ಸಾರಾಂಶ
ಕನ್ನಡಪ್ರಭ ವಾರ್ತೆ, ಬಸವನಬಾಗೇವಾಡಿ
ಪಟ್ಟಣದ ಸಮೀಪದ ಟಕ್ಕಳಕಿ ಹತ್ತಿರ ಅಂದಾಜು ₹25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೃಷ್ಣಾಭಾಗ್ಯ ಜಲ ನಿಗಮದ ಮುಳವಾಡ ಏತ ನೀರಾವರಿ ಯೋಜನೆಯ ಅಧೀಕ್ಷಕ ಅಭಿಯಂತರ ಕಚೇರಿಯ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು. ಜನವರಿ ಇಲ್ಲವೇ ಫೆಬ್ರುವರಿಯಲ್ಲಿ ಲೋಕಾರ್ಪಣೆ ಮಾಡುವ ಉದ್ದೇಶವಿದೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಸಮೀಪದ ಟಕ್ಕಳಕಿ ಹತ್ತಿರ ನಿರ್ಮಾಣವಾಗುತ್ತಿರುವ ಕೃಷ್ಣಾಭಾಗ್ಯ ಜಲ ನಿಗಮದ ನೂತನ ಕಟ್ಟಡದ ಕಾಮಗಾರಿ ಮಂಗಳವಾರ ವೀಕ್ಷಿಸಿ ಮಾತನಾಡಿದ ಅವರು, ಈ ಕಟ್ಟಡ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಬಸವನಬಾಗೇವಾಡಿಯಲ್ಲಿ ನಿರ್ಮಾಣವಾಗಿರುವ ಮೆಗಾ ಮಾರುಕಟ್ಟೆ, ಬಸವ ಭವನ, ನೂತನ ಪುರಸಭೆ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿ, ಕಟ್ಟಡಗಳನ್ನ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಬಸವನಬಾಗೇವಾಡಿ ಮತಕ್ಷೇತ್ರವು ಅಭಿವೃದ್ಧಿ ಪಥದತ್ತ ಸಾಗುವ ಮೂಲಕ ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿದೆ. ಕ್ಷೇತ್ರದ ಜನತೆಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಮುಳವಾಡ ಏತ ನೀರಾವರಿ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳನ್ನು ಜಾರಿಗಳಿಸಲಾಗಿದೆ. ಈಗಾಗಲೇ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸಂಬಂಧಿಸಿದಂತೆ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದೆ. ಈ ನೂತನ ಕಟ್ಟಡದಲ್ಲಿ ಮುಳವಾಡ ಏತ ನೀರಾವರಿ ಯೋಜನೆಯ ಅಧೀಕ್ಷಕ ಅಭಿಯಂತರ ಕಚೇರಿ, ಎರಡು ವಿಭಾಗೀಯ ಕಚೇರಿಗಳು ಹಾಗೂ ಮೂರು ಉಪ ವಿಭಾಗೀಯ ಕಚೇರಿಗಳು ಆರಂಭಗೊಂಡ ನಂತರ ಅಂದಾಜು 200 ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅವರಿಂದ ಉದ್ಘಾಟಿಸಲಾಗುವುದು ಎಂದರು.ಕೃಷ್ಣಾ ಭಾಗ್ಯ ಜಲ ನಿಗಮ ಮುಖ್ಯ ಅಭಿಯಂತರ ಎಚ್.ಎನ್. ಶ್ರೀನಿವಾಸ ಮಾತನಾಡಿ, 1 ಎಕರೆ 27 ಗುಂಟೆ ಜಾಗೆಯಲ್ಲಿ ನಿಮಾರ್ಣವಾಗುತ್ತಿರುವ ಈ ಕಚೇರಿಯು ಮುಳವಾಡ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಕಚೇರಿಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿವೆ. ಕೆಳ ಮಹಡಿ ಸೇರಿದಂತೆ ನಾಲ್ಕು ಮಹಡಿಯ ಬೃಹತ್ ಕಟ್ಟಡ ಇದಾಗಿದೆ. ಸಚಿವ ಶಿವಾನಂದ ಪಾಟೀಲ ಅವರ ನಿರ್ದೇಶನದ ಮೇರೆಗೆ ವಿಶೇಷವಾಗಿ ಕಟ್ಟಡದಲ್ಲಿ ಲಿಪ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದ್ದಾರೆ. ಅವರ ಸೂಚನೆ ಮೇರೆಗೆ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರ ಗೋವಿಂದ ರಾಠೋಡ, ಕಾರ್ಯಪಾಲಕ ಅಭಿಯಂತರ ಆರ್.ಎನ್. ಸೂಳಿಬಾವಿ, ಜಗದೀಶ ಹೊನ್ನಕಸ್ತೂರಿ, ಎನ್. ಎಸ್. ನರಸನಗೌಡರ, ಬಸವರಾಜ ದೊಡಮನಿ, ಅಂಜುಮ್ ಕೊಲ್ಹಾರ ಸೇರಿದಂತೆ ಇತರರು ಇದ್ದರು.