ಸಾರಾಂಶ
ಶಿಗ್ಗಾಂವಿ: ಜನಸಮುದಾಯಗಳ ಸಂವೇದನೆಗಳನ್ನು ಅನುಲಕ್ಷಿಸಿ, ಅಧ್ಯಯನಶೀಲರಾಗಿ ಕವಿಗಳು ಮತ್ತು ಕವಿ ಮನಸ್ಸುಗಳು ನೀತಿಯ ಸಾರವನ್ನು ಧಾರೆ ಎರೆದಿದ್ದಾರೆ. ಕಾವ್ಯ ನೀತಿ ಹೇಳುತ್ತದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಡಾ.ಎನ್.ಆರ್. ನಾಯಕ ದತ್ತಿ ಉಪನ್ಯಾಸ-೩ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಯಕ್ಷಗಾನ ತೆಂಕುತಿಟ್ಟು ರಂಗಸಾಧ್ಯತೆ ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾವ್ಯ ಇಟ್ಟುಕೊಂಡು ರಂಗದ ಮೇಲೆ ಪ್ರಯೋಗ ಮಾಡಲಾಗುತ್ತದೆ ಅದರ ಮೂಲ ಆಶಯ ಕಾವ್ಯವೇ ಆಗಿದೆ. ರಂಗ ಸಜ್ಜಿಕೆ ಎಂದರೆ ಅದೊಂದು ಪ್ರಯೋಗ ಶಾಲೆ ಅದನ್ನು ಎಲ್ಲರಿಗೂ ಅರ್ಥವಾಗುವಂತೆ ನೀತಿ ಪ್ರಧಾನವಾದ ರೂಪದಲ್ಲಿ ವಿವರಿಸಲಾಗಿದೆ. ಬಣ್ಣದ ಮನೆ ಅನುಕರಣಾಶೀಲಾವಾದ ರೀತಿ ಮತ್ತು ರಿವಾಜುಗಳಿಂದ ಕೂಡಿದ ವಿಷಯ ಮಂಡಿಸಿದ್ದಾರೆ ಎಂದರು.
ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ತಾಳ್ತಜೆ ವಸಂತಕುಮಾರ ಅವರು ''''''''ಯಕ್ಷಗಾನ ತೆಂಕುತಿಟ್ಟು ರಂಗಸಾಧ್ಯತೆ'''''''' ಕುರಿತು ಮಾತನಾಡಿ, ರಂಗದ ಮುಂದಿನ ಕಥಾ ಭಾಗಕ್ಕೆ ಹೋಗುವುದಕ್ಕೆ ರಂಗದ ಮೇಲೆ ಅಭಿನೀತವಾಗುವಂತ ನಿಟ್ಟಿನಲ್ಲಿ ಕಾವ್ಯ ಪ್ರಯೋಗವಾಗುತ್ತದೆ. ಯಕ್ಷ ಅನ್ನುವಂತದ್ದು ಸಂಗೀತಕ್ಕೆ ಸಂಬಂಧಿಸಿದ್ದು, ಮೌಖಿಕ ಸಂಪ್ರದಾಯದಿಂದ ಬಂದದ್ದು ಅದು ಅನೇಕ ಜನಪದ ಕಲಾ ಪ್ರಕಾರಗಳಲ್ಲಿ ಮುಂದುವರೆದಿದೆ ಎಂದರು.ಕರಾವಳಿ ಯಕ್ಷಗಾನ ಭೌಗೋಳಿಕವಾಗಿ ಮೂರು ಭಾಗವಾಗಿ ನೋಡುತ್ತೇವೆ ಬಡ-ಬಡಗುತಿಟ್ಟು, ಬಡಗು, ತೆಂಕುತಿಟ್ಟು ಇದೊಂದು ಸಮಷ್ಟಿ ಕಲೆಯಾಗಿದೆ. ಬಣ್ಣದ ಮನೆ ಚೌಕಿ, ವೇಷಗಳ ಕುಣಿತ, ಪ್ರವೇಶ, ನಿರ್ಗಮನ ಇವೆಲ್ಲ ಆಚರಣೆಯು ಸಭಾಲಕ್ಷಣದ ಪ್ರಮುಖ ಅಂಶವಾಗಿದೆ ಎಂದರು.
ಜಾನಪದ ವಿದ್ವಾಂಸರಾದ ಡಾ.ಎನ್.ಆರ್. ನಾಯಕ ಅವರು ಮಾತನಾಡಿ, ಗ್ರಾಮದೇವತೆಯ ಹಬ್ಬದ ಸಂದರ್ಭದ ಮನರಂಜನೆಗಾಗಿ ಈ ಯಕ್ಷಗಾನ ಜನಪದ ಕಲೆ ಬಳಕೆಗೆ ಬಂತು, ಬಾದುಬ್ಬೆ ಪರ್ವ ಅಂದರೆ ಬನದ ಅಬ್ಬೆ, ಕಾಳಿಕಾಂಬೆ ಹಬ್ಬದ ಆಚರಣೆಗೆ ಇದು ಹುಟ್ಟಿಕೊಂಡಿದೆ. ಇಂದಿಗೂ ಅದರ ಮೂಲ ಸ್ವರೂಪವನ್ನು ಕಾಣಬಹುದಾಗಿದೆ. ಆಧುನಿಕತೆಯಲ್ಲಿ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆಳೆದುಕೊಂಡಿದೆ ಎಂದರು.ಜಾನಪದ ವಿದ್ವಾಂಸರಾದ ಡಾ. ಶಾಂತಿ ನಾಯಕ ಅವರು ಮಾತನಾಡಿದರು. ಕುಲಸಚಿವರಾದ ಪ್ರೊ. ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಜಾನಪದದ ಬೇರೆ ಬೇರೆ ಪ್ರಕಾರಗಳನ್ನು ವಿದ್ಯಾರ್ಥಿಗಳ ಮಧ್ಯದಲ್ಲಿ ವಿಭಿನ್ನ ರೀತಿಯ ವಿಷಯಾಧಾರಿತವಾಗಿ ಚರ್ಚೆಗಳಾಗುತ್ತಿರುವುದು ಖುಷಿ ವಿಚಾರ. ಬೇರೆ ವಿಶ್ವವಿದ್ಯಾಲಯಗಳಿಗಿಂತಲೂ ಇಲ್ಲಿ ಸಾಕಷ್ಟು ಅವಕಾಶಗಳಿವೆ ಎನ್ನುವುದಕ್ಕೆ ಇವುಗಳು ಉದಾಹರಣೆಯಾಗಿವೆ ಎಂದರು.
ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಎಂ. ಸಾಲಿ ಅವರು ಮಾತನಾಡಿದರು. ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ್ ಉಪಸ್ಥಿತರಿದ್ದರು.ಸಹಾಯಕ ಕುಲಸಚಿವರಾದ ಶಹಜಹಾನ್ ಮುದಕವಿ ಕಾರ್ಯಕ್ರಮ ನಿರೂಪಿಸಿದರು. ಡಾ.ಎನ್.ಆರ್. ನಾಯಕ ದತ್ತಿ ಉಪನ್ಯಾಸ-೩ ಸಂಚಾಲಕರಾದ ಡಾ. ಬಸವರಾಜ ಸಿ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕ ಡಾ.ವಿಜಯಲಕ್ಷ್ಮೀ ಗೇಟಿಯವರ ವಿಶೇಷ ಉಪನ್ಯಾಸಕರನ್ನು ಪರಿಚಯಿಸಿದರು. ಕಿರಿಯ ಸಹಾಯಕ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಅಭಿಲಾಷ ಹೆಚ್.ಕೆ. ವಂದಿಸಿದರು.