿಡಗಳ ತೆರವುಗೊಳಿಸುತ್ತಿರುವ ಕೂಲಿಕಾರರು.

-ಚಿತ್ರ-೫: ಕಾಮಗಾರಿ ಅಂತ್ಯದ ಬಳಿಕ ಸ್ವಚ್ಚಂದವಾಗಿ ಕಾಣುವ ನಾಲೆಯ ನೋಟ.