ಸಾರಾಂಶ
ದಾಬಸ್‍ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯ ದನಗಳ ಜಾತ್ರೆ ನಾಲ್ಕೈದು ವರ್ಷಗಳ ಹಿಂದೆ ಕಣ್ಣಾಯಿಸಿದಷ್ಟೂ ದನಗಳೇ ಕಾಣುತ್ತಿತ್ತು. ಓಡಾಡಲೂ ಜಾಗವಿಲ್ಲದೆ ಕಿಷ್ಕಿಂದೆಯಂತಿದ್ದ ದನಗಳ ಜಾತ್ರೆ ಈ ಬಾರಿ ಮೂರೇ ದಿನಕ್ಕೆ ಕಳೆಗುಂದಿದೆ.
ರೈತರ ಬಳಿ ರಾಸುಗಳಿಲ್ಲ:ಡಿಸೆಂಬರ್ ತಿಂಗಳ ಕೊನೆ ವಾರದಲ್ಲಿ ಆರಂಭಗೊಂಡು ಒಂದು ವಾರ ನಡೆಯುತ್ತಿದ್ದ ಶಿವಗಂಗೆಯ ಗಂಗಾಧರೇಶ್ವರ ಸ್ವಾಮಿ ದನಗಳ ಜಾತ್ರೆಯಲ್ಲಿ ರೈತರು ರಾಸುಗಳನ್ನು ಜಾತ್ರೆ ಕರೆತರುತ್ತಿದ್ದರು. ರಾಸುಗಳ ಖರೀದಿಯೂ ಭರ್ಜರಿಯಾಗಿಯೇ ನಡೆಯುತ್ತಿತ್ತು. ದನಗಳ ಜಾತ್ರೆಯೆಂದರೆ ರೈತರಲ್ಲಿ ಉಲ್ಲಾಸ, ಉತ್ಸಾಹವಿತ್ತು. ರಾಸುಗಳನ್ನು ಜಾತ್ರೆಯಲ್ಲಿ ಉತ್ತಮ ದರಕ್ಕೆ ಮಾರುವ ಸಲುವಾಗಿ ವರ್ಷದಿಂದಲೇ ಚೆನ್ನಾಗಿ ಮೇಯಿಸಿ ತಯಾರುಗೊಳಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಅತಿದೊಡ್ಡ ದನಗಳ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಜಾತ್ರೆಯಲ್ಲಿ ದನಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ರೈತರ ಬಳಿ ರಾಸುಗಳಿಲ್ಲ ಎಂಬ ಮಾತು ಕೂಡ ರೈತರಿಂದಲೇ ಕೇಳಿಬರುತ್ತಿದೆ.
ರಾಸುಗಳ ಸಂಖ್ಯೆ ಕ್ಷೀಣ:ದನಗಳ ಜಾತ್ರೆಯಲ್ಲಿ ರಾಮನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಧುಗಿರಿ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಹಳ್ಳಿಕಾರ್, ನಾಟಿ, ಸೀಮೆ ರಾಸುಗಳು ಬರುತ್ತಿದ್ದವು. ಪ್ರತಿ ವರ್ಷವೂ ಜಾತ್ರೆ ನೋಡಲು ಸುತ್ತಮುತ್ತಲಿನ ಸಾವಿರಾರು ರೈತರು ಆಗಮಿಸುತ್ತಿದ್ದರು. ಕಳೆದ ವರ್ಷ ಸಾವಿರಕ್ಕೂ ಹೆಚ್ಚು ಎತ್ತುಗಳು ಬಂದಿದ್ದವು. ಆದರೆ ಈ ಬಾರಿ ನೂರು ಎತ್ತುಗಳೂ ಬಂದಿಲ್ಲವೆಂದರೆ ರೈತರು ಕೃಷಿಯಿಂದ ವಿಮುಖರಾಗುತ್ತಿರುವರೇ ಎಂಬ ಆತಂಕ ಮೂಡುತ್ತಿದೆ.
ಬಡವರ ಕೃಷಿಗೆ ಎತ್ತುಗಳೇ ಆಧಾರ:ನಾಗರಿಕತೆ ಹೆಚ್ಚಾದಂತೆ ಅವಿಭಕ್ತ ಕುಟುಂಬಗಳು ಒಡೆದು, ಜಮೀನು ವಿಭಜನೆಗೊಂಡು ವ್ಯವಸಾಯ ಮಾಡುವುದು ಕಡಿಮೆಯಾಗುತ್ತಿದೆ. ಉಳಿದ ರೈತರು ನೀರಿಲ್ಲದೆ, ಹೊಟ್ಟೆ ಪೊರೆಯಲು ನಗರಪಟ್ಟಣಗಳತ್ತ ವಲಸೆ ಹೋಗುತ್ತಿರುವುದು ಗೊತ್ತಿರುವ ವಿಷಯ. ಕೃಷಿಯೇ ಮಾಡದ ಮೇಲೆ ದನಗಳು ಬೆಳೆಸುವವವರು ಯಾರು? ಇನ್ನು ದೊಡ್ಡ ಮಟ್ಟದಲ್ಲಿ ಕೃಷಿ ಮಾಡುವವರು, ಮಧ್ಯಮ ಕೃಷಿಕರು ಸಹ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಉಳಿದವರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವುದು ಎತ್ತುಗಳ ಸಂಖ್ಯೆ ಕಡಿಮೆಯಾಗಲು ಕಾರಣವೆನ್ನಬಹುದು.
ಕೋಟ್ ................ಗ್ರಾಮೀಣ ಪ್ರದೇಶಗಳಿಗೆ ಕೈಗಾರಿಕೆಗಳು ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಕಣ್ಮರೆಯಾಗುತ್ತಿವೆ. ಜಾನುವಾರು ಸಾಕು ರೈತರು ವಾಣಿಜ್ಯೋದ್ಯಮದತ್ತ ಚಿತ್ತ ಹರಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಎತ್ತುಗಳಿಂದ ಉಳುವುದಕ್ಕಿಂತ ಟ್ರ್ಯಾಕ್ಟರ್‌ಗಳನ್ನು ಬಳಸುತ್ತಿದ್ದಾರೆ. ಆರ್ಥಿಕ ಸುಧಾರಣೆಗೆ ಹೈನುಗಾರಿಕೆಯಲ್ಲಿ ತೊಡಗಿ, ದನಗಳನ್ನು ಸಾಕುವುದು ಕಡಿಮೆಯಾಗಿ ಜಾತ್ರೆಗಳು ಕ್ಷೀಣಿಸುತ್ತಿವೆ. ಹೀಗೆ ಆದರೆ ಮುಂದಿನ ಪೀಳಿಗೆಯವರಿಗೆ ಜಾನುವಾರುಗಳನ್ನು ಪೋಟೋಗಳಲ್ಲಿ ತೋರಬೇಕಿದೆ.
-ಗಂಗಾಧರ್, ಸ್ಥಳೀಯ ರೈತ ಮುಖಂಡಕೋಟ್.............
ಪ್ರತಿ ವರ್ಷದಂತೆ ಈ ವರ್ಷವೂ ಶಿವಗಂಗೆ ದನಗಳ ಜಾತ್ರೆ ಡಿಸೆಂಬರ್ ಕೊನೆಯ ವಾರದಲ್ಲಿ ಆರಂಭವಾಗಿದೆ. ಎತ್ತುಗಳ ಮಾರಾಟ ಮಾಡಲು ಜಾತ್ರೆಗೆ ಆಗಮಿಸಿದ್ದೆವು. ಆದರೆ ಈ ಬಾರಿ ಜಾತ್ರೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ದನಗಳು ಸೇರಿವೆ. ಕೊಳ್ಳುಲು, ಮಾರಲು ಎತ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ತುಂಬಾ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿವೆ. ಜಾತ್ರೆಯಲ್ಲಿ ಎತ್ತುಗಳ ವ್ಯಾಪಾರ ವ್ಯವಹಾರ ಇಲ್ಲದೆ ಮೂರೇ ದಿನಕ್ಕೆ ಮನೆಗೆ ಹೋಗುತ್ತಿದ್ದೇವೆ.-ನಾರಾಯಣಸ್ವಾಮಿ, ರೈತ, ಗೆಜ್ಜೆಗದಪಾಳ್ಯ, ದೊಡ್ಡಬಳ್ಳಾಪುರ
ಪೋಟೋ 7 :ಶಿವಗಂಗೆಯ ದನಗಳ ಜಾತ್ರೆಗೆ ಆಗಮಿಸಿರುವ ದನಗಳು.
ಪೋಟೋ 8 :ಶಿವಗಂಗೆಯ ದನಗಳ ಜಾತ್ರೆ ಮೈದಾನ ಖಾಲಿಖಾಲಿ.