ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ಮದನಿನಗರದಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿರುವುದು ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಇತಿಹಾಸದಲ್ಲಿ ಸಂಭವಿಸಿದ ದೊಡ್ಡ ದುರಂತವಾಗಿದೆ.25 ವರ್ಷಗಳ ಹಿಂದೆ ಮುನ್ನೂರು ಗ್ರಾಮದ ಕಂಡಿಲ ಪ್ರದೇಶದ ಹಳ್ಳವೊಂದಕ್ಕೆ ಈಜಲು ತೆರಳಿದ್ದ ಮೂವರು ಮಕ್ಕಳು ನೀರುಪಾಲಾಗಿದ್ದರು. ಮೂವರು ಮಕ್ಕಳು ಮದನಿನಗರ ನಿವಾಸಿಗಳಾಗಿದ್ದರು. ತದನಂತರ 10 ವರ್ಷಗಳ ಹಿಂದೆ ಇದೇ ಗ್ರಾಮದ ಮಜಲುತೋಟ ಪ್ರದೇಶದ ಕಣಿವೆಗೆ ಬಿದ್ದಿದ್ದ ಚೆಂಡನ್ನು ಹೆಕ್ಕಲು ತೆರಳಿದ್ದ ಇಬ್ಬರು ಮಕ್ಕಳು ನೀರುಪಾಲಾಗಿದ್ದರು. ನಂತರದಲ್ಲಿ ನಡೆದ ಅತಿ ದೊಡ್ಡ ಅನಾಹುತ ಬುಧವಾರ ಮುನ್ನೂರು ಗ್ರಾಮದಲ್ಲಿ ನಡೆದಿದೆ ಎಂದು ಮುನ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಾಬಲ ಟಿ. ದೆಪ್ಪೆಲಿಮಾರ್ ತಿಳಿಸಿದರು.
ಅನಾಥವಾದ ಮನೆ: ಜೂ.25ರ ಮಧ್ಯರಾತ್ರಿವರೆಗೂ ಯಾಸೀರ್ ಕುಟುಂಬದೊಂದಿಗೆ ತುಂಬಿತುಳುಕಿದ್ದ ಮನೆ ಇದೀಗ ಅನಾಥವಾಗಿದೆ. ಅಲ್ಲಲ್ಲಿ ಮಕ್ಕಳ ಪುಸ್ತಕಗಳು, ವಸ್ತ್ರಗಳು, ಬಟ್ಟೆಬರೆಗಳು ಮಣ್ಣಿನಡಿಯಲ್ಲಿ ಗೋಚರಿಸುತ್ತಿದೆ. ಕುಟುಂಬ ಮಲಗಿದ್ದ ಕೋಣೆ ಸಂಪೂರ್ಣ ಕಲ್ಲಿನಿಂದ ತುಂಬಿದ್ದರೆ, ಅಡುಗೆ ಹಾಗೂ ಇನ್ನೊಂದು ಕೋಣೆ ಯಾವುದೇ ಹಾನಿಯಾಗದೇ ಉಳಿದಿದೆ. ಮನೆಯ ಸುತ್ತ ಸ್ಥಳೀಯರು, ಸಂಬಂಧಿಕರು ಗುರುವಾರದಂದು ಭೇಟಿ ನೀಡಿ ಅಳಲು ತೋಡಿಕೊಂಡಿದ್ದಾರೆ.ಸಾಲ ಪಡೆದು ಮನೆ ನವೀಕರಿಸಿದ್ದರು!ಎರಡನೇ ಮಗಳ ಮದುವೆಗೆ ಸಾಲ ಮಾಡಿ ಮನೆಯ ಸೀಲಿಂಗ್ ನವೀಕರಣಗೊಳಿಸಿದ್ದರು. ಬಂದರಿನಲ್ಲಿ ಮಡ್ಡಿ ಆಯಿಲ್‍ನ ಕೆಲಸ ನಿರ್ವಹಿಸುತ್ತಿದ್ದ ಯಾಸಿರ್ ಕಂದಕ್ ಪತ್ನಿ ಹಾಗೂ ಮೂವರು ಹೆಣ್ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಮೂವರು ಹೆಣ್ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುತ್ತಿದ್ದ ಅವರು ಹಿರಿಯ ಪುತ್ರಿ ಫಾತಿಮಾ ರಾಶೀನರನ್ನು ಎಂಟು ತಿಂಗಳ ಹಿಂದೆ ಕೇರಳ ಕಣ್ಣೂರಿನ ವಳಪಟ್ನಂಗೆ ವಿವಾಹ ಮಾಡಿಕೊಡಲಾಗಿತ್ತು. ಇದೀಗ ಎರಡನೇ ಪುತ್ರಿ ರಿಫಾನ ಅವರ ವಿವಾಹದ ತಯಾರಿಯಲ್ಲಿದ್ದರು. ಅದಕ್ಕಾಗಿ ಬ್ಯಾಂಕಿನಿಂದ ಲೋನ್ ಪಡೆದು ಮನೆಯ ಸೀಲಿಂಗ್ ಕೆಲಸಗಳನ್ನು ನಡೆಸಿದ್ದರು. ಮೂಲಗಳ ಪ್ರಕಾರ ವಿವಾಹಕ್ಕಾಗಿ ಹೆತ್ತವರು ಹುಡುಗನೊಬ್ಬನನ್ನು ನೋಡಿದ್ದರು. ಆದರೆ ರಿಹಾನ ಶಿಕ್ಷಣ ಮುಗಿಸಿದ ನಂತರ ವಿವಾಹವಾಗುವ ಉದ್ದೇಶ ಇಟ್ಟುಕೊಂಡು, ತನ್ನ ಅಭಿಪ್ರಾಯವನ್ನು ತಿಳಿಸಿರಲಿಲ್ಲ. ಆದರೆ ದುರಂತ ಸಂಭವಿಸುವ ಮುನ್ನ ದಿನ ವಿವಾಹವಾಗುವ ಒಪ್ಪಿಗೆಯನ್ನು ಹೆತ್ತವರಲ್ಲಿ ತಿಳಿಸಿದ್ದರು ಎನ್ನಲಾಗಿದೆ.
ಜಿಲ್ಲಾಡಳಿತ ಮೃತರಿಗೆ ತಲಾ 5 ಲಕ್ಷ ರು., ಮನೆಗೆ 1.20 ಲಕ್ಷ ರು. ಪರಿಹಾರ ಘೋಷಿಸಿದ್ದು, ಕಾನೂನು ಪ್ರಕ್ರಿಯೆಗಳು, ಶವಮಹಜರು ವರದಿ ಸಂಗ್ರಹದ ಬಳಿಕ ಒದಗಿಸಲಾಗುವುದು. ಮನೆಯಿರುವ ಜಾಗದ ಆರ್‌ಟಿಸಿ ಮೃತ ಮರಿಯಮ್ಮ ಅವರ ಸಹೋದರನ ಹೆಸರಿನಲ್ಲಿದ್ದು ಕಾನೂನು ವಿಚಾರಗಳು ಪೂರ್ಣಗೊಂಡ ನಂತರ ಮನೆ ಹಾನಿಯ ಪರಿಹಾರ ವಿತರಣೆಯಾಗಲಿದೆ. ಕಂಪೌಂಡ್ ಕುಸಿದ ಮನೆಯನ್ನು ಭಾಗಶಃ ಹಾನಿಯೆಂದು ಗುರುತಿಸಲಾಗಿದೆ.ಸ್ಥಳೀಯ ಗ್ರಾ.ಪಂ ಸದಸ್ಯರು, ಗ್ರಾಮಕರಣಿಕರು ಹಾಗೂ ಕಂದಾಯ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಘಟನೆ ಸಂಭವಿಸಿದ ಮದನಿನಗರ ವ್ಯಾಪ್ತಿಯಲ್ಲಿ ಅಪಾಯದಂಚಿನಲ್ಲಿರುವ ಮನೆಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಎತ್ತರದ ಪ್ರದೇಶವನ್ನು ಕಡಿದು ಮನೆಗಳ ನಿರ್ಮಾಣ ಮಾಡಲಾಗಿರುವುದರಿಂದ ಈ ಭಾಗದಲ್ಲಿರುವ ಬಹುತೇಕ ಮನೆಗಳು ಅಪಾಯದಲ್ಲಿ ಇವೆ. ಅಗತ್ಯ ಬಿದ್ದಲ್ಲಿ ಕಾಳಜಿ ಕೇಂದ್ರ ರಚಿಸಿ ಅಪಾಯದಂಚಿನಲ್ಲಿರುವ ಮನೆಮಂದಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಉಳ್ಳಾಲ ತಾಲೂಕು ತಹಸೀಲ್ದಾರ್ ಪ್ರದೀಪ್ ಕುರುಡೇಕರ್ ತಿಳಿಸಿದರು.ಚರಂಡಿ ನಿರ್ಮಾಣಕ್ಕೆ ಒತ್ತಾಯ: ಈ ದುರಂತಕ್ಕೆ ನೀರು ಹೋಗಲು ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದೆ. ತಕ್ಷಣದಿಂದ ಸರ್ಕಾರ ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಿಸಬೇಕಿದೆ. ಇಲ್ಲವಾದಲ್ಲಿ ಇನ್ನಷ್ಟು ಮನೆಗಳು ಅಪಾಯದಂಚಿನಲ್ಲಿ ಸಿಲುಕಲಿವೆ. ಜಿಲ್ಲಾಡಳಿತ ಮಳೆ ನೀರು ಹರಿಯಲು, ಚರಂಡಿ ನೀರಿಗೆಂದು ಚರಂಡಿ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.