ಸಾರಾಂಶ
ಎಸ್.ಜಿ. ತೆಗ್ಗಿನಮನಿ
ನರಗುಂದ: ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಬಿಡುವಿನ ಸಮಯದಲ್ಲಿ ಪುರುಷರು ಕಬಡ್ಡಿ, ಖೋಖೋ ಆಡುತ್ತಿದ್ದಾರೆ. ಮಹಿಳೆಯರು ಸಕ್ಕ ಸರಗಿ ಆಟ ಮತ್ತು ಸೋಬಾನೆ, ಡೊಳ್ಳಿನ ಪದ, ತತ್ವ ಪದಗಳ ಗಾನಸುಧೆ ಹರಿಸುತ್ತಿದ್ದಾರೆ.ತಾಲೂಕಿನ ವಿವಿಧ ಗ್ರಾಪಂಗಳ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರೆ ಇಂಥ ಆಟ-ಗಾಯನ ಕಣ್ತುಂಬಿಕೊಳ್ಳಬಹುದು. ಉದ್ಯೋಗ ಖಾತ್ರಿ ಎಂದರೆ ಬರೀ ಕೂಲಿ ಕೆಲಸವಲ್ಲ, ಮನರಂಜನೆಗೂ ಅಲ್ಲಿ ಅವಕಾಶವಿದೆ. ಹೀಗಾಗಿ ಕೂಲಿಕಾರರು ಆಸಕ್ತಿಯಿಂದಲೇ ಕೆಲಸದಲ್ಲಿ ತೊಡಗುತ್ತಿರವದು ಕಂಡು ಬರುತ್ತದೆ.8 ಸಾವಿರ ಕೂಲಿಕಾರರು: ಏಪ್ರಿಲ್ ತಿಂಗಳಿನಿಂದಲೇ ತಾಲೂಕಿನಾದ್ಯಂತ ನರೇಗಾ ಕಾಮಗಾರಿಗಳು ಪ್ರಾರಂಭವಾಗಿದ್ದು, ತಾಲೂಕಿನಲ್ಲಿ 13 ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ದಿನ 8 ಸಾವಿರಕ್ಕೂ ಹೆಚ್ಚು ಕೂಲಿಕಾರರು ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದಾರೆ. ಕೂಲಿಕಾರರು ಕೆಲಸದ ದಣಿವು ತಣಿಸಲು ಬಿಡುವಿನ ಸಮಯದಲ್ಲಿ ಆಟೋಟಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕಾರ್ಮಿಕರು ತಮ್ಮ ಕೆಲಸ ಮುಗಿಸಿ ಬಿಡುವಿನ ವೇಳೆಯಲ್ಲಿ ಖುಷಿಯಿಂದ ಆಟೋಟಗಳಲ್ಲಿ ತೊಡಗಿದ್ದಾರೆ. ಹೆಚ್ಚು ಮಾನವ ದಿನಗಳ ಸೃಜನೆ ಮಾಡಲು ಕೊಣ್ಣೂರ, ಚಿಕ್ಕನರಗುಂದ ಸೇರಿ ಇತರೆ ಗ್ರಾಪಂ ಪಿಡಿಒಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಈ ವಿಭಿನ್ನ ನಡೆ ಅನುಸರಿಸುತ್ತಾ ಕೆಲಸದ ನಡುವೆ ಬಿಡುವಿನ ಸಮಯದಲ್ಲಿ ದೇಸಿ ಆಟಗಳನ್ನು ಆಡಿಸಲಾಗುತ್ತಿದೆ. ಜಾನಪದ, ಡೊಳ್ಳಿನ ಪದ, ಹಂತಿ ಪದ ಹಾಡುಗಳನ್ನು ಹಾಡಿಸುವ ಮೂಲಕ ಕೂಲಿಕಾರರಲ್ಲಿ ಉತ್ಸಾಹ ಹೆಚ್ಚಿಸಲಾಗುತ್ತಿದೆ.ಕೊಣ್ಣೂರ ಗ್ರಾಪಂ 1150 ಕೂಲಿಕಾರರು: ಕೊಣ್ಣೂರ ಗ್ರಾಮದಲ್ಲಿಯೇ 1150ಕ್ಕೂ ಅಧಿಕ ಕೂಲಿಕಾರರು ಕೆಲಸಕ್ಕೆ ಬರುತ್ತಿದ್ದು, ಇಲ್ಲಿ ಮೊದಲು ಆಟವಾಡಲು ಹಿಂಜರೆಯುತ್ತಿದ್ದರು. ನಂತರ ಮಹಿಳೆಯರೇ ಮೊದಲು ಧೈರ್ಯ ಮಾಡಿ ಸಕ್ಕ ಸರಗಿ ಆಟವಾಡಲು ಪ್ರಾರಂಭಿಸಿದರು. ನಂತರ ಒಬ್ಬೊಬ್ಬರೇ ಬಂದು ಖೋಖೋ, ಕಬಡ್ಡಿ ಆಟದಲ್ಲಿ ಭಾಗವಹಿಸಿ ಆಟವಾಡುವ ಮೂಲಕ ಖುಷಿ ಪಡುತ್ತಿದ್ದಾರೆ. ಆಟದ ಜೊತೆಗೆ ನರೇಗಾ ಕೆಲಸವನ್ನು ಖುಷಿಯಿಂದ ಮಾಡುತ್ತಿದ್ದಾರೆ.ನರೇಗಾ ಯೋಜನೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ಕೂಲಿ ಎಂಬುವುದನ್ನು ಸಾರಲು ಹಾಗೂ ತಾಪಂ ಹಾಗೂ ಕೊಣ್ಣೂರು, ಚಿಕ್ಕನರಗುಂದಗಳಲ್ಲಿ ಈ ಹೆಜ್ಜೆಯನ್ನು ಇರಿಸಿವೆ. ಕೂಲಿ ಕೆಲಸಕ್ಕೆ ಬರುವ ಮಹಿಳೆಯರು ಮನೆಯಂತೆಯೇ ಎಲ್ಲರೊಂದಿಗೆ ಬೆರೆತು ಆಟವಾಡುತ್ತಿದ್ದಾರೆ. ಸೋಬಾನೆ, ಹಂತಿ ತತ್ವ ಪದಗಳನ್ನು ಸಾಮೂಹಿಕವಾಗಿ ಹಾಡುತ್ತಿದ್ದಾರೆ. ಇದರಿಂದ ಕೆಲಸದ ದಣಿವು ಕರಗಿ ಉಲ್ಲಾಸಗೊಳುತ್ತಿದೆ. ಜೊತೆಗೆ ಇತರೆ ಗ್ರಾ.ಪಂ.ಗಳಿಗೂ ಈ ಸಂಗತಿ ಪ್ರೇರಣೆಯಾಗಿದೆ. ಎನ್.ಎಂ.ಎಂ.ಎಸ್. ತಂತ್ರಾಂಶದಲ್ಲಿ ಈ ವರ್ಷ ಹೆಡ್ ಕೌಂಟ್ ಮಾಡುವ ಮೂಲಕ ಹಾಜರಿ ಹಾಕಲಾಗುತ್ತದೆ. ಕೆಲಸದ ಸ್ಥಳದಲ್ಲಿ ಕನಿಷ್ಠ ನಾಲ್ಕು ಗಂಟೆ ಸಮಯ ಕಳೆಯಬೇಕು. ಹಾಗಾಗಿ ಬೇಗ ಬೇಗ ಕೆಲಸ ಮಾಡಿ ಆಟವಾಡಲು ಕೂಲಿಕಾರ್ಮಿಕರು ರೆಡಿ ಆಗುತ್ತಾರೆ. ಕೊಣ್ಣೂರ ಗ್ರಾಪಂಯಲ್ಲಿ ಸದ್ಯ 900ಕ್ಕೂ ಅಧಿಕ ಕೂಲಿಕಾರರು ಕೆಲಸದಲ್ಲಿ ಪ್ರತಿದಿನ ತೊಡಗಿಕೊಳ್ಳುತ್ತಿದ್ದಾರೆ. ನರೇಗಾ ಕಾಮಗಾರಿಗಳಲ್ಲಿ ತೊಡಗಿಕೊಳ್ಳುವ ಮಹಿಳೆಯರು ಪುರುಷರಷ್ಟೇ ಸಮಾನರು ಎಂಬುದನ್ನು ಇದು ಸಾರಲು ಸಹಕಾರಿಯಾಗಿದೆ ಕೊಣ್ಣೂರು ಪಿಡಿಒ ಮಂಜುನಾಥ ಗಣಿ ಹೇಳಿದರು.
ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ವಿವಿಧ ಗ್ರಾಪಂಗಳಲ್ಲಿ ಕೂಲಿಕಾರರು ಕೆಲಸದ ಜತೆಗೆ ಮನರಂಜನೆಯಾಗಿ ದೇಸಿಯ ಆಟವಾದ ಕಬಡ್ಡಿ, ಖೋಖೋ ಸೋಬಾನೆ ಪದಗಳನ್ನು ಹಾಡುವ ಮೂಲಕ ತಾಲೂಕಿನಾದ್ಯಂತ ಗಮನ ಸೆಳೆಯುತ್ತಿದ್ದಾರೆ. ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು, ಇಂದು ನರೇಗಾ ಕಾಮಗಾರಿ ಸ್ಥಳದಲ್ಲಿ ಮರುಕಳಿಸುತ್ತಿವೆ ತಾಪಂ ಅಧಿಕಾರಿ ಎಸ್.ಕೆ.ಇನಾಮದಾರ ಹೇಳಿದರು.