ಸಾರಾಂಶ
ರಾಮನಗರ: ರಾಮನಗರದ ಪ್ರತಿ ಮನೆಗೆ ನೆಟ್ಕಲ್ ಯೋಜನೆಯ ಕುಡಿಯುವ ನೀರು ಪೂರೈಸುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ವಾಸ್ತವ ಮಾಹಿತಿ ಸಂಗ್ರಹಿಸಲು ನಗರಸಭೆ ರಚಿಸಿದ್ದ ಸಮಿತಿ ಸಾಕಷ್ಟು ಲೋಪದೋಷಗಳನ್ನು ಪತ್ತೆ ಹಚ್ಚಿದೆ.
ಕಳೆದ ಫೆಬ್ರವರಿ 10ರಂದು ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ನಡೆದಿದ್ದ ತುರ್ತು ಸಭೆಯಲ್ಲಿ ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಜಲಮಂಡಳಿ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿತ್ತು.ಈ ಸಮಿತಿ 11 ದಿನಗಳಿಂದ ಪ್ರತಿಯೊಂದು ವಾರ್ಡಿನ ಸದಸ್ಯರೊಂದಿಗೆ ಬೀದಿಗಳಿಗೆ ಭೇಟಿ ನೀಡಿ ನಾಗರಿಕರೊಂದಿಗೆ ಮಾತುಕತೆ ನಡೆಸಿ ಕುಡಿವ ನೀರು ಪೂರೈಕೆಯಲ್ಲಿ ಆಗುತ್ತಿರುವ ಲೋಪದೋಷಗಳ ಪಟ್ಟಿ ಮಾಡಿದೆ. ಕೆಲ ತುರ್ತು ಕಾಮಗಾರಿಗಳನ್ನು ಸ್ಥಳದಲ್ಲಿಯೇ ಮಾಡಿಸಿದ್ದಾರೆ.
ದಿನವೊಂದಕ್ಕೆ ಪ್ರತಿ ಮನೆಗೆ ಅಗತ್ಯವಿರುವ ಪ್ರಮಾಣದಷ್ಟು ನೀರು ಪೂರೈಸುತ್ತಿಲ್ಲ. ಹಳೆ ವ್ಯವಸ್ಥೆಯಲ್ಲಿದ್ದ ಕೊರತೆಯೇ ಹೊಸ ವ್ಯವಸ್ಥೆಯಲ್ಲೂ ಮುಂದುವರಿದಿದೆ. ಜನರಿಂದ ನೀರಿನ ಸಮಸ್ಯೆಗಳ ದೂರು ಸ್ವೀಕರಿಸಲು ದೂರು ಸ್ವೀಕಾರ ಕೇಂದ್ರ ಆರಂಭಿಸಬೇಕೆಂಬ ಸಲಹೆ ನಾಗರಿಕರು ಸಮಿತಿಗೆ ನೀಡಿದ್ದಾರೆ. 3ನೇ ವಾರ್ಡ್‌ನಲ್ಲಿ ಯತೇಚ್ಛವಾಗಿ ನೀರು ಸೋರಿಕೆಯಾಗುತ್ತಿದ್ದು, ಶೇ. 50ರಷ್ಟು ಮನೆಗಳಿಗೆ ನಳ ಸಂಪರ್ಕವನ್ನೇ ನೀಡಿಲ್ಲ. ಪ್ರತಿಯೊಂದು ವಾರ್ಡಿನ ಕೆಲ ಬೀದಿಗಳಲ್ಲಿ ನೀರು ಸೋರುತ್ತಿದ್ದರೆ, ಮನೆಗಳಿಗೆ ನಳ ಸಂಪರ್ಕವನ್ನೂ ನೀಡದಿರುವುದು ಸಮಿತಿ ಭೇಟಿ ವೇಳೆ ಗೊತ್ತಾಗಿದೆ.ಯಾರಬ್ ನಗರ, ಎಂ.ಜಿ.ರಸ್ತೆ, ಟಿಪ್ಪು ನಗರ, ರೆಹಮಾನಿಯ ನಗರ ಬಡಾವಣೆಗಳಲ್ಲಿ ಜಲ ಮಂಡಳಿ ಕುಡಿವ ನೀರಿನ ಪೈಪ್ ಅಳವಡಿಸಿದ್ದರೆ, ನಗರಸಭೆ ಸಿಬ್ಬಂದಿ ಜೆಸಿಬಿ ಬಳಸಿ ಚರಂಡಿ ಸರಿಪಡಿಸುವ ವೇಳೆ ಪೈಪ್ ಗಳನ್ನು ಹಾನಿ ಮಾಡಿದ್ದಾರೆ. ಇದನ್ನು ದುರಸ್ತಿ ಪಡಿಸುವ ಕೆಲಸ ಆಗಿಲ್ಲ.
ಎಂ.ಜಿ.ರಸ್ತೆ, ಹುಣಸನಹಳ್ಳಿ ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ರಸ್ತೆ ಮಧ್ಯದಲ್ಲಿಯೇ ವಾಲ್ವ್ ಗಳನ್ನು ಅಳವಡಿಸಲಾಗಿದ್ದು, ಈ ವಾಲ್ವ್‌ಗಳ ಮೇಲೆ ಮುಚ್ಚಿರುವ ಸ್ಲ್ಯಾಬ್ ಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಅವುಗಳ ಮೇಲೆ ಬೃಹತ್ ಗಾತ್ರದ ವಾಹನ ಸಂಚರಿಸಿದರೆ ಹಾನಿಯಾಗುವ ಸಾಧ್ಯತೆಗಳೆ ಹೆಚ್ಚಾಗಿದೆ. ಈ ವಿಚಾರದಲ್ಲಿ ಎಂಜಿನಿಯರ್ ಗಳ ಬೇಜವಾಬ್ದಾರಿಯನ್ನು ಸಮಿತಿ ಪಟ್ಟಿ ಮಾಡಿದೆ.24ನೇ ವಾರ್ಡಿನಲ್ಲಿರುವ ಸರ್ಕಾರಿ ಉರ್ದು ಶಾಲೆಗೆ ಸಮಿತಿ ಸದಸ್ಯರು ಭೇಟಿ ನೀಡಿದಾಗ ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿತು. ತಕ್ಷಣ ಜಲ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿ ಶಾಲೆಗೆ ಪೈಪ್ ಲೈನ್ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಸಮಿತಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಹುತೇಕ ಬಡಾವಣೆಗಳ ಮನೆಗಳಲ್ಲಿ ನೀರಿನ ಪೈಪ್ ಗೆ ಅಳವಡಿಸಿರುವ ಮೀಟರ್‌ಗಳು ಕಳ್ಳತನ ಆಗಿದ್ದರೆ, ಕೆಲವೆಡೆ ಮನೆಯವರೇ ಮೀಟರ್ ಗಳನ್ನು ತೆಗೆದಿರುವುದು ಗಮನಕ್ಕೆ ಬಂದಿದೆ. ಇನ್ನು ಪೈಪ್ ಅಳವಡಿಸುವ ಸಲುವಾಗಿ ರಸ್ತೆ ಅಗೆದಿದ್ದು, ಶೇ.15ರಷ್ಟು ರೋಡ್ ರೆಸ್ಟೋರೇಷನ್ ಕಾಮಗಾರಿ ನಡೆದಿರುವುದನ್ನು ಸಮಿತಿ ಗುರುತಿಸಿದೆ.ಈಗಾಗಲೇ 20 ವಾರ್ಡುಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ವಸ್ತು ಸ್ಥಿತಿಯ ಮಾಹಿತಿ ಕಲೆ ಹಾಕಿರುವ ಸಮಿತಿ ಸದಸ್ಯರು, ಉಳಿದ 11 ವಾರ್ಡುಗಳಿಗೆ ಭೇಟಿ ನೀಡುವುದಷ್ಟೇ ಬಾಕಿಯಿದೆ. ಅದೆಲ್ಲವನ್ನು ಪೂರ್ಣಗೊಳಿಸಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಸಮಿತಿ ಸಂಪೂರ್ಣ ವರದಿಯನ್ನು ಸಲ್ಲಿಸಲಿದೆ.
ಸಮಿತಿಯಲ್ಲಿ ನಗರಸಭೆ ಉಪಾಧ್ಯಕ್ಷ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಅಜ್ಮತ್ , ಬೈರೇಗೌಡ, ಅಬ್ದುಲ್ ಸಮದ್ , ಅಣ್ಣು ಇತರರಿದ್ದರು.ಕೋಟ್ .................
ನೆಟ್ಕಲ್ ಕುಡಿಯುವ ನೀರಿನ ಯೋಜನೆ ಆಕ್ಷನ್ ಪ್ಲಾನ್ ನಂತೆ ಅನುಷ್ಠಾನ ಆಗಿಲ್ಲ. ಕಾಮಗಾರಿಯಲ್ಲಿ ಬಳಸಿರುವ ಪೈಪ್ ಗಳು, ಮನೆಗಳಿಗೆ ಅಳವಡಿಸಿರುವ ನಳಗಳು, ಮೀಟರ್ ಗಳೆಲ್ಲವೂ ಕಳಪೆ ಗುಣಮಟ್ಟದಿಂದ ಕೂಡಿದೆ. ಈಗ ನೀರು ಪೋಲಾಗುತ್ತಿರುವಂತೆ ಜನರ ತೆರಿಗೆ ಹಣವೂ ಪೋಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. -ಸಮಿತಿ ಸದಸ್ಯರು22ಕೆಆರ್ ಎಂಎನ್ 4.ಜೆಪಿಜಿ
ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಜಲಮಂಡಳಿ ಅಧಿಕಾರಿಗಳನ್ನೊಳಗೊಂಡ ಸಮಿತಿ ಬಡಾವಣೆಯೊಂದರಲ್ಲಿ ಕುಡಿವ ನೀರು ಸೋರಿಕೆ ಆಗುತ್ತಿರುವುದನ್ನು ವೀಕ್ಷಿಸುತ್ತಿರುವುದು.