ಕಾಪೆಕ್ಷ್‌ ನಂಬಿ ಕ್ಯಾಪ್ ಹಾಕಿಸಿಕೊಂಡ ಕಾಂಟ್ರಾಕ್ಟರ್‌!

| Published : Jul 28 2024, 02:04 AM IST

ಸಾರಾಂಶ

ಆಧುನಿಕತೆಯ ಭರಾಟೆಯಲ್ಲಿ ನಾವು ಮೊಬೈಲ್‌ನಲ್ಲಿ ಬಳಸುವ ಸಾಮಾಜಿಕ ಜಾಲತಾಣಗಳು ಎಷ್ಟರ ಮಟ್ಟಿಗೆ ಸೇಫ್ ಎಂಬುವುದು ಯಾರಿಗೂ ಗೊತ್ತಿಲ್ಲ. ಆನಲೈನ್‌ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪರಿಚಿತರ ಸಂದೇಶಗಳು ಹಾಗೂ ಮೊಬೈಲ್‌ಗೆ ಬರುವ ಅಪರಿಚಿತ ಮೆಸೇಜ್‌ಗಳ ಮೇಲೆ ಕ್ಲಿಕ್‌ ಮಾಡಿದರೇ ಅಪಾಯ ಕಟ್ಟಿಟ್ಟ ಬುತ್ತಿ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಆಧುನಿಕತೆಯ ಭರಾಟೆಯಲ್ಲಿ ನಾವು ಮೊಬೈಲ್‌ನಲ್ಲಿ ಬಳಸುವ ಸಾಮಾಜಿಕ ಜಾಲತಾಣಗಳು ಎಷ್ಟರ ಮಟ್ಟಿಗೆ ಸೇಫ್ ಎಂಬುವುದು ಯಾರಿಗೂ ಗೊತ್ತಿಲ್ಲ. ಆನಲೈನ್‌ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪರಿಚಿತರ ಸಂದೇಶಗಳು ಹಾಗೂ ಮೊಬೈಲ್‌ಗೆ ಬರುವ ಅಪರಿಚಿತ ಮೆಸೇಜ್‌ಗಳ ಮೇಲೆ ಕ್ಲಿಕ್‌ ಮಾಡಿದರೇ ಅಪಾಯ ಕಟ್ಟಿಟ್ಟ ಬುತ್ತಿ.ಇದೇ ರೀತಿ CAPEX.COM ಎಂಬ ಖಾತೆಯಿಂದ ಇನ್‌ಸ್ಟಾಗ್ರಾಂನಲ್ಲಿ ಬಂದಿದ್ದ ಲಿಂಕ್ ಕ್ಲಿಕ್ಕಿಸಿದ ವ್ಯಕ್ತಿಯೊಬ್ಬರು ಅವರು ಹೇಳಿದಂತೆ ಮಾಡಿ ಕೋಟಿ ಕೋಟಿ ಹಣ ಬರುತ್ತದೆ ಎಂದು ಅತಿಯಾಸೆಗೆ ಬಿದ್ದು ಗುತ್ತಿಗೆದಾರನೊಬ್ಬ ಬರೋಬ್ಬರಿ ₹1.88 ಕೋಟಿ ಕಳೆದುಕೊಂಡ ಘಟನೆಯೊಂದು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಗುತ್ತಿಗೆದಾರನಿಗೆ ವಂಚನೆಃ

ಬಸವನ ಬಾಗೇವಾಡಿಯ ಗುತ್ತಿಗೆದಾರ ರಾಚಪ್ಪ(ಹೆಸರು ಬದಲಾಯಿಸಲಾಗಿದೆ) ಎಂಬುವವರು ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ನೋಡುತ್ತಿರುವಾಗ CAPEX.COM (ಕ್ಯಾಪೆಕ್ಸ್ ಡಾಟ್ ಕಾಮ್) ಎಂಬ ಖಾತೆಯಿಂದ ಲಿಂಕ್ ಬಂದಿದೆ. ಇದನ್ನು ಕ್ಲಿಕ್ ಮಾಡಿದ ಅವರಿಗೆ ಈ ವೆಬ್‌ಸೈಟ್‌ನಲ್ಲಿ ಟ್ರೇಡಿಂಗ್ ಮಾಡಿದರೇ ಅತೀ ಬೇಗನೇ ಕೋಟಿ ಕೋಟಿ ಹಣ ಗಳಿಸಬಹುದು ಎಂಬ ಮಾಹಿತಿ ಸಿಕ್ಕಿದೆ. ಇಷ್ಟು ಮಾಹಿತಿ ಬಂದಿದ್ದೇ ತಡ ರಾಚಪ್ಪ ಹಿಂದುಮುಂದು ನೋಡದೇ ಅವರು ಹೇಳಿದಂತೆಲ್ಲ ಹಲವು ಯುಪಿಐ ಐಡಿಗಳಿಗೆ ಲಕ್ಷ ಲಕ್ಷ ಹಣ ಹಾಕಿದ್ದಾರೆ. ಅದು ಬರೋಬ್ಬರಿ 1,88,66,669 ಗೆ ತಲುಪಿದ್ದು, ಹಣವನ್ನು ದ್ವಿಗುಣ ಮಾಡಲಾಗುತ್ತಿದೆ ಎಂದು ನಂಬಿಸಿ ಹತ್ತತ್ತಿರ ₹2 ಕೋಟಿ ವಂಚಿಸಲಾಗಿದೆ.ಏನೆಲ್ಲ ಆಮಿಷಃ

CAPEX.COM ನಲ್ಲಿ ಹಣ ಹೂಡಿಕೆ ಮಾಡಿದರೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೇಡಿಂಗ್ ಮಾಡಬಹುದು. ಡಾಲರ್, ಗೋಲ್ಡ್, ಕ್ರೂಡ್ ಆಯಿಲ್, ಕರೆನ್ಸಿ, ಪೇರ್, ಟ್ರೇಡ್ ನಲ್ಲಿ ಹಣ ಹೂಡಿಕೆ ಮಾಡುವ ಹಣಕ್ಕೆ ಪ್ರತಿವಾರವೂ ಶೇ.75 ರಷ್ಟು ಲಾಭ ಗಳಿಸಬಹುದು ಎಂದು ನಂಬಿಸಲಾಯಿತು. ಇದನ್ನೇ ನಂಬಿದ ಗುತ್ತಿಗೆದಾರ ತನ್ನ ವಿವಿಧ ಬ್ಯಾಂಕ್ ಖಾತೆಗಳಿಂದ ವಂಚಕರು ನೀಡಿದ ಯುಪಿಐ ಐಡಿಗಳಿಗೆ ಹಣ ಹಾಕುತ್ತಲೇ ಬಂದಿದ್ದಾರೆ. ಕೊನೆಗೆ ಇದು ಮೋಸದ ಜಾಲ ಎಂಬುದು ಗೊತ್ತಾಗಿ, ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಮೊದಲಿಗೆ ಹಣ ಹಾಕಿ ನಂಬುವಂತೆ ಮಾಡಿದರು:

CAPEX.COM ಹೆಸರಿನಲ್ಲಿ ಅಮಾಯಕರನ್ನು ವಂಚಿಸುವ ಜಾಲದಿಂದ ಮೊದಲಿಗೆ ಹಣ ಹಾಕಿ ನಂಬಿಸುವ ಕೆಲಸ ಆಗುತ್ತದೆ. ಅದೇ ರೀತಿ ಗುತ್ತಿಗೆದಾರ ಹಾಕಿದ ಒಂದನೇ ವಾರಕ್ಕೆ ಆತನಿಗೆ ₹3 ಲಕ್ಷ ಲಾಭದ ಹಣ ಹಾಕಿ ನಂಬಿಸಿದ್ದಾರೆ. ಆ ಬಳಿಕ ಹಲವು ಷರತ್ತುಗಳನ್ನು ಹಾಕಿ ನೀನು ₹4 ಕೋಟಿ ಹಣ ಹೂಡಿಕೆ ಮಾಡಿದರೇ ₹8 ಕೋಟಿ ವಾಪಸ್ ಬರುತ್ತದೆ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಅವರು ವಂಚಕರು ಹೇಳಿದಂತೆ ಹಣ ವರ್ಗಾಯಿಸುತ್ತಲೇ ಹೋಗುತ್ತಿದ್ದು, ಇವರ ವ್ಯಾಲೆಟ್ ಖಾತೆಯಲ್ಲಿಯೂ ಸಹ ಕೋಟಿಗಟ್ಟಲೇ ಲಾಭದ ಹಣ ಬಂದಿರುವುದಾಗಿ ಅಂಕಿಸಂಖ್ಯೆ ತೋರಿಸಿದೆ. ಇತ್ತೀಚೆಗೆ ಇವರು ಅದರಲ್ಲಿನ ಸ್ವಲ್ಪ ಲಾಭದ ಹಣ ತೆಗೆಯೋಣ ಎಂದು ಯತ್ನಿಸಿದಾಗ ಇವರ ಮೊಬೈಲ್‌ನಲ್ಲಿ ತೋರಿಸುತ್ತಿದ್ದ ವ್ಯಾಲೆಟ್ ಖಾತೆಯಲ್ಲಿ ಹಣವೇ ಇಲ್ಲದಿರುವುದು ಗೊತ್ತಾಗಿದೆ.ವಿದೇಶಕ್ಕೆ ಕರೆಸುವ ಭರವಸೆಃ

ಈ ಮೊದಲು ₹3 ಲಕ್ಷ ಲಾಭದ ಹಣ ಎಂದು ವಂಚಕರು ಹಣ ಹಾಕಿದ್ದಾಗ ಎಕ್ಸಿಸ್‌ ಬ್ಯಾಂಕ್‌ನವರು ಇದು ಯಾವುದೋ ಮೋಸದ ಖಾತೆಯಿಂದಲೇ ಹಣ ಬಂದಿದೆ ಎಂದು ಗುತ್ತಿಗೆದಾರನ ಖಾತೆಯೇ ಸೀಜ್ ಮಾಡಿದ್ದರು. ಈ ಕುರಿತು ವಂಚಕರಿಗೆ ಗುತ್ತಿಗೆದಾರ ಮಾಹಿತಿ ತಿಳಿಸದಾಗ, ಬ್ಯಾಂಕ್ ನವರೇ ನಿಮಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ನಂಬಿಸಿದ್ದರು. ಅದಾದ ಬಳಿಕ ಇದು ವಿದೇಶಿ ಹಣ ಇರುವುದರಿಂದ ಸಮಸ್ಯೆ ಆಗುತ್ತದೆ. ನಾವು ನಿಮಗೆ ಅಬುದಾಬಿಗೆ ಕರೆಯಿಸಿಕೊಂಡು ಅಲ್ಲಿಯೇ ನಿಮ್ಮ ಹೆಸರಿನಲ್ಲಿ ಅಕೌಂಟ್ ಮಾಡಿಸಿ ಅಲ್ಲಿಂದ ಭಾರತದ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ ಎಂದು ನಂಬಿಸಿದ್ದರು.

ಮೊಬೈಲ್‌ನಲ್ಲಿ, ಆನ್‌ಲೈನ್‌ನಲ್ಲಿ, ಇನ್‌ಸ್ಟಾಗ್ರಾಮ್‌ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮೆಸೇಜ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಜೊತೆಗೆ ಶಾರ್ಟ್ ಟೈಮ್‌ನಲ್ಲಿ ಅತೀ ಹೆಚ್ಚಿನ ಹಣ ಕೊಡುತ್ತೇವೆ ಎಂದು ನಂಬಿಸುವವರನ್ನು ನಂಬಿ ಹಣದಾಸೆಗೆ ಬಿದ್ದು ನನ್ನಂತೆ ಮೋಸ ಹೋಗದಿರಿ. ಕೋಟಿ ಕೋಟಿ ಹಣ ಕಳೆದುಕೊಂಡ ಮೇಲೆ ನನಗೆ ಇದು ವಂಚನೆಯ ಜಾಲ ಎಂಬುವುದು ತಿಳಿದಿದ್ದು, ದೂರು ದಾಖಲಿಸಿದ್ದೇನೆ.

-ವಂಚನೆಗೊಳಗಾದವರು.

---

ಕ್ಯಾಪೆಕ್ಸ್ ಡಾಟ್ ಕಾಮ್ ಹೆಸರಿನಲ್ಲಿ ಗುತ್ತಿಗೆದಾರನೊಬ್ಬನಿಗೆ ವಂಚಿಸಿರುವ ಕುರಿತು ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ಕುರಿತು ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ಸಾರ್ವಜನಿಕರು ಸಹ ಹೆಚ್ಚಿಗೆ ಹಣದ ಆಮಿಷ ಕೊಡುವವರಿಗೆ ಮೋಸ ಹೋಗಬಾರದು. ಇಂತಹ ಮೋಸದ ಜಾಲದವರು ಮೊದಲಿಗೆ ಸ್ವಲ್ಪ ಹಣ ಕೊಟ್ಟಂತೆ ಮಾಡಿ ನಂಬಿಸುತ್ತಾರೆ. ಆ ಬಳಿಕ ಈ ರೀತಿ ಕೋಟ್ಯಂತರ ರುಪಾಯಿ ವಂಚಿಸುತ್ತಾರೆ.

-ಋಶಿಕೇಷ ಸೋನಾವಣೆ, ವಿಜಯಪುರ ಎಸ್ಪಿ.