ಜಿಲ್ಲೆಯಲ್ಲಿ ಒಟ್ಟು ೧೫,೩೭,೮೮೮ ಮತದಾರರು

| Published : Mar 21 2025, 12:35 AM IST

ಸಾರಾಂಶ

ಮತದಾರರ ಪಟ್ಟಿ, ಮತಗಟ್ಟೆ, ಚುನಾವಣೆಗಳು ಹಾಗೂ ಚುನಾವಣಾ ಕಾನೂನುಗಳ ಕುರಿತು ಯಾವುದೇ ದೂರು, ಆಕ್ಷೇಪಣೆ ಹಾಗೂ ಸಲಹೆಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸತ್ಯಭಾಮ ಸಿ. ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಮತದಾರರ ಪಟ್ಟಿ, ಮತಗಟ್ಟೆ, ಚುನಾವಣೆಗಳು ಹಾಗೂ ಚುನಾವಣಾ ಕಾನೂನುಗಳ ಕುರಿತು ಯಾವುದೇ ದೂರು, ಆಕ್ಷೇಪಣೆ ಹಾಗೂ ಸಲಹೆಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸತ್ಯಭಾಮ ಸಿ. ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ವಿಚಾರದಲ್ಲಿಯೂ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾವುದೇ ದೂರುಗಳು, ಸಲಹೆ ಸೂಚನೆಗಳು ನೀಡಿದಲ್ಲಿ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದರಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟ್ ಗಳನ್ನು ನಿಯೋಜಿಸುವಂತೆ ತಿಳಿಸಿದರು.

ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ. ಬೂತ್ ಮಟ್ಟದ ಅಧಿಕಾರಿಗಳ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ವಿಧಾನಸಭಾ, ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆಗಳನ್ನು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಕೈಬಿಡುವುದು ಮತ್ತು ತಿದ್ದುಪಡಿ, ವರ್ಗಾವಣೆ ಕುರಿತು ಚಾಲ್ತಿಯಲ್ಲಿರುವ ಪ್ರಜಾ ಪ್ರತಿನಿಧಿ ಕಾಯ್ದೆ ೧೯೫೦, ಪ್ರಜಾ ಪ್ರತಿನಿಧಿ ಕಾಯ್ದೆ ೧೯೫೧, ಮತದಾರರ ನೋಂದಣಿ ನಿಯಮಗಳು ೧೯೬೦, ಚುನಾವಣೆಗಳನ್ನು ನಡೆಸುವ ನಿಯಮಗಳು ೧೯೬೧ ಮತ್ತು ಮತದಾರರ ಪಟ್ಟಿಯ ಕೈಪಿಡಿಯನ್ವಯ ಮಾಡಲಾಗುವುದು ಎಂದು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತಿಳಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ಹಾಗೂ ಪ್ರತಿ ವರ್ಷ ಅಕ್ಟೋಬರ್- ಡಿಸೆಂಬರ್ ಮಾಹೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲಾಗುವುದು. ನಿರಂತರ ಪರಿಷ್ಕರಣೆ ಅವಧಿಯಲ್ಲಿ ಮನೆ- ಮನೆ ಸಮೀಕ್ಷೆಯನ್ನು ಸಹ ನಡೆಸಲಾಗುವುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಒಟ್ಟು ೧೫,೩೭,೮೮೮ ಮತದಾರರು:

ಮತದಾರರ ಪಟ್ಟಿ ಪರಿಷ್ಕರಣೆಯನ್ನು ೧ನೇ ಜನವರಿ, ೧ನೇ ಏಪ್ರಿಲ್, ೧ನೇ ಜುಲೈ ಮತ್ತು ೧ನೇ ಅಕ್ಟೋಬರ್ ಹೀಗೆ ೪ ಅರ್ಹತಾ ದಿನಾಂಕವಾಗಿಟ್ಟುಕೊಂಡು ನಡೆಸಲಾಗುವುದು ಎಂದು ತಿಳಿಸಲಾಯಿತು. ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ: ೦೬/೦೧/೨೦೨೫ ರಂದು ಪ್ರಕಟಿಸಲಾಗಿದೆ, ಅಂತಿಮ ಮತದಾರರ ಪಟ್ಟಿಯಂತೆ ಪುರುಷರು ೭,೬೩,೬೭೬ ಹಾಗೂ ಮಹಿಳೆಯರು ೭,೭೪,೧೭೫ ಮತ್ತು ಇತರರು ೩೭ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧೫,೩೭,೮೮೮ ಈ ಕೆಳಕಂಡಂತೆ ಮತದಾರರಿದ್ದಾರೆ ಎಂದರು.

ಪ್ರಸ್ತುತ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನಮೂನೆ-೬ರಲ್ಲಿ, ಮರಣ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ಕೈಬಿಡಲು ನಮೂನೆ-೭ರಲ್ಲಿ, ಮತದಾರರ ಗುರುತಿನ ಚೀಟಿಯಲ್ಲಿ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿಗಾಗಿ, ಹೆಸರು ವರ್ಗಾವಣೆಗಾಗಿ ನಮೂನೆ-೮ರಲ್ಲಿ, ಅನಿವಾಸಿ ಭಾರತೀಯರು ಮತದಾರರು ಪಟ್ಟಿಗೆ ಹೆಸರು ಸೇರಿಸಲು ನಮೂನೆ-೬ಎ ರಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ನಮೂನೆ-೬, ೬ಎ, ೭ ಮತ್ತು ೮ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆ್ಯಪ್ (ಗಿಔಖಿಇಖ ಊಇಐPಐIಓಇ ಂಠಿಠಿ)ಅನ್ನು ಬಳಸಬಹುದು.

ಆಯೋಗವು ಪ್ರತಿ ೮೦೦ ರಿಂದ ೧೨೦೦ ಮತದಾರರಿಗೆ ಪ್ರತ್ಯೇಕ ಮತಗಟ್ಟೆಯನ್ನು ಸ್ಥಾಪಿಸುವುದು, ಮತದಾರರು ವಾಸಿಸುವ ಸ್ಥಳದಿಂದ ಮತಗಟ್ಟೆ ತಲುಪಲು ಗರಿಷ್ಠ ೨ ಕಿಮೀ ಮೀರದಂತೆ ಇರುಬೇಕು ಎಂಬುದಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ೧೯೬೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ. ಸ್ಥಾಪಿಸಲಾಗಿರುವ ಎಲ್ಲಾ ಮತಗಟ್ಟೆಗಳಲ್ಲಿ ಕನಿಷ್ಠವಾಗಿ ನೀಡಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿರುತ್ತದೆ.

ನಗರ ಪ್ರದೇಶದಲ್ಲಿ ಹೆಚ್ಚಿನ ಜನ ಸಂದಣಿಯಾಗದೇ ಗುಂಪು ಮತಗಟ್ಟೆಗಳನ್ನು ವಿಂಗಡಿಸಲಾಗಿದ್ದು, ಮತದಾನ ಪ್ರಕ್ರಿಯೆಗೆ ತೊಂದರೆಯಾಗದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು, ಮುಂಜಾಗ್ರತಾ ಕ್ರಮಗಳ ಕೈಗೊಳ್ಳಲಾಗುವುದು ಎಂದರು.

ಮತದಾರರ ಪಟ್ಟಿಯನ್ನು ನಮೂದುಗಳ ಕುರಿತು ಮತದಾರರ ನೋಂದಣಾಧಿಕಾರಿಗಳ ಆದೇಶದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಪ್ರಜಾ ಪ್ರತಿನಿಧಿ ಕಾಯ್ದೆ ೧೯೫೦ ರ ಸೆಕ್ಷನ್ ೨೪(ಚಿ) ರಂತೆ ಮೊದಲನೇ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ.

ಸಭೆಯಲ್ಲಿ ಚುನಾವಣೆ ತಹಸೀಲ್ದಾರ್ ಪಿ.ಎಸ್ ಕುಂಬಾರ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.