ನಾಳೆ ವದ್ದಿಕೆರೆ ಸಿದ್ದೇಶ್ವರ ಬ್ರಹ್ಮರಥೋತ್ಸವ

| Published : Apr 21 2024, 02:18 AM IST

ಸಾರಾಂಶ

ತಾಲೂಕಿನ ಐತಿಹಾಸಿಕ ದೇವಾಲಯ ವದ್ಧಿಕೆರೆ ಗ್ರಾಮದ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಏಪ್ರಿಲ್‌19ರಿಂದ ಶುರುವಾಗಿದ್ದು, ಏ.24ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು ಏಪ್ರಿಲ್ 22ರಂದು ಬ್ರಹ್ಮ ರಥೋತ್ಸವ ಜರುಗಲಿದೆ.

ಹಿರಿಯೂರು: ತಾಲೂಕಿನ ಐತಿಹಾಸಿಕ ದೇವಾಲಯ ವದ್ಧಿಕೆರೆ ಗ್ರಾಮದ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಏಪ್ರಿಲ್‌19ರಿಂದ ಶುರುವಾಗಿದ್ದು, ಏ.24ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು ಏಪ್ರಿಲ್ 22ರಂದು ಬ್ರಹ್ಮ ರಥೋತ್ಸವ ಜರುಗಲಿದೆ.

ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕಂಕಣಧಾರಣೆಯಾಗಿದ್ದು, 20ರ ಶನಿವಾರ ಅಗ್ನಿಕುಂಡ, 21ರಂದು ರಾತ್ರಿ 8 ಗಂಟೆಗೆ ಚಿಕ್ಕ ರಥೋತ್ಸವ ಕಾರ್ಯ ಜರುಗಲಿದೆ. ಏ 22 ರಂದು ಮಧ್ಯಾಹ್ನ 3.30ಕ್ಕೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಕಲಾವಿದರಿಂದ ವೈವಿಧ್ಯಮಯ ಮೆರವಣಿಗೆ ನಡೆಯ ಲಿದೆ. ಅದೇ ದಿನ ಸಂಜೆ 4.30 ಕ್ಕೆ ಬ್ರಹ್ಮ ರಥೋತ್ಸವ ಜರುಗಲಿದೆ. ಏ.23 ರಂದು ಉಂಡೆ, ಮಂಡೆ, ಸಿದ್ಧಭುಕ್ತಿ ಕಾರ್ಯ ಹಾಗೂ ಏ.24 ರಂದು ಕಿರುಬಾನ, ವಸಂತೋತ್ಸವ ಮತ್ತು ಸಂಜೆ 6 ಕ್ಕೆ ಕಂಕಣ ವಿಸರ್ಜನೆ ಕಾರ್ಯ ನಡೆಯಲಿದೆ.

ವದ್ದಿಕೆರೆ ಕಾಲಭೈರವೇಶ್ವರಸ್ವಾಮಿ ದೇವಸ್ಥಾನವನ್ನು 7ನೇ ಶತಮಾನದಲ್ಲಿ ನೊಳಂಬ ರಾಜರು ಆಳ್ವಿಕೆ ಕಾಲದಲ್ಲಿ ವದ್ದೀಕೆರೆ ಸಿದ್ದೇಶ್ವರಸ್ವಾಮಿ ದೇವಸ್ಥಾನವನ್ನು ಜೋಳರ ಶೈಲಿಯಲ್ಲಿ ನಿರ್ಮಿಸಲಾಗಿದೆ. ವದ್ದೀಕೆರೆ, ಸೊಂಡೇಕೊಳ ಮತ್ತು ಪಗಡಲಬಂಡೆ ಗ್ರಾಮ ಸೇರಿದಂತೆ ಒಟ್ಟು ಮೂರು ಗ್ರಾಮಗಳಲ್ಲಿ ಮುತ್ತಿನ ವ್ಯಾಪಾರಿ ವೈಶ್ಯ ಜಾತಿಗೆ ಸೇರಿದ ದಾನಿ ಈ ದೇವಸ್ಥಾನ ನಿರ್ಮಾಣ ಮಾಡಿದ್ದಾರೆಂದು ಜನಪದರ ಬಾಯಿಂದ ಧೃಡಪಟ್ಟಿದೆ.

ಇತಿಹಾಸ ಪ್ರಸಿದ್ಧ ಶ್ರೀಸಿದ್ದೇಶ್ವರಸ್ವಾಮಿ ಜಾತ್ರೆಯು ಪ್ರತಿವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಜಾತ್ರೆ ಸಂದರ್ಭದಲ್ಲಿ ಸೇರಿದಂತೆ ವಾರದ ಪೂಜೆಗೆ ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಪಕ್ಕದ ಆಂದ್ರ ಮತ್ತಿತರ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸಿದ್ದೇಶ್ವರಸ್ವಾಮಿ ದೇವಸ್ಥಾನದ ಸಮೀಪ ಮಜ್ಜನ ಬಾವಿ ಇದ್ದು ಬ್ರಹ್ಮ ರಥೋತ್ಸವದ ದಿನ ಸಂಪೂರ್ಣ ಭರ್ತಿಯಾಗಿರುತ್ತದೆ. ರಥೋತ್ಸವದ ಮರು ದಿನ ಮಜ್ಜನ ಬಾವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಿದ್ದಬುಕ್ತಿ ಮಾಡಿದ ನಂತರ ಮಜ್ಜನ ಬಾವಿ ಸಂಪೂರ್ಣ ಖಾಲಿಯಾಗುತ್ತದೆ. ಇದೊಂದು ಬಹುದೊಡ್ಡ ಪವಾಡವಾಗಿ ಉಳಿದಿದೆ.

ಸಿದ್ದೇಶ್ವರನ ಹಿನ್ನೆಲೆ; ‘ವದ್ದೀಕೆರೆ’ನಿಷ್ಪತ್ತಿ:

ಸಿದ್ದಪ್ಪನ ಕುರಿತು ಹಲವಾರು ಜನಪದ ಕತೆಗಳು ಈ ಭಾಗದ ಹಳ್ಳಿಗರ ಬಾಯಲ್ಲಿ ನಲಿದಾಡುತ್ತಿವೆ. ಹೇಮಾವತಿಯ ಹೆಂಜಾರಪ್ಪನ ತಮ್ಮ ಸಿದ್ದಪ್ಪ ವದ್ದೀಕೆರೆಯ ಬಳಿ ಬಂದಾಗ ಬಾಯಾರಿಕೆಯಾಗಿ ತ್ರಿಶೂಲದಿಂದ ನೆಲಕ್ಕೆ ತಿವಿದಾಗ ನೀರು ಚಿಮ್ಮಿತಂತೆ. ನಂತರ ಇಡೀ ವರ್ಷ ಈ ಬಾವಿಯಲ್ಲಿ ನೀರು ತುಂಬಿರುತ್ತದೆ. ಆದರೆ ಜಾತ್ರೆಯ ದಿನ ನೀರು ಇಲ್ಲವಾಗುತ್ತದೆಯಂತೆ. ಈ ಪ್ರದೇಶದಲ್ಲಿ ಬಿದಿರು ಮಳೆ ಹೆಚ್ಚಾಗಿ ಇದ್ದ ಕಾರಣ ವದ್ದೀಕೆರೆ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಸಿದ್ದಪ್ಪನ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂಬುದು ಇತಿಹಾಸಕಾರರ ಅನಿಸಿಕೆಯಾಗಿದೆ.