ತೆರವಾಗದ ಅಣೆಕಟ್ಟು ಗೇಟು: ಉಪ್ಪಿನಂಗಡಿ 34ನೇ ನೆಕ್ಕಿಲಾಡಿಯಲ್ಲಿ ಕೃಷಿ ಭೂಮಿ ಸವಕಳಿ

| Published : Jul 07 2025, 11:48 PM IST

ತೆರವಾಗದ ಅಣೆಕಟ್ಟು ಗೇಟು: ಉಪ್ಪಿನಂಗಡಿ 34ನೇ ನೆಕ್ಕಿಲಾಡಿಯಲ್ಲಿ ಕೃಷಿ ಭೂಮಿ ಸವಕಳಿ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಿನಂಗಡಿ ಸಮೀಪದ ೩೪ನೇ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿಗೆ ಕಟ್ಟಲಾದ ಕಿಂಡಿ ಅಣೆಕಟ್ಟಿನ ಗೇಟುಗಳನ್ನು ತೆರವು ಮಾಡದೇ ಇರುವುದರಿಂದ ನೀರು ತುಂಬಿ ಈ ಪರಿಸರದ ಕೃಷಿ ಭೂಮಿಗೆ ಹಾನಿಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಪುತ್ತೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯ ಸಲುವಾಗಿ ೩೪ನೇ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿಗೆ ಕಟ್ಟಲಾದ ಕಿಂಡಿ ಅಣೆಕಟ್ಟಿನ ಗೇಟುಗಳನ್ನು ತೆರವು ಮಾಡದೇ ಇರುವುದರಿಂದ ನೀರು ತುಂಬಿ ಈ ಪರಿಸರದ ಕೃಷಿ ಭೂಮಿಗೆ ಹಾನಿಯಾಗುತ್ತಿದೆ.

ಈ ಕಿಂಡಿ ಅಣೆಕಟ್ಟಿಗೆ ಮಳೆಗಾಲ ಮುಗಿದ ತಕ್ಷಣ ಗೇಟು ಅಳವಡಿಸಿ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಕಳೆದೆರಡು ವರ್ಷಗಳಲ್ಲಿ ಬಿಳಿಯೂರು ನೇತ್ರಾವತಿ ನದಿಯ ಅಣೆಕಟ್ಟಿನಲ್ಲಿ ಗೇಟು ಅಳವಡಿಸಿದ ಬಳಿಕ ಸಂಗ್ರಹವಾಗುವ ಹಿನ್ನೀರಿನಿಂದ ಈ ಕಿಂಡಿ ಅಣೆಕಟ್ಟು ಕೂಡ ಮುಳುಗಡೆಯಾಗುತ್ತಿದೆ. ಈ ಕಾರಣದಿಂದ ಇಲ್ಲಿನ ಕಿಂಡಿ ಅಣೆಕಟ್ಟಿಗೆ ಗೇಟು ಅಳವಡಿಸುವ ಅವಶ್ಯಕತೆ ಇಲ್ಲ. ಆದರೂ ಬಿಳಿಯೂರು ಅಣೆಕಟ್ಟು ಹೆಚ್ಚುವರಿ ಜಲಾಶಯವಾಗಿ ಪರಿಗಣಿಸಲ್ಪಟ್ಟಿದ್ದು, ಯಾವುದೇ ಸಂದರ್ಭದಲ್ಲಿ ನೀರನ್ನು ಹರಿಯಬಿಡಬಹುದಾಗಿದೆ.

ಈ ನಿಟ್ಟಿನಲ್ಲಿ ಮುಂದಾಲೋಚನೆಯಿಂದ ಇಲ್ಲಿನ ಕಿಂಡಿ ಅಣೆಕಟ್ಟಿಗೆ ಗೇಟು ಅಳವಡಿಸುವ ಕಾರ್ಯವನ್ನು ಪ್ರತಿವರ್ಷ ಮಾಡಲಾಗುತ್ತಿದೆ. ಆದರೆ ಈ ಬಾರಿ ಅಳವಡಿಸಲಾದ ಗೇಟುಗಳನ್ನು ತೆರವುಗೊಳಿಸದೇ ಇರುವುದರಿಂದ ಮಳೆಗಾಲದಲ್ಲಿ ಪರಿಸರದ ಕೃಷಿಕರಿಗೆ ಪ್ರತಿಕೂಲ ಪರಿಣಾಮ ಉಂಟಾಗಿದೆ.ಕುಮಾರಧಾರಾ ನದಿಯ ನೀರಿನಲ್ಲಿ ಪ್ರತಿದಿನವೂ ವೇಗವಾದ ನೀರಿನ ಹರಿವು ಇದ್ದು, ಇದು ಕಿಂಡಿ ಅಣೆಕಟ್ಟಿಗೆ ಅಪ್ಪಳಿಸಿ ಪರಿಸರದ ಕೃಷಿ ಭೂಮಿಗೆ ಕಡಲ ತೆರೆಯಂತೆ ಬಂದಪ್ಪಳಿಸುತ್ತಿದೆ. ಇದರಿಂದಾಗಿ ಈ ಬಾರಿಯ ಮಳೆಗಾಲದ ಎರಡು ತಿಂಗಳಾವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಕೃಷಿ ಭೂಮಿಯು ಸವಕಳಿಗೆ ತುತ್ತಾಗಿ ನದಿಪಾಲಾಗಿದೆ..................

ಈ ಬಾರಿ ಮೇ ತಿಂಗಳಲ್ಲೇ ಮಳೆಗಾಲ ಪ್ರಾರಂಭವಾದ ಕಾರಣ ಕಿಂಡಿ ಅಣೆಕಟ್ಟಿಗೆ ಅಳವಡಿಸಿದ ಗೇಟು ತೆರವಿಗೆ ಅಸಾಧ್ಯವಾಯಿತು. ಮೂರು ಗೇಟುಗಳನ್ನು ತೆಗೆಯುವಷ್ಟರಲ್ಲಿ ನದಿಯಲ್ಲಿನ ನೀರಿನ ಪ್ರವಾಹವು ಹೆಚ್ಚಾಗತೊಡಗಿ ತೆಗೆಯಲಾದ ಮೂರು ಗೇಟುಗಳನ್ನು ಕೊಚ್ಚಿ ಕೊಂಡೊಯ್ದಿದೆ. ಬಳಿಕದ ದಿನಗಳಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದರಿಂದ ಗೇಟು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ.

। ಜಯರಾಮ್, ನೀರು ಸರಬರಾಜು ಘಟಕ ಉಸ್ತುವಾರಿ.

---------------

ಕುಮಾರಧಾರಾ ನದಿಯ ಕಿಂಡಿ ಅಣೆಕಟ್ಟಿಗೆ ಅಳವಡಿಸಲಾದ ಗೇಟುಗಳನ್ನು ಮುಂಜಾಗ್ರತಾ ಕ್ರಮವಾಗಿ ಪ್ರತಿವರ್ಷವೂ ತೆರವು ಮಾಡಿದಂತೆ ಈ ಬಾರಿ ಮಾಡದೇ ಇರುವುದರಿಂದ ಈ ಬಾರಿಯ ಮಳೆಗಾಲ ಭಯಾನಕವಾಗಿದೆ. ನದಿ ದಡದಲ್ಲಿರುವ ನಮ್ಮ ಕೃಷಿ ಭೂಮಿಗೆ ನದಿ ನೀರು ಅಪ್ಪಳಿಸುವುದರಿಂದ ಭೂ ಕುಸಿತವುಂಟಾಗಿ ಭೂಮಿಯನ್ನು ಕಳೆದುಕೊಳ್ಳುವಂತಾಗಿದೆ. ಈ ಕರ್ತವ್ಯ ಲೋಪದಿಂದ ಉಂಟಾಗಿರುವ ನಷ್ಟಕ್ಕೆ ಯಾರು ಹೊಣೆ ಎನ್ನುವುದೇ ತಿಳಿಯದಾಗಿದೆ.

। ಶಾಂತಾರಾಮ ಕಾಂಚನ, ಭೂ ಸವಕಳಿಗೆ ತುತ್ತಾಗಿರುವ ಕೃಷಿಕ