ಸಾರಾಂಶ
ರಾಮನಗರ: ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನ ಅರಣ್ಯ ಪ್ರದೇಶದ ಒಡಲು ಒಣಗಿದೆ. ಆದ್ದರಿಂದ, ಕಾಡ್ಗಿಚ್ಚಿನಿಂದ ವನ್ಯ ಸಂಪತ್ತನ್ನು ರಕ್ಷಿಸಲು ಅರಣ್ಯ ಇಲಾಖೆ ಸನ್ನದ್ಧಗೊಂಡಿದೆ.
ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಿಸಿಲ ಝಳಕ್ಕೆ ಕಾಡೊಳಗೆ ಒಣಗಿದ ಎಲೆಗಳ ಪ್ರಮಾಣ ಹೆಚ್ಚಿದೆ. ಆದ್ದರಿಂದ ಕಾಡಿಗೆ ಬೆಂಕಿ ತಗುಲುವ ಸಾಧ್ಯತೆ ದುಪ್ಪಟ್ಟಿದೆ.ಬೇಸಿಗೆ ಬಂತೆಂದರೆ ಅರಣ್ಯದ ಒಡಲನ್ನು ಸುಡುವ ಕಾಡ್ಗಿಚ್ಚನ್ನು ಆರಿಸುವ ದೊಡ್ಡ ಜವಾಬ್ದಾರಿ ಅರಣ್ಯ ಇಲಾಖೆ ಹೊತ್ತಿದೆ. ಆದರೂ, ಕಿಡಿಗೇಡಿಗಳ ಕೃತ್ಯದಿಂದಾಗಿ ನೂರಾರು ಎಕರೆ ಕಾಡು ಬೆಂಕಿ ಕಿಡಿಗೆ ಆಹುತಿ ಆಗುತ್ತಿದೆ. ಇದನ್ನು ಅರಿತ ಅರಣ್ಯ ಇಲಾಖೆ ಬೇಸಿಗೆಗೂ ಮುನ್ನವೇ ಬೆಂಕಿ ನಂದಕ ಗೆರೆಗಳನ್ನು ರಚಿಸುವ, ಕಾಡಂಚಿನ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯದಲ್ಲಿ ತೊಡಗಿದೆ.
5 ಉಪ ವಲಯಗಳಲ್ಲಿ ಬೆಂಕಿ ರೇಖೆ:ಜಿಲ್ಲೆಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 41 ಸಾವಿರ ಹೆಕ್ಟೇರ್ ಪ್ರದೇಶ ಅರಣ್ಯ ವಿಸ್ತೀರ್ಣ ಹೊಂದಿದೆ. ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅರಣ್ಯಕ್ಕೆ ಬೆಂಕಿ ತಗುಲಿರುವ ಉದಾಹರಣೆಯೂ ಇದೆ. ಬರದ ಹಿನ್ನೆಲೆಯಲ್ಲಿ ಅರಣ್ಯ ಅಂಚಿನಲ್ಲಿ ಸಾಕಷ್ಟು ಒಣ ಹುಲ್ಲು ಕಂಡು ಬರುತ್ತಿದ್ದು, ಇದು ಸಹ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಕಾಡ್ಗಿಚ್ಚಿನಂತಹ ಘಟನೆಗಳಿಗೆ ಬ್ರೇಕ್ ಹಾಕುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ರಾಮನಗರ ವಿಭಾಗದ ಐದು ಉಪ ವಲಯಗಳಲ್ಲಿ ಬೆಂಕಿ ರೇಖೆ ಗುರುತಿಸಿದ್ದಾರೆ. ಅಂದರೆ, ಕಾಡು ಪ್ರಾರಂಭವಾಗುವ ಪ್ರದೇಶದ ರಸ್ತೆಯ ಎರಡು ಬದಿಯಲ್ಲಿ ಮೂರು ಮೀಟರ್‌ಗಳಷ್ಟು ಪ್ರದೇಶದಲ್ಲಿ ಒಣ ಹುಲ್ಲು ಹಾಗೂ ಪ್ರದೇಶವನ್ನು ಹದ ಮಾಡಲಾಗಿದೆ ಒಂದೊಮ್ಮೆ ರಸ್ತೆ ಬದಿಯಲ್ಲಿ ಅಚಾನಕ್ಕಾಗಿ ಬೆಂಕಿ ತಗುಲಿದರೂ ಈ ಬೆಂಕಿ ರೇಖೆಯು ವಿಸ್ತಾರವಾಗದಂತೆ ತಡೆಯಲಿದೆ.ಟಾಸ್ಕ್ ಫೋರ್ಸ್‌ಗಳು - ವಾಚರ್‌ಗಳ ನೇಮಕ:
ಇನ್ನು ಬೇಸಿಗೆಯಲ್ಲಿ ಸಂಭವಿಸುವ ಕಾಡ್ಗಿಚ್ಚನ್ನು ತಡೆಯುವ ಸಲುವಾಗಿ ವಾಚರ್‌ಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಅರಣ್ಯ ವ್ಯಾಪ್ತಿಯಲ್ಲಿ ಕನಿಷ್ಠ ಇಬ್ಬರು ವಾಚರ್‌ಗಳು ಕರ್ತವ್ಯ ನಿರ್ವಹಿಸುತ್ತಾರೆ. ಅರಣ್ಯ ಬೆಂಕಿಯನ್ನು ತಡೆಗಟ್ಟುವ ಸಲುವಾಗಿ ಪ್ರತಿ ಅರಣ್ಯ ಪ್ರದೇಶದಲ್ಲಿ ನಾಲ್ಕು ಮಂದಿ ವಾಚರ್‌ಗಳನ್ನು ನೇಮಿಸಲಾಗಿದೆ.ಈ ವಾಚರ್‌ಗಳು ಬೆಳಗ್ಗೆ 11ರಿಂದ ಮಧ್ಯಾಹ್ನ 3ವರೆಗೆ ಅರಣ್ಯದಲ್ಲಿ ಹದ್ದಿನ ಕಣ್ಣಿಡಲಿದ್ದಾರೆ. ಏಕೆಂದರೆ, ಈ ಸಮಯದಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲುವುದು ಸಾಮಾನ್ಯ.
ಇನ್ನು ಆನೆ ಕಾರಿಡಾರ್ ಟಾಸ್ಕ್ ಫೋರ್ಸ್‌ನ ತಂಡವೂ ಈ ಸಂಬಂಧ ನಿಗಾವಹಿಸಲು ಸೂಚಿಸಿದೆ. ಒಂದೊಮ್ಮೆ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ಆಯಾ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಲಿದ್ದಾರೆ.ಅರಣ್ಯ ಬೆಂಕಿ ತಡೆಯುವ ಸಲುವಾಗಿ ಈ ಹಿಂದಿನಿಂದಲೂ ಬಳಕೆಯಲ್ಲಿರುವ ಉಪಗ್ರಹದಿಂದ ಮಾಹಿತಿ ಪಡೆಯಲು ನಿರ್ಧರಿಸಿದೆ. ಕಳೆದ ಹಲವು ವರ್ಷಗಳಿಂದ ಉಪಗ್ರಹ ಆಧಾರಿತ ಮಾಹಿತಿಯು ಸಾಕಷ್ಟು ಪರಿಣಾಮಕಾರಿಯಾಗಿದ್ದು, ಅರಣ್ಯಕ್ಕೆ ಬೆಂಕಿ ತಗುಲಿದ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗುತ್ತದೆ. ಈ ಮಾಹಿತಿ ನೀಡುವ ವೇಳೆ ಉಪಗ್ರಹ ಕೆಂಪು, ಹಳದಿ ಹಾಗೂ ಹಸಿರು ಬಣ್ಣದ ಸಂಕೇತ ಸೂಚಿಸಲಿದೆ. ಇದು ಬೆಂಕಿ ಬಿದ್ದಿರುವ ಪ್ರದೇಶ ತೀವ್ರತೆಯನ್ನು ತಿಳಿಸುತ್ತದೆ. ಉಪಗ್ರಹದ ಆಧಾರದ ಮೇಲೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲು ಸಹಾಯವಾಗಲಿದೆ. ಈ ಉಪಗ್ರಹ ಪ್ರತಿನಿತ್ಯ ಮೂರು ಬಾರಿ ಮಾಹಿತಿ ಹಂಚಿಕೊಳ್ಳಲಿದೆ.ಬಾಕ್ಸ್ ..............
ಸಿಬ್ಬಂದಿಗೆ ತರಬೇತಿ: ಜನಜಾಗೃತಿಅಗ್ನಿ ಶಾಮಕ ದಳದ ವತಿಯಿಂದ ವತಿಯಿಂದ ಕಳೆದ ಒಂದು ವಾರದ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿಗೆ ಅರಣ್ಯ ಬೆಂಕಿ ನಂದಿಸುವ ಕುರಿತು ತರಬೇತಿ ನೀಡಲಾಗಿದೆ. ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಸಂಯುಕ್ತ ಕಾರ್ಯಾಚರಣೆ ವರವಾಗಿ ಪರಿಣಮಿಸಲಿದೆ.
ಅರಣ್ಯ ಬೆಂಕಿ ತಗುಲುವುದು, ಕಾಡ್ಗಿಚ್ಚು, ಮಾಹಿತಿ ರವಾನೆ ಸಂಬಂಧ ಅರಣ್ಯ ಇಲಾಖೆ ವತಿಯಿಂದ ಜಿಲ್ಲೆಯ ಜನತೆಗೆ ಮಾಹಿತಿ ನೀಡುವ ಸಂಬಂಧ ಬೀದಿ ನಾಟಕಗಳನ್ನು ಆಯೋಜಿಸಿದೆ. ಈಗಾಗಲೆ ಕನಕಪುರ ಭಾಗದಲ್ಲಿ ಬೀದಿನಾಟಕಕ್ಕೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲಿಯೇ ಜಿಲ್ಲೆಯ ಅರಣ್ಯ ಇಲಾಖೆ ಐದು ವಿಭಾಗದಲ್ಲಿ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.ಬಾಕ್ಸ್ .............ಜನರಲ್ಲಿ ಮೂಢನಂಬಿಕೆ
ಕಾಡಿಗೆ ಬೆಂಕಿ ಹಚ್ಚುವುದರಿಂದ ಮೇವು ಹುಲುಸಾಗಿ ಬೆಳೆಯುತ್ತದೆ .ಇದರಿಂದ ಜಾನುವಾರುಗಳಿಗೆ ಮೇಯಲು ಅನುಕೂಲ ಆಗುತ್ತದೆ ಎನ್ನುವ ಮೂಢನಂಬಿಕೆ ಜನರಲ್ಲಿ ಮನೆ ಮಾಡಿದೆ. ಅದೇ ರೀತಿ ಕಾಡಿನಲ್ಲಿ ಗಿಡ–ಗಂಟೆಗಳು ಬೆಳೆದರೆ ಕಾಡು ಪ್ರಾಣಿಗಳು ಬೀಡು ಬಿಡುತ್ತವೆ. ಇದರಿಂದ ಅವು ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತವೆ. ಜನರು ಕಾಡಿನೊಂದಿಗೆ ಹೆಚ್ಚು ನಂಟು ಹೊಂದಿರುವುದರಿಂದ ಕಾಡಿನಲ್ಲಿ ಹುಳ– ಹುಪ್ಪಟೆಗಳು ಸೇರಿಕೊಂಡು ತೊಂದರೆ ಮಾಡಬಹುದು ಎನ್ನುವ ಭಯದಿಂದ ಕೆಲವರು ಬೆಂಕಿ ಹಚ್ಚಲು ಮುಂದಾಗುತ್ತಾರೆ. ಇದು ತಪ್ಪು,ಹೀಗೆ ಮಾಡಬೇಡಿ ಎಂದು ಅರಣ್ಯ ಇಲಾಖೆ ಡಿಸಿಎಫ್ ರಾಮಕೃಷ್ಣಪ್ಪ ಮನವಿ ಮಾಡಿದರು.11ಕೆಆರ್ ಎಂಎನ್ 3,4 .ಜೆಪಿಜಿ
3.ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡುತ್ತಿರುವ ಅಗ್ನಿಶಾಮಕ ಸಿಬ್ಬಂದಿ.4.ಕಬ್ಬಾಳು ಅರಣ್ಯ ಪ್ರದೇಶ ಭೀಮನಕಿಂಡಿ ಬೆಟ್ಟಕ್ಕೆ ತಗುಲಿದ್ದ ಬೆಂಕಿ ನಂದಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ.