ರಮಣೀಯ ತಾಣ ಕಪ್ಪತ್ತಗುಡ್ಡ ಮತ್ತಷ್ಟು ಸುಂದರ

| Published : Jul 03 2025, 11:49 PM IST

ಸಾರಾಂಶ

ಈ ಬಾರಿ ಹದವಾದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಿಸರ್ಗ ರಮಣೀಯ ತಾಣ ಹಾಗೂ ದಿವ್ಯ ಔಷಧ ಸಸ್ಯಗಳ ಆಗರ ಕಪ್ಪತ್ತಗುಡ್ಡದಲ್ಲಿ ಸದ್ಯ ನಾನಾ ಬಗೆಯ ಸುವಾಸನೆ ಹೂಗಳು ಪರಿಸರ ಪ್ರಿಯರ ಕಣ್ಮನ ಸೆಳೆಯುತ್ತಿವೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಈ ಬಾರಿ ಹದವಾದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಿಸರ್ಗ ರಮಣೀಯ ತಾಣ ಹಾಗೂ ದಿವ್ಯ ಔಷಧ ಸಸ್ಯಗಳ ಆಗರ ಕಪ್ಪತ್ತಗುಡ್ಡದಲ್ಲಿ ಸದ್ಯ ನಾನಾ ಬಗೆಯ ಸುವಾಸನೆ ಹೂಗಳು ಪರಿಸರ ಪ್ರಿಯರ ಕಣ್ಮನ ಸೆಳೆಯುತ್ತಿವೆ.

ಪರಿಸರ ಪ್ರೇಮಿಗಳು ಭೇಟಿ ನೀಡಲೇಬೇಕಾದ ಕಾಲವಿದು. ಹೆಜ್ಜೆ ಹೆಜ್ಜೆಗೂ ಕೌತುಕವುಳ್ಳ ಸಸ್ಯಗಳ ಸಂಕುಲವಿದ್ದು, ಪರಿಸರದ ವಿಸ್ಮಯದ ಮಧ್ಯೆ ಸಾಗುತ್ತಾ ಹೋದಂತೆ ಸುಗಂಧಭರಿತವಾದ ಫಲಪುಷ್ಪಗಳ ಸುವಾಸನೆ ಮಂತ್ರಮುಗ್ಧರನ್ನಾಗಿಸುತ್ತದೆ.

ಪರಿಸರದಿಂದಾಗುವ ಲಾಭಗಳನ್ನು ವಿವಿಧ ಫಲಕಗಳ ಮೂಲಕ ತಿಳಿಸುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.

ಮಳೆಗಾಲದಲ್ಲಿ 10 ಸಾವಿರಕ್ಕೂ ಹೆಚ್ಚು ವಿವಿಧ ಮಾದರಿಯ ಬೀಜದುಂಡೆಗಳನ್ನು ಕಪ್ಪತ್ತಗುಡ್ಡ ವೀಕ್ಷಣೆಗೆ ಬರುವ ಪ್ರತಿ ಪ್ರವಾಸಿಗರಿಗೆ ಕೊಡುವುದರ ಮೂಲಕ ಅವರಿಂದ ಪರಿಸರ ವೃದ್ಧಿಸುವ ಅಭೂತ ಪೂರ್ವವಾದ ಕಾರ್ಯವನ್ನು ಆರ್.ಎಫ್.ಒ ಮಂಜುನಾಥ ಮೇಗಲಮನಿ ಹಾಗೂ ಸಿಬ್ಬಂದಿ ಆರಂಭಿಸಿದ್ದಾರೆ.

ಕಪ್ಪತ್ತಗುಡ್ಡದ ಪ್ರವೇಶ ಶುಲ್ಕ ಕಟ್ಟುವಾಗ ಪ್ರವಾಸಿಗರು ತಾವು ತರುವ ಪ್ಲಾಸ್ಟಿಕ್ ಬಾಟಲಿಗೆ ಅರಣ್ಯ ಇಲಾಖೆಯವರು ಪ್ರವಾಸಿಗರಿಂದ ₹30 ಮುಂಗಡ ಹಣಪಡೆದು ನಂತರ ಪ್ಲಾಸ್ಟಿಕ್ ಬಾಟಲಿಗೆ ಸ್ಟಿಕ್ಕರ್ ಅಂಟಿಸುತ್ತಾರೆ. ಪ್ರವಾಸಿಗರು ಕಪ್ಪತಗುಡ್ಡದ ವಿವಿಧ ಭಾಗದಲ್ಲಿ ಸುತ್ತಾಡಿದ ನಂತರ ವಾಪಸ್ ಬರುವಾಗ ಪ್ಲಾಸ್ಟಿಕ್ ಬಾಟಲಿ ಕಡ್ಡಾಯವಾಗಿ ತೆಗೆದುಕೊಂಡು ಬಂದು ಪ್ರವೇಶ ದ್ವಾರದಲ್ಲಿರುವ ಇಲಾಖೆಯ ಕೌಂಟರ್‌ಗೆ ನೀಡಿದರೆ ಪ್ರವಾಸಿಗರಿಗೆ ಅವರ ಮುಂಗಡ ನೀಡಿದ ಹಣ ₹ 30 ವಾಪಸ್‌ ಕೊಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಕಪ್ಪತ್ತಗುಡ್ಡ ಮಾಡುವುದಾಗಿದೆ. ಪ್ರತಿವಾರ ₹5 ಸಾವಿರದ ವರೆಗೆ ಬರುವ ಪ್ರವಾಸಿಗರಿಂದ ಸಂಗ್ರಹಿಸಿದ ಹಣ ಇಲ್ಲಿವರೆಗೆ ₹6 ಲಕ್ಷ ತಲುಪಿದೆ.

ಇಲ್ಲಿರುವ ಗಾಳಿಗುಂಡಿ ಬಸವಣ್ಣ ದೇವರ ಸನ್ನಿಧಾನಕ್ಕೆ ಹೋಗುವಾಗ ಫ್ಯಾನ್ ಅಳವಡಿಕೆಗೆ ನಿರ್ಮಿಸಿರುವ ಕಿರಿದಾದ ರಸ್ತೆ ಇರುವುದರಿಂದ ರಸ್ತೆ ಉದ್ದಕ್ಕೂ ನಿಧಾನಗತಿಯಲ್ಲಿ ಸಾಗಬೇಕಾಗುತ್ತದೆ. ಕಡಿದಾದ ಕಂದಕಗಳಲ್ಲಿ ಕಾನನ ಕೈ ಬೀಸಿ ಕರೆಯುತ್ತದೆ.

ಗುಡ್ಡ ಹತ್ತಿದ ನಂತರ ಮೊದಲು ಸಿಗುವುದು ಗಾಳಿಗುಂಡಿ ಬಸವಣ್ಣ ದೇವಾಲಯ. ಇಲ್ಲಿ ಬಹಳ ಜೋರಾಗಿ ಗಾಳಿ ಬೀಸುತ್ತದೆ. ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ನಂತರ ವಿಶ್ವದಲ್ಲೇ ಹೆಚ್ಚಿನ ವಿದ್ಯುತ್ ಉತ್ಪಾದಿಸಿ ವಿಶ್ವ ದಾಖಲೆ ಮಾಡಿರುವ ಫ್ಯಾನುಗಳು ಕಾಣಸಿಗುತ್ತದೆ. ಇಲ್ಲಿ ನಿಂತು ನೋಡುವ ಪರಿಸರ ವಿಹಂಗನೋಟ ಎಲ್ಲಿಯೂ ಕಾಣಸಿಗದು, ಸುಮಧುರ ಗಾಳಿ, ಪರಿಸರ ನಮ್ಮನ್ನು ಸೆಳೆಯುತ್ತದೆ.

ನಂದಿವೇರಿ ಮಠ:

ಹಲವು ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಮತ್ತು ಹಸಿರು ಉಳಿದರೆ ನಾಡು ಸೌಖ್ಯ ಎನ್ನುವಂತೆ ಪರಿಸರದ ಕುರಿತು ಸಾವಿರಾರು ಉಪನ್ಯಾಸಗಳನ್ನು, ಗಿಡಗಳನ್ನು ಬೆಳೆಸಿರುವ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳದ್ದಾಗಿದೆ. ಮಠದ ಮುಂದೆ ಹಾದು ಹೋಗುವ, ಎಂದೂ ಬತ್ತದ ಬಂಗಾರ ಕೊಳ್ಳದ ಮೂಲಕ ಬರುವ ಜಲಧಾರೆ ಬಹಳ ಅಭೂತಪೂರ್ವವಾದದ್ದು.

ಬಹು ವಿಧದ ಸಸ್ಯ ವನಸ್ಪತಿಗಳಾದ ಕಾಮಕಸ್ತೂರಿ, ಹೊನ್ನವರಿ, ಮಧುನಾಶಿನಿ, ಗುಲಗಂಜಿ, ಅಡವಿಸೋಗಿ, ನಕರಿ, ಬಿಕ್ಕೆಹಣ್ಣು, ಕದಂಬಸೋನ್ನಕೆ, ಕಾಡಿಗರಗ, ಮದುಗುಣಕಿ, ಶಿಖಮಾಚಿಪತ್ರಿ ಇಂತಹ ಹಲವಾರು ಔಷಧ ಸಸ್ಯಗಳನ್ನು ಒಳಗೊಂಡಿದೆ. ಅಲ್ಲದೆ ಹಲವು ಕಾಡುಪ್ರಾಣಿಗಳ ಜೀವ ಸಂಕುಲಗಳು ಇರುವುದರಿಂದಾಗಿ ವನ್ಯಪ್ರಾಣಿಗಳ ತಾಣವಾಗಿದೆ.

ನಾಡು ಕಂಡ ಅಪರೂಪದ ಸಸ್ಯ ಕಾಶಿ ಕಪ್ಪತ್ತಗುಡ್ಡ ಉಳಿದರೆ ಮಾತ್ರ ಗದಗ ಜಿಲ್ಲೆಯಲ್ಲಿ ಉತ್ತಮ ಮಳೆ ಬೆಳೆ ಜನಜೀವನ ಸುರಕ್ಷಿತವಾಗಿರಲು ಸಾಧ್ಯ ಎಂಬುದನ್ನು ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ, ಪರಿಸರ ಪ್ರೇಮಿಗಳ ಹಲವು ಲೇಖನದ ಮೂಲಕವಾಗಿ ಜಾಗೃತಿ ಮೂಡಿಸಿದ ಫಲವಾಗಿ ಕಪ್ಪತ್ತಗುಡ್ಡ ಉಳಿದಿದ್ದು, ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ.

ದೇಶ ವಿದೇಶದ ಪ್ರವಾಸಿಗರು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಕಪ್ಪತ್ತಗುಡ್ಡಕ್ಕೆ ಬರುತ್ತಿದ್ದು, ಪರಿಸರ ಪ್ರಿಯರಿಗೆ ಉಲ್ಲಾಸ ಮೂಡಿಸಿದೆ. ಪರಿಸರ ಜಾಗೃತಿ ಮೂಡಿಸಲು ವಿವಿಧ ಮಾದರಿಯ 10 ಸಾವಿರ ಬೀಜದುಂಡೆಗಳನ್ನು ಪ್ರವಾಸಿಗರಿಗೆ ನೀಡಲಾಗಿದೆ ಎಂದು ಕಪ್ಪತ್ತಗುಡ್ಡ ವಲಯ ಅರಣ್ಯ ಅಧಿಕಾರಿ ಮಂಜುನಾಥ ಮೇಗಲಮನಿ ಹೇಳಿದರು.

ಕಪ್ಪತ್ತಗುಡ್ಡ ಶುದ್ಧಹವೆಯ ತಾಣವಾಗಿದ್ದು, ಇದನ್ನು ಮತ್ತಷ್ಟು ಸಮೃದ್ಧಗೊಳಿಸಲು ಅರಣ್ಯ ಇಲಾಖೆ ಪಣತೊಟ್ಟಿರುವುದು ಪ್ರಶಂಸನೀಯ. ಪರಿಸರ ವೃದ್ಧಿಯಾದರೆ ಮಾತ್ರ ಮುಂದಿನ ಪೀಳಿಗೆಗೆ ಒಂದು ದೊಡ್ಡ ಆಮ್ಲಜನಕ ಶಕ್ತಿ ನೀಡಿದಂತಾಗುತ್ತದೆ. ಉತ್ತಮ ಮಳೆ ಬೆಳೆ ಹೊಂದಲು ಪ್ರತಿಯೊಬ್ಬರೂ ತಮ್ಮ ಜಮೀನುಗಳ ಬದುಗಳಲ್ಲಿ ಗಿಡಗಳನ್ನು ಹಚ್ಚಲು ಸಮರೋಪಾದಿಯಲ್ಲಿ ಮುಂದಾಗಬೇಕು ಎಂದು ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.