ತುಂಗಭದ್ರಾ ಬೋರ್ಡ್‌ನಲ್ಲಿ ಆಂಧ್ರಪ್ರದೇಶದ್ದೇ ಹಿಡಿತ : ಕಾಯಂ ಅಧಿಕಾರಿ ನಿಯೋಜನೆಗೆ ರಾಜ್ಯ ಸರ್ಕಾರ ಬೋರ್ಡ್‌ ಮೇಲೆ ಒತ್ತಡ ಹೇರಲಿ ಎಂಬ ಕೂಗು

| Published : Aug 19 2024, 12:55 AM IST / Updated: Aug 19 2024, 11:53 AM IST

ತುಂಗಭದ್ರಾ ಬೋರ್ಡ್‌ನಲ್ಲಿ ಆಂಧ್ರಪ್ರದೇಶದ್ದೇ ಹಿಡಿತ : ಕಾಯಂ ಅಧಿಕಾರಿ ನಿಯೋಜನೆಗೆ ರಾಜ್ಯ ಸರ್ಕಾರ ಬೋರ್ಡ್‌ ಮೇಲೆ ಒತ್ತಡ ಹೇರಲಿ ಎಂಬ ಕೂಗು
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಮಂಡಳಿಯಲ್ಲಿ (ಟಿಬಿ ಬೋರ್ಡ್‌) ಆಂಧ್ರಪ್ರದೇಶ ಹಿತ ಕಾಪಾಡುವ ಕಾರ್ಯ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಯಲ್ಲಿ ಕಾಯಂ ಅಧಿಕಾರಿಯನ್ನಾಗಿ ನಿಯೋಜನೆಗೆ ರಾಜ್ಯ ಸರ್ಕಾರ ಬೋರ್ಡ್‌ ಮೇಲೆ ಒತ್ತಡ ಹೇರಲಿ ಎಂಬ ಕೂಗು  ಎದ್ದಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ತುಂಗಭದ್ರಾ ಮಂಡಳಿಯಲ್ಲಿ (ಟಿಬಿ ಬೋರ್ಡ್‌) ಆಂಧ್ರಪ್ರದೇಶ ಹಿತ ಕಾಪಾಡುವ ಕಾರ್ಯ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಯಲ್ಲಿ ಕಾಯಂ ಅಧಿಕಾರಿಯನ್ನಾಗಿ ನಿಯೋಜನೆಗೆ ರಾಜ್ಯ ಸರ್ಕಾರ ಬೋರ್ಡ್‌ ಮೇಲೆ ಒತ್ತಡ ಹೇರಲಿ ಎಂಬ ಕೂಗು ಈಗ ಈ ಭಾಗದ ರೈತರ ವಲಯದಲ್ಲಿ ಎದ್ದಿದೆ.

ಜಲಾಶಯದ ಕ್ರಸ್ಟ್‌ ಗೇಟ್ ನಂ.19ರ ಸರಪಳಿ ತುಂಡಾಗಿ ಗೇಟ್‌ ಕಳಚಿ ಬಿದ್ದ ಬಳಿಕ ಜಲಾಶಯದಿಂದ ನದಿಗೆ 40 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗಿದೆ. ಗೇಟ್‌ನಲ್ಲಿ ತುರ್ತಾಗಿ ಕಾಮಗಾರಿ ನಡೆಸಲು ಜಲಾಶಯದ ನೀಲನಕ್ಷೆ ಕೂಡ ಹೊಸಪೇಟೆಯಲ್ಲಿರುವ ಬೋರ್ಡ್‌ನ ಕಚೇರಿಯಲ್ಲಿ ಇರಲಿಲ್ಲ. ಹೈದರಾಬಾದ್‌ನಲ್ಲಿರುವ ಬೋರ್ಡ್‌ನ ಮುಖ್ಯ ಕಚೇರಿಯಲ್ಲಿದ್ದ ಜಲಾಶಯದ ನೀಲನಕ್ಷೆ ತರಿಸಿಕೊಳ್ಳಲಾಯಿತು. ಜಲಾಶಯದಲ್ಲಿ ತುರ್ತಾಗಿ ಕಾಮಗಾರಿ ನಡೆಸಲು ರಾಜ್ಯ ಸರ್ಕಾರ ಮಂಡಳಿಯಿಂದ ಪರವಾನಗಿ ಕೊಡಿಸಲು ಏದುಸಿರು ಬಿಡುವಂತಾಗಿತ್ತು. ಇದರ ಬದಲಿಗೆ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಯಲ್ಲಿ ಕಾಯಂ ಅಧಿಕಾರಿಯನ್ನಾಗಿ ನಿಯೋಜಿಸಿದರೆ ರಾಜ್ಯ ಸರ್ಕಾರ ಕೂಡ ಬೋರ್ಡ್‌ನಲ್ಲಿ ಹಿಡಿತ ಸಾಧಿಸಲಿದೆ ಎಂಬುದು ಜಲಾಶಯ ನೆಚ್ಚಿರುವ ರೈತರ ವಾದವಾಗಿದೆ.

ಈಗ ಗೌರವ ಅಧಿಕಾರಿ:

ಬಚಾವತ್‌ ಆಯೋಗದ ಪ್ರಕಾರ ತುಂಗಭದ್ರಾ ಮಂಡಳಿ ರಚನೆಯಾಗಿದೆ. ಈ ಮಂಡಳಿ ಜಲಾಶಯದ ಭದ್ರತೆ ಹಾಗೂ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಮುಖ್ಯ ಎಂಜಿನಿಯರ್‌ ಅರ್ಹತೆ ಹೊಂದಿರುವವರನ್ನು ಮಂಡಳಿ ಅಧ್ಯಕ್ಷರನ್ನಾಗಿ ಹಾಗೂ ಕಾರ್ಯದರ್ಶಿಯನ್ನಾಗಿ ನೇಮಿಸುತ್ತದೆ. ಈ ಮಂಡಳಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ನೀರಾವರಿ ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ.

ಕರ್ನಾಟಕದ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ ಗೌರವ ಅಧಿಕಾರಿಯಾಗಿರುತ್ತಾರೆ. ಆದರೆ, ಈ ಅಧಿಕಾರಿಯನ್ನು ಕಾಯಂ ಅಧಿಕಾರಿಯನ್ನಾಗಿ ನೇಮಿಸಿದರೆ ಮಂಡಳಿಯಲ್ಲಿ ನಡೆಯುವ ಆಗು-ಹೋಗುಗಳು ರಾಜ್ಯಕ್ಕೆ ಸ್ಪಷ್ಟವಾಗಿ ತಿಳಿಯಲಿದೆ. ಜತೆಗೆ ಪಾರದರ್ಶಕತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂಬುದು ಜಲಾಶಯ ನೆಚ್ಚಿರುವ ರೈತರು ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.

ಅನುದಾನ ನೀಡಿಕೆಯಲ್ಲಿ ರಾಜ್ಯದ ಪಾಲು ಹೆಚ್ಚು:

ತುಂಗಭದ್ರಾ ಮಂಡಳಿಗೆ ರಾಜ್ಯ ಸರ್ಕಾರ ನಿರ್ವಹಣೆ ಹಾಗೂ ಭದ್ರತೆಗೆ ಶೇ. 65 ಅನುದಾನ ಒದಗಿಸುತ್ತದೆ. ಆಂಧ್ರಪ್ರದೇಶದ ಪಾಲು ಶೇ. 35ರಷ್ಟಿದೆ. ಹೀಗಿದ್ದರೂ ರಾಜ್ಯದ ಹಿಡಿತ ಮಂಡಳಿಯ ಮೇಲಿಲ್ಲ. ಈ ಮಂಡಳಿಗೆ ಆಂಧ್ರಪ್ರದೇಶ ಅಧೀಕ್ಷಕ ಎಂಜಿನಿಯರ್‌ನ್ನು ನಿಯೋಜನೆ ಮಾಡುತ್ತದೆ. ಈ ಅಧೀಕ್ಷಕ ಎಂಜಿನಿಯರ್‌ ಅವರದ್ದೇ ಮಂಡಳಿಯಲ್ಲಿ ಹೆಚ್ಚಿನ ಕಾರುಬಾರು ನಡೆಯುತ್ತದೆ. ತೆಲಂಗಾಣ ಹಾಗೂ ಕರ್ನಾಟಕದ ಅಧೀಕ್ಷಕ ಎಂಜಿನಿಯರ್‌ಗಳು ನೀರಿನ ಹಂಚಿಕೆ ವಿಷಯದಲ್ಲಿ ಚರ್ಚೆ ನಡೆಸಿದರೂ ಆಂಧ್ರಪ್ರದೇಶದ ಅಧೀಕ್ಷಕ ಎಂಜಿನಿಯರ್‌ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ರಾಜ್ಯದ ರೈತರ ಅಳಲು.

ಸಮನಾಂತರ ಜಲಾಶಯ ನಿರ್ಮಾಣಕ್ಕೂ ತೊಡಕು:

ಜಲಾಶಯದಲ್ಲಿ 30 ಟಿಎಂಸಿಯಷ್ಟು ಹೂಳು ತುಂಬಿದೆ. ಕೊಪ್ಪಳದ ಗಂಗಾವತಿ ಬಳಿಯ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಬೇಕು ಎಂಬುದು ದಶಕಗಳ ಕೂಗಾಗಿದೆ. ಆದರೆ, ತುಂಗಭದ್ರಾ ಮಂಡಳಿಯಲ್ಲಿ ಈ ಕಾರ್ಯಕ್ಕೆ ವೇಗ ದೊರೆಯದ್ದರಿಂದ ಕರ್ನಾಟಕ ಸರ್ಕಾರ ಡಿಪಿಆರ್‌ ತಯಾರಿ ಮಾಡಿಕೊಂಡರೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಒಪ್ಪಿಗೆಗೆ ಕಾಯುವಂತಾಗಿದೆ. ಹಾಗಾಗಿ ಕರ್ನಾಟಕದ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಗೆ ಕಾಯಂ ಅಧಿಕಾರಿಯನ್ನಾಗಿ ನಿಯೋಜಿಸಿದರೆ ಕರ್ನಾಟಕದ ಯೋಜನೆಗಳಿಗೆ ಆಗುತ್ತಿರುವ ಅಡ್ಡಿ ನಿವಾರಣೆ ಆಗಲಿದೆ ಎಂಬುದು ಈ ಭಾಗದ ರೈತರ ಅಭಿಪ್ರಾಯವಾಗಿದೆ.

ಕರ್ನಾಟಕದ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಗೆ ಕಾಯಂ ಅಧಿಕಾರಿಯನ್ನಾಗಿ ನಿಯೋಜನೆ ಮಾಡಿದರೆ, ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ಗಳ ಮರು ನಿರ್ಮಾಣ, ಜಲಾಶಯ ಬಲವರ್ಧನೆಗೊಳಿಸುವ ಕಾರ್ಯಗಳು ಸೇರಿದಂತೆ ಇತರ ಯೋಜನೆಗಳಿಗೆ ಮಂಡಳಿಯಲ್ಲಿ ರಾಜ್ಯದ ಪಾತ್ರ ಮಹತ್ವ ಪಡೆಯಲಿದೆ. ಹಾಗಾಗಿ ಈ ಕಾರ್ಯವನ್ನು ರಾಜ್ಯ ಸರ್ಕಾರ ತುರ್ತಾಗಿ ಮಾಡಲಿ ಎಂಬುದು ಜಲಾಶಯ ನೆಚ್ಚಿರುವ ರೈತರ ಆಗ್ರಹವೂ ಆಗಿದೆ.ತುಂಗಭದ್ರಾ ಮಂಡಳಿಗೆ ರಾಜ್ಯ ಸರ್ಕಾರ ಶೇ. 65ರಷ್ಟು ಅನುದಾನ ನೀಡಿದರೂ ರಾಜ್ಯದ ಅಧಿಕಾರ ಮಂಡಳಿಯ ಮೇಲಿಲ್ಲ. ಆಂಧ್ರಪ್ರದೇಶದ ಹಿಡಿತ ತಪ್ಪಿಸಲು ಕರ್ನಾಟಕದ ಮುಖ್ಯ ಎಂಜಿನಿಯರ್‌ ಅವರನ್ನು ಮಂಡಳಿಗೆ ಕಾಯಂ ಅಧಿಕಾರಿಯನ್ನಾಗಿ ನಿಯೋಜನೆ ಮಾಡಬೇಕಿದೆ. ಈ ಕಾರ್ಯ ತುರ್ತಾಗಿ ಆಗಬೇಕಿದೆ ಎನ್ನುತ್ತಾರೆ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೇಳಗುರ್ಕಿ.