ಕನ್ನಡಪ್ರಭ ವಾರ್ತೆ ಬೆಂಗಳೂರು:
ತೀವ್ರ ಮಳೆ ಕೊರತೆ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕಾದ ಸಂಕಷ್ಟವನ್ನು ಹೇಗೆ ಎದುರಿಸಬೇಕೆಂದು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಕರೆದಿದ್ದ ಮಹತ್ವದ ಸರ್ವಪಕ್ಷ ಸಭೆಯಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಹಲವು ಸಲಹೆ ಸೂಚನೆ ನೀಡುವ ಜೊತೆಗೆ, ರಾಜ್ಯದ ಹಿತಕ್ಕಾಗಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಒಮ್ಮತದ ಬೆಂಬಲ ವ್ಯಕ್ತಪಡಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.ಆಡಳಿತ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳು ಸೇರಿ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ನ ಹಲವು ಪ್ರಮುಖ ನಾಯಕರು ಭಾಗವಹಿಸಿ ರಾಜ್ಯದ ಹಿತಕ್ಕಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಲಿರುವ ತೀರ್ಮಾನಕ್ಕೆ ಬೆಂಬಲಿಸುವುದಾಗಿ ಭರವಸೆ ನೀಡಿದರು.
ರಾಜಕೀಯ ಪಕ್ಷಗಳ ನಾಯಕರ ಜೊತೆ ನಿವೃತ್ತ ನ್ಯಾಯಮೂರ್ತಿಗಳು, ಕಾನೂನು ತಜ್ಞರು ಪದೇ ಪದೆ ಎದುರಾಗುತ್ತಿರುವ ಇಂಥ ಜಲಸಂಕಷ್ಟ ಪರಿಹಾರಕ್ಕೆ ರಾಜ್ಯ ಸರ್ಕಾರ ಏನು ಮಾಡಬಹುದೆಂದು ಹಲವು ಸಲಹೆ, ಸೂಚನೆ, ಅಭಿಪ್ರಾಯಗಳನ್ನು ನೀಡಿದರು. ರಾಜ್ಯದ ಈ ಜಲ ಸಂಕಷ್ಟಕ್ಕೆ ಉತ್ತಮ ಪರಿಹಾರ ಎನ್ನಲಾಗುತ್ತಿರುವ ಮಹತ್ವದ ‘ಮೇಕೆದಾಟು’ ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆಗಳಿಗೂ ಬೆಂಬಲ ಸೂಚಿಸಿದ್ದಾರೆ. ರಾಜ್ಯದ ಈ ಯೋಜನೆಗೆ ಅಗತ್ಯ ಅನುಮತಿ ಕೊಡಿಸಲು ಕೇಂದ್ರ ಸರ್ಕಾರದಲ್ಲಿ ಒತ್ತಡ ತರುವುದಾಗಿ ಭರವಸೆ ನೀಡಿದರು.ನಾಡು, ನುಡಿ, ನೆಲ, ಜಲದ ವಿಚಾರಗಳು ಬಂದಾಗ ರಾಜಕೀಯ ಬದಿಗಿಟ್ಟು ಒಗ್ಗಟ್ಡು ಪ್ರದರ್ಶನ ಆಗಬೇಕು ಎನ್ನುವುದು ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದ್ದು, ಎಲ್ಲ ನಾಯಕರು ಸಹಮತ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ತನ್ಮೂಲಕ ರಾಜ್ಯದ ಸಂಕಷ್ಟ ಪರಿಸ್ಥಿತಿ, ರಾಜ್ಯಕ್ಕೆ ಸಂಬಂಧಿಸಿದ ಉತ್ತಮ ಯೋಜನೆಗಳ ವಿಚಾರದಲ್ಲಿ ಪಕ್ಷ ಬೇಧ, ರಾಜಕೀಯ ಬಿನ್ನಾಭಿಪ್ರಾಯಗಳು ನಮಗೆ ಮುಖ್ಯವಲ್ಲ, ರಾಜ್ಯದ ಜನ ಹಾಗೂ ರೈತರ ಹಿತಕ್ಕಾಗಿ ಎಲ್ಲವನ್ನು ಬದಿಗಿಟ್ಟು ನಾವೆಲ್ಲರೂ ಒಗ್ಗಟ್ಟಾಗಿರುತ್ತೇವೆ ಎನ್ನುವ ಸ್ಪಷ್ಟ ಸಂದೇಶ ಸಾರಿದರು. ಕಾವೇರಿ ನೀರು ವಿಚಾರವಾಗಿ ರಾಜ್ಯದ ಹಿತಕ್ಕಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಒಮ್ಮತದ ಬೆಂಬಲವನ್ನೂ ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಆಡಳಿತ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಮಾಜಿ ಸಚಿವ ಎಚ್.ಕೆ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.
ಸಿಎಂ ಧನ್ಯವಾದ ಅರ್ಪಣೆ:ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸಭೆಗೆ ಬಂದಿದ್ದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರು, ಸಂಸದರು ರಾಜ್ಯದ ಹಿತಕ್ಕಾಗಿ ಅನೇಕ ವಿಭಿನ್ನ ಸಲಹೆಗಳನ್ನು ನೀಡಿದ್ದಾರೆ. ನಮ್ಮ ಕಾನೂನು ತಜ್ಞರು ಸಭೆಯಲ್ಲಿ ಭಾಗಿಯಾಗಿ ಪರಿಸ್ಥಿತಿ ಹಾಗೂ ಮುಂದಿನ ತೀರ್ಮಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾವೇರಿ ವಿಚಾರದಲ್ಲಿ ರಾಜ್ಯದ ಜನರ ರಕ್ಷಣೆಗೆ ನಾನು ಹಾಗೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಭೆಗೆ ತಿಳಿಸಿದ್ದೇನೆ. ಎಲ್ಲರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟಿಕೊಂಡು ಸಂಕಷ್ಟ ಸೂತ್ರದ ವಿಚಾರದಲ್ಲಿ ಕಾನೂನಿನಲ್ಲಿರುವ ಅವಕಾಶಗಳನ್ನು ಅವಲೋಕಿಸಿ ಕಾನೂನು ತಜ್ಞರೊಂದಿಗೆ ಚಿರ್ಚಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗುವುದು. ಈ ವಿಚಾರದಲ್ಲಿ ಎಲ್ಲ ನಾಯಕರು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದಾರೆ. ಆ ನಾಯಕರ ಸಲಹೆಗಳನ್ನು ಕಾನೂನು ಚೌಕಟ್ಟಿನಲ್ಲಿ ತಜ್ಞರು ಹಾಗೂ ಸಚಿವ ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮುಖ್ಯಮಂತ್ರಿ ಅವರ ವಿಶೇಷ ಸಲಹೆಗಾರ ಜಿ.ಸಿ.ಚಂದರ್ಶೇಖರ್, ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಲವು ಅಧಿಕಾರಿಗಳು, ಕಾನೂನು ತಜ್ಞರು ಉಪಸ್ಥಿತರಿದ್ದರು.ಸಂಕಷ್ಟ ಪರಿಹಾರ ಸೂತ್ರಕ್ಕಾಗಿ ಒತ್ತಾಯಿಸಬೇಕು; ಸಿದ್ದರಾಮಯ್ಯ:ಮಳೆ ಕೊರತೆ ಸಂದರ್ಭದಲ್ಲಿ ನೀರನ್ನು ನಾಲ್ಕು ರಾಜ್ಯಗಳು ಯಾವ ರೀತಿ ಹಂಚಿಕೊಳ್ಳಬೇಕೆಂಬ ಸೂತ್ರ ಅಗತ್ಯ. ಈ ಹಿನ್ನೆಲೆಯಲ್ಲಿ ಸಂಕಷ್ಟ ಪರಿಹಾರ ಸೂತ್ರಕ್ಕೆ ನಾವು ಒತ್ತಾಯಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗುವುದರಿಂದ ಪ್ರಯೋಜನ ಇಲ್ಲ. ಹಿಂದೆ ಮೇಲ್ಮನವಿ ಹೋದಾಗ ವಜಾ ಆಗಿದೆ. ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕೇಂದ್ರ ಸರ್ಕಾರ ಅಥವಾ ಸುಪ್ರೀಂ ಕೋರ್ಟ್ ಸಂಕಷ್ಟ ಪರಿಹಾರ ಸೂತ್ರ ರಚನೆ ಮಾಡುವ ಅಗತ್ಯವಿದೆ. ಇದಕ್ಕಾಗಿ ನಾವು ಒತ್ತಾಯಿಸಬೇಕು. ಈ ವಿವಾದ ಆಗಾಗ ಎದುರಾಗುವುದರಿಂದ ಸರ್ಕಾರಕ್ಕೆ ತಲೆನೋವು ತಪ್ಪಿದ್ದಲ್ಲ. ಹೀಗಾಗಿ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಸೂತ್ರ ಬೇಕಿದೆ ಎಂದು ಹೇಳಿದರು.
ಸಭೆ ಕರೆಯುವ ವಾಡಿಕೆ:ಮಳೆ ಕೈ ಕೊಟ್ಟ ಸಂದರ್ಭದಲ್ಲಿ ಕಾವೇರಿ ನದಿ ನೀರಿನ ವಿಚಾರದಲ್ಲಿ ಸಭೆ ಕರೆಯುವ ವಾಡಿಕೆ ಇದೆ. 76 ವರ್ಷಗಳಲ್ಲಿ 25 ಬಾರಿ ಸಭೆ ಕರೆದು ಚರ್ಚೆ ಮಾಡಲಾಗಿದೆ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ಬಾರಿ ಸಭೆ ನಡೆದಿದೆ. ಕುಡಿಯುವ ನೀರಿಗಾಗಿ ನಾವು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ 39 ಟಿಎಂಸಿ ನೀರು ಬೇಕಿದೆ. ಹವಾಮಾನ ವರದಿ ಪ್ರಕಾರ ಮಳೆ ಕೊರತೆ ಇದೆ. ಹೀಗಾಗಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಬಾರದು. 40 ಟಿಎಂಸಿ ಕಾಯ್ದಿರಿಸಬೇಕು ಎಂದು ಹೇಳಿದರು.ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎನ್ನುವ ರೀತಿಯ ಹೇಳಿಕೆ ಸಲ್ಲ; ಬೊಮ್ಮಾಯಿ:ನಮಗೆ ಬೆಂಗಳೂರಿನ ಕುಡಿಯುವ ನೀರು ಸೇರಿ 42 ಟಿಎಂಸಿ ನೀರು ಬೇಕು. ನಮ್ಮ ರೈತರಿಗೆ ನೀರು ಕೊಡಬೇಕು. ಆದರೆ, ಸಮಸ್ಯೆಗೆ ಪರಿಹಾರ ಸಿಕ್ಕಿದೆ ಅನ್ನುವ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಭಾನುವಾರ ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಗಳಿಗೆ ಉತ್ತಮ ಪ್ರಮಾಣದ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಿ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದರು.
ಸರಿಯಾಗಿ ವಾದ ಮಾಡುವುದಿಲ್ಲ. ನಿಮ್ಮ ಕಾರ್ಯದರ್ಶಿಗಳು ನಮ್ಮ ಬಳಿ ನೀರಿರುವ ಬಗ್ಗೆ ಮಾತನಾಡುತ್ತಾರೆ. ತಮಿಳುನಾಡು ಡ್ಯಾಮ್‌ಗಳಲ್ಲಿ ಎಷ್ಟು ನೀರಿದೆ, ಎಷ್ಟು ಬೆಳೆ ಬೆಳೆಯುತ್ತಾರೆ, ಅವರಿಗೆ ಅಗತ್ಯ ಇರುವ ನೀರಿನ ಪ್ರಮಾಣ ಎಷ್ಟು ಎನ್ನುವುದನ್ನು ತಿಳಿದುಕೊಳ್ಳುವುದಿಲ್ಲ. ಉಪಗ್ರಹ ಮೂಲಕ ಎಲ್ಲವನ್ನೂ ತಿಳಿದುಕೊಳ್ಳಬೇಕು. ಅವರಿಗೆ ನವೆಂಬರ್‌ನಲ್ಲಿ ಮಳೆ ಬರುತ್ತದೆ. ಅದನ್ನು ನಮ್ಮ ಅಧಿಕಾರಿಗಳು ಹೇಳುವುದಿಲ್ಲ ಎಂದರು.ಸರ್ಕಾರ ನಿರ್ಲಕ್ಷಿಸಿದರೆ ಸಂಕಷ್ಟ:ನಮ್ಮ ಅವಧಿಯಲ್ಲಿ 14 ಟಿಎಂಸಿ ನೀರು ಬಿಡಲು ಹೇಳಿದರೂ ರಾಜ್ಯದ ಹಿತ ಕಾಪಾಡಿದ್ದೆವು. ನೀವು ಎಲ್ಲ ಕೆರೆ ತುಂಬಿಸಿ, ಹೊಲಗಳಿಗೆ ನೀರು ಕೊಡಿ. ಜನವರಿವರೆಗೂ ಈ ಬೇಡಿಕೆ ಬರುತ್ತದೆ. ಅಲ್ಲಿವರೆಗೂ ಕಾಯ್ದುಕೊಳ್ಳಬೇಕು. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಮತ್ತೆ ಸಂಕಷ್ಟ ಎದುರಾಗುತ್ತದೆ ಎಂದು ಹೇಳಿದರು.ಮಳೆ ಆಗದಿರುವುದರಿಂದ ರಾಜ್ಯ ಸರ್ಕಾರ ರೈತರಿಗೆ ಬೆಳೆ ಬೆಳೆಯದಂತೆ ಸೂಚನೆ ನೀಡಿದೆ. ಬಿತ್ತನೆ ಮಾಡದಿದ್ದರೆ ರೈತರ ಜೀವನ ನಡೆಯುವುದು ಹೇಗೆ? ಅದಕ್ಕೆ ರಾಜ್ಯದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಏನೇ ಆಗಲಿ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರ ವಾದ ಮಂಡಿಸಲು ನಮಗೆ ಬಲವಾದ ಅಂಶಗಳು ಲಭ್ಯವಾಗಿವೆ. ಜೂನ್ ಜುಲೈನಲ್ಲಿ ನೀರು ಬಿಡುವುದು ಅಷ್ಟೆ ಅಲ್ಲ. ಸರ್ಕಾರ ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ನಿರ್ವಹಣೆಯನ್ನು ಹೇಗೆ ಮಾಡುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ ಎಂದು ಹೇಳಿದರು.