ಸರ್ಕಾರದ ನಿರ್ಲಕ್ಷ್ಯಕ್ಕೆ ಬಸವಳಿದ ಪ್ರವಾಸೋದ್ಯಮ

| Published : Feb 17 2025, 12:31 AM IST

ಸಾರಾಂಶ

ಪ್ರವಾಸೋದ್ಯಮದ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯ ಹಾಗೂ ಅರಣ್ಯ ಇಲಾಖೆಯ ಬಿಗಿ ನಿಲುವಿನಿಂದಾಗಿ ತಾಲೂಕಿನ ಹೋಂಸ್ಟೇ ಹಾಗೂ ರೆಸಾರ್ಟ್ ಉದ್ಯಮ ನಷ್ಟದತ್ತ ಮುಖ ಮಾಡಿದೆ. ನಗರಗಳ ಹೊರವಲಯದಲ್ಲೆ ಕೃತಕ ಪರಿಸರ ಸೃಷ್ಟಿಸಿ ಅಧ್ಬುತ ಎನ್ನಬಹುದಾದ ರೆಸಾರ್ಟ್‌ಗಳು ತಲೆ ಎತ್ತಿ ಗ್ರಾಹಕರನ್ನು ಸೇಳೆಯುವಲ್ಲಿ ಯಶಸ್ವಿಯಾಗಿವೆ. ಇದರಿಂದಾಗಿ ಬೆಂಗಳೂರಿನಿಂದ ದೂರದಲ್ಲಿರುವ ತಾಲೂಕಿಗೆ ಆಗಮಿಸಲು ಸಾಕಷ್ಟು ಜನರು ಆಸಕ್ತಿ ತೊರದಿರುವುದು ತಾಲೂಕಿನ ರೆಸಾರ್ಟ್ ಉದ್ಯಮದ ಮೇಲೆ ಪೆಟ್ಟು ಬೀಳಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕು ಪ್ರವಾಸೋದ್ಯಮದ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯ ಹಾಗೂ ಅರಣ್ಯ ಇಲಾಖೆಯ ಬಿಗಿ ನಿಲುವಿನಿಂದಾಗಿ ತಾಲೂಕಿನ ಹೋಂಸ್ಟೇ ಹಾಗೂ ರೆಸಾರ್ಟ್ ಉದ್ಯಮ ನಷ್ಟದತ್ತ ಮುಖ ಮಾಡಿದೆ.

ಕಳೆದ ಎರಡು ದಶಕಗಳ ಹಿಂದೆ ಪರಿಚಿತಗೊಂಡ ರೆಸಾರ್ಟ್ ಹಾಗೂ ಹೋಂಸ್ಟೇ ಪರಿಕಲ್ಪನೆ ವರ್ಷಗಳು ಉರುಳಿದಂತೆ ಬೃಹದಾಕಾರ ಪಡೆದಿದ್ದು ಸದ್ಯ ತಾಲೂಕು ಹೋಂಸ್ಟೇ ರೆಸಾರ್ಟ್‌ಗಳ ತವರು ಎಂದೆ ಕರೆಸಿಕೊಳ್ಳುತ್ತಿದೆ. ಪಶ್ಚಿಮಘಟ್ಟದಂಚಿನ ಪ್ರತಿ ಗ್ರಾಮಗಳಲ್ಲೂ ರೆಸಾರ್ಟ್ ಹೋಂಸ್ಟೇಗಳು ತಲೆಎತ್ತಿದ್ದು ಸದ್ಯ ೨೦೦ಕ್ಕೂ ಅಧಿಕ ಹೋಂಸ್ಟೇಗಳು ಹಾಗೂ ೧೫೦ಕ್ಕೂ ಅಧಿಕ ರೆಸಾರ್ಟ್‌ಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೊರೋನಾಕ್ಕೂ ಮುನ್ನ ಪ್ರತಿ ರೆಸಾರ್ಟ್ ಹಾಗೂ ಹೋಂಸ್ಟೇಗಳು ವಾರಂತ್ಯದಲ್ಲಿ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದು ವಿಶೇಷ ದಿನಗಳಲ್ಲಿ ಗ್ರಾಹಕರಿಗೆ ಕೊಠಡಿಗಳು ದೊರಕದೆ ಗ್ರಾಹಕರು ದೇವಾಸ್ಥಾನ ಹಾಗೂ ಶಾಲಾ ಆವರಣದಲ್ಲೇ ರಾತ್ರಿ ಕಳೆದ ಉದಾಹರಣೆ ಹಲವಿದೆ. ಹೀಗೆ ಉಚ್ಛಾಯ ಸ್ಥಿತಿಯಲ್ಲಿದ್ದ ಈ ಉದ್ಯಮ ಕಳೆದ ಎರಡು ವರ್ಷದಿಂದ ಅಧೋಗತಿಯತ್ತ ಸಾಗುತ್ತಿದೆ. ಅದರಲ್ಲೂ ಕಳೆದ ಮಳೆಗಾಲದಲ್ಲಿ ತಾಲೂಕಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ರೆಸಾರ್ಟ್ ಹಾಗೂ ಹೋಸ್ಟೇಗಳೆ ಕಾರಣ ಎಂಬ ಸರ್ಕಾರದ ಹೇಳಿಕೆ ಈ ಉದ್ಯಮಕ್ಕೆ ಮತ್ತಷ್ಟು ಪೆಟ್ಟು ನೀಡಿರುವುದರಿಂದ ವಾರಂತ್ಯದಲ್ಲೂ ಸಾಕಷ್ಟು ರೆಸಾರ್ಟ್ ಹಾಗೂ ಹೋಂಸ್ಟೇಗಳು, ಗ್ರಾಹಕರ ಅಭಾವ ಎದುರಿಸುತ್ತಿದ್ದು ಕೆಲವೇ ಕೆಲವು ರೆಸಾರ್ಟ್‌ಗಳು ಮಾತ್ರ ಇಂದಿಗೂ ಹಿಂದಿನ ಶೈಲಿಯಲ್ಲೇ ಕಾರ್ಯನಿರ್ವಹಿಸುತ್ತಿವೆ.

ಅಧೋಗತಿಗೆ ಕಾರಣ: ಪ್ರಕೃತಿ ಮಡಿಲಿನಲ್ಲಿ ಮಾತ್ರ ರೆಸಾರ್ಟ್‌ಗಳು ಇರ ಬೇಕು ಎಂಬ ಪರಿಕಲ್ಪನೆ ಇಂದ ತಾಲೂಕಿನ ಹಲವು ಜನರು ಹರಿಯುವ ನೀರು, ತೊರೆಗಳು ಹಾಗೂ ಉತ್ತಮ ಪ್ರಕೃತಿ ಸೌಂದರ್ಯ ಹೊಂದಿರುವ ತಾಣಗಳಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದರೆ, ಪ್ರಕೃತಿ ಸೌಂದರ್ಯ ಸವಿಯಲು ರಾಜ್ಯ ಹಾಗೂ ಹೊರರಾಜ್ಯದಿಂದ ವಾರಂತ್ಯ ಹಾಗೂ ವಿಶೇಷ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ತಾಲೂಕಿಗೆ ಆಗಮಿಸುತ್ತಾರೆ ಎಂಬ ಭಾವನೆ ನೆಲೆ ಊರಿತ್ತು. ಆದರೆ, ಬಯಲು ದಿಣ್ಣೆಯಲ್ಲೂ ರೆಸಾರ್ಟ್‌ಗಳ ನಿರ್ಮಾಣ ಮಾಡಿದರು ಜನರು ಆಗಮಿಸುತ್ತಾರೆಂಬುದಕ್ಕೆ ಸದ್ಯ ರಾಜ್ಯ ರಾಜಧಾನಿಯ ಹೊರಭಾಗದಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ಗಳು ಸಾಕ್ಷಿಯಾಗಿವೆ. ನಗರಗಳ ಹೊರವಲಯದಲ್ಲೆ ಕೃತಕ ಪರಿಸರ ಸೃಷ್ಟಿಸಿ ಅಧ್ಬುತ ಎನ್ನಬಹುದಾದ ರೆಸಾರ್ಟ್‌ಗಳು ತಲೆ ಎತ್ತಿ ಗ್ರಾಹಕರನ್ನು ಸೇಳೆಯುವಲ್ಲಿ ಯಶಸ್ವಿಯಾಗಿವೆ. ಇದರಿಂದಾಗಿ ಬೆಂಗಳೂರಿನಿಂದ ದೂರದಲ್ಲಿರುವ ತಾಲೂಕಿಗೆ ಆಗಮಿಸಲು ಸಾಕಷ್ಟು ಜನರು ಆಸಕ್ತಿ ತೊರದಿರುವುದು ತಾಲೂಕಿನ ರೆಸಾರ್ಟ್ ಉದ್ಯಮದ ಮೇಲೆ ಪೆಟ್ಟು ಬೀಳಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಇದಲ್ಲದೆ ತಾಲೂಕಿನ ಹೋಂಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಕೇವಲ ಆಟೋಟಕ್ಕೆ ಅವಕಾಶ ನೀಡದಿರುವುದು ಒಂದು ಸಮಸ್ಯೆಯಾಗಿದ್ದು ಇಲ್ಲಿ ದಿನದ ಲೆಕ್ಕದಲ್ಲೆ ರೆಸಾರ್ಟ್ ಹಾಗೂ ಹೋಂಸ್ಟೇಗಳಲ್ಲಿ ಕೊಠಡಿ ಪಡೆಯಬೇಕಿದೆ. ಆದರೆ, ಬೆಂಗಳೂರು ಸುತ್ತಲು ಇರುವ ರೆಸಾರ್ಟ್‌ಗಳಲ್ಲಿ ಗಂಟೆಗಳ ಲೆಕ್ಕದಲ್ಲೂ ಬಾಡಿಗೆ ನೀಡುತ್ತಿರುವುದರಿಂದ ಆಟೋಟ, ಮನರಂಜನೆಗಾಗಿ ಬರುವ ಜನರಿಗೆ ಇದು ಇಷ್ಟವಾಗಿದೆ. ಇದೂ ಸಹ ತಾಲೂಕು ರೆಸಾರ್ಟ್ ಉದ್ಯಮಕ್ಕೆ ಮಾರಕವಾಗಿ ಪರಿಣಮಿಸಿದೆ. ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತವಾಗುತ್ತಿದೆ ಎಂದು ಸರ್ಕಾರ ನಕಾರತ್ಮಕ ಹೇಳಿಕೆ ನೀಡುತ್ತಿರುವುದರಿಂದ ತಾಲೂಕಿಗೆ ಭೇಟಿ ನೀಡುವುದೆ ಅಪಾಯ ಎಂಬ ಪರಿಕಲ್ಪನೆ ಪ್ರವಾಸಿಗರಲ್ಲಿ ಹುಟ್ಟಿರುವುದು ಉದ್ಯಮಕ್ಕೆ ಮತ್ತೊಂದು ಪೆಟ್ಟಾಗಿದೆ.

ತಾಲೂಕಿನಲ್ಲಿ ಸಾಕಷ್ಟು ಪ್ರಕ್ಷಣಿಯ ಸ್ಥಳಗಳಿದ್ದರೂ ಇವುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ನಿರ್ಲಕ್ಷಿಸುತ್ತಿರುವುದು ಮತ್ತೊಂದು ಸಮಸ್ಯೆಯಾಗಿ ಕಾಡುತ್ತಿದೆ. ತಾಲೂಕಿನ ಪ್ರವಾಸಿತಾಣಗಳಿಗೆ ಇಂದಿಗೂ ವಾರಂತ್ಯದಲ್ಲಿ ಸಾವಿರಾರು ಜನರು ಭೇಟಿ ನಿಡುತ್ತಿದ್ದಾರೆ. ಇಂತಹ ಪ್ರವಾಸಿತಾಣಗಳಿಗೆ ಕನಿಷ್ಠ ಅವಶ್ಯಕತೆ ಒದಗಿಸದಿರುವುದು ತಾಲೂಕಿನ ಬಗ್ಗೆ ಪ್ರವಾಸಿಗರಲ್ಲಿ ನಕರಾತ್ಮಕತೆ ಸೃಷ್ಟಿಯಾಗಲು ಕಾರಣವಾಗಿದೆ.

ಇತಿಹಾಸ ಪ್ರಸಿದ್ಧ ಏಕೈಕ ನಕ್ಷತ್ರಕಾರದ ಮಂಜ್ರಾಬಾದ್ ಕೋಟೆ, ಪಾಂಡವರು ನಿರ್ಮಿಸಿದ್ದರು ಎಂಬ ಪ್ರತೀತಿ ಇರುವ ಬೆಟ್ಟದ ಭೈರವೇಶ್ವರ ದೇವಸ್ಥಾನ ಸೇರಿದಂತೆ ಹಲವು ಐತಿಹಾಸಿಕ ಪ್ರವಾಸಿತಾಣಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಪರದಾಡುವಂತಾಗಿದೆ.

ತಾಲೂಕಿನಲ್ಲಿ ಹಲವು ಜಲಪಾತಗಳಿದ್ದು ಈ ಯಾವುದೇ ಜಲಪಾತಗಳಲ್ಲಿ ಕನಿಷ್ಠ ಬಟ್ಟೆ ಬದಲಿಸಲು ಕೊಠಡಿಗಳನ್ನು ನಿರ್ಮಾಣ ಮಾಡದಿರುವುದು ದುರಂತವಾಗಿದೆ. ಪರಿಣಾಮ ಮೂಲಭೂತ ಸೌಕರ್ಯ ಹೊಂದಿರದ ಪ್ರವಾಸಿತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರು ಸಹ ಹಿಂದೇಟು ಹಾಕುತ್ತಿರುವುದು ಸಹ ಉದ್ಯಮಕ್ಕೆ ಪೆಟ್ಟು ನೀಡಿದೆ.

ಅರಣ್ಯ ಇಲಾಖೆ: ತಾಲೂಕಿನ ಅರಣ್ಯ ಇಲಾಖೆ ಅಕ್ಷರಶಃ ರೆಸಾರ್ಟ್ ಹಾಗೂ ಹೋಂಸ್ಟೇಗಳ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು ರೆಸಾರ್ಟ್‌ಗಳಿಗೆ ಬರುವ ಪ್ರವಾಸಿಗರಿಗೆ ಕಳೆದ ಎರಡು ವರ್ಷದ ಹಿಂದೆ ಅರಣ್ಯದಲ್ಲಿ ಚಾರಣ ಮಾಡಲು ಅವಕಾಶ ದೊರೆಯುತ್ತಿತ್ತು. ಆದರೆ, ಈಗ ಅರಣ್ಯದೊಳಗೆ ಹೆಜ್ಜೆ ಇಟ್ಟರೆ ದೂರು ದಾಖಲಾಗುತ್ತಿದೆ. ಅಲ್ಲದೆ ಮೊದಲೆಲ್ಲ ಅವಕಾಶವಿದ್ದ ವಾಹನಗಳ ಆಫ್ ರೋಡ್‌ಗೆ ಈಗ ನಿರ್ಬಂಧ ವಿಧಿಸಿರುವುದರಿಂದ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ಬರುವ ಗ್ರಾಹಕರಿಗೆ ಮನರಂಜನೆ ಎಂಬುದು ಮರೀಚಿಕೆಯಾಗಿದೆ. ಪರಿಣಾಮ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಕುಸಿಯುತ್ತಿರುವುದು ರೆಸಾರ್ಟ್ ಮಾಲೀಕರಿಗೆ ಆತಂಕ ಹೆಚ್ಚುವಂತೆ ಮಾಡಿದೆ.

ನಿರ್ವಹಣೆ ಸಂಕಷ್ಟ: ಕೊಟ್ಯಂತರ ರುಪಾಯಿ ವಿನಿಯೋಗಿಸಿ ರೆಸಾರ್ಟ್ ನಿರ್ಮಾಣ ಮಾಡಿರುವ ಕೆಲವು ರೆಸಾರ್ಟ್ ಮಾಲೀಕರಿಗೆ ಉದ್ಯಮ ನಡೆಸುವುದು ಬಿಳಿ ಆನೆ ಸಾಕಿದಂತಾಗಿದೆ. ವಾರಂತ್ಯದಲ್ಲಿ ಬರುವ ಗ್ರಾಹಕರಿಗಾಗಿ ವಾರವಿಡೀ ಇಲ್ಲಿನ ಸಿಬ್ಬಂದಿಗೆ ಸಂಬಳ ನೀಡಬೇಕಿದೆ. ಆದರೆ ವಾರಂತ್ಯದಲ್ಲೂ ಗ್ರಾಹಕರ ಕೊರತೆ ಎದುರಾಗಿರುವುದು ಉದ್ಯಮ ನಷ್ಟದೆಡೆಗೆ ತೆರಳುವಂತೆ ಮಾಡಿದೆ.

ರೆಸಾರ್ಟ್ ಹಬ್: ತಾಲೂಕಿನ ಅಚ್ಚನಹಳ್ಳಿ ಗ್ರಾಮ ತಾಲೂಕಿನ ರೆಸಾರ್ಟ್‌ಗಳ ತವರು ಎಂದೇ ಕರೆಸಿಕೊಳ್ಳುತ್ತಿದೆ. ತಾಲೂಕಿನಲ್ಲಿ ಪ್ರಪ್ರಥಮವಾಗಿ ಈ ಗ್ರಾಮದಲ್ಲೆ ರೆಸಾರ್ಟ್ ನಿರ್ಮಾಣಗೊಂಡಿದ್ದರೆ, ಗ್ರಾಮದ ಹೊರವಲಯದಲ್ಲಿರುವ ಪಶ್ಚಿಮಘಟ್ಟದ ಅದ್ಭುತ ಪ್ರಕೃತಿ ಸೌಂದರ್ಯ ಈ ಗ್ರಾಮವನ್ನು ರೆಸಾರ್ಟ್‌ಗಳ ತವರು ಎಂದು ಕರೆಸಿಕೊಳ್ಳಲು ಕಾರಣವಾಗಿದ್ದು ರಾಜ್ಯ ಹೊರರಾಜ್ಯದ ಹಲವರು ಇಲ್ಲಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡಿದ್ದು ಅತಿ ಚಿಕ್ಕ ಗ್ರಾಮದಲ್ಲಿ ೧೦ಕ್ಕೂ ಅಧಿಕ ರೆಸಾರ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು ಸುಮಾರು ೧೦೦ಕ್ಕೂ ಅಧಿಕ ಕಾರ್ಮಿಕರಿಗೆ ಉದ್ಯೋಗ ನೀಡಿವೆ.ಆತಂಕ: ರೆಸಾರ್ಟ್ ಉದ್ಯಮ ತಾಲೂಕಿನಲ್ಲಿ ಕನಿಷ್ಠ ಮೂರು ಸಾವಿರ ಜನರಿಗೆ ನೇರ ಉದ್ಯೋಗ ನೀಡಿದ್ದರೆ, ಪರೋಕ್ಷವಾಗಿ ಐದುಸಾವಿರಕ್ಕೂ ಅಧಿಕ ಜನರು ಸಂಪಾದನೆಗೆ ದಾರಿ ಮಾಡಿಕೊಂಡಿದ್ದಾರೆ. ಆದರೆ, ತೀವ್ರವಾದ ಗ್ರಾಹಕರ ಕೊರತೆ ಎದುರಿಸುತ್ತಿರುವ ಹಲವು ರೆಸಾರ್ಟ್‌ಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪಿರುವುದರಿಂದ ಇಲ್ಲಿನ ಉದ್ಯೋಗಿಗಳಿಗೆ ಬದಲಿ ಉದ್ಯೋಗ ಹುಡುಕಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

--------------------------------------------------------------------*ಹೇಳಿಕೆ1

ಕೊಟ್ಯಂತರ ರುಪಾಯಿ ವಿನಿಯೋಗಿಸಿ ಉದ್ಯಮ ಸ್ಥಾಪಿಸಿರುವ ಸಾಕಷ್ಟು ಜನರಿಗೆ ಗ್ರಾಹಕರ ಕೊರತೆ ಕಾಡುತ್ತಿರುವುದರಿಂದ ಉದ್ಯಮ ನಿರ್ವಹಣೆ ಕಡುಕಷ್ಟವಾಗಿದೆ. ಚಿಕ್ಕಮಗಳೂರು ಹಾಗೂ ಕೂಡಗಿನಲ್ಲಿ ಪ್ರವಾಸೋದ್ಯಮಕ್ಕೆ ಸರ್ಕಾರ ನೀಡುತ್ತಿರುವ ಮಹತ್ವವನ್ನು ತಾಲೂಕಿನ ಪ್ರವಾಸೋದ್ಯಮಕ್ಕೆ ನೀಡುತ್ತಿಲ್ಲ.

ಮಸ್ತಾರೆ ಲೋಕೇಶ್, ಅಧ್ಯಕ್ಷರು, ರೆಸಾರ್ಟ್ ಮಾಲೀಕರ ಸಂಘ *ಹೇಳಿಕೆ 2

ಕಳೆದ ಎರಡು ವರ್ಷಗಳಿಂದ ಹೋಂಸ್ಟೇಗಳಿಗೆ ಗ್ರಾಹಕರ ಕೊರತೆ ಕಾಡುತ್ತಿದೆ. ಇದಕ್ಕೆಲ್ಲ ಬೆಂಗಳೂರು ಸುತ್ತಲಿನ ಪ್ರದೇಶದಲ್ಲಿ ರೆಸಾರ್ಟ್‌ಗಳ ಸ್ಥಾಪನೆಯೇ ಕಾರಣ.

-ಕೆ.ಎಸ್ ಕುಮಾರಸ್ವಾಮಿ, ಅಧ್ಯಕ್ಷರು, ಹೋಂಸ್ಟೇ ಮಾಲೀಕರ ಸಂಘ