ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ತುಳುನಾಡು ಸರ್ವಧರ್ಮೀಯರ ನಾಡು. ಇಲ್ಲಿ ಜಾತಿ, ಮತ, ಪಂಥವೆಂಬ ಭೇದವಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಹೇಳಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ತುಳು ಸಂಘದ ಸಹಯೋಗದಲ್ಲಿ ಶುಕ್ರವಾರ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾದ ‘ತುಳು ಭಾಷೆ ಬದ್ಕ್ ಗೇನದ ಪೊಲಬು ತುಲಿಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರಕ್ಕೆ ಯಾವ ಭಾಷೆ ಪ್ರವೇಶಿಸುತ್ತದೆಯೋ ಆ ಭಾಷೆಯ ಮೌಲ್ಯ ಮತ್ತು ವಿಸ್ತಾರಗೊಳ್ಳುತ್ತದೆ. ಇಂತಹ ಕಾರ್ಯಕ್ರಮಗಳು ತುಳು ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಬಲ್ಲದು. ತುಳುನಾಡಿನಲ್ಲಿ ೧೬೦ಕ್ಕೂ ಹೆಚ್ಚಿನ ಕ್ರೀಡೆಗಳಿವೆ. ತುಳುನಾಡಿನ ಔಷದೋಪಚಾರ ವಿಶಿಷ್ಟವಾಗಿದೆ. ಪ್ರತಿಯೊಂದು ಊರಿನ ಹೆಸರಿಗೂ ಪ್ರಾಚೀನ ಇತಿಹಾಸವಿದೆ. ಇದರ ಬಗ್ಗೆ ಅಧ್ಯಯನ ಮಾಡಿ ತುಳುವನ್ನು ಸಮಗ್ರ ನೆಲೆಯಲ್ಲಿ ಕಟ್ಟುವ ಕೆಲಸವಾಗಬೇಕಿದೆ. ಸುಮಾರು ೫,೦೦೦ಕ್ಕೂ ಹೆಚ್ಚಿನ ತುಳು ಪುಸ್ತಕಗಳು ತುಳು ಸಾಹಿತ್ಯ ಅಕಾಡೆಮಿಯಲ್ಲಿ ಲಭ್ಯವಿದೆ. ಇದರ ಮೂಲಕ ತುಳುನಾಡಿನ ಪರಂಪರೆಯನ್ನು ತಿಳಿದುಕೊಳ್ಳಬಹುದಾಗಿದೆ. ತಾಯಿ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲ ಕರ‍್ಯಪ್ರವೃತ್ತರಾಗಬೇಕಿದೆ ಎಂದರು.ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ಡಾ. ರುಡಾಲ್ಫ್ ನೋರೊನ್ಹ ಮಾತನಾಡಿ, ಒಬ್ಬ ವ್ಯಕ್ತಿಗೆ ತನ್ನ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಅಭಿಮಾನವಿದ್ದರೆ, ಆತ ಬದುಕಿನಲ್ಲಿ ಯಾವತ್ತೂ ಸೋಲುವುದಿಲ್ಲ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಹಿರಿಯರ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಕಿರಿಯರಿಗೂ ಇದೆ ಎಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಭಾ ಕಾರ‍್ಯಕ್ರಮದ ನಂತರ ವಿವಿಧ ಗೋಷ್ಠಿಗಳು ನಡೆದವು. ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಡೆ, ತುಳುವರ ಸಂಸ್ಕೃತಿಯಲ್ಲಿ ತಾಯಿಯ ಸ್ಥಾನ ಮಾನದ ಕುರಿತು, ಬಾಬು ಪಾಂಗಳ ತುಳು ಮತ್ತು ಕೊರಗ ಭಾಷೆ, ಆಳ್ವಾಸ್ ವಿದ್ಯಾರ್ಥಿ ಹಾಗೂ ಯುವ ಲೇಖಕ ಮಹಮ್ಮದ್ ರಿಯಾಜ್, ತುಳುನಾಡಿನ ಸಾಮರಸ್ಯ ಪರಂಪರೆ ಕುರಿತು ಮಾತನಾಡಿದರು. ಮೈಮ್ ರಾಮದಾಸ್ ತುಳು ಜಾನಪದ ಹಾಡಿನ ಬಗ್ಗೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವೈಶಾಲಿ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ತುಳು ಸಂಘದ ಸಂಯೋಜಕ ಹೇಮಂತ್ ಸುವರ್ಣ ವಂದಿಸಿದರು.