ಆಧುನಿಕ ಕೃಷಿ ಯಂತ್ರಗಳಿಗಿಂತ ಗತಕಾಲದ ಒಕ್ಕಣೆ ಯಂತ್ರದ ಗಮ್ಮತ್ತೇ ಬೇರೆ...!

| Published : Feb 08 2024, 01:32 AM IST

ಆಧುನಿಕ ಕೃಷಿ ಯಂತ್ರಗಳಿಗಿಂತ ಗತಕಾಲದ ಒಕ್ಕಣೆ ಯಂತ್ರದ ಗಮ್ಮತ್ತೇ ಬೇರೆ...!
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕತೆ ಬೆಳೆದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಕಾಲಿರಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಯಂತ್ರಗಳ ಬಳಕೆ ಸಾಮಾನ್ಯವಾಗಿದೆ. ಇದರ ಜೊತೆಗೆ ರಸ್ತೆಗಳಲ್ಲಿ ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಒಕ್ಕಣೆ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೂ ತೊಂದರೆ ಮಾಡುತ್ತಿದ್ದಾರೆ. ಇದರಿಂದ ಗತಕಾಲದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದ ವಸ್ತುಗಳು ನೇಪಥ್ಯಕ್ಕೆ ಸರಿಸುತ್ತಿವೆ.

ಎಚ್.ಎನ್.ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ರೈತರು ಬೆಳೆದ ರಾಗಿ, ಭತ್ತ, ಹುರುಳಿ, ಜೋಳ ಮತ್ತು ಇತರೆ ಧಾನ್ಯಗಳ ಒಕ್ಕಣೆಗಾಗಿ ಪ್ರಸ್ತುತ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದೆ. ಆದರೆ, ಗತಕಾಲದಲ್ಲಿ ಬಳಕೆ ಮಾಡುತ್ತಿದ್ದ ಕಲ್ಲು ಬಂಡಿ ಯಂತ್ರ (ರೊಣಗಲ್ಲು)ವೇ ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾಗಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.

ಆಧುನಿಕತೆ ಬೆಳೆದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಕಾಲಿರಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಯಂತ್ರಗಳ ಬಳಕೆ ಸಾಮಾನ್ಯವಾಗಿದೆ. ಇದರ ಜೊತೆಗೆ ರಸ್ತೆಗಳಲ್ಲಿ ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಒಕ್ಕಣೆ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೂ ತೊಂದರೆ ಮಾಡುತ್ತಿದ್ದಾರೆ. ಇದರಿಂದ ಗತಕಾಲದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದ ವಸ್ತುಗಳು ನೇಪಥ್ಯಕ್ಕೆ ಸರಿಸುತ್ತಿವೆ.

ಪ್ರಸ್ತುತ ರೈತರು ವ್ಯವಸಾಯ ಪದ್ಧತಿ ಬದಲಿಸಿಕೊಂಡಿದ್ದಾರೆ. ಪ್ರತಿಯೊಂದು ಕಾಯಕಕ್ಕೂ ಯಂತ್ರಗಳ ಸಹಾಯ ಪಡೆದು ಗತಕಾಲದಲ್ಲಿ ಪೂರ್ವಿಕರು ಕೃಷಿಯಲ್ಲಿ ಅಳವಡಿಸಿಕೊಂಡಿದ್ದ ವ್ಯವಸಾಯ ಪದ್ಧತಿ ಮಾಯವಾಗುತ್ತಿದೆ.

ಈ ಹಿಂದೆ ರೈತರು ಜಮೀನಿನಲ್ಲಿ ತಾವು ಬೆಳೆದ ಬೆಳೆಗಳನ್ನು ಒಕ್ಕಣೆ ಮಾಡಲು ಜೋಡಿ ಎತ್ತುಗಳಿಗೆ ನೋಗವನ್ನು ಹಾಕಿ ಅದಕ್ಕೆ ರೊಣಗಲ್ಲನ್ನು ಕಟ್ಟಿ (ಕಲ್ಲು ಬಂಡಿ) ಸಮತಟ್ಟಾದ ಕಣದಲ್ಲಿ ಹಾಕಿ ಭತ್ತ, ರಾಗಿ, ಜೋಳ, ಹುರುಳಿ ಕಾಳುಗಳನ್ನು ಬೇರ್ಪಡಿಸುವ ದೃಶ್ಯ ನೋಡಲು ತುಂಬ ವಿಶಿಷ್ಟವಾಗಿತ್ತು.

ಈ ರೀತಿ ಕಣದಲ್ಲಿ ಒಕ್ಕಣೆ ಮಾಡಿದ ಆಹಾರಧಾನ್ಯಗಳು ಬಹಳ ಕಾಲ ಹಾಳಾಗದೆ ಉಳಿಯುತ್ತಿದ್ದವು. ಇಂತಹ ಕಾಳುಗಳಿಂದ ಅಡುಗೆ ಮಾಡಿದ ರುಚಿಕರವಾದ ಆಹಾರ ತಯಾರಿಸಿ ಮನುಷ್ಯರು ಸೇವಿಸಿ ನೂರಾರು ವರ್ಷಗಳ ಉತ್ತಮ ಆರೋಗ್ಯವನ್ನು ಹೊಂದುತ್ತಿದ್ದರು.

ರೈತರ ಮನೆಯಲ್ಲಿ ಅಡುಗೆ ಮಾಡಿ ಊಟ ಸೇವಿಸಿದ ನಮ್ಮ ಹಿರಿಯರು ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಆರೋಗ್ಯಪೂರ್ಣ ಹಾಗು ಶತಾಯುಶಿಗಳಾಗಿದ್ದರು ಎಂದರೆ ತಪ್ಪಾಗಲಾರದು.

ನಮ್ಮ ತಾತ ಮುತ್ತತಾಂದಿರ ಕಾಲದಿಂದಲೂ ತಾವು ಬೆಳೆದ ಫಸಲುಗಳನ್ನು ತಮ್ಮ ಜಮೀನುಗಳಲ್ಲಿ ಒಕ್ಕಣೆ ಮಾಡುವುದಕ್ಕಾಗಿ ಕಣವನ್ನು ನಿರ್ಮಿಸಿ ಕಲ್ಲು, ಮಣ್ಣು ಬರಬಾರದು ಎಂದು ಸಗಣಿ ಇಂದ ಕಣವನ್ನು ಸಾರಿಸಿ ಅದಕ್ಕೆ ಪೂಜೆ ಸಲ್ಲಿಸಿ ಒಕ್ಕಣೆ ಮಾಡಿದ ನಂತರ ತಮ್ಮ ದವಸ, ಧಾನ್ಯಗಳನ್ನು ರಾಶಿ ಮಾಡುತ್ತಿದ್ದರು.

ಇದರಿಂದ ಭತ್ತ, ರಾಗಿ, ಜೋಳ , ಹುರುಳಿ ಕಾಳುಗಳಲ್ಲಿ ಯಾವುದೇ ತರಹದ ಕಲ್ಲು. ಮಣ್ಣು ಸೇರುತ್ತಿರಲಿಲ್ಲ. ಹಿರಿಯರು ಸಾಕು ಪ್ರಾಣಿಗಳ ಗೊಬ್ಬರವನ್ನು ತಮ್ಮ ಕೃಷಿ ಜಮೀನುಗಳಿಗೆ ಹಾಕಿ ಫಲವತ್ತಾದ ಫಸಲುಗಳನ್ನು ಬೆಳೆಯುತ್ತಿದ್ದರು. ಅದರಲ್ಲಿ ಪೌಷ್ಠಿಕಾಂಶ ಯುಕ್ತ ಆಹಾರ ನಮಗೆ ಸಿಗುತ್ತಿತ್ತು.

ಪ್ರಸ್ತುತ ಕೃಷಿ ಚಟುವಟಿಕೆಗಳಿಗೆ ರೈತರು ರಾಸಾಯನಿಕ ಗೊಬ್ಬರ, ಔಷಧಿ ಸಿಂಪಡಣೆ ಬಳಕೆ ಹೆಚ್ಚಾಗಿದೆ. ಇದರಿಂದ ಬೆಳೆದ ಆಹಾರ ತಿನ್ನುವ ನಮಗೆ ಹಲವು ರೋಗಗಳು ಬರುತ್ತಿವೆ. ರಸ್ತೆಗಳಲ್ಲಿ ರಾಗಿ, ಭತ್ತ, ಇತರೆ ಬೆಳೆಗಳನ್ನು ಹಾಕಿ ಒಕ್ಕಣೆ ಮಾಡುವ ದೃಶ್ಯ ಕಂಡು ಬರುತ್ತಿದೆ. ಇದರಿಂದ ವಾಹನಗಳ ಅಪಘಾತ ಸಂಭವಿಸಿ, ಸಂಚಾರಕ್ಕೂ ತೊಂದರೆಯಾಗಿ ಸಾವು, ನೋವುಗಳಿಗೂ ಕಾರಣವಾಗುತ್ತಿದೆ.

ಇದಕ್ಕೆ ಕಡಿವಾಣ ಹಾಕಿ ಈ ಹಿಂದೆ ರೈತರು ಮಾಡುತ್ತಿದ್ದ ಬೆಳೆಗಳ ಒಕ್ಕಣೆಯನ್ನು ತಮ್ಮ ಹೊಲಗದ್ದೆಗಳಲ್ಲಿ ಮಾಡಿದರೆ ತುಂಬಾ ಒಳ್ಳೆಯದು ಎಂಬುದು ಹಿರಿಯರ ಅಭಿಪ್ರಾಯವಾಗಿದೆ.

ಪೂರ್ವಿಕರು ರಾಸುಗಳ ಸಹಾಯದಿಂದ ಬೆಳೆಗಳನ್ನು ಒಕ್ಕಣೆ ಮಾಡುತ್ತಿದ್ದರು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತಿತ್ತು. ಇಂದು ಒಂದೇ ದಿನದಲ್ಲಿ ಯಂತ್ರಗಳ ಸಹಾಯದಿಂದ ಎಲ್ಲಾ ಕೆಲಸಗಳು ಮುಗಿದು ಹೋಗುತ್ತವೆ. ನಾನು ಕೂಡ ಪೂರ್ವಿಕರು ಮಾಡುತ್ತಿದ್ದ ಒಕ್ಕಣೆ ಪದ್ಧತಿಯನ್ನು ಮಾಡಲು ಪ್ರಯತ್ನಿಸುತ್ತೇನೆ.

- ಮಹಾದೇವ ಪ್ರಭು, ಪಿ.ಜಿ. ಪಾಳ್ಯ

ಹೆದ್ದಾರಿಗಳು, ಮುಖ್ಯ ರಸ್ತೆಗಳಲ್ಲಿ ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಒಕ್ಕಣೆ ಮಾಡುವುದರಿಂದ ವಾಹನಗಳ ಅಪಘಾತವಾಗುವ ಸಾಧ್ಯತೆ ಇದೆ. ಸುಗಮ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ. ಆದ್ದರಿಂದ ರೈತರು ತಮ್ಮ ಜಮೀನುಗಳ ಬಳಿ ಬೆಳಗಳ ಒಕ್ಕಣೆ ಮಾಡುವುದು ಸೂಕ್ತ.

- ರಾಜೇಶ್ , ಗ್ರಾಪಂ ಸದಸ್ಯ, ಗೊಲ್ಲರಹಳ್ಳಿಪೂರ್ವಿಕರ ಹಿಂದಿನ ಕಾಲದ ಒಕ್ಕಣೆ ಪದ್ಧತಿಯನ್ನು ಇಂದು ಯಾರು ಅನುಸರಿಸಿ ಶ್ರಮ ವಹಿಸಿ ಮಾಡುವುದಿಲ್ಲ. ಇಂದು ಬೆಳೆಗಳನ್ನು ಒಕ್ಕಣೆ ಮಾಡಲು ಸಾಕಷ್ಟು ಯಂತ್ರಗಳು ಬಂದಿವೆ. ಇದನ್ನು ಬಳಕೆ ಮಾಡಬೇಕು. ಅದು ಬಿಟ್ಟು ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. -ನಾಗರಾಜು, ರೈತರು, ತೊರೆಕಾಡನಹಳ್ಳಿ