ಬೆಳ್ಳುಳ್ಳಿ ಬೆಳೆದವರ ಬಾಳು ತಿರುಗಿ ನೋಡಿಕೊಳ್ಳುವಂಗ ಆಗೈತಿ ಹೊಳ್ಳಳ್ಳಿ

| Published : Feb 22 2025, 12:45 AM IST

ಬೆಳ್ಳುಳ್ಳಿ ಬೆಳೆದವರ ಬಾಳು ತಿರುಗಿ ನೋಡಿಕೊಳ್ಳುವಂಗ ಆಗೈತಿ ಹೊಳ್ಳಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ದಿನನಿತ್ಯದ ಆಹಾರದಲ್ಲಿ ವಗ್ಗರಣೆಗೆ ಹೆಚ್ಚಾಗಿ ಬಳಸುವ ಬೆಳ್ಳುಳ್ಳಿ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಎರಡ್ಮೂರು ತಿಂಗಳ ಹಿಂದೆ ಗಗನಕ್ಕೇರಿದ್ದ ಸಾಂಬಾರ ಪದಾರ್ಥಗಳ ರಾಜ ಬೆಳ್ಳುಳ್ಳಿ ರೈತರ ಗದ್ದೆಯಲ್ಲಿ ಕಟಾವಿಗೆ ಬರುತ್ತಿದ್ದಂತೆಯೇ ದರ ಪಾತಾಳಕ್ಕೆ ಕುಸಿದು ರೈತರ ನೆಮ್ಮದಿಯನ್ನೇ ಕಸಿದಿದೆ.2024ರ ಸೆಪ್ಟೆಂಬರ್‌-ಅಕ್ಟೋಬರ್ ತಿಂಗಳಲ್ಲಿ ಕ್ವಿಂಟಲ್‌ ಗೆ ₹35 ಸಾವಿರ ಗಡಿ ದಾಟಿ ₹39 ಸಾವಿರ ತಲುಪಿ ದಾಖಲೆ ಬರೆದಿತ್ತು. ಮಳೆಗಾಲದಲ್ಲಿ ಬೆಳೆದ ರೈತರ ಪಾಲಿಕೆ ಬೆಳ್ಳುಳ್ಳಿ ಲಾಟರಿ ಹೊಡೆದಂತಾಗಿತ್ತು. ಕೇವಲ ಮೂರು ಕ್ವಿಂಟಲ್‌ ಮಾರುಕಟ್ಟೆಗೆ ತಂದರೆ ಲಕ್ಷ ಹಣ ಜೇಬಿಗಿಳಿಸಿಕೊಂಡು ಹೋಗುವಂತಾಗಿತ್ತು. ಈ ವೇಳೆ ರೈತರು ಎಕರೆಗೆ ₹4-5 ಲಕ್ಷಕ್ಕೂ ಅಧಿಕ ಲಾಭ ತೆಗೆದಿದ್ದರು. 5-6 ತಿಂಗಳು ಪ್ರತಿ ಕ್ವಿಂಟಲ್‌ಗೆ ₹35 ಸಾವಿರ ಆಸುಪಾಸಿನಲ್ಲಿಯೇ ಮಾರಾಟವಾಗಿ ಬೆಳೆಗಾರರಿಗೆ ಬಂಪರ್‌ ಹೊಡೆದಿತ್ತು.

ಸದಾನಂದ ಮಜತಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ದಿಢೀರ್ ದರ ಕುಸಿತ ಕಂಗಾಲಾದ ರೈತ:

ಕಳೆದ ವರ್ಷ ಬೆಳ್ಳುಳ್ಳಿ ಬೆಳೆದಿದ್ದ ರೈತರು ಭಾರಿ ಲಾಭ ಬಂದಿದ್ದರಿಂದ ಈ ಬಾರಿ ಕಳೆದ ವರ್ಷಕ್ಕೂ ಅಧಿಕ ಎಕರೆಯಲ್ಲಿ ಬಿತ್ತನೆ ಮಾಡಿದರೆ, ಬೇರೆ ಬೆಳೆ ಬೆಳೆಯುತ್ತಿದ್ದ ರೈತರೂ ಬಳ್ಳುಳ್ಳಿ ಬೆಳೆಯತ್ತ ಆಕರ್ಷಿತರಾದರು. ಬೇಸಿಗೆ ಬಿತ್ತನೆ ವೇಳೆ ದರ ಕ್ವಿಂಟಾಲ್‌ಗೆ ₹36 ಸಾವಿರ ದಾಟಿದ್ದರೂ ಲೆಕ್ಕಿಸದೇ ಬೆಳ್ಳುಳ್ಳಿ ಖರೀದಿಸಿ ಬಿತ್ತನೆ ಮಾಡಿದ್ದರು. ಜೊತೆಗೆ ಬೆಳೆಯೂ ಪ್ರತಿವರ್ಷಕ್ಕಿಂತ ಉತ್ತಮವಾಗಿ ಬೆಳೆದು ಬೆಳೆಗಾರರ ಸಂತಸಕ್ಕೆ ಪಾರವೇ ಇರಲಿಲ್ಲ. ಹೀಗಾಗಿ ರೈತರು ಉತ್ತಮ ಬೆಲೆ ಬರಬಹುದು ಎಂದು ಕನಸು ಕಟ್ಟಿಕೊಂಡಿದ್ದರು. ಇನ್ನೇನು ಬೆಳೆ ಕೈಗೆ ಸಿಕ್ಕಿತು ಎನ್ನುವಷ್ಟರಲ್ಲಿ ದರವು ₹6-8 ಸಾವಿರಕ್ಕೆ ದಿಢೀರ್ ಕುಸಿತ ಕಂಡಿದೆ.ಎಲ್ಲೆಲ್ಲಿ ಬೆಳೆಯಲಾಗುತ್ತೆ ಬೆಳ್ಳುಳ್ಳಿ?:

ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ, ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ಬೆಳ್ಳುಳ್ಳಿ ಬೆಳೆಯಲಾಗುತ್ತದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಗೋಕಾಕ, ನಿಪ್ಪಾಣಿ, ಖಾನಾಪುರ ತಾಲೂಕುಗಳಲ್ಲಿ ನೀರಾವರಿ ಅನುಕೂಲತೆ ಇರುವ ರೈತರು ಬೆಳೆಯುತ್ತಾರೆ.ಬೆಳೆಯುತ್ತಾರೆ, ಖಾನಾಪೂರ, ಗೋಕಾಕ, ಸವದತ್ತಿ, ಕಿತ್ತರು ತಾಲೂಕಿನಲ್ಲಿ ಅಲ್ಲಲ್ಲಿ ಬೆಳ್ಳುಳ್ಳಿ ಬೆಳಯಲಾಗುತ್ತದೆ.ರೈತರಿಗೆ ಆಪಾತ್ಬಾಂಧವ ಈ ಬೆಳ್ಳುಳ್ಳಿ:

ರೈತರಿಗೆ ವರ್ಷದ 12 ತಿಂಗಳು ವರಮಾನ ಇರುವುದಿಲ್ಲ. ಹೀಗಾಗಿ ವರ್ಷವಿಡೀ ಕುಟುಂಬ ನಿರ್ವಹಣೆಗೆ ತೊಂದರೆ ಆಗುತ್ತದೆ. ಇದರಿಂದ ಪಾರಾಗಲು ಈ ಭಾಗದ ರೈತರ ಬೆಳ್ಳುಳ್ಳಿ ಅವಲಂಬಿಸಿದ್ದಾರೆ. ಬೆಳೆ ಕಟಾವು ಮಾಡಿ ಒಣಗಿಸಿಟ್ಟರೆ ಮುಗೀತು ಮುಂದಿನ ಋತುಮಾನದವರೆಗೆ ಇದು ಬಾಳಿಕೆ ಬರುತ್ತದೆ. ಹಾಗಾಗಿ ರೈತರು ಬೆಳ್ಳುಳ್ಳಿಯನ್ನು ಒಮ್ಮೆಗೆ ಮಾರಾಟ ಮಾಡದೇ 15-20 ದಿನಕ್ಕೊಮ್ಮೆ ಬೇಕಾದಷ್ಟೇ ಮಾರಾಟ ಮಾಡುತ್ತಾರೆ. ಈ ಹಣದಲ್ಲಿ ಕುಟುಂಬಕ್ಕೆ ತಿಂಗಳಿಗೆ ಬೇಕಾಗುವಷ್ಟು ದಿನಸಿ ವಸ್ತುಗಳನ್ನು ಖರೀದಿಸುತ್ತಾರೆ. ಕೆಲವೊಮ್ಮೆ ಆರೋಗ್ಯ ಮತ್ತಿತರ ತುರ್ತು ಸ್ಥಿತಿಗಳಲ್ಲಿ ಹಣದ ಅವಶ್ಯಕತೆ ಬಂದಾಗ ಸಂಗ್ರಹಿಸಿಟ್ಟ ಬೆಳ್ಳುಳ್ಳಿಯಲ್ಲಿ ಬೇಕಾದಷ್ಟು ಮಾರಾಟ ಮಾಡಿ ಪಾರಾಗುತ್ತಾರೆ. ಹೀಗಾಗಿ ಬೆಳ್ಳುಳ್ಳಿ ರೈತರ ಪಾಲಿಗೆ ಆಪದ್ಬಾಂಧವ ಪಾತ್ರ ನಿಭಾಯಿಸುತ್ತದೆ.ಖರ್ಚಿನಲ್ಲಿ ಅರ್ಧದಷ್ಟು ಬರಲ್ಲ:

ಸಾಮಾನ್ಯವಾಗಿ ಬೇಸಿಗೆ ಬೆಳ್ಳುಳ್ಳಿಯನ್ನು ಜುಲೈ-ಆಗಸ್ಟ್ ತಿಂಗಳಲ್ಲಿ ನೀರಾವರಿ ಅನುಕೂಲ ಇರುವ ರೈತರು ಬೆಳೆಯುತ್ತಾರೆ. ಜುಲೈ-ಆಗಸ್ಟ್ ತಿಂಗಳಲ್ಲಿ ದರ ಕ್ವಿಂಟಾಲ್‌ಗೆ ₹36-38 ಸಾವಿರವಿತ್ತು. ಆದರೂ ಉತ್ತಮ ದರ ಸಿಗುವ ಆಸೆಯಿಂದ ರೈತರು ತುಟ್ಟಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಒಂದು ಎಕರೆಗೆ ಕನಿಷ್ಠ 3 ಕ್ವಿಂಟಾಲ್‌ 30 ಕೆಜಿ ಬೀಜ ಬೇಕು. ಕ್ವಿಂಟಲ್‌ಗೆ ಸರಾಸರಿ ₹35 ಸಾವಿರ ದರದಲ್ಲಿ ಲೆಕ್ಕ ಹಾಕಿದರೂ ಎಕರೆಗೆ ಬೀಜಕ್ಕೆ ₹1 ಲಕ್ಷಕ್ಕೂ ಅಧಿಕ ಖರ್ಚು ಬಂದಿದೆ. ಜೊತೆಗೆ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆ ತೆಗೆಯುವುದು, 10-12 ದಿನಕ್ಕೊಮ್ಮೆ ನೀರುಣಿಸುವುದು, ಕಟಾವು ವೆಚ್ಚ ಸೇರಿ ಒಂದು ಎಕರೆಗೆ ರೈತರು ಅಂದಾಜು ₹2 ಲಕ್ಷ ವೆಚ್ಚ ಮಾಡಿದ್ದಾರೆ. ಆದರೆ, ಈಗಿನ ಬೆಲೆಗೆ ಮಾರಾಟ ಮಾಡಿದರೆ ಎಕರೆಗೆ ಒಂದು ಲಕ್ಷ ರುಪಾಯಿ ಬಂದರೆ ಹೆಚ್ಚು. ಮಾಡಿದ ಖರ್ಚಿನಲ್ಲಿ ಅರ್ಧದಷ್ಟು ವಾಪಸ್ ಬರಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.ದರ ಕುಸಿತಕ್ಕೆ ಕಾರಣವೇನು?

ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ಇಳುವರಿ ಕುಸಿತಗೊಂಡು ಬೆಳ್ಳುಳ್ಳಿ ದರ ಗಗನಕ್ಕೇರಿತ್ತು. ಉತ್ತಮ ದರ ಸಿಕ್ಕಿದ್ದರಿಂದ ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿದ್ದು, ಪ್ರಕೃತಿಯೂ ಸಹ ಸಾಥ್‌ ನೀಡಿದ್ದರಿಂದ ಉತ್ತಮ ಇಳುವರಿ ಬಂದಿದೆ. ಈಗ ರೈತರು ಬೆಳೆ ತೆಗೆಯುತ್ತಿದ್ದು ಮಾರುಕಟ್ಟೆಗೆ ಹೊಸ ಇರುಳ್ಳಿ ದಾಂಗುಡಿ ಇಟ್ಟ ಪರಿಣಾಮ ದಿಢೀರ್‌ ದರ ಕುಸಿತಕ್ಕೆ ಕಾರಣ ಎಂಬುವುದು ವ್ಯಾಪಾರಿಗಳ ವಾದ.ಕಳೆದ ಸಾಲಿನಲ್ಲಿ ಉತ್ತಮ ದರ ಸಿಕ್ಕಿದ್ದರಿಂದ ಬೆಳ್ಳುಳ್ಳಿ ಬೆಳೆದ ರೈತರು ಬಂಪರ್ ಲಾಭ ಪಡೆದಿದ್ದರು. ಈ ಬಾರಿ ಹಿಂಗಾರು ಬಿತ್ತನೆ ವೇಳೆ ಬೆಳ್ಳುಳ್ಳಿ ದರ ಕ್ವಿಂಟಾಲ್‌ಗೆ ₹36 ಸಾವಿರ ದರ ಇದ್ದರೂ ಅನಿವಾರ್ಯವಾಗಿ ಸಾಲ ಮಾಡಿ ನಾಲ್ಕು ಕ್ವಿಂಟಾಲ್ ಬೀಜ ಖರೀದಿಸಿ ಬಿತ್ತನೆ ಮಾಡಿದ್ದೆ. ಇಳುವರಿಯೂ ಚೆನ್ನಾಗಿ ಬಂದಿತ್ತು. ಆದರೆ, ಈಗ ದರ ಪಾತಾಳಕ್ಕೆ ಕುಸಿದಿರುವುದು ಚಿಂತೆಗೀಡು ಮಾಡಿದೆ. ಈಗಿನ ದರದಲ್ಲಿ ಮಾರಾಟ ಮಾಡಿದರೆ ನಾವು ಬೀಜಕ್ಕೆ ಖರ್ಚು ಮಾಡಿದ ಹಣವೂ ಬರುವುದಿಲ್ಲ. ಏನು ಮಾಡಬೇಕು ಎಂಬುದೇ ತಿಳಿಯದಂತಾಗಿದೆ.

- ಮಂಜುನಾಥ ಯಲಿಗಾರ, ಬೆಳ್ಳುಳ್ಳಿ ಬೆಳೆಗಾರ ಹಣ್ಣಿಕೇರಿ.