ಮಲೆನಾಡ ಹೆಬ್ಬಾಗಿಲು ತರೀಕೆರೆಯಲ್ಲಿ ಕಂಡರಿಯದ ಬಿಸಿಲಿನ ತಾಪ

| Published : Apr 29 2024, 01:33 AM IST / Updated: Apr 29 2024, 07:55 AM IST

ಮಲೆನಾಡ ಹೆಬ್ಬಾಗಿಲು ತರೀಕೆರೆಯಲ್ಲಿ ಕಂಡರಿಯದ ಬಿಸಿಲಿನ ತಾಪ
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡು ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುತ್ತಿದ್ದ ತರೀಕೆರೆ ಪಟ್ಟಣದಲ್ಲಿ ಹಿಂದೆಂದೂ ಕಾಣದಷ್ಟು ಮತ್ತು ಈ ಭಾಗದ ಜನರು ಅನುಭವಿಸದಷ್ಟು ಬೇಸಿಗೆ ಬಿಸಿಲಿನ ಧಗೆ, ನೆತ್ತಿ ಸುಡುವಷ್ಟು ತಾಪದಿಂದ ಜನ ಹೈರಾಣಾಗಿದ್ದಾರೆ.

  ತರೀಕೆರೆ :  ಮಲೆನಾಡು ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುತ್ತಿದ್ದ ತರೀಕೆರೆ ಪಟ್ಟಣದಲ್ಲಿ ಹಿಂದೆಂದೂ ಕಾಣದಷ್ಟು ಮತ್ತು ಈ ಭಾಗದ ಜನರು ಅನುಭವಿಸದಷ್ಟು ಬೇಸಿಗೆ ಬಿಸಿಲಿನ ಧಗೆ, ನೆತ್ತಿ ಸುಡುವಷ್ಟು ತಾಪದಿಂದ ಜನ ಹೈರಾಣಾಗಿದ್ದಾರೆ. 

ವಿಪರೀತ ಬಿಸಿಲಿಗೆ, ಅತಿ ಹೆಚ್ಚು ಉಷ್ಣಾಂಶಕ್ಕೆ ತರೀಕೆರೆ ಪಟ್ಟಣವನ್ನು ಉದಾಹರಿಸಬಹುದಾದಷ್ಟು ಉಷ್ಣಾಂಶ ತರೀಕೆರೆ ಪಟ್ಟಣದಲ್ಲಿದೆ. ಯಾವ ದಿಕ್ಕಿನ ಕಡೆಗೆ ತಿರುಗಿದರೂ ಗಾಳಿಯೇ ಇಲ್ಲದಂತೆ ಭಾಸವಾಗುತ್ತದೆ. ನೆರಳನ್ನು ಹುಡುಕಿಕೊಂಡು ಹೋಗಬೇಕು, ಬಿಸಿಯಾದ ರಸ್ತೆ, ಕಾದು ಕಬ್ಬಿಣವಾದ ಮನೆಗಳು, ಎಷ್ಟು ದೊಡ್ಡ ರಟ್ಟೆಯ ಫ್ಯಾನ್ .ಗಳನ್ನು ಹಾಕಿದರೂ ಆ ಫ್ಯಾನ್.ನಿಂದ ಬಿಸಿ ಗಾಳಿಯೇ ಹೊರತು ತಂಪಾದ ಗಾಳಿ ಖಂಡಿತ ಸುಳಿಯುತ್ತಿಲ್ಲ, ಪದೇ ಪದೇ ನೀರು ಕುಡಿದರೂ ಬಾಯಾರಿಕೆ, ನೀರಿನ ದಾಹ ಮಾತ್ರ ತಣಿಯುವುದಿಲ್ಲ. ಶರಬತ್ತು ತಂಪಾದ ಪಾನೀಯ, ವಿದ್ಯುತ್ ಕೂಲರ್ ಇತ್ಯಾದಿಗಳನ್ನು ಈ ಬಿಸಿಲಿನ ತಾಪ, ಹೆಚ್ಚಿದ ಉಷ್ಣಾಂಶ ಅಣಕಿಸುವಂತಿದೆ.ಮನೆಯಿಂದ ಹೊರಬಾರದ ಜನರುಃ

ಪ್ರತಿದಿನ ಬೆಳಿಗ್ಗೆ ಏಳು ಗಂಟೆಯಿಂದಲೇ ತನ್ನ ನಿತ್ಯದ ಬದುಕಿನಂತೆ ಶುರುವಾಗುವ ಬಿಸಿಲಿನ ಝಳವನ್ನು ತಾಳಲಾರದೆ ಜನ ಮನೆಯಿಂದಲೇ ಹೊರಗೆ ಬರುತ್ತಿಲ್ಲ. ಬಿಸಿಲಿನ ಧಗೆಯಿಂದ ನೆರಳಿನ ಆಶ್ರಯ ಪಡೆಯಲು ನೆಪ ಮಾತ್ರಕ್ಕೆ ಕೊಡೆ ಹಿಡಿಯಬೇಕು ಅಷ್ಠೆ, ಇನ್ನೂ ಬೆಳಗಿನ ಬಿಸಿಲಿಗೆ ಕೊಡೆಯೇ ಬೆಂಕಿ ಕೆಂಡದಂತೆ ಕಾಯುತ್ತದೆ. ಕೊಡೆಯಿಂದ ಬರುವ ನೆರಳಿನ ಮೇಲೂ ಬಿಸಿಲಿನ ಧಗೆ ಪರಿಣಾಮ ಬೀರದೆ ಇರುವುದಿಲ್ಲ. 

ಹಾಗಾಗಿ ಮನೆಯಿಂದ ಅನಿವಾರ್ಯ ಕೆಲಸ ಕಾರ್ಯಗಳಿಗೆ ಹೊರಗಡೆ ಬರಬೇಕೆಂದರೆ ತುಂಬಾ ಕಷ್ಟ. ಪಟ್ಟಣದಲ್ಲಿ ಆ ಪಾಟಿ ಸೂರ್ಯನ ಪ್ರಕರತೆ ಕಂಗೆಡಿಸಿದೆ. ನಿತ್ಯ ಸ್ನಾನ ಮಾಡಲು ಹಂಡೆ ನೀರನ್ನು ಕಾಯಿಸುವುದೇ ಬೇಡ, ಮನೆ ಅಥವಾ ಟೆರೇಸ್ ಮೇಲಿರುವ ನೀರಿನ ಟ್ಯಾಂಕ್ ಹೆಚ್ಚಿದ ಬಿಸಿಲಿನಿಂದಾಗಿ ಮಳ ಮಳ ಕಾದಿರುತ್ತದೆ. ಅದನ್ನು ಹದ ಮಾಡಿಕೊಳ್ಳಲು ತಣ್ಣೀರನ್ನು ಹುಡುಕಬೇಕಾಗಿದೆ ಅಂತಹ ಪರಿಸ್ಥಿತಿ ತರೀಕೆರೆಯಲ್ಲಿದೆ.

ಬಿಸಿಲಿನ ಬೇಗೆ ತಡೆಯಲಾರದೆ ಜನರು ಎಳನೀರು, ತಂಪಾದ ಪಾನೀಯ, ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ಬಾಳೆ ಹಣ್ಣು ಇತ್ಯಾದಿ ವಿವಿಧ ಹಣ್ಣುಗಳ ಮೊರೆ ಹೋಗಿದ್ದಾರೆ. ಇನ್ನೂ ಬೆಳಿಗಿನ ಹತ್ತು ಗಂಟೆ ಸಮಯಕ್ಕೆ ರಸ್ತೆಗಳೆಲ್ಲಾ ಜನ , ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುತ್ತವೆ. ಟಾರ್ ರಸ್ತೆಯಂತೂ ಕಾದ ರಸ್ತೆಯಾಗಿ ಬಿಸಿಗಾಳಿ ಹೊರಹೊಮ್ಮುತ್ತವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಜಾನುವಾರುಗಳು, ಪ್ರಾಣಿ ಪಕ್ಷಿಗಳ ಪಾಡಂತೂ ಭಗವಂತನಿಗೇ ಬಿಟ್ಟಿದ್ದು, ಚಿಲಿ ಪಿಲಿ ಸದ್ದು ಮಾಡುತ್ತಾ ಹಾರಾಡುವ ಒಂದೇ ಒಂದು ಪಕ್ಷಿಯೂ ಕಂಡು ಬರುತ್ತಿಲ್ಲ, ಅಷ್ಟು ತೀವ್ರ ಬಿಸಿಲು ತರೀಕೆರೆಯಲ್ಲಿದೆ. ಹೀಗಾಗಿ ತಮ್ಮ ಮನೆ ಟೆರೇಸ್ ಮೇಲೆ ಪ್ರಾಣಿ ಪಕ್ಷಿಗಳಿಗಾಗಿ ಕುಡಿಯಲು ನೀರು ಮತ್ತು ಜಾನುವಾರುಗಳಿಗಾಗಿ ಬಾಳೆಹಣ್ಣು ಇತ್ಯಾದಿ ಆಹಾರ ಸಂಗ್ರಹಿಸಿಡುತ್ತಿದ್ದಾರೆ.

ಅಂತರ್ಜಲ ಕುಸಿತಃ

ಈದಿನ ಸಂಜೆ ಮಳೆ ಬರಬಹುದು, ಇಲ್ಲವೇ ನಾಳೆ ಖಂಡಿತ ಮಳೆ ಬರಬಹುದು ಎಂದು ನಿರೀಕ್ಷೆ ಇಟ್ಟುಕೊಂಡು ಕಾದಿದ್ದೇ ಆಯಿತೇ ಹೊರತು ಬಿಸಿಲಿನ ತಾಪಮಾನ ಪರಿಣಾಮಕಾರಿಯಾಗಿ ತಗ್ಗಿಸುವಂತಹ ಮಳೆ ಈ ಭಾಗದಲ್ಲಿ ಈವರೆವಿಗೂ ಬಂದಿಲ್ಲ ಎಂದು ಹೇಳಬೇಹುದು.

ಮಳೆ ಬಾರದೆ ತರೀಕೆರೆ ಮತ್ತು ಸುತ್ತಮುತ್ತಲಿನ ಭೂಪ್ರದೇಶದ ಅಂತರ್ಜಲ ಗಣನೀಯವಾಗಿ ಕುಸಿದಿದೆ, ಆಳವಾಗಿ ಭೂಮಿ ಕೊರೆದರೂ ನೀರಿನ ಸುಳಿವೇ ಕಾಣುತ್ತಿಲ್ಲ, ಇದೆ ವಾಸ್ತವ್ಯ ಕೂಡ, ತರೀಕೆರೆ ಪ್ರದೇಶದ ಭೂ ಭಾಗದ ಅಂತರ್ಜಲ ಅಷ್ಟರ ಮಟ್ಟಿಗೆ ಕುಸಿದುಹೋಗಿದೆ, ಕಷ್ಟಪಟ್ಟು ಕೊರೆಸಿದ ಬೋರ್ ವೆಲ್.ಗಳಲ್ಲಿ ಅದೃಷ್ಟವಶಾತ್ ನೀರು ಕಂಡು ಬಂದರೂ ಅದು ಕೆಲವೇ ವಾರಗಳಷ್ಟೇ ನಂತರ ಅದು ನಿಂತು ಹೋಗುವ ಸಂದರ್ಭಗಳೂ ಇಲ್ಲದಿಲ್ಲ.

 ತರೀಕೆರೆ ಪಟ್ಟಣದಲ್ಲಿ ಒಂದೆರಡು ಬಾರಿ ತುಸು ಸಾಧಾರಣ ಮಳೆ ಬಂದಿದ್ದರೂ, ಈ ಮಳೆ ಬಿರು ಬೇಸಿಗೆಯ ತೀವ್ರ ತಾಪಮಾನ ತಡೆಯುವಷ್ಟು ತಂಪಾದ ವಾತಾವರಣ ತಂದು ಕೊಟ್ಟಿಲ್ಲ. ಮಳೆ ನಿಂತ ಮರುದಿನದ ಬಿಸಿಲಿನ ಶಾಖ, ಧಗೆ ಮತ್ತು ಉಷ್ಣಾಂಶ ನೂರು ಪಟ್ಟು ಹೆಚ್ಚಾಗಿಯೇ ಇರುತ್ತದೆ.ನಿರಂತರವಾಗಿ ಮಳೆಗಾಲ ಪ್ರಾರಂಭವಾದರೆ ಮಾತ್ರ ಕೆರೆ ಕಟ್ಟೆಗಳಿಗೆ ನೀರಾಗುತ್ತದೆ. ಭೂಮಿ ಹಸಿರಾಗಿ ಅಂತರ್ಜಲ ವೃದ್ದಿ ಯಾಗುತ್ತದೆ. ಆಗ ಮಾತ್ರ ಬೇಸಿಗೆ ತೀವ್ರ ಉಷ್ಣಾಂಶಕ್ಕೆ ಹೆಚ್ಚುತ್ತಿರುವ ತಾಪಮಾನಕ್ಕೆ ಉತ್ತರ ದೊರಕಬಹುದು.28ಕೆಟಿಆರ್.ಕೆ.5ಃ

ತರೀಕೆರೆಯಲ್ಲಿ ಬಿಸಿಲಿನ ತಾಪಮಾನ ಮತ್ತು ಉಷ್ಣಾಶ ಹೆಚ್ಚಾಗಿದ್ದು ಹಣ್ಣು ತಂಪಾದ ಪಾನೀಯಗಳಿಗೆ ಹೆಚ್ಚಿನ ಬೇಡಿಕೆ ಇದೆ.