ಕ್ಷಯರೋಗ ಮುಕ್ತ ಜಿಲ್ಲೆ ನಮ್ಮೆಲ್ಲರ ಗುರಿ: ನಲಿನ್ ಅತುಲ್

| Published : Mar 28 2024, 12:49 AM IST

ಸಾರಾಂಶ

2025ಕ್ಕೆ ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸುವುದು ನಮ್ಮೆಲ್ಲರ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಬೇಕು.

ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಕನ್ನಡಪ್ರಭ ವಾರ್ತೆ ಕೊಪ್ಪಳ

2025ಕ್ಕೆ ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸುವುದು ನಮ್ಮೆಲ್ಲರ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ವಿಶ್ವ ಕ್ಷಯರೋಗ ದಿನಾಚರಣೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ಷಯರೋಗದ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಕ್ಷಯರೋಗದ ಪತ್ತೆ ಹಾಗೂ ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಅರಿವು ಮತ್ತು ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಕ್ಷಯರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ರೋಗಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಈ ಹಿನ್ನೆಲೆ ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಗಟ್ಟಬಹುದು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಷಯರೋಗ ಮಾದರಿ ಪರೀಕ್ಷೆ ಹೆಚ್ಚಿಸಬೇಕು. ಕ್ಷಯರೋಗದ ಬಗ್ಗೆ ಹೆಚ್ಚಿನ ಪ್ರಚಾರ ಕಾರ್ಯ ಮಾಡಬೇಕು. ಕ್ಷಯರೋಗದ ನಿರ್ಮೂಲನೆಗಾಗಿ ಶ್ರಮಿಸಿದ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಗುತ್ತಿದ್ದು, ಎಲ್ಲರಿಗೂ ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು ಮಾತನಾಡಿ, ಕ್ಷಯರೋಗವು ಅಪೌಷ್ಠಿಕತೆಯಿಂದ ಬಳಲುತ್ತಿರುವವರಲ್ಲಿ ಕಂಡುಬರುತ್ತೆ. ಅಂತಹ ಜನರನ್ನು ಗುರುತಿಸಿ ಕ್ಷಯ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು. ಚಿಕಿತ್ಸೆ ಪಡೆಯುವ ಕ್ಷಯ ರೋಗಿಗಳಿಗೆ ಚಿಕಿತ್ಸೆ ಮುಗಿಯುವವರೆಗೆ ಪೌಷ್ಠಿಕ ಆಹಾರಕ್ಕಾಗಿ ಪ್ರತಿ ತಿಂಗಳು ₹500 ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಈ ಯೋಜನೆಯ ಬಗ್ಗೆಯೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕ್ಷಯರೋಗದ ನಿರ್ಮೂಲನೆಗಾಗಿ ಗ್ರಾಪಂ ಮಟ್ಟದಿಂದ ಅರಿವು ಮತ್ತು ಜಾಗೃತಿ ಮೂಡಿಸಲು ಶ್ರಮಿಸಬೇಕು. ಕ್ಷಯರೋಗದ ಬಗ್ಗೆ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಗಳು ಹಾಗೂ ಮೂಢನಂಬಿಕೆ ಹೋಗಲಾಡಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶಶಿಧರ ಎ. ಮಾತನಾಡಿ, ಜಿಲ್ಲೆಯಲ್ಲಿ 2023ನೇ ಸಾಲಿಗೆ ಸರ್ಕಾರಿ ವಲಯ-3,090, ಖಾಸಗಿ ವಲಯ-506 ಸೇರಿ ಒಂದು ವರ್ಷಕ್ಕೆ 3,596 ಕ್ಷಯರೋಗಿಗಳ ಪತ್ತೆಯ ಗುರಿ ಹೊಂದಲಾಗಿದ್ದು, ಸರ್ಕಾರಿ ವಲಯದಲ್ಲಿ 2,748 ಮತ್ತು ಖಾಸಗಿ ವಲಯದಲ್ಲಿ 128 ಸೇರಿ ಒಟ್ಟು 2,876 ಕ್ಷಯರೋಗಿಗಳು ಪತ್ತೆಯಾಗಿರುತ್ತಾರೆ. ಇನ್ನೂ ಅನೇಕ ಪ್ರಕರಣ ಪತ್ತೆ ಹಚ್ಚಬೇಕಾಗಿದ್ದು, 86 ಬಹು ಔಷಧ ನಿರೋಧಕ ಕ್ಷಯ ರೋಗಿಗಳು ಹಾಗೂ 164 ಎಚ್‌ಐವಿ ಸೋಂಕಿತ ಟಿಬಿ ರೋಗಿಗಳು ಪತ್ತೆಯಾಗಿರುತ್ತಾರೆ. 2022ನೇ ಸಾಲಿಗೆ ಹೋಲಿಸಿದಾಗ 2023ನೇ ಸಾಲಿನಲ್ಲಿ ಕ್ಷಯರೋಗ ಪತ್ತೆಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 57 ಕಫ ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 45,031 ಪರೀಕ್ಷೆಗಳಾಗಿದ್ದು, 437 ಕ್ಷಯರೋಗಿಗಳು ದೃಢಪಟ್ಟಿರುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಪ್ರಕಾಶ ಕೆ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ವೆಂಕಟೇಶ, ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ, ಡಾ. ಗೌರಿಶಂಕರ, ಡಾ. ಆನಂದ ಗೋಟೂರು ಸೇರಿದಂತೆ ಜಿಲ್ಲೆಯ ಎಲ್ಲ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ಷಯರೋಗ ನಿರ್ಮೂಲನೆಗಾಗಿ ಜಿಲ್ಲೆಯ ಎಲ್ಲ ತಾಲೂಕು ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯಾಧಿಕಾರಿ ಮತ್ತು ಇತರೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸನ್ಮಾನಿಸಲಾಯಿತು.