ಸಾರಾಂಶ
ಮಲೆನಾಡು-ಕರಾವಳಿ ಒಕ್ಕೂಟದ ಸಭೆಯಲ್ಲಿ ರಂಭಾಪುರಿ ಶ್ರೀಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಮಲೆನಾಡಿನಲ್ಲಿ ಪ್ರಸ್ತುತ ಉದ್ಭವಿಸಿರುವ ಒತ್ತುವರಿ, ಕಸ್ತೂರಿ ರಂಗನ್ ವರದಿಯಂತಹ ಗಂಭೀರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅವಶ್ಯಕ ಎಂದು ರಂಭಾಪುರಿ ಡಾ.ವೀರಸೋಮೇಶ್ವರ ಶ್ರೀ ಹೇಳಿದರು.ರಂಭಾಪುರಿ ಪೀಠದಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಭಾನುವಾರ ಆಯೋಜಿಸಿದ್ದ ಮಲೆನಾಡಿಗರ ಸಮಸ್ಯೆ ಕುರಿತ ‘ಮಲೆನಾಡಿಗರ ಮಹತ್ವದ ಸಭೆ’ಯಲ್ಲಿ ಮಾತನಾಡಿ, ಮಲೆನಾಡಿನ ಜನರಿಗೆ ಕಸ್ತೂರಿ ರಂಗನ್ ವರದಿ, ಅರಣ್ಯ ಒತ್ತುವರಿ ತೆರವಿನ ವಿಚಾರದ ತಿಳುವಳಿಕೆಗಳು ಇಲ್ಲದಿರುವುದೇ ಇಂದಿನ ಆತಂಕ ಮತ್ತು ವರದಿಗಳ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವಲ್ಲಿ ಸರ್ಕಾರಗಳು ಹಿಂದುಳಿದಿರುವುದು ಕಾರಣವಾಗಿದೆ ಎಂದರು.
ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಗೆ ಮಲೆನಾಡು ಕರಾವಳಿ ಒಕ್ಕೂಟ ಪಕ್ಷಾತೀತವಾಗಿ ಸಭೆ ರೂಪಿಸಿರುವುದು ಪೂರಕವಾಗಿದೆ. ಜಿಲ್ಲೆಯ ಎಲ್ಲಾ ಶಾಸಕರು ಜನಹಿತಕ್ಕಾಗಿ ಒಗ್ಗಟ್ಟಿನಿಂದ ಹೋರಾಡಿದರೆ ಯಶಸ್ಸು ಖಚಿತ. ಈ ಸಭೆಯಲ್ಲಿ ಕೈಗೊಂಡ ನಿರ್ಣಯ ಗಳು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತಲುಪಿ ಪರಿಣಾಮ ಬೀರಬೇಕಿದೆ. ಮಲೆನಾಡಿನ ಸಣ್ಣ ಕುಟುಂಬಗಳು ತಮ್ಮ ಜೀವನೋಪಾಯಕ್ಕೆ 1-2 ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ. ಇಂತಹ ಒತ್ತುವರಿ ತೆರವು ಸರಿಯಲ್ಲ. ಇದನ್ನು ಕೂಡಲೇ ನಿಲ್ಲಿಸಬೇಕು. ಕ್ಷೇತ್ರದ ಶಾಸಕರು ಸಹ ಜನರ ದನಿಯಾಗಬೇಕಿದೆ ಎಂದರು.ಸಮಾಜದಲ್ಲಿ ಜಾತಿ, ಮತದ ಸಂಘರ್ಷಗಳು ಅತಿಯಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಮಠ, ಮಂದಿರಗಳು ಗಟ್ಟಿ ದನಿಯಾಗಿ ಅದರ ವಿರುದ್ಧ ನಿಲ್ಲಬೇಕಿದೆ. ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟ ಸುರಕ್ಷಿತವಾಗಿರಬೇಕು ಎಂಬುದು ಒಳ್ಳೆಯ ನಿರ್ಧಾರವಾದರೂ ಇದರಿಂದ ಸಾಮಾನ್ಯರಿಗೆ ಎಷ್ಟು ತೊಂದರೆಯಾಗುತ್ತಿದೆ ಎಂದು ಅರಿಯಬೇಕಿದೆ. ಸಮಸ್ಯೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಅತ್ಯಂತ ಸೂಕ್ಷ್ಮವಾದ ಈ ವಿಚಾರದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಅಗತ್ಯ. ರಂಭಾಪುರಿ ಪೀಠ ಮಲೆನಾಡಿನ ಹೋರಾಟಗಾರರಿಗೆ ಬೆಂಬಲ ನೀಡುತ್ತದೆ ಎಂದು ಘೋಷಿಸಿದರು.
ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಭೆ ಉದ್ಘಾಟಿಸಿ ಮಾತನಾಡಿ, ರೈತ ಎಂದಿಗೂ ಹಸಿರು ನಾಶ ಮಾಡಿಲ್ಲ. ಪ್ರಕೃತಿ ವಿಕೋಪದಂತ ಘಟನೆಗಳು ಅನೇಕ ವರ್ಷಗಳಿಂದ ನಡೆಯುತ್ತಿದೆ. ಪ್ರಕೃತಿ ಬಗ್ಗೆ ಸಂಪದ್ಭರಿತವಾದ ವಿಚಾರ ಇಟ್ಟುಕೊಂಡವನು ರೈತನಾಗಿದ್ದಾನೆ. ಮೇಘ ಸ್ಪೋಟ ಶತ ಶತಮಾನದಿಂದ ನಡೆಯುತ್ತಿದೆ. ಇವೆಲ್ಲ ಸಹಜ. ಮಲೆನಾಡಿಗರ ಹೋರಾಟದ ಇತಿಹಾಸ ಸರ್ಕಾರ ಅರ್ಥ ಮಾಡಿಕೊಂಡು ಮೆಲುಕು ಹಾಕಬೇಕಿದೆ. ರೈತರ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಮಠ ಬೆಂಬಲವಾಗಿ ನಿಲ್ಲಲಿದೆ ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ರೈತಪರ ಹೋರಾಟಕ್ಕೆ ಶಾಸಕನಾಗಿ ನಾನು ಬೆಂಬಲ ನೀಡಲಿದ್ದು, ರೈತರ ಒತ್ತುವರಿ ತೆರವು ವಿಚಾರಕ್ಕೆ ನನ್ನ ಸಹಮತವಿಲ್ಲ. ಒತ್ತುವರಿ ಸಮಸ್ಯೆ ಬಗ್ಗೆ ಮಲೆನಾಡು ಭಾಗದ ಶಾಸಕರು ಹಾಗೂ ಆಯ್ದ ಮುಖಂಡರ ಸಭೆ ಶೀಘ್ರ ಬೆಂಗಳೂರಿನಲ್ಲಿ ನಡೆಸಲಾಗುವುದು. ರೈತರ ಒಂದಿಂಚು ಭೂಮಿಯನ್ನು ತೆರವು ಮಾಡಲು ಬಿಡುವುದಿಲ್ಲ. ಆದರೆ ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಮಾಡಲು ನನ್ನ ಸಹಮತವಿಲ್ಲ ಎಂದರು.
ಸಭೆಯಲ್ಲಿ ಕರಾವಳಿ ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ಕ್ಷೇತ್ರ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎನ್.ನಾಗೇಶ್, ಪ್ರಮುಖರಾದ ಸಿ.ಎಲ್.ಮನೋಹರ್, ಎಂ.ಎಸ್.ಚನ್ನಕೇಶವ್, ಸುಧೀರ್‌ಕುಮಾರ್ ಮುರೊಳ್ಳಿ, ಕೆ.ಎಸ್.ರವೀಂದ್ರ, ಕೆ.ಎಲ್.ಅಶೋಕ್, ರಾಧಾ ಸುಂದರೇಶ್, ಎಂ.ಎಸ್.ಅರುಣೇಶ್, ದಿಗಂತ್ ಬಿಂಬೈಲು, ಜಗದೀಶ್ ಕಣದಮನೆ, ಎಂ.ಕೆ.ಸುಂದರೇಶ್ ಮತ್ತಿತರರು ಹಾಜರಿದ್ದರು.(ಬಾಕ್ಸ್)ಒತ್ತುವರಿಗೆ ರಾಜ್ಯ ಸರ್ಕಾರ ಕಾರಣ : ವಿಠ್ಠಲ್‌ಹೆಗ್ಡೆ ರಾಜ್ಯದಲ್ಲಿ ಒತ್ತುವರಿ ಹೆಚ್ಚಲು ರಾಜ್ಯ ಸರ್ಕಾರಗಳೇ ಪ್ರಮುಖ ಕಾರಣ ಎಂದು ಪರಿಸರವಾದಿ ಕಲ್ಕುಳಿ ವಿಠ್ಠಲ್ ಹೆಗ್ಡೆ ಹೇಳಿದರು. ಸಭೆಯಲ್ಲಿ ಮಾತನಾಡಿ,1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಬಂದಾಗ ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಬಳಕೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅರಣ್ಯವನ್ನು ಯಾವುದೇ ಉದ್ದೇಶಕ್ಕೆ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ವಿಲ್ಲ. ಕೇವಲ ಅದರ ನಿರ್ವಹಣೆ ಮಾತ್ರ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ.ಆದರೆ ರಾಜ್ಯ ಸರ್ಕಾರ ಒತ್ತುವರಿ ಜಮೀನುಗಳನ್ನು ಮಂಜೂರಾತಿ, ಹಕ್ಕುಪತ್ರದ ಭರವಸೆ ನೀಡುತ್ತಿರುವುದರಿಂದ ದಿನನಿತ್ಯ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿವೆ. ರೈತರು ಫಾರಂ ನಂ.50, 57ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ ಕಂದಾಯ ಭೂಮಿ ಆಗಿದ್ದರೆ ಮಾತ್ರ ರೈತರಿಗೆ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಯಾವುದೇ ಸರ್ಕಾರಿ ಭೂಮಿ ಒಂದು ಬಾರಿ ಅರಣ್ಯ ಎಂದು ನಮೂದಾದರೆ ಅದನ್ನು ಅರಣ್ಯೇತರ ಚಟುವಟಿಕೆಗೆ ಬಳಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ವಯನಾಡಿನ ಭೂಕುಸಿತಕ್ಕೂ ಮಲೆನಾಡಿನ ಒತ್ತುವರಿ ತೆರವಿಗೂ ಸಂಬಂಧವಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಬಂದರೆ ಗುಡ್ಡ ಕುಸಿತ ಸಾಮಾನ್ಯ. ಮಲೆನಾಡಿನ ಜನ ಆತಂಕದಲ್ಲಿರುವ ಸಮಯದಲ್ಲಿ ಅರಣ್ಯ ಸಚಿವರು ಅನಾವಶ್ಯಕವಾಗಿ ಒತ್ತುವರಿ ತೆರವಿನ ಹೇಳಿಕೆ ನೀಡಿದ್ದಾರೆ ಎಂದರು.(ಬಾಕ್ಸ್)
ಅರಣ್ಯ ಹಕ್ಕುಪತ್ರಕ್ಕೆ ದಾಖಲೆ ಅಗತ್ಯವಿಲ್ಲ: ರವೀಂದ್ರ ನಾಯ್ಕ್ಮೂರು ತಲೆಮಾರಿನ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕುಪತ್ರ ನೀಡಲು ಯಾವುದೇ ದಾಖಲೆ ಅವಶ್ಯಕತೆಯಿಲ್ಲ. ಕೇವಲ ಜನ ವಸತಿ ಇದ್ದರೆ ಸಾಕು ಎಂದು ಶಿರಸಿ ವಕೀಲ ರವೀಂದ್ರ ನಾಯಕ್ ಹೇಳಿದರು.ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಸರ್ಕಾರಗಳು ವಿಫಲವಾಗಿದ್ದು, ದೇಶದಲ್ಲಿ ತ್ರಿಪುರಾದಲ್ಲಿ ಮಾತ್ರ 1.28 ಲಕ್ಷ ಅರಣ್ಯ ಹಕ್ಕುಪತ್ರ ನೀಡುವ ಮೂಲಕ ಮೊದಲ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ಅರ್ಜಿ ಸಲ್ಲಿಸಿದವರಲ್ಲಿ ಶೇ.೫ರಷ್ಟು ಜನರಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ ಎಂದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ 2015ರ ನಂತರದ ಒತ್ತುವರಿ ತೆರವಿಗೆ ಆದೇಶಿಸಿದ್ದಾರೆ. ಇದು ಸುಪ್ರೀಂ ಕೋರ್ಟಿನ ಆದೇಶದ ಸ್ಪಷ್ಟ ನ್ಯಾಯಾಂಗ ನಿಂದನೆ. ಪಶ್ಚಿಮಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಇಲ್ಲಿನ ಜನ ಬದುಕು ಕಳೆದು ಕೊಳ್ಳಬೇಕಾಗುತ್ತದೆ. ಕಾನೂನು, ಸಾಂಘಿಕ ಹೋರಾಟದ ಮೂಲಕ ಮಾತ್ರ ನಮ್ಮ ಹಕ್ಕನ್ನು ಉಳಿಸಿ ಕೊಳ್ಳಬೇಕಿದೆ ಎಂದರು.(ಬಾಕ್ಸ್)ಸಭೆಯಲ್ಲಿ ಕೈಗೊಂಡ ನಿರ್ಣಯಗಳು
- ಪ್ರಾಕೃತಿಕ ಅವಘಡಗಳಿಗೂ ಮಲೆನಾಡಿನ ನೆಲವಾಸಿಗಳು ಸಂಬಂಧವಿಲ್ಲ. ಮೇಘಸ್ಫೋಟ-ಭೂಕುಸಿತಕ್ಕೆ ನಿವಾಸಿಗಳನ್ನು ಹೊಣೆ ಮಾಡುವುದು ವೈಜ್ಞಾನಿಕವಲ್ಲ. ಹವಾಮಾನ ವೈಪರೀತ್ಯಕ್ಕೆ ನಗರಿಕರಣ ಕಾರಣವೇ ಹೊರತು ಹಳ್ಳಿಗಳಲ್ಲ.- ಮಲೆನಾಡಿನ ಸಮಸ್ಯೆಗೆ ಜನ ಹೋರಾಟವೇ ಅಸ್ತ್ರ.
- ಕರ್ನಾಟಕ ಅರಣ್ಯ ಕಾಯ್ದೆ ಕಲಂ 4ರಿಂದ 17ರವರೆಗಿನ ಅರಣ್ಯ ವ್ಯಾಖ್ಯಾನದ ಪ್ರಸ್ತಾವನೆ ಹಾಗೂ ನಿರ್ವಹಣೆ ಜನರ, ನೆಲವಾಸಿಗಳ ಗಮನಕ್ಕೆ ತಂದು ಮತ್ತೊಮ್ಮೆ ಪುನರ್ ಸರ್ವೆ ನಡೆಸಿ ನೆಲವಾಸಿಗಳ ರಸ್ತೆ, ಕೃಷಿ, ವಾಸಸ್ಥಳ, ಭವಿಷ್ಯದ ನಿವೇಶನಗಳ ವಿತರಣೆಗೆ ಅರಣ್ಯ ಘೋಷಣೆ ವ್ಯಾಖ್ಯಾನದಿಂದ ಹೊರಗುಳಿಸಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು.- ಪಾರಂಪರಿಕ ಅರಣ್ಯ ಕಾಯ್ದೆಯಡಿ ಭೂ ಮಂಜೂರಾತಿ ಕಾಲಮಿತಿ, ಅವಶ್ಯಕ ದಾಖಲೆಗಳನ್ನು 75 ವರ್ಷಗಳಿಂದ 25 ವರ್ಷಕ್ಕೆ ತಗ್ಗಿಸಿ ಅರಣ್ಯ ವಾಸಿಗಳಿಗೆ ಬದುಕಲು ಅವಕಾಶ ಮಾಡಿಕೊಡಬೇಕು.
- ಭೂ ಪರಿಮಿತಿ ಆಧಾರದಲ್ಲಿ ವಿಧಾನಸಭಾ, ಲೋಕಸಭೆ ಕ್ಷೇತ್ರ ಪುನರ್ ವಿಂಗಡಿಸುವುದು.- ಮಲೆನಾಡನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸುವುದು, ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಒಪ್ಪಿಕೊಳ್ಳುವುದು ಹಾಗೂ ಹುಲಿ ಯೋಜನೆ ವಿಸ್ತರಣೆ ಕಾರಣದಿಂದ ಜನರ ಎತ್ತಂಗಡಿ ಉದ್ದೇಶ ಅಥವಾ ಇಲ್ಲಿನ ನೆಲವಾಸಿಗಳಿಗೆ ತೊಂದರೆಯಾಗುವ ಎಲ್ಲಾ ಪ್ರಸ್ತಾವನೆ ಅಮೂಲಾಗ್ರವಾಗಿ ಪರಿಶೀಲಿಸಿ ಸರ್ಕಾರ ಕೈಬಿಡಬೇಕು.
- ಅರಣ್ಯ ಕಾಯ್ದೆ ಸೆಕ್ಷನ್ 4 ಉದ್ಘೋಷಣೆ ಗ್ರಾಮ ಸಭೆಗಳ ಪೂರ್ವಾನುಮತಿ ಪಡೆಯದಿರುವುದರಿಂದ ಸಂಪೂರ್ಣ ವಾಪಾಸ್ ಪಡೆಯಬೇಕು.- ಪ್ರತೀ ವರ್ಷ ಏ.15ನ್ನು ಮಲೆನಾಡು ದಿನ ಆಚರಿಸಿ, ಜನಜೀವನ, ಕೃಷಿ, ಪರಂಪರೆ, ಜನಪದ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು.
- ಪ್ರಸ್ತುತ ಇರುವ ಹುಲಿ ಅರಣ್ಯ ಯೋಜನೆ, ರಾಷ್ಟ್ರೀಯ ಉದ್ಯಾನ ಅಥವಾ ಇನ್ನಾವುದೇ ಮೀಸಲು ಅರಣ್ಯ ವಿಸ್ತರಿಸಬಾರದು.೦೧ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಮಲೆನಾಡಿಗರ ಮಹತ್ವದ ಸಭೆಯಲ್ಲಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿದರು. ಶಾಸಕ ಟಿ.ಡಿ.ರಾಜೇಗೌಡ, ಅನಿಲ್ ಹೊಸಕೊಪ್ಪ, ರವೀಂದ್ರ ನಾಯ್ಕ್, ಎಂ.ಎನ್.ನಾಗೇಶ್, ಸುಂದರೇಶ್, ಮನೋಹರ್ ಇದ್ದರು.೦೧ಬಿಹೆಚ್‌ಆರ್ ೨: ರಂಭಾಪುರಿ ಪೀಠದಲ್ಲಿ ನಡೆದ ಮಲೆನಾಡಿಗರ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದ ಶೃಂಗೇರಿ ಕ್ಷೇತ್ರದ ರೈತರು, ವಿವಿಧ ಮುಖಂಡರು ವಿಚಾರ ಗೋಷ್ಠಿ ನಡೆಸಿದರು.೦೧ಬಿಹೆಚ್‌ಆರ್ ೩: ಮಲೆನಾಡಿಗರ ಮಹತ್ವದ ಸಭೆಯಲ್ಲಿ ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಮಾತನಾಡಿದರು.