ಸಾರಾಂಶ
ಧಾರವಾಡ: ಒಂದೆಡೆ ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ವಿವಿಧ ಗೊಬ್ಬರಗಳ ಕೊರತೆ ಜಿಲ್ಲೆಯಲ್ಲಿ ಇಲ್ಲ ಎನ್ನುತ್ತಿದ್ದಾರೆ. ಆದರೆ, ಇನ್ನೊಂದೆಡೆ ಕಲಘಟಗಿ, ನವಲಗುಂದ ಸೇರಿದಂತೆ ಜಿಲ್ಲೆಯ ವಿವಿಧೆಡೆ ರೈತರಿಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ ಎಂಬ ಆರೋಪವು ಇದೆ.
ಇದೀಗ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆ ಹೊರಡಿಸಿ ಜಿಲ್ಲೆಯಲ್ಲಿರುವ ರಸಗೊಬ್ಬರದ ಮಾಹಿತಿ ನೀಡಿದ್ದಾರೆ. ಜುಲೈ ತಿಂಗಳ ಅಂತ್ಯದ ವರೆಗೆ ಯೂರಿಯಾ 17223 ಮೆಟ್ರಿಕ್ ಟನ್, ಡಿಎಪಿ 9845, ಎಂಓಪಿ 541, ಕಾಂಪ್ಲೆಕ್ಸ್ 4580 ಮತ್ತು ಎಸ್‌ಎಸ್‌ಪಿ 226 ಮೆಟ್ರಿಕ್ ಟನ್‌ಗಳಷ್ಟು ಬೇಡಿಕೆ ಇದೆ. ಇಲ್ಲಿಯ ವರೆಗೆ ಯೂರಿಯಾ 22508, ಡಿಎಪಿ 8489, ಎಂಓಪಿ 2846, ಕಾಂಪ್ಲೆಕ್ಸ್ 23604 ಮತ್ತು ಎಸ್‌ಎಸ್‌ಪಿ 788 ಮೆಟ್ರಿಕ್ ಟನ್‌ಗಳಷ್ಟು ಸರಬುರಾಜಾಗಿದೆ.ಈ ಪೈಕಿ ಯೂರಿಯಾ 19863 ಟನ್, ಡಿಎಪಿ 7073, ಎಂಓಪಿ 802, ಕಾಂಪ್ಲೆಕ್ಸ್ 15942 ಮತ್ತು ಎಸ್‌ಎಸ್‌ಪಿ 558 ಮೆಟ್ರಿಕ್ ಟನ್‌ಗಳಷ್ಟು ಮಾರಾಟವಾಗಿದೆ. ವಿವಿಧ ಚಿಲ್ಲರೆ ಮತ್ತು ಸಗಟು ಮಾರಾಟ ಮಳಿಗೆಗಳಲ್ಲಿ ಯೂರಿಯಾ 1269, ಡಿಎಪಿ 936, ಎಂಓಪಿ 499, ಕಾಂಪ್ಲೆಕ್ಸ್ 4193 ಮತ್ತು ಎಸ್‌ಎಸ್‌ಪಿ 90 ಮೆಟ್ರಿಕ್ ಟನ್‌ಗಳಷ್ಟು ದಾಸ್ತಾನು ಇದೆ ಎಂದು ತಿಳಿಸಿದ್ದಾರೆ.
ಏತಕ್ಕೆ ಹೀಗಾಗುತ್ತಿದೆ?: ಕೃಷಿ ಇಲಾಖೆ ತಜ್ಞರ ಪ್ರಕಾರ ಸಾಮಾನ್ಯವಾಗಿ ಒಂದು ಎಕರೆ ಭೂಮಿಗೆ ಒಂದು ಅಥವಾ ಒಂದೂವರೆ ಚೀಲ ಯೂರಿಯಾ ಸೇರಿದಂತೆ ಇತರೆ ಗೊಬ್ಬರಗಳನ್ನು ಬಳಸಬೇಕು. ಇದು ಮಣ್ಣು ಹಾಗೂ ಬೆಳೆಯ ಆರೋಗ್ಯದ ದೃಷ್ಟಿಯಿಂದ ಉತ್ತಮ. ಆದರೆ, ಕೆಲ ರೈತರು ಹೆಚ್ಚಿನ ಉತ್ಪಾದನೆಯ ಉದ್ದೇಶದಿಂದ ಆರೇಳು ಚೀಲ ಗೊಬ್ಬರ ಹಾಕುವುದು ಹಾಗೂ ಅವುಗಳ ಸಂಗ್ರಹಣೆಯಿಂದ ಜಿಲ್ಲೆಯಲ್ಲಿ ಗೊಬ್ಬರ ಅಭಾವ ಕಂಡು ಬರುತ್ತಿದೆ.ಒಂದು ಮಾಹಿತಿ ಪ್ರಕಾರ, ಮಲೆನಾಡು ಪ್ರದೇಶ ಕಲಘಟಗಿಯಲ್ಲಿ ಎಕರೆಗೆ ಏಳೆಂಟು ಚೀಲ ಯೂರಿಯಾ ಹಾಕುತ್ತಿದ್ದಾರೆ. ಇದರಿಂದ ಕೆಲವೇ ವರ್ಷಗಳಲ್ಲಿ ಭೂಮಿ ಬರಡಾಗುತ್ತದೆ ಎಂದು ರೈತರಿಗೆ ಎಷ್ಟೇ ತಿಳಿ ಹೇಳಿದರೂ ಕೇಳುತ್ತಿಲ್ಲ. ಸಾಮಾನ್ಯವಾಗಿ ಸರ್ಕಾರ ಆಯಾ ತಿಂಗಳು ಅಗತ್ಯವಾಗಿ ಬೇಕಾದಷ್ಟು ಗೊಬ್ಬರವನ್ನು ಆಯಾ ಜಿಲ್ಲೆಗಳಿಗೆ ಪೂರೈಕೆ ಮಾಡಿರುತ್ತದೆ. ಆದರೆ, ಸುಖಾಸುಮ್ಮನೆ ಅತಿಯಾಸೆಯಿಂದ ಹೆಚ್ಚಿನ ಗೊಬ್ಬರ ಖರೀದಿ ಮಾಡಿಟ್ಟುಕೊಳ್ಳುವ ಕಾರಣದಿಂದ ಈ ರೀತಿಯ ಗೊಬ್ಬರದ ಅಭಾವ ಎದುರಾಗುತ್ತಿರುವುದು ನಮ್ಮ ಜಲ್ಲೆಯ ದುರಂತ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.