ಕುಮಟಾ ಸಿಹಿ ಈರುಳ್ಳಿಗೆ ಬಡಿದ ರೋಗ, ಗಗನಕ್ಕೇರಿದ ಬೆಲೆ

| Published : May 14 2024, 09:08 AM IST

onion
ಕುಮಟಾ ಸಿಹಿ ಈರುಳ್ಳಿಗೆ ಬಡಿದ ರೋಗ, ಗಗನಕ್ಕೇರಿದ ಬೆಲೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಟಾ ಸಿಹಿ ಈರುಳ್ಳಿ ಬೆಳೆಗೆ ರೋಗದಿಂದಾಗಿ ಇಳುವರಿ ಇಲ್ಲದೆ ಬೆಲೆ ಗಗನಕ್ಕೇರಿದೆ. ಅಳ್ವೇಕೋಡಿ, ಹಂದಿಗೋಣ ಬಳಿ ಹೆದ್ದಾರಿಯ ಇಕ್ಕೆಲಗಳಲ್ಲಿ ರಾಶಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದ ನೋಟ ಈಗ ಕಾಣಿಸುತ್ತಿಲ್ಲ. ಅಲ್ಲೊಂದು ಇಲ್ಲೊಂದು ಕಡೆ ಮಾತ್ರ ಈರುಳ್ಳಿಯ ಗೊಂಚಲುಗಳು ಕಾಣಿಸುತ್ತಿವೆ.

ಕಾರವಾರ :  ಕುಮಟಾ ಸಿಹಿ ಈರುಳ್ಳಿ ಬೆಳೆಗೆ ರೋಗದಿಂದಾಗಿ ಇಳುವರಿ ಇಲ್ಲದೆ ಬೆಲೆ ಗಗನಕ್ಕೇರಿದೆ. ಅಳ್ವೇಕೋಡಿ, ಹಂದಿಗೋಣ ಬಳಿ ಹೆದ್ದಾರಿಯ ಇಕ್ಕೆಲಗಳಲ್ಲಿ ರಾಶಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದ ನೋಟ ಈಗ ಕಾಣಿಸುತ್ತಿಲ್ಲ. ಅಲ್ಲೊಂದು ಇಲ್ಲೊಂದು ಕಡೆ ಮಾತ್ರ ಈರುಳ್ಳಿಯ ಗೊಂಚಲುಗಳು ಕಾಣಿಸುತ್ತಿವೆ.

ಸಿಹಿ ಈರುಳ್ಳಿ ಕುಮಟಾ ತಾಲೂಕಿನಲ್ಲಿ ಬೆಳೆಯುವುದು ವಿಶೇಷವಾಗಿದ್ದು, ಈ ಭಾಗದ ಅಳ್ವೇಕೋಡಿ, ವನ್ನಳ್ಳಿ, ಗೋಕರ್ಣ ಒಳಗೊಂಡು ಬೇರೆ ಬೇರೆ ಭಾಗಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತಿತ್ತು. ಆದರೆ ಹಾವುಸುಳಿ ರೋಗದಿಂದಾಗಿ ಈರುಳ್ಳಿ ಪ್ರಮಾಣ ಈಗ ಗಣನೀಯ ಇಳಿಕೆಯಾಗಿದೆ. ಸ್ಥಳೀಯವಾಗಿ ಮಾರಾಟ ಮಾಡುವುದಲ್ಲದೇ ಗೋವಾ, ಮಹಾರಾಷ್ಟ್ರ, ಕೇರಳ ಭಾಗಕ್ಕೂ ಕಳುಹಿಸಲಾಗುತ್ತಿತ್ತು. ಆದರೆ ರೋಗದಿಂದ ಬೆಳೆ ಇಲ್ಲದೇ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ಪ್ರತಿವರ್ಷ ಎಪ್ರಿಲ್, ಮೇ ತಿಂಗಳುಗಳಲ್ಲಿ ಕುಮಟಾದ ಅಳ್ವೇಕೋಡಿ ಬಳಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸಾಲಾಗಿ ಕಂಡುಬರುತ್ತಿದ್ದ ಸಿಹಿ ಈರುಳ್ಳಿ ಅಂಗಡಿಗಳನ್ನು ಪ್ರಸಕ್ತ ವರ್ಷ ಹುಡುಕಬೇಕಾಗಿದೆ. ಅಳ್ವೇಕೋಡಿ ಭಾಗದಲ್ಲಿ ಸದ್ಯ ೩-೪ ಅಂಗಡಿಗಳು ಮಾತ್ರ ಕಾಣಸಿಗುತ್ತಿದೆ‌.

ದರ ಎಷ್ಟು?:

ಬೇಡಿಕೆಗೆ ತಕ್ಕಷ್ಟು ಕುಮಟಾ ಈರುಳ್ಳಿ ಮಾರುಕಟ್ಟೆಗೆ ಬಾರದ ಕಾರಣ ದರದಲ್ಲಿ ಎರಡು ಮೂರು ಪಟ್ಟು ಏರಿಕೆಯಾಗಿದೆ. ಸಣ್ಣ ಗಾತ್ರದ ಈರುಳ್ಳಿ ಕೆಜಿಗೆ ₹60-70, ದೊಡ್ಡ ಗಾತ್ರದ ಈರುಳಿ ಕೆಜಿಗೆ ₹80-120 ವರೆಗೂ ಮಾರಾಟ ಮಾಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ರೋಗ ಬಂದಿದ್ದರಿಂದ ಈ ರೀತಿ ಸಮಸ್ಯೆಯಾಗಿದೆ. ಈ ಹಿಂದೆ 20-40 ಕ್ವಿಂಟಲ್ ಈರುಳ್ಳಿ ಬೆಳೆಯುವವರು ರೋಗದಿಂದಾಗಿ 3-4 ಕ್ವಿಂಟಲ್ ಬೆಳೆಯುತ್ತಿದ್ದಾರೆ. ಸಿಹಿಈರುಳ್ಳಿಗೆ ರೋಗ ಹೆಚ್ಚಾದ ಕಾರಣ ರೈತರು ಈರುಳ್ಳಿ ಬೆಳೆಯುವುದನ್ನೇ ನಿಲ್ಲಿಸುತ್ತಿದ್ದಾರೆ.

ಸರ್ಕಾರ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿ ಈ ಅಪರೂಪದ ಈರುಳ್ಳಿಗೆ ಅಂಟಿದ ರೋಗ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ಅವನತಿಯತ್ತ ಜಾರುತ್ತಿರುವ ಈರುಳ್ಳಿಯನ್ನು ರಕ್ಷಣೆ ಮಾಡಬೇಕಿದೆ.

ಕೊರೊನಾ ಬಳಿಕ ಈರುಳ್ಳಿ ಬೆಳೆಗೂ ರೋಗ ಕಾಡತೊಡಗಿದೆ. ಹಾವುಸುಳಿ ರೋಗ ಈರುಳ್ಳಿ ಬೆಳೆಯನ್ನೇ ಅವನತಿಯತ್ತ ಕೊಂಡೊಯ್ಯುವಂತೆ ಮಾಡಿದೆ. ಇದರಿಂದ ಕಳೆದ ಕೆಲ ವರ್ಷಗಳಿಂದ ಈರುಳ್ಳಿ ಬೆಳೆಯುವವರ ಸಂಖ್ಯೆ ಕೂಡ ಗಣನೀಯವಾಗಿ ಈಳಿಕೆಯಾಗಿದೆ. ಈರುಳ್ಳಿ ಬೀಜ ಬಿತ್ತಿ ಸಸಿ ಬರುವ ಮುನ್ನವೇ ರೋಗ ವಕ್ಕರಿಸಿಕ್ಕೊಳ್ಳುವ ಕಾರಣ ಅನೇಕ ರೈತರು ಈರುಳ್ಳಿ ಬಿಟ್ಟು ಪರ್ಯಾಯ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ.

ವೆಂಕಟೇಶ ಪಟಗಾರ, ಸ್ಥಳೀಯರು

ಕುಮಟಾದ ಸಿಹಿ ಈರುಳ್ಳಿಗೆ ಹೆಚ್ಚು ಬೇಡಿಕೆ ಇದೆ. ಇದು ಸಿಹಿಯಾಗಿರುವ ಕಾರಣ ಊಟದ ಜತೆಗೆ ಇಲ್ಲವೆ ಸಲಾಡ್ ಮಾಡಲು ಹೆಚ್ಚಾಗಿ ಬಳಸುತ್ತಾರೆ. ಆದರೆ ಕೊರೋನಾ ಬಳಿಕ ಈರುಳ್ಳಿಗೂ ತಗುಲಿರುವ ರೋಗ ಇನ್ನು ಕೂಡ ನಿವಾರಣೆ ಆಗಿಲ್ಲ. ಇದರಿಂದ ಬೆಳೆ ಬೆಳೆಯುವವರ ಸಂಖ್ಯೆಯೇ ಕಡಿಮೆಯಾಗಿ ಬೆಲೆ ಏರಿಕೆಯಾಗುವಂತಾಗಿದೆ.

ಬಾಬು ನಾಯ್ಕ, ರೈತ