ಮಂಗನ ಕಾಯಿಲೆಗೆ ವ್ಯಾಕ್ಸಿನ್ ತಯಾರಿಕೆ ಪ್ರಯತ್ನ: ಗ್ರಾಮೀಣ ಭಾಗದಲ್ಲಿ ನಿಟ್ಟುಸಿರು

| Published : Feb 12 2024, 01:34 AM IST

ಮಂಗನ ಕಾಯಿಲೆಗೆ ವ್ಯಾಕ್ಸಿನ್ ತಯಾರಿಕೆ ಪ್ರಯತ್ನ: ಗ್ರಾಮೀಣ ಭಾಗದಲ್ಲಿ ನಿಟ್ಟುಸಿರು
Share this Article
  • FB
  • TW
  • Linkdin
  • Email

ಸಾರಾಂಶ

೧೯೭೨ ನೇ ಇಸ್ವಿಯಲ್ಲಿ ಶಿರಸಿಯಲ್ಲಿ ಮೊದಲ ಬಾರಿಗೆ ಕಾಣಸಿಕೊಂಡಿತ್ತು. ಬಳಿಕ ಜಿಲ್ಲೆಯ ೭ ತಾಲೂಕುಗಳ ಗ್ರಾಮೀಣ ಭಾಗದ ಜನರನ್ನು ಕಾಡುತ್ತಿದೆ. ಉತ್ತರ ಕನ್ನಡ ಒಂದೇ ಅಲ್ಲದೇ ರಾಜ್ಯದ ೧೦ ಜಿಲ್ಲೆಗಳ ೩೦ ತಾಲೂಕುಗಳಲ್ಲೂ ಮಂಗನ ಕಾಯಿಲೆ ವ್ಯಾಪಿಸಿದೆ

ಕಾರವಾರ: ಮಂಗನ ಕಾಯಿಲೆಗೆ (ಕೆಎಫ್‌ಡಿ) ಲಸಿಕೆ ಕಂಡು ಹಿಡಿಯುವ ಸಂಬಂಧ ರಾಜ್ಯ ಸರ್ಕಾರವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾತುಕತೆ ನಡೆಸಿದ್ದು, ರಾಜ್ಯದ ೧೦ ಜಿಲ್ಲೆಗಳ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಒಳಗೊಂಡು ೧೦ ಜಿಲ್ಲೆಗಳ ೩೦ ತಾಲೂಕುಗಳಲ್ಲಿ ಮಂಗನ ಕಾಯಿಲೆ ವ್ಯಾಪಿಸಿದ್ದು, ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಉರುವಲು ತರಲು, ಜಾನುವಾರು ಮೇಯಿಸಲು ಒಳಗೊಂಡು ವಿವಿಧ ಕಾರಣಕ್ಕೆ ಅರಣ್ಯ ಪ್ರದೇಶಕ್ಕೆ ತೆರಳುವ ಜನರಿಗೆ ಮೃತಪಟ್ಟ ಪ್ರಾಣಿಗಳಲ್ಲಿ ಇರುವ ಉಣ್ಣೆ (ಉಣಗು) ಕಚ್ಚುವುದರಿಂದ ಬರುತ್ತಿದೆ. ಉಣ್ಣೆ ಕಡಿಯದಂತೆ ಡಿಅಪಿಎ ತೈಲ ಬಳಕೆ ಮಾಡುವ ಪದ್ಧತಿ ಹೆಚ್ಚಿನ ಪ್ರಮಾಣದಲ್ಲಿತ್ತು.

ಉತ್ತರ ಕನ್ನಡದಲ್ಲಿ ಪ್ರಸಕ್ತ ವರ್ಷ ಸಿದ್ದಾಪುರದಲ್ಲಿ ಮಾತ್ರ ಕೆಎಫ್‌ಡಿ ಪಾಸಿಟಿವ್ ಬಂದಿದ್ದು, ೩೮ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ ೫ ವರ್ಷದಲ್ಲಿ ೭ ಜನರು ಈ ಕಾಯಿಲೆಯಿಂದ ಮೃತಪಟ್ಟಿದ್ದರು. ೧೯೭೨ ನೇ ಇಸ್ವಿಯಲ್ಲಿ ಶಿರಸಿಯಲ್ಲಿ ಮೊದಲ ಬಾರಿಗೆ ಕಾಣಸಿಕೊಂಡಿತ್ತು. ಬಳಿಕ ಜಿಲ್ಲೆಯ ೭ ತಾಲೂಕುಗಳ ಗ್ರಾಮೀಣ ಭಾಗದ ಜನರನ್ನು ಕಾಡುತ್ತಿದೆ. ಉತ್ತರ ಕನ್ನಡ ಒಂದೇ ಅಲ್ಲದೇ ರಾಜ್ಯದ ೧೦ ಜಿಲ್ಲೆಗಳ ೩೦ ತಾಲೂಕುಗಳಲ್ಲೂ ಮಂಗನ ಕಾಯಿಲೆ ವ್ಯಾಪಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೊಂದಿಗೆ ರಾಜ್ಯ ಸರ್ಕಾರ ವ್ಯಾಕ್ಸಿನ್ ತಯಾರಿಕೆ ಸಂಬಂಧ ಮಾತುಕತೆ ನಡೆಸಿದ್ದು, ಆರೋಗ್ಯ ಸಚಿವ ದಿನೇಶ ಗುಂಡುರಾವ್ ವರ್ಷದೊಳಗೆ ವ್ಯಾಕ್ಸಿನ್ ಲಭ್ಯವಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಮಂಗನ ಕಾಯಿಲೆಯ ಆತಂಕಕ್ಕೆ ಒಳಗಾಗಿದ್ದ ೧೦ ಜಿಲ್ಲೆಗಳ ಜನರು ನಿಟ್ಟುಸಿರು ಬಿಡುವಂತೆ ಆಗಿದೆ.