ಸಾರಾಂಶ
ಗದಗ: ಸೀಗೆ ಹುಣ್ಣಿಮೆ ಎಂದರೆ ರೈತ ಸಮುದಾಯಕ್ಕೆ ಎಲ್ಲಿಲ್ಲದ ಸಂಭ್ರಮ. ಹಿಂಗಾರು ಬಿತ್ತನೆ ನಂತರ ಬರುವ ಹಬ್ಬ. ರೈತರು ಕುಟುಂಬ ಸಮೇತರಾಗಿ ಭೂತಾಯಿಗೆ ಪೂಜೆ ಸಲ್ಲಿಸಿ ಚೆರಗ ಚೆಲ್ಲಿ ಸಂಭ್ರಮಪಡುವ ಹಬ್ಬಕ್ಕೆ ಈ ಭಾರಿ ಮಳೆ ಬಿಟ್ಟು ಬಿಡದೆ ಸುರಿದು ಹಬ್ಬದ ಸಂಭ್ರಮವನ್ನೇ ಕಸಿದಿದೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಗುರುವಾರ ಬೆಳಗ್ಗೆಯಿಂದಲೇ ನಿರಂತರ ಮಳೆ ಸುರಿಯುತ್ತಿರುವುದರಿಂದ ಎಷ್ಟೋ ರೈತರಿಗೆ ತಮ್ಮ ಜಮೀನುಗಳಿಗೆ ತೆರಳಲು ಸಾಧ್ಯವಾಗಲಿಲ್ಲ. ಕಷ್ಟಪಟ್ಟು ಹೊಲಕ್ಕೆ ಹೋದವರಿಗೆ ಹೊದಲ್ಲಿನ ನೀರಿನಿಂದಾಗಿ ಪೂಜೆ ಮಾಡಲು ಪರದಾಡಿದರು. ಕೆಲವರು ಒಬ್ಬರೇ ಹೊಲಕ್ಕೆ ತೆರಳಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಚೆರಗ ಚೆಲ್ಲಿದರು. ಇನ್ನು ತೋಟದ ಮನೆ ಹೊಂದಿದ ರೈತರು ಪೂಜೆ ಸಲ್ಲಿಸಿ ತೋಟದ ಮನೆಯಲ್ಲಿ ಮನೆ ಮಂದಿಯೆಲ್ಲ ಕುಳಿತು ಊಟ ಸವಿದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು.ಪ್ರತಿ ವರ್ಷ ರೈತರು ಸೀಗೆ ಹುಣ್ಣಿಮೆ ದಿನ ಬಂಧು -ಬಾಂಧವರನ್ನು ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ಹೊಲಕ್ಕೆ ಕರೆದುಕೊಂಡು ಹೋಗಿ ಸಡಗರದಿಂದ ಹಬ್ಬ ಆಚರಿಸುತ್ತಿದ್ದರು. ಆದರೆ ಈ ವರ್ಷ ವರುಣನ ಆರ್ಭಟಕ್ಕೆ ಬೆಳೆಗಳಿಗೆ ಕೊಳೆ ರೋಗ ಭಾದಿಸಿರುವುದನ್ನು ಕಂಡ ರೈತ ಸಮುದಾಯ ನಿರಾಶೆಯಿಂದ ಹುಲ್ಲಿಲಗೋ, ಸುರಂ ಬೆಳಗೋ ಎನ್ನುತ್ತಾ ಹೋಳಿಗೆ, ಕಡಬು, ಬಜ್ಜಿ, ಪಲ್ಲೆ ನೈವೇದ್ಯ ಮಾಡಿ, ಬನ್ನಿ ಗಿಡಕ್ಕೆ ಪೂಜಿಸಿ ಮಳೆ ನಿಂತರೆ ಸಾಕು, ಬಂದ ಫಸಲಾದರು ಕೈಗೆ ಸಿಗಲಿ ಎಂದು ಪ್ರಾರ್ಥಿಸಿದರು.
ಮಳೆಗೆ ಬೆಳೆ ನಾಶ: ಕಳೆದ ಹಲವು ದಿನಗಳಿಂದ ವಾಯುಭಾರ ಕುಸಿತದಿಂದ ನಿರಂತರ ಮಳೆ ಸುರಿಯುತ್ತಿದ್ದರಿಂದ ಮಳೆಗೆ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿ ಇನ್ನೇನು ಕೆಲ ದಿನಗಳಲ್ಲಿ ಕಟಾವಿಗೆ ಬರಬೇಕಾದ ಶೇಂಗಾ, ಗೋವಿನ ಜೋಳ, ಮೆಣಸಿನಕಾಯಿ ಬೆಳೆಗಳಿಗೆ ರೋಗ ಬಾಧಿಸಿ ನಾಶವಾಗುವ ಆತಂಕ ರೈತರನ್ನು ಕಾಡುತ್ತಿದೆ.ತಾಲೂಕಿನ ಮಳೆಯಾಶ್ರಿತ ಮಸಾರಿ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಬಳ್ಳಿ ಶೇಂಗಾ ನೂರಾರು ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಹರಗಿ ಒಕ್ಕಣಿ ಮಾಡುವ ಸಮಯದಲ್ಲಿ ಹಿಂಗಾರು ಮಳೆ ನಿರಂತರ ಸುರಿಯುತ್ತಿದ್ದರಿಂದ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿ ಕೊಳೆ ರೋಗ ಬಾಧಿಸುತ್ತಿದೆ. ಅಪಾರ ಖರ್ಚು ಮಾಡಿದ್ದಾರೆ. ಪ್ರಾರಂಭದಲ್ಲಿ ಹುಲಸಾಗಿ ಬೆಳೆದಿದ್ದ ಬೆಳೆ ಒಕ್ಕಣೆ ಮಾಡುವ ಹಂತಕ್ಕೆ ಬಂದು ನಾಶವಾಗುತ್ತಿದ್ದನ್ನು ಕಂಡ ರೈತರಿಗೆ ಬರಸಿಡಿಲೇ ಬಡೆದಂತಾಗಿದೆ. ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆ ಇದೇ ರೀತಿ ಆಯಿತು. ಈಗ ಬಳ್ಳಿ ಶೇಂಗಾ, ಗೋವಿನ ಜೋಳ, ಈರುಳ್ಳಿ ಬೆಳೆಗೆ ಇದೆ ರೀತಿಯಾದರೇ ರೈತರು ಜೀವನ ನಡೆಸುವುದೇ ಕಷ್ಟವಾಗಿದೆ ಎನ್ನುತ್ತಾರೆ ಈ ಭಾಗದ ರೈತರು.
ಹಿಂಗಾರು ಹಂಗಾಮಿನಲ್ಲಿ ಅತೀ ಹೆಚ್ಚು ಕಡಲೆ ಬಿತ್ತನೆಯಾಗಿದ್ದು ತೇವಾಂಶ ಹೆಚ್ಚಾಗಿ ಮೊಳಕೆಯಲ್ಲಿ ಕೊಳೆಯುತ್ತಿದೆ. ಜಿಲ್ಲೆಯಲ್ಲಿ ಇನ್ನು ಕೆಲ ಕಡೆ ಹಿಂಗಾರು ಬಿತ್ತನೆಗೆ ಮಳೆ ಅಡ್ಡಿಯಾಗಿದೆ.ಸೀಗೆ ಹುಣ್ಣಿಮೆಗೆ ಹೊಲದಲ್ಲಿ ಚರಗ ಚೆಲ್ಲಲು ಪರದಾಡಿದೆವು. ಹೊಲದಲ್ಲಿ ಕಾಲು ಹುಗಿದು ಬೀಳುತ್ತವೆ, ಬೆಳೆಗಳೆಲ್ಲ ನೀರಲ್ಲಿ ನಿಂತಿವೆ. ಈಗಾಗಲೇ ಕಟಾವಿನ ಹಂತಕ್ಕೆ ಬಂದ ಬಳ್ಳಿ ಶೇಂಗಾ, ಗೋವಿನ ಜೋಳ ತೆನೆಯಲ್ಲಿಯೇ ಮೊಳಕೆ ಒಡೆದು ನಾಶವಾಗುತ್ತಿವೆ. ಅಕಾಲಿಕ ಮಳೆಯಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಮಹಾಂತೇಶ ಗುಂಜಳ ತಿಳಿಸಿದ್ದಾರೆ.