ವಾಡಿಕೆಗೂ ಮೀರಿ ಸುರಿದ ಮಳೆಯಿಂದ ಬಿತ್ತನೆಗೆ ಅಡ್ಡಿ

| Published : May 24 2024, 12:54 AM IST

ಸಾರಾಂಶ

ಚಿಕ್ಕಮಗಳೂರು, ಈ ಬಾರಿಯ ಹಿಂಗಾರು ಮಳೆ ಹಾಗೂ ರೈತರ ನಡುವೆ ಜೂಟಾಟ ನಡೆಯುತ್ತಿದೆ. ಬಾ ಅಂದ್ರೆ, ಬರಲಿಲ್ಲಾ, ಈಗ ಸಾಕು ಎನ್ನುತ್ತಿದ್ದರೂ ನಿಲ್ಲುತ್ತಿಲ್ಲ, ಅಂದರೆ, ಕಳೆದ ಒಂದು ವಾರದಿಂದ ಪ್ರತಿದಿನ ಬರುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಒಂದೆಡೆ ಮಳೆ ಬಂದಿರುವುದರಿಂದ ರೈತರು ಖುಷಿ ಯಾಗಿದ್ದರೆ, ಬಿತ್ತನೆ, ಗೊಬ್ಬರ ಹಾಕುವ ಕೆಲಸ ಹಾಗೂ ಹಸನು ಮಾಡಿರುವ ಹೋಲದಲ್ಲಿ ಬಿತ್ತನೆಗೂ ಮುನ್ನ ಬೆಳೆದು ನಿಂತಿರುವ ಕಳೆ ತೆಗೆಯಲು ಆಗುತ್ತಿಲ್ಲ. ಪ್ರತಿ ದಿನ ಮಧ್ಯಾಹ್ನ ಆರಂಭವಾಗುವ ಮಳೆ ರಾತ್ರಿಯವರೆಗೆ ಕೆಲವೆಡೆ ಬರುತ್ತಲೇ ಇದೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಈ ಬಾರಿಯ ಹಿಂಗಾರು ಮಳೆ ಹಾಗೂ ರೈತರ ನಡುವೆ ಜೂಟಾಟ ನಡೆಯುತ್ತಿದೆ.ಬಾ ಅಂದ್ರೆ, ಬರಲಿಲ್ಲಾ, ಈಗ ಸಾಕು ಎನ್ನುತ್ತಿದ್ದರೂ ನಿಲ್ಲುತ್ತಿಲ್ಲ, ಅಂದರೆ, ಕಳೆದ ಒಂದು ವಾರದಿಂದ ಪ್ರತಿದಿನ ಬರುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಒಂದೆಡೆ ಮಳೆ ಬಂದಿರುವುದರಿಂದ ರೈತರು ಖುಷಿ ಯಾಗಿದ್ದರೆ, ಬಿತ್ತನೆ, ಗೊಬ್ಬರ ಹಾಕುವ ಕೆಲಸ ಹಾಗೂ ಹಸನು ಮಾಡಿರುವ ಹೋಲದಲ್ಲಿ ಬಿತ್ತನೆಗೂ ಮುನ್ನ ಬೆಳೆದು ನಿಂತಿರುವ ಕಳೆ ತೆಗೆಯಲು ಆಗುತ್ತಿಲ್ಲ. ಪ್ರತಿ ದಿನ ಮಧ್ಯಾಹ್ನ ಆರಂಭವಾಗುವ ಮಳೆ ರಾತ್ರಿಯವರೆಗೆ ಕೆಲವೆಡೆ ಬರುತ್ತಲೇ ಇದೆ.

ಆರಂಭದಲ್ಲಿ ಹಿನ್ನಡೆ:

ಮಾರ್ಚ್‌ ಕೊನೆಯಲ್ಲಿ ಅಥವಾ ಏಪ್ರಿಲ್‌ ತಿಂಗಳಲ್ಲಿ ಮಳೆ ಬಂದರೆ ಮುಂಗಾರಿನ ಬಿತ್ತನೆಗೆ ರೈತರು ಸಿದ್ಧತೆ ಮಾಡಿ ಕೊಳ್ಳುತ್ತಾರೆ. ಅದಕ್ಕೂ ಮುನ್ನ ಎಣ್ಣೆ ಕಾಳು ಬಿತ್ತನೆ ಮಾಡಿ ಒಂದಿಷ್ಟು ಹಣಕಾಸಿನ ತೊಂದರೆ ಸರಿದೂಗಿಸಿಕೊಳ್ಳುತ್ತಾರೆ. ಆದರೆ, ಈ ಬಾರಿ ಮಾರ್ಚ್‌ ಕೊನೆಯಲ್ಲಿ ಮಲೆನಾಡಿನ ಕೆಲವೆಡೆ ಮಳೆ ಬಂದಿತ್ತು. ಎನ್‌.ಆರ್‌.ಪುರ, ಕೊಪ್ಪ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲವೆಡೆ ವಾಡಿಕೆ ಮಳೆ ಬಂದಿತು.ಆದರೆ, ಮಳೆ ಆಶ್ರಿತ ಬೆಳೆಯನ್ನು ಬೆಳೆಯುವ ಅಜ್ಜಂಪುರ, ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಅಂಬಳೆ, ಲಕ್ಯಾ ಹೋಬಳಿಯಲ್ಲಿ ಮಳೆ ಕೈಕೊಟ್ಟಿತ್ತು. ಅದ್ದರಿಂದ ರೈತರು ಹೊಲ ಹಸನು ಮಾಡುವ ಕೆಲಸಕ್ಕೆ ಕೈ ಹಾಕ ಲಿಲ್ಲ, ಮೇ ಮಾಹೆ ಆರಂಭದಿಂದ ಈವರೆಗೆ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ದಾಖಲೆ ಮಳೆಯಾಗಿದೆ. ನೀರಿನ ಕೊರತೆ ಎದುರಿಸುತ್ತಿರುವ ಕಡೂರು, ಅಜ್ಜಂಪುರ ತಾಲೂಕಿನ ಕೆಲವೆಡೆ ಮಲೆನಾಡಿಗಿಂತಲೂ ಹೆಚ್ಚು ಮಳೆ ಬರುತ್ತಿದೆ. ವರುಣನ ಅರ್ಭಟ ಜೋರಿದ್ದು ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿರುವುದು ದಾಖಲಾಗಿದೆ.

ಪೂರ್ವ ಮುಂಗಾರು:

ಜಿಲ್ಲೆಯಲ್ಲಿ ಪೂರ್ವ ಮುಂಗಾರಿನ ಬಿತ್ತನೆಯ ಗುರಿ 10,350 ಹೆಕ್ಟೇರ್‌, ಆದರೆ, ಈವರೆಗೆ 2,213 ಹೆಕ್ಟೇರ್‌ನಲ್ಲಿ ಬಿತ್ತನೆ ಯಾಗಿದೆ. ಸಕಾಲದಲ್ಲಿ ಮಳೆ ಬರದೆ ಇದ್ದರಿಂದ ಉದ್ದು ಬಿತ್ತನೆಯಲ್ಲಿ ಹಿನ್ನಡೆಯಾಗಿದೆ. ಅಂದರೆ, ಈ ವರ್ಷದ ಬಿತ್ತನೆಯ ಗುರಿ 800 ಹೆಕ್ಟೇರ್‌, ಬಿತ್ತನೆಯಾಗಿರುವುದು 76 ಹೆಕ್ಟೇರ್‌ ಮಾತ್ರ, ಹೆಸರು ಬಿತ್ತನೆಯ ಗುರಿ 1900 ಹೆಕ್ಟೇರ್‌, ಪ್ರಗತಿ 480 ಹೆಕ್ಟೇರ್‌, ಎಳ್ಳು ಬಿತ್ತನೆಯ ಗುರಿ 2700 ಹೆಕ್ಟೇರ್‌, ಬಿತ್ತನೆಯಾಗಿರುವುದು 314 ಹೆಕ್ಟೇರ್‌ ಬಿತ್ತನೆಯಾಗಿದೆ. ಎಳ್ಳು ನಿರೀಕ್ಷಿತ ಮಟ್ಟದಲ್ಲಿ ಗುರಿ ಮುಟ್ಟಲು ಈ ಬಾರಿ ಆಗುವುದಿಲ್ಲ ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಬಿತ್ತನೆ ಬೀಜದ ಬೇಡಿಕೆ 1028.12 ಕ್ವಿಂಟಾಲ್‌, ಈಗ ದಾಸ್ತಾನು ಇರುವುದು 968.35 ಕ್ವಿಂಟಾಲ್‌, ಈವರೆಗೆ 691.73 ಕ್ಟಿಂಟಾಲ್‌ ಹಂಚಿಕೆ, ಇನ್ನು 276.62 ಕ್ವಿಂಟಾಲ್‌ ದಾಸ್ತಾನು ಇದೆ. ಸದ್ಯ ತೊಗರಿ, ಹೈಬ್ರಿಡ್‌ ಜೋಳ, ಹರಳು, ಕಬ್ಬು ಬಿತ್ತನೆ ಯಾಗುತ್ತಿದೆ. ಸದ್ಯಇದೀಗ ಬಿತ್ತನೆ ಕಾರ್ಯ ಆರಂಭವಾಗಿದ್ದರಿಂದ ರಸಗೊಬ್ಬರ ಖರೀದಿಯೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ, ಜಿಲ್ಲೆಯಲ್ಲಿ 53250 ಮೆಟ್ರಿಕ್‌ ಟನ್ ರಸಗೊಬ್ಬರ ದಾಸ್ತಾನು ಇದ್ದು, ಈವರೆಗೆ 13068 ಮೆಟ್ರಿಕ್‌ ಟನ್‌ ಮಾರಾಟವಾಗಿದೆ. ಮಳೆ ಬಿಡುವು ನೀಡದೆ ಹೋದರೆ, ಬಿತ್ತನೆ ಕಾರ್ಯದಲ್ಲಿ ಹಿನ್ನೆಡೆಯಾಗುವ ಜತೆಗೆ ನೆಲದಲ್ಲಿ ಮೊಳಕೆಯಾಗಿ ಸಸಿಯಾಗುವ ಎಳೆ ಗಿಡಗಳಿಗೆ ಶೀತದಿಂದ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಒಟ್ಟಾರೆ, ರೈತರೊಂದಿಗೆ ಮಳೆ ಜೂಟಾಟ ಆಡುತ್ತಿದೆ.

--

ಕಡಹಿನಬೈಲು ಗ್ರಾಮದಲ್ಲಿ ಮಳೆಯಿಂದ ಸೇತುವೆ ಕುಸಿತ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿಗೆ ಸೇರಿದ ಕಡಹಿನಬೈಲು ಗ್ರಾಮದ ಶೆಟ್ಟಿಕೊಪ್ಪದ ಜನತಾ ಕಾಲೋನಿ- ಚನಮಣಿ ಸಂಪರ್ಕ ರಸ್ತೆಯಲ್ಲಿ ಬರುವ ಸೇತುವೆಯೊಂದು ಕಳೆದ 3 ದಿನದ ಹಿಂದೆ ಸುರಿದ ಬಾರೀ ಮಳೆಗೆ ಕುಸಿದಿದೆ.

ಶೆಟ್ಟಿಕೊಪ್ಪದ ಜನತಾ ಕಾಲೋನಿ-ಚನಮಣಿಯ 3 ಕಿ.ಮೀ.ದೂರದ ಸಂಪರ್ಕ ರಸ್ತೆಯಲ್ಲಿ ಮಾರ್ಗ ಮದ್ಯೆ ಬರುವ ಭೀಮನರಿ ಹಳ್ಳಕ್ಕೆ ಕಿರಿದಾದ ಸೇತುವೆ ನಿರ್ಮಿಸಲಾಗಿದೆ. ಕಳೆದ 3 ದಿನಗಳ ಹಿಂದೆ ಭಾರೀ ಮಳೆಗೆ ಹಳ್ಳದ ನೀರು ದೊಡ್ಡದಾಗಿ ಸೇತುವೆ ಒಂದು ಭಾಗದ ರಿವಿಂಟ್ಮೆಂಟ್ ಕುಸಿದಿದೆ. ಇದರಿಂದ ಸೇತುವೆಗೂ ಹಾನಿಯಾಗಿದೆ. ಸಂಬಂಧ ಪಟ್ಟವರು ತಕ್ಷಣ ಈ ಸೇತುವೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಚನಮಣಿ, ಭೀಮನರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮೋರಿ ಕುಸಿತ: ಕಡಹಿನಬೈಲು ಗ್ರಾಮದ ವ್ಯಾಪ್ತಿಯಲ್ಲೇ ಬರುವ ನರಸಿಂಹರಾಜಪುರ-ಶಿವಮೊಗ್ಗ ಮುಖ್ಯರಸ್ತೆಯಿಂದ ದೊಡ್ಡಿ ಹಟ್ಟಿ- ಭದ್ರಾ ಕಾಲೋನಿ ಸಂಪರ್ಕ ರಸ್ತೆಗೆ ಕಳೆದ 1 ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಯವರು ಟಾರು ರಸ್ತೆ ನಿರ್ಮಿಸಿದ್ದರು. ಈ ರಸ್ತೆ ಮಾರ್ಗದಲ್ಲಿ ಬರುವ ದೊಡ್ಡಿ ಹಟ್ಟಿ ಸಮೀಪ 2 ಮೋರಿ ನಿರ್ಮಿಸಲಾಗಿದ್ದು ಭಾರೀ ಮಳೆಗೆ ಮೋರಿಗಳ ಒಂದು ಭಾಗದ ಮಣ್ಣು ತೊಳೆದುಕೊಂಡು ಹೋಗಿದೆ.ಮೋರಿ ಪಕ್ಕದಲ್ಲಿ ಕಲ್ಲಿನಿಂದ ರಿವಿಟ್ ಮೆಂಟ್ ಕಟ್ಟಿ ದುರಸ್ತಿ ಮಾಡಿಸಬೇಕಾಗಿದೆ. ಇಲ್ಲದಿದ್ದರೆ ಈ ವರ್ಷ ಮಳೆಗಾಲದಲ್ಲಿ ಮೋರಿ ಪೂರ್ತಿ ಕಿತ್ತು ಹೋಗಲಿದೆ ಎನ್ನುತ್ತಾರೆ ಆ ಭಾಗದ ಗ್ರಾಮಸ್ಥರು.

ಮುಂದೆ ಇದೇ ಟಾರು ರಸ್ತೆಯ ಪಕ್ಕದಲ್ಲಿ ಕೆರೆಯೊಂದು ಇದ್ದು ರಸ್ತೆಯ ಒಂದು ಭಾಗಕ್ಕೆ ಕೆರೆಗೆ ಕುಸಿದಿದೆ. ಮುಂದೆ ಮಳೆ ಗಾಲದಲ್ಲಿ ರಸ್ತೆ ಇನ್ನಷ್ಟು ಕೆರೆಯ ಭಾಗಕ್ಕೆ ಕುಸಿಯವ ಸಂಭವ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಇಂಜಿನಿಯರ್, ಗುತ್ತಿಗೆದಾರರು ಈ ರಸ್ತೆಯಲ್ಲಿ ಬರುವ ಮೋರಿ ಹಾಗೂ ಕೆರೆಯ ಪಕ್ಕದ ರಸ್ತೆಯನ್ನು ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ದುರಸ್ತಿ ಮಾಡಿಸಿಕೊಡಬೇಕು ಎಂದು ದೊಡ್ಡಿ ಹಟ್ಟಿ ಹಾಗೂ ಭದ್ರಾ ಕಾಲೋನಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

--

ತರೀಕೆರೆಯಲ್ಲಿ ಮುುಂದುವರಿದೆ ಮಳೆ ಅಬ್ಬರ

ಕನ್ನಡಪ್ರಭ ವಾರ್ತೆ, ತರೀಕೆರೆಎರಡು ದಿನಗಳ ಬಿಡುವು ನೀಡಿದ್ದ ಮಳೆ ಪಟ್ಟಣ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಗುರುವಾರ ಬಿರುಸಿನ ಮಳೆ ಸುರಿದಿದೆ.

ಗುರುವಾರ ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಇದ್ದರೂ ಬೇಸಿಗೆಯ ದಗೆ ಮಾತ್ರ ಕಡಿಮೆಯಾಗಿರಲಿಲ್ಲ.ಸಾಯಂಕಾಲ ದಟ್ಟ ಮೋಡ ಕವಿದು 6 ಗಂಟೆಗೆ ಪ್ರಾರಂಭವಾದ ಮಳೆ 6. 30ರ ಸಮಯದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಬಿರುಸಿನ ಮಳೆ ಸುರಿದಿದೆ. ದಟ್ಟ ಮಳೆಯಿಂದಾಗಿ ರಸ್ತೆ ಚರಂಡಿಗಳಲ್ಲಿ ಯಥೇಚ್ಚವಾಗಿ ನೀರು ತುಂಬಿ ಹರಿಯಿತು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಗಣಪತಿ ಪೆಂಡಾಲ್ ಬಳಿ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಪ್ರಕಾಶಮಾನವಾದ ಹೆಡ್ ಲೈಟ್. ಗಳನ್ನು ಹಾಕಿಕೊಂಡು ನಿಧಾನ ಗತಿಯಲ್ಲಿ ವಾಹನಗಳು ಸಂಚರಿಸಿತು.ಕೃತಜ್ಞತೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಣಪತಿ ಪೆಂಡಾಲಿನ ಮುಂಭಾಗದಲ್ಲಿ ಈ ಮುಂಚೆ ಧಟ್ಟ ಮಳೆ ಬಂದಾಗ ರಸ್ತೆ ಬದಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಸಂಗ್ರಹವಾದ ಮಳೆ ನೀರು ಸಂಚಾರ ವ್ಯವಸ್ಥೆ, ಪಾದಚಾರಿಗಳಿಗೆ ಹಾಗೂ ರಸ್ತೆ ಪಕ್ಕದ ಅಂಗಡಿಗಳಿಗೆ ನೀರು ನುಗ್ಗಿ ಉಂಟಾಗುತ್ತಿದ್ದ ಅನಾನುಕೂಲವನ್ನು ಗಮನಿಸಿದ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಅತಿ ಶೀಘ್ರದಲ್ಲಿ ತುರ್ತು ಕ್ರಮ ಕೈಗೊಂಡು ಎರಡು ವರೆ ಅಡಿ ಅಗಲ ವ್ಯಾಸದ ಸುಮಾರು ನೂರು ಅಡಿ ಉದ್ದದ ದೊಡ್ಡ ಪೈಪ್‌ಗಳನ್ನು ಅಳವಡಿಸಿದ್ದರಿಂದ ಇದೀಗ ಮಳೆ ನೀರು ರಸ್ತೆಯಲ್ಲಿ ನಿಲ್ಲದೆ ಸರಾಗವಾಗಿ ಪೈಪಿನ ಮೂಲಕ ಹರಿದುಹೋಗುತ್ತಿದೆ. ಸಾರ್ವಜನಿಕರು ಪುರಸಭೆ ಮುಖ್ಯಾದಿಕಾರಿ ಎಚ್.ಪ್ರಶಾಂತ್ ಮತ್ತು ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದ್ದಾರೆ ಎಂದು ಕಲ್ಯಾಣ್ ಕುಮಾರ್ ನವಲೆ ತಿಳಿಸಿದ್ದಾರೆ.

23ಕೆಟಿಆರ್.ಕೆ.10ಃ ತರೀಕೆರೆಯಲ್ಲಿ ದಟ್ಟ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಹೊಳೆಯಂತಾಗಿರುವುದು

23ಕೆಟಿಆರ್.ಕೆ.11ಃ ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕದಲ್ಲಿ ಪುರಸಭೆ ಸುಮಾರು ನೂರು ಅಡಿ ಉದ್ದದ ದೊಡ್ಡ ಪೈಪು ಅಳವಡಿಸಿರುವುದರಿಂದ ಇದೀಗ ನೀರು ಸರಾಗವಾಗಿ ಹರಿದುಹೋಗುತ್ತಿರುವುದು.